HDFC Digital Payments: ಎಚ್ಡಿಎಫ್ಸಿ ಡಿಜಿಟಲ್ ಪಾವತಿಗಿನ್ನು ಇಂಟರ್ನೆಟ್ ಬೇಕಿಲ್ಲ!
ಸಾಮಾನ್ಯ ಡಿಜಿಟಲ್ ಪಾವತಿಯಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದಂಥ ಸಂದರ್ಭದಲ್ಲಿ ಬಳಕೆದಾರರು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಆದರೆ ಆಫ್ಲೈನ್ ಪಾವತಿಯಲ್ಲಿ ಈ ಸಮಸ್ಯೆ ಇರುವುದಿಲ್ಲ.
ಎಚ್ಡಿಎಫ್ಸಿ ಬ್ಯಾಂಕ್ (HDFC Bank) ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಆಫ್ಲೈನ್ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಆರ್ಬಿಐಯ (RBI) ‘ರೆಗ್ಯುಲೇಟರಿ ಸ್ಯಾಂಡ್ಬಾಕ್ಸ್’ ಯೋಜನೆಯಡಿ ಈ ಪ್ರಯೋಗ ಆರಂಭಿಸಲಾಗಿದ್ದು, ಕ್ರಂಚ್ಫಿಶ್ (Crunchfish) ಸಹಯೋಗವಿದೆ. ಈ ವ್ಯವಸ್ಥೆಯಡಿ ಡಿಜಿಟಲ್ ಪಾವತಿ ಮಾಡುವುದಕ್ಕೆ ಮೊಬೈಲ್ ನೆಟ್ವರ್ಕ್ ಬೇಕಾಗಿಲ್ಲ. ಗ್ರಾಹಕರು ಹಾಗೂ ಉದ್ಯಮಗಳು ನೆಟ್ವರ್ಕ್ ಸಹಾಯ ಇಲ್ಲದೆಯೇ ಡಿಜಿಟಲ್ ರೂಪದಲ್ಲಿ ಹಣ ಕಳುಹಿಸಲು ಹಾಗೂ ಸ್ವೀಕರಿಸಲು ಸಾಧ್ಯವಿದೆ. ಆಫ್ಲೈನ್ ಡಿಜಿಟಲ್ ಪಾವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನೆಟ್ವರ್ಕ್ ಕಡಿಮೆ ಇರುವ ಸ್ಥಳಗಳಲ್ಲಿ ಹಣ ಪಾವತಿ ಮಾಡಲು ಅನುಕೂಲವಾಗಲಿದೆ. ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ, ಪ್ರದರ್ಶನ ಮಳಿಗೆಗಳಲ್ಲಿ ಹಾಗೂ ಬೃಹತ್ ಸಮಾವೇಶಗಳ ಸಂದರ್ಭದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದಾಗಲೂ ಪಾವತಿ ಸುಲಭವಾಗಲಿದೆ.
ಸಾಮಾನ್ಯ ಡಿಜಿಟಲ್ ಪಾವತಿಯಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದಂಥ ಸಂದರ್ಭದಲ್ಲಿ ಬಳಕೆದಾರರು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಆದರೆ ಆಫ್ಲೈನ್ ಪಾವತಿಯಲ್ಲಿ ಈ ಸಮಸ್ಯೆ ಇರುವುದಿಲ್ಲ.
ಗಮನಿಸಿ; ತಕ್ಷಣವೇ ಪಾವತಿ ಆಗಿಬಿಡುವುದಿಲ್ಲ
ಆಫ್ಲೈನ್ ಪಾವತಿ ವಿಧಾನದಲ್ಲಿ ಗ್ರಾಹಕರು ಡಿಜಿಟಲ್ ರೂಪದಲ್ಲಿ ಹಣ ಪಾವತಿ ಮಾಡಿದ ಕೂಡಲೇ ಆ ಪಾವತಿ ಖಾತರಿಯಾಗಿಬಿಡುತ್ತದೆ. ಆದರೆ, ತಕ್ಷಣವೇ ವ್ಯಾಪಾರಿಯ ಖಾತೆಗೆ ಜಮೆಯಾಗುವುದಿಲ್ಲ. ಗ್ರಾಹಕರು ಅಥವಾ ವ್ಯಾಪಾರಿಗಳು ಆನ್ಲೈನ್ ಮೋಡ್ಗೆ ಬಂದ ಕೂಡಲೇ ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಎಚ್ಡಿಎಫ್ಸಿ ಬ್ಯಾಂಕ್ ತಿಳಿಸಿದೆ. ಆದರೆ, ಹಣ ಪಾವತಿಯಾಗುವ ಖಾತರಿ ಈ ವ್ಯವಸ್ಥೆಯಲ್ಲಿದೆ.
ಬೇರೆ ಬ್ಯಾಂಕ್ ಗ್ರಾಹಕರಿಗೂ ಲಭ್ಯವಿದೆ ಸೇವೆ
ಎಚ್ಡಿಎಫ್ಸಿ ಬ್ಯಾಂಕ್ ಆಫ್ಲೈನ್ ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕ ಹಂತದಲ್ಲಿ ಇತರ ಬ್ಯಾಂಕ್ ಗ್ರಾಹಕರಿಗೂ ನೀಡಲಾಗುವುದು. ಇನ್ವಿಟೇಷನ್ ಲಿಂಕ್ ಮೂಲಕ ಬೇರೆ ಬ್ಯಾಂಕ್ ಗ್ರಾಹಕರು ಸೇವೆ ಪಡೆಯಬಹುದು. ನಾಲ್ಕು ತಿಂಗಳ ಕಾಲ ಪ್ರಾಯೋಗಿಕ ಯೋಜನೆ ಜಾರಿಯಲ್ಲಿದೆ. ಆಮೇಲೆ ಸಾಧಕ-ಬಾಧಕಗಳನ್ನು ನೋಡಿಕೊಂಡು ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ. ಸದ್ಯ ಯೋಜನೆ ಪ್ರಾಯೋಗಿಕ ಹಂತದಲ್ಲಿರುವ ಕಾರಣ 200 ರೂ. ವಹಿವಾಟಿಗೆ ಮಾತ್ರ ಅವಕಾಶ ನೀಡಲಾಗಿದೆ.
ನೆಟ್ವರ್ಕ್ ಕಡಿಮೆ ಇರುವ ಪ್ರದೇಶಗಳಲ್ಲಿ, ಅಂಡರ್ಗ್ರೌಂಡ್ಗಳಲ್ಲಿ, ಅಂಡರ್ಗ್ರೌಂಡ್ ಮೆಟ್ರೋ ಸ್ಟೇಷನ್ಗಳಲ್ಲಿ, ಚಿಲ್ಲರೆ ಮಳಿಗೆಗಳಲ್ಲಿ, ವಿಮಾನಗಳಲ್ಲಿ, ರೈಲುಗಳಲ್ಲಿ ಹಾಗೂ ಹಡಗುಗಳಲ್ಲಿ ಪ್ರಯಾಣದ ಸಂದರ್ಭದಲ್ಲಿ ಆಫ್ಲೈನ್ ಪಾವತಿಯಿಂದ ಪ್ರಯೋಜನವಾಗಲಿದೆ.