Credit Card: ಒಳ್ಳೆಯ ಕ್ರೆಡಿಟ್ ಸ್ಕೋರ್ ಗಳಿಸಲು ಎಷ್ಟು ಕ್ರೆಡಿಟ್ ಕಾರ್ಡ್ ಇದ್ದರೆ ಉತ್ತಮ? ತಜ್ಞರ ಸಲಹೆ ಇದು

|

Updated on: Mar 17, 2024 | 1:29 PM

Credit Score Tips: ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಸಾಲ ಸುಲಭವಾಗಿ ಸಿಗುತ್ತದೆ, ಬಡ್ಡಿ ದರವೂ ಕಡಿಮೆ ಇರುತ್ತದೆ. ಸಾಲದ ಮೊತ್ತವೂ ಹೆಚ್ಚಿರುತ್ತದೆ. ಹೆಚ್ಚೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಕ್ರೆಡಿಟ್ ಸ್ಕೋರ್ ಹೆಚ್ಚುತ್ತದೆ ಎಂಬುದು ತಪ್ಪು. ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವುದು ಸ್ಕೋರ್ ಹೆಚ್ಚಿಸಲು ಸಹಾಯವಾಗುತ್ತದೆ. ಹಳೆಯ ಕ್ರೆಡಿಟ್ ಕಾರ್ಡ್​ಗಳನ್ನು ಮುಂದುವರಿಸಿಕೊಂಡು ಹೋಗುವುದು ಉತ್ತಮ.

Credit Card: ಒಳ್ಳೆಯ ಕ್ರೆಡಿಟ್ ಸ್ಕೋರ್ ಗಳಿಸಲು ಎಷ್ಟು ಕ್ರೆಡಿಟ್ ಕಾರ್ಡ್ ಇದ್ದರೆ ಉತ್ತಮ? ತಜ್ಞರ ಸಲಹೆ ಇದು
ಕ್ರೆಡಿಟ್ ಕಾರ್ಡ್
Follow us on

ಸಿಬಿಲ್ ಇತ್ಯಾದಿ ಸಂಸ್ಥೆಗಳು ನೀಡುವ ಕ್ರೆಡಿಟ್ ಸ್ಕೋರ್ (credit score) ಬಹಳ ಮುಖ್ಯ. ಇದು ಒಬ್ಬ ವ್ಯಕ್ತಿಯ ಸಾಲ ನಿರ್ವಹಣೆಯ ಬದ್ಧತೆಗೆ ದ್ಯೋತಕವಾಗಿದೆ. ಹೀಗಾಗಿ, ಉತ್ತಮ ಕ್ರೆಡಿಟ್ ಸ್ಕೋರ್ ಇದ್ದವರಿಗೆ ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಸಾಲ ಸಿಗುತ್ತದೆ. ಕ್ರೆಡಿಟ್ ಕಾರ್ಡ್​ಗಳು ಸುಲಭವಾಗಿ ಸಿಗುತ್ತವೆ. ಕ್ರೆಡಿಟ್ ಕಾರ್ಡ್​ನಲ್ಲಿ ಲಿಮಿಟ್ ಕೂಡ ಹೆಚ್ಚಿರುತ್ತದೆ. ಹೀಗಾಗಿ, ಕ್ರೆಡಿಟ್ ಸ್ಕೋರ್ ಬಗ್ಗೆ ಯಾರೇ ಆದರೂ ಗಮನ ಕೊಡುವುದು ಅತಿ ಮುಖ್ಯ. ಇದೇ ವೇಳೆ, ಹೆಚ್ಚೆಚ್ಚು ಕ್ರೆಡಿಟ್ ಕಾರ್ಡ್​ಗಳನ್ನು ಹೊಂದಿದ್ದರೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆ ಎನ್ನುವ ಭಾವನೆ ಕೆಲವರಲ್ಲಿದೆ. ಇದು ಅರ್ಧಸತ್ಯ. ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಕ್ರೆಡಿಟ್ ಕಾರ್ಡ್ ಹೆಚ್ಚಳಕ್ಕಿಂತ ಕ್ರೆಡಿಟ್ ನಿರ್ವಹಣೆ ಹೆಚ್ಚಿಸುವುದು ಮುಖ್ಯ.

ತಜ್ಞರ ಪ್ರಕಾರ, ಕ್ರೆಡಿಟ್ ಕಾರ್ಡ್ ಜೊತೆಗೆ ಬೇರೆ ಬೇರೆ ಸಾಲಗಳನ್ನು ಹೊಂದಿರುವುದು ಉತ್ತಮ. ಉದಾಹರಣೆಗೆ, ಸಾಲದ ಇಂಎಂಐಗಳನ್ನು ಕಟ್ಟುತ್ತಿರುವುದು, ಸೀಮಿತ ಸಂಖ್ಯೆಯ ಕ್ರೆಡಿಟ್ ಕಾರ್ಡ್ ಹೊಂದಿದ್ದು ಅದರ ಬಿಲ್​ಗಳನ್ನು ಸರಿಯಾದ ಸಮಯಕ್ಕೆ ಕಟ್ಟುವುದು ಇತ್ಯಾದಿ ಇರಬೇಕು.

ಇದನ್ನೂ ಓದಿ: ಡೆಟ್ ಫಂಡ್ ಎಂದರೇನು? ಎಫ್​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ಎಷ್ಟು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಉತ್ತಮ?

ಈಗಂತೂ ವಿವಿಧ ಕ್ರೆಡಿಟ್ ಕಾರ್ಡ್ ಕಂಪನಿಗಳ ಸೇಲ್ಸ್ ಏಜೆಂಟ್​ಗಳು ಕ್ರೆಡಿಟ್ ಕಾರ್ಡ್​ಗಳನ್ನು ಯಥೇಚ್ಛವಾಗಿ ಮಾರಲು ಯತ್ನಿಸುವುದುಂಟು. ಅದರಲ್ಲೂ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದವರಿಗೆ ವಿವಿಧ ಪ್ರಲೋಬನೆಗಳ ಮೂಲಕ ಕಾರ್ಡ್ ಸೇಲ್ ಮಾಡುವುದುಂಟು. ಡಿಸ್ಕೌಂಟ್, ಕೂಪನ್ ಇತ್ಯಾದಿ ಆಸೆಗೆ ಸಿಕ್ಕ ಸಿಕ್ಕ ಕ್ರೆಡಿಟ್ ಕಾರ್ಡ್​ಗಳನ್ನು ಹೊಂದುತ್ತೇವೆ. ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಬಿಲ್​ಗಳನ್ನು ನಿಭಾಯಿಸುವುದು ಕಷ್ಟವಾದೀತು.

ಅಷ್ಟೇ ಅಲ್ಲ, ಹೊಸ ಹೊಸ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುತ್ತಾ ಹೋದರೆ ನಿಮ್ಮ ಸರಾಸರಿ ಕ್ರೆಡಿಟ್ ಅಕೌಂಟ್ ವಯಸ್ಸು ಕಡಿಮೆ ಆಗುತ್ತಾ ಹೋಗುತ್ತದೆ. ಬ್ಯಾಂಕುಗಳು ನಿಮಗೆ ಸಾಲ ಕೊಡುವಾಗ ಸರಾಸರಿ ಅಕೌಂಟ್ ವಯಸ್ಸನ್ನು ಪರಿಶೀಲಿಸುತ್ತಾರೆ. ಇದು ಹೆಚ್ಚಿದ್ದಷ್ಟೂ ಉತ್ತಮ.

ಇದನ್ನೂ ಓದಿ: ಕಾರ್ ಲೋನ್​ಗೆ ನಿಮ್ಮ ಕನಿಷ್ಠ ಸಿಬಿಲ್ ಸ್ಕೋರ್ ಎಷ್ಟಿರಬೇಕು? ಇಲ್ಲಿದೆ ಡೀಟೇಲ್ಸ್

ಒಂದು ವೇಳೆ ನೀವು ಹಲವಾರು ಕ್ರೆಡಿಟ್ ಕಾರ್ಡ್​ಗಳನ್ನು ಹೊಂದಿದ್ದರೆ ಅವುಗಳ ಸಂಖ್ಯೆ ಕಡಿಮೆ ಮಾಡುವುದು ಒಳ್ಳೆಯದು. ನಿರುಪಯುಕ್ತ ಎನಿಸುವ ಕ್ರೆಡಿಟ್ ಕಾರ್ಡ್​ಗಳನ್ನು ಪಟ್ಟಿ ಮಾಡಿ, ಅದರಲ್ಲಿ ಇತ್ತೀಚಿನವುಗಳನ್ನು ಮುಚ್ಚಬಹುದು. ಆಗ ನಿಮಗೆ ಕ್ರೆಡಿಟ್ ಕಾರ್ಡ್ ಸಂಖ್ಯೆ ಕಡಿಮೆ ಆಗುತ್ತದೆ, ಅಕೌಂಟ್ ಸರಾಸರಿ ಏಜ್ ಹೆಚ್ಚುತ್ತದೆ, ಕಾರ್ಡ ಬಿಲ್ ನಿಭಾಯಿಸುವುದೂ ಸುಲಭವಾಗುತ್ತದೆ.

ಒಟ್ಟಾರೆ, ನಿಮ್ಮ ಕ್ರೆಡಿಟ್ ಕಾರ್ಡ್​ ಅನ್ನು ಮಿತಿಯಲ್ಲಿ ಬಳಸುತ್ತಾ ಬಿಲ್ ಅನ್ನು ಸಕಾಲಕ್ಕೆ ಕಟ್ಟುತ್ತಾ ಹೋದಲ್ಲಿ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತಾ ಹೋಗುತ್ತದೆ. ಹಾಗೆಯೇ, ಹೋಮ್ ಲೋನ್, ಪರ್ಸನಲ್ ಲೋನ್ ಇತ್ಯಾದಿಯನ್ನು ಪಡೆದಿದ್ದರೆ ಕಂತುಗಳನ್ನು ಸಕಾಲಕ್ಕೆ ಕಟ್ಟುವುದನ್ನು ಮರೆಯದಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ