ಇಪಿಎಫ್ ಖಾತೆದಾರರಿಗೆ ಇಪಿಎಫ್ಒದಿಂದ ನೀಡುವ ಯೂನಿವರ್ಸಲ್ ಅಕೌಂಟ್ ನಂಬರ್ ಅಥವಾ ಯುಎಎನ್ (UAN) ಬಗ್ಗೆ ನಿಮಗೆ ಗೊತ್ತಿರುತ್ತದೆ. ಪ್ರತೀ ಇಪಿಎಫ್ ಖಾತೆದಾರರಿಗೆ ಯುಎಎನ್ ನೀಡಲಾಗುತ್ತದೆ. ಒಂದೇ ಯುಎಎನ್ ನಂಬರ್ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ನಿರ್ವಹಿಸಬಹುದು. ಕೆಲಸ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಆದರೆ, ಒಂದೇ ಯುಎಎನ್ ನಂಬರ್ ಉಳಿಸಬಹುದು. ಇದರಿಂದ ಇಪಿಎಫ್ ಖಾತೆಗಳ ನಿರ್ವಹಣೆ ಸುಲಭವಾಗುತ್ತದೆ.
ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಯುಎಎನ್ ನಂಬರ್ ಪಡೆಯುವ ಸಂಭವನೀಯತೆ ಇರುತ್ತದೆ. ಕೆಲಸ ಬದಲಿಸಿದಾಗ ಉದ್ಯೋಗಿ ಹೊಸ ಸಂಸ್ಥೆಗೆ ಹಿಂದಿನ ಯುಎಎನ್ ನಂಬರ್ ಕೊಡದೇ ಹೋದ ಸಂದರ್ಭದಲ್ಲಿ ಹೊಸ ಯುಎಎನ್ ನಂಬರ್ ಹಾಗೂ ಹೊಸ ಇಪಿಎಫ್ ಖಾತೆಯನ್ನು ಸೃಷ್ಟಿಸಲಾಗುತ್ತದೆ. ಈ ಮೂಲಕ ಎರಡೆರಡು ಯುಎಎನ್ ಅಸ್ತಿತ್ವದಲ್ಲಿ ಇರುತ್ತವೆ.
ಒಂದೇ ಯುಎಎನ್ ಅಡಿಯಲ್ಲಿ ಎರಡು ಇಪಿಎಫ್ ಖಾತೆಗಳನ್ನು ವಿಲೀನ ಮಾಡಬಹುದು. ಆದರೆ, ಎರಡು ಯುಎಎನ್ ಅನ್ನು ವಿಲೀನಗೊಳಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಆನ್ಲೈನ್ನಲ್ಲಿ ನೇರವಾಗಿ ಮಾಡಲು ಸಾಧ್ಯವಿಲ್ಲ. ಬೇರೆಯೇ ಕ್ರಮ ಇದೆ.
ಇದನ್ನೂ ಓದಿ: ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ
ನಿಮ್ಮ ಹೊಸ ಯುಎಎನ್ ಮತ್ತು ಹಳೆಯ ಯುಎಎನ್ ವಿವರವನ್ನು
uanepf@epfindia.gov.in ವಿಳಾಸಕ್ಕೆ ಇಮೇಲ್ ಕಳುಹಿಸಿ. ಬಳಿಕ ನೀವು ಕೆಲಸ ಮಾಡುವ ಈಗಿನ ಸಂಸ್ಥೆಗೆ ಈ ಎರಡು ಯುಎಎನ್ ಅಸ್ತಿತ್ವದಲ್ಲಿರುವ ಮಾಹಿತಿ ನೀಡಿ. ಅವರು ನಿಮಗೆ ಸೂಕ್ತ ಮಾರ್ಗದರ್ಶನ ನೀಡಬಹುದು.
ನೀವು ಕಳುಹಿಸಿದ ಮಾಹಿತಿಯನ್ನು ಆಧರಿಸಿ ನಿಮ್ಮ ಹಿಂದಿನ ಯುಎಎನ್ ಸಂಖ್ಯೆಯನ್ನು ಇಪಿಎಫ್ಒ ಡೀ ಆಕ್ಟಿವೇಟ್ ಮಾಡಬಹುದು. ಹಾಗೊಂದು ವೇಳೆ ಡೀಆ್ಯಕ್ಟಿವೇಟ್ ಆದ ಬಳಿಕ ಅದರಲ್ಲಿನ ಇಪಿಎಫ್ ಖಾತೆಯ ಹಣವನ್ನು ನಿಮ್ಮ ಈಗಿನ ಯುಎಎನ್ ಸಂಖ್ಯೆಯ ಇಪಿಎಫ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಅದಕ್ಕಾಗಿ ಫಾರ್ಮ್ 13 ಅನ್ನು ಪಡೆದು ಭರ್ತಿ ಮಾಡಬೇಕು.
ಇಪಿಎಫ್ಒ ವೆಬ್ಸೈಟ್ನಲ್ಲಿ ಈ ಫಾರ್ಮ್ 13 ಸಿಗುತ್ತದೆ. ಇದರಲ್ಲಿ ನಿಮ್ಮ ಹಿಂದಿನ ಸಂಸ್ಥೆ ಮತ್ತು ಈಗ ಕೆಲಸ ಮಾಡುವ ಸಂಸ್ಥೆ ಎರಡರಿಂದಲೂ ಸಹಿ ಮತ್ತು ಸೀಲ್ ಇರಬೇಕು. ಇದಾದ ಬಳಿಕ ಈ ಫಾರ್ಮ್ ಅನ್ನು ಈಗಿನ ಸಂಸ್ಥೆಗೆ ಸಲ್ಲಿಸಬೇಕು. ಅವರು ಮುಂದಿನ ಪ್ರಕ್ರಿಯೆ ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ: ಇಪಿಎಫ್ನಿಂದ ಟ್ರಿಪಲ್ ತೆರಿಗೆ ಲಾಭಗಳು; ಉತ್ತಮ ಭವಿಷ್ಯಕ್ಕೆ ಆಧಾರವಾಗಬಲ್ಲುದು ಪಿಎಫ್
ನಿಮ್ಮ ಹಿಂದಿನ ಯುಎಎನ್ ಮತ್ತು ಈಗಿನ ಯುಎಎನ್ನಲ್ಲಿರುವ ಎಲ್ಲಾ ಕೆವೈಸಿ ವಿವರಗಳು ತಾಳೆಯಾಗುತ್ತಿರಬೇಕು. ಅಂದರೆ ಹೆಸರು, ವಿಳಾಸ, ಜನ್ಮದಿನಾಂಕ ಇತ್ಯಾದಿ ಮಾಹಿತಿಯಲ್ಲಿ ವ್ಯತ್ಯಯ ಇರಕೂಡದು. ಇದ್ದರೆ ಎರಡು ಯುಎಎನ್ ಅನ್ನು ವಿಲೀನಗೊಳಿಸುವ ನಿಮ್ಮ ಅರ್ಜಿ ತಿರಸ್ಕೃತಗೊಳ್ಳಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ