
ಆಗಸ್ಟ್ 1 ಮತ್ತು ಮೊದಲ ವಾರದಿಂದ ಜನಸಾಮಾನ್ಯರು ಹಾಗು ಉದ್ಯಮ ವಲಯದ ಹಣಕಾಸು ಪರಿಸ್ಥಿತಿಯನ್ನು ಪ್ರಭಾವಿಸುವಂತಹ ಕೆಲ ನಿಯಮ ಬದಲಾವಣೆಗಳಿವೆ. ಎಲ್ಪಿಜಿ ದರ (LPG) ಪರಿಷ್ಕರಣೆ, ಸಿಎನ್ಜಿ ದರ ಪರಿಷ್ಕರಣೆ, ಅಮೆರಿಕ ಟ್ಯಾರಿಫ್ ಹೇರಿಕೆ, ಯುಪಿಐ ನಿಯಮ ಬದಲಾವಣೆ ಇತ್ಯಾದಿ ಬೆಳವಣಿಗೆ ಆಗಸ್ಟ್ 1ರಿಂದ ಇದೆ. ಹಾಗೆಯೇ, ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆಯೂ ಇದ್ದು ಬಡ್ಡಿದರ ಪರಿಷ್ಕರಣೆಯೂ ಆಗುವ ಸಾಧ್ಯತೆ ಇದೆ. ಆಗಸ್ಟ್ನಲ್ಲಿ ಹಣಕಾಸು ಪ್ರಭಾವಿಸುವ ಯಾವೆಲ್ಲಾ ಬದಲಾವಣೆಗಳಿವೆ ಎನ್ನುವ ವಿವರ ಇಲ್ಲಿದೆ.
ಡೊನಾಲ್ಡ್ ಟ್ರಂಪ್ ಅವರು ಭಾರತದ ಸರಕುಗಳಿಗೆ ಶೇ. 25ರಷ್ಟು ಆಮದು ಸುಂಕ ಹಾಗು ಹೆಚ್ಚುವರಿ ಪೆನಾಲ್ಟಿ ಘೋಷಿಸಿದ್ದಾರೆ. ಇದು ಆಗಸ್ಟ್ 1ರಿಂದ ಜಾರಿಯಾಗುತ್ತದೆ. ಭಾರತದ ಔಷಧ, ಎಲೆಕ್ಟ್ರಾನಿಕ್ಸ್, ಜವಳಿ ಮತ್ತಿತರ ಉದ್ಯಮಗಳಿಗೆ ಹಿನ್ನಡೆಯಾಗಬಹುದು.
ತೈಲ ಮಾರುಕಟ್ಟೆ ಕಂಪನಿಗಳು ಪ್ರತೀ ತಿಂಗಳ ಮೊದಲ ದಿನದಂದು ಎಲ್ಪಿಜಿ, ಸಿಎನ್ಜಿ, ಪಿಎನ್ಜಿ ಮತ್ತು ಟರ್ಬೈನ್ ಇಂಧನಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ. ಇತ್ತೀಚೆಗೆ, 19 ಕಿಲೋ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 60 ರೂ ಇಳಿಸಲಾಗಿತ್ತು. ಈ ಬಾರಿಯೂ ಪರಿಷ್ಕರಣೆ ಮಾಡಲಾಗಿದ್ದು, ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 33.50 ರೂ. ಇಳಿಕೆ ಮಾಡಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ನಿವೃತ್ತಿ ಬದುಕು ನಡೆಸಲು ಎಷ್ಟು ಹಣ ಇರಬೇಕು ಗೊತ್ತಾ? ಎಚ್ಎಸ್ಬಿಸಿ ವರದಿಯಲ್ಲಿದೆ ಅಚ್ಚರಿ ಅಂಶ
ಸಿಎನ್ಜಿ, ಪಿಎನ್ಜಿ ಮತ್ತು ಏವಿಯೇಶನ್ ಟರ್ಬೈನ್ ಇಂಧನದ ಬೆಲೆಗಳೂ ಆಗಸ್ಟ್ 1ರಂದು ಏರಿಕೆ ಆಗುವ ಸಾಧ್ಯತೆ ಇದೆ.
ಕಾಲ್ ಮನಿ, ಮಾರ್ಕೆಟ್ ರಿಪೋ, ಟ್ರೈಪಾರ್ಟಿ ರಿಪೋ ಮಾರುಕಟ್ಟೆಗಳಲ್ಲಿ ಟ್ರೇಡಿಂಗ್ ಅವಧಿಯಲ್ಲಿ ವಿಸ್ತರಣೆ ಮಾಡಲಾಗಿದೆ. ಕಾಲ್ ಮನಿ ಮಾರುಕಟ್ಟೆಯು ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಇರಲಿದೆ. ಮಾರ್ಕೆಟ್ ರಿಪೋಗೆ ಟ್ರೇಡಿಂಗ್ ಅವಧಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಿಗದಿ ಮಾಡಲಾಗಿದೆ. ಆಗಸ್ಟ್ 1ರಿಂದ ಈ ಬದಲಾವಣೆ ಜಾರಿಗೆ ಬರುತ್ತದೆ.
ಯುಪಿಐ ಆ್ಯಪ್ವೊಂದರಲ್ಲಿ ಬ್ಯಾಂಕ್ ಅಕೌಂಟ್ನಲ್ಲಿ ದಿನಕ್ಕೆ 50 ಬಾರಿ ಮಾತ್ರ ಬ್ಯಾಲನ್ಸ್ ಪರಿಶೀಲಿಸಬಹುದು. ಮೊಬೈಲ್ ನಂಬರ್ಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ಗಳನ್ನು ದಿನಕ್ಕೆ 25ಕ್ಕಿಂತ ಹೆಚ್ಚು ಬಾರಿ ನೋಡುವಂತಿಲ್ಲ. ಆಟೊಪೇ ಅನ್ನು ಪೀಕ್ ಗಳಿಗೆಯಲ್ಲಿ ಪ್ರೋಸಸ್ ಮಾಡಲಾಗುವುದಿಲ್ಲ. ಯುಪಿಐ ಪೇಮೆಂಟ್ ಮಾಡುವಾಗ ಸ್ವೀಕೃತರ ಹೆಸರು ಕಾಣಿಸುತ್ತದೆ. ಆಗಸ್ಟ್ 1ರಿಂದ ಜಾರಿಗೆ ಬರುವ ಪ್ರಮುಖ ಯುಪಿಐ ನಿಯಮ ಬದಲಾವಣೆ ಇವು.
ಇದನ್ನೂ ಓದಿ: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್ಗಳ ಮ್ಯಾಜಿಕ್
ಭಾರತೀಯ ರಿಸರ್ವ್ ಬ್ಯಾಂಕ್ನ ದ್ವೈಮಾಸಿಕ ಎಂಪಿಸಿ ಸಭೆ ಆಗಸ್ಟ್ ಮೊದಲ ವಾರದಲ್ಲಿ ಇದೆ. ಆಗಸ್ಟ್ 4ರಿಂದ 6ರವರೆಗೆ ನಡೆಯುತ್ತದೆ. ಕಳೆದ ಮೂರು ಸಭೆಗಳಲ್ಲಿ ಸತತವಾಗಿ ಬಡ್ಡಿದರ ಇಳಿಸಲಾಗಿದೆ. ಶೇ. 6.50 ಇದ್ದ ರಿಪೋ ದರ ಈಗ ಶೇ. 5.50ಕ್ಕೆ ಇಳಿದಿದೆ. ಈ ಬಾರಿಯೂ ಬಡ್ಡಿದರ ಇಳಿಯುವ ಸಾಧ್ಯತೆ ಇಲ್ಲವೆನ್ನುವಂತಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ