ಐದು ವರ್ಷದ ಬಳಿಕ ನಿಮ್ಮ ಇನ್ಷೂರೆನ್ಸ್ ಕ್ಲೈಮ್ ತಿರಸ್ಕರಿಸಲು ಸಾಧ್ಯವಿಲ್ಲ: ಮಹತ್ವದ ಹೊಸ ಇನ್ಷೂರೆನ್ಸ್ ನಿಯಮ ಬದಲಾವಣೆ ತಿಳಿದಿರಿ
Health insurance new rules from april: 2024ರ ಏಪ್ರಿಲ್ 1ರಿಂದ ಇನ್ಷೂರೆನ್ಸ್ ನಿಯಮಗಳಲ್ಲಿ ಕೆಲ ಬದಲಾವಣೆಗಳಾಗಿವೆ. ಐಆರ್ಡಿಎಐ ಕೆಲ ಸುಧಾರಣೆ ತಂದಿದೆ. ಪೂರ್ವಬಾವಿಯಾಗಿ ಅಸ್ತಿತ್ವದಲ್ಲಿದ್ದ ರೋಗಗಳಿಗೆ ಚಿಕಿತ್ಸಾ ವೆಚ್ಚ ಭರಿಸಲು ಇನ್ಷೂರೆನ್ಸ್ ಕಂಪನಿಗಳು ನಿರಾಕರಿಸುತ್ತಿದ್ದವು. ಎಂಟು ವರ್ಷ ಪ್ರೀಮಿಯಮ್ ಕಟ್ಟುವವರೆಗೂ ಕ್ಲೇಮ್ ರಿಜೆಕ್ಟ್ ಮಾಡುತ್ತಿದ್ದವು. ಈಗ ಈ ಅವಧಿಯನ್ನು ಐದು ವರ್ಷಕ್ಕೆ ಇಳಿಸಲಾಗಿದೆ. ಅಂದರೆ ನೀವು ಐದು ವರ್ಷ ಪ್ರೀಮಿಯಮ್ ಕಟ್ಟಿದ ಬಳಿಕ ನಿಮ್ಮ ಯಾವುದೇ ಇನ್ಷೂರೆನ್ಸ್ ಕ್ಲೈಮ್ ಅನ್ನು ರಿಜೆಕ್ಟ್ ಮಾಡಲು ಸಾಧ್ಯವಾಗುವುದಿಲ್ಲ.

ಭಾರತದ ಇನ್ಷೂರೆನ್ಸ್ ವಲಯದ ಪ್ರಾಧಿಕಾರವಾದ ಐಆರ್ಡಿಎಐ (IRDAI) ಪ್ರಸಕ್ತ ಹಣಕಾಸು ವರ್ಷದಿಂದ ಹೊಸ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇನ್ಷೂರೆನ್ಸ್ ಉಪಯೋಗ ಹೆಚ್ಚೆಚ್ಚು ಆಗಲು ಅನುವಾಗುವಂತೆ ನಿಯಮ ಪರಿಷ್ಕರಣೆ ಮಾಡಿದೆ. ಇನ್ಷೂರೆನ್ಸ್ ವೈಟಿಂಗ್ ಅವಧಿ (waiting period) ಕಡಿಮೆ ಮಾಡಲಾಗಿದೆ. ಇನ್ಷೂರೆನ್ಸ್ ಪಡೆಯಲು ಇದ್ದ ವಯೋಮಿತಿ ರದ್ದು ಮಾಡಲಾಗಿದೆ. ಏಪ್ರಿಲ್ 1ರಿಂದ ಈ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಸದ್ಯ ಇನ್ಷೂರೆನ್ಸ್ ಕಂಪನಿಗಳು 65 ವರ್ಷ ವಯಸ್ಸಿನವರೆಗೆ ಮಾತ್ರ ವಿಮೆ ಸೇವೆ ನೀಡುತ್ತಿದ್ದವು. ಈಗ ಈ ವಯೋಮಿತಿಯನ್ನು (age limit) ಬದಲಾಯಿಸಲಾಗಿದೆ. 65 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಹೆಲ್ತ್ ಇನ್ಷೂರೆನ್ಸ್ ಸೇವೆ ನಿರಾಕರಿಸುವಂತಿಲ್ಲ.
ಕಾಯುವಿಕೆ ಅವಧಿ ಐದು ವರ್ಷಕ್ಕೆ ಇಳಿಕೆ
ಹೆಲ್ತ್ ಇನ್ಷೂರೆನ್ಸ್ ಮಾಡಿಸುವಾಗ ಪೂರ್ವದಲ್ಲಿ ಯಾವುದಾದರೂ ರೋಗ ಅಸ್ತಿತ್ವದಲ್ಲಿದ್ದು ಅದನ್ನು ನೀವು ಮರೆ ಮಾಚಿದ್ದಲ್ಲಿ, ಆ ರೋಗದ ಚಿಕಿತ್ಸಾ ವೆಚ್ಚಕ್ಕೆ ಎಂಟು ವರ್ಷದವರೆಗೆ ವಿಮಾ ಕವರೇಜ್ ಮಾಡಲಾಗುತ್ತಿರಲಿಲ್ಲ. ಈ ಕಾಯುವಿಕೆ ಅವಧಿಯನ್ನು ಎಂಟು ವರ್ಷದಿಂದ ಐದು ವರ್ಷಕ್ಕೆ ಇಳಿಸಲಾಗಿದೆ. ಮುಂಚೆ ಅಸ್ತಿತ್ವದಲ್ಲಿದ್ದ ರೋಗಕ್ಕೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಇನ್ಷೂರೆನ್ಸ್ ಕಂಪನಿಗಳು ಐದು ವರ್ಷದ ಬಳಿಕ ನಿರಾಕರಿಸುವಂತಿಲ್ಲ.
ಇದನ್ನೂ ಓದಿ: ಇಪಿಎಫ್ಒ ಹೊಸ ಆದೇಶ: ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷ ರೂವರೆಗೆ ಪಿಎಫ್ ಹಣ ಪಡೆಯುವ ಅವಕಾಶ
ಐದು ವರ್ಷ ನೀವು ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಿದ ಬಳಿಕ ನಿಮ್ಮ ಚಿಕಿತ್ಸಾ ವೆಚ್ಚವನ್ನು ಇನ್ಷೂರೆನ್ಸ್ ಕಂಪನಿ ಭರಿಸಲೇಬೇಕಾಗುತ್ತದೆ. ಕ್ಲೈಮ್ನಲ್ಲಿ ವಂಚನೆ ಆಗಿದ್ದ ಪಕ್ಷದಲ್ಲಿ ಮಾತ್ರವೇ ಕ್ಲೈಮ್ ರಿಜೆಕ್ಟ್ ಮಾಡಬಹುದು. ಪಾಲಿಸಿ ಮಾಡಿಸುವಾಗ ರೋಗ ಮರೆ ಮಾಚಲಾಗಿದೆ ಎಂಬಿತ್ಯಾದಿ ಸಬೂಬುಗಳನ್ನು ನೀಡಿ ಕ್ಲೈಮ್ ರಿಜೆಕ್ಟ್ ಮಾಡಲು ಆಗುವುದಿಲ್ಲ.
ಒಂದು ವೇಳೆ ನೀವು ಮಾನ್ಯವೆನಿಸಿರುವ ರೋಗದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುತ್ತೀರಿ. ಆ ಸಂದರ್ಭದಲ್ಲಿ ನಿಮ್ಮಲ್ಲಿ ಬಿಪಿ, ಶುಗರ್ ಇತ್ಯಾದಿ ಇರುವುದು ಬೆಳಕಿಗೆ ಬಂದಿರುತ್ತದೆ. ಈ ಬಿಪಿ, ಶುಗರ್ಗೂ ನೀವು ಆಸ್ಪತ್ರೆಗೆ ದಾಖಲಾಗಲು ಕಾರಣವಾದ ರೋಗಕ್ಕೂ ಸಂಬಂಧ ಇಲ್ಲದಿದ್ದರು ವಿಮಾ ಕಂಪನಿಗಳು ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸುವ ಸಾಧ್ಯತೆ ಇತ್ತು. ಅದೀಗ ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಜನರು ಹೆಲ್ತ್ ಇನ್ಷೂರೆನ್ಸ್ ತಿರಸ್ಕರಿಸಲು ಏನು ಕಾರಣ? ಪಾಲಿಸಿ ಮಾಡಿಸಲು ಏನು ಕಾರಣ? ಇಲ್ಲಿದೆ ಇಂಟರೆಸ್ಟಿಂಗ್ ಸೈಕಾಲಜಿ
ನೀವು ಪಾಲಿಸಿ ಮಾಡಿಸುವಾಗ ರೋಗ ಅಸ್ತಿತ್ವದಲ್ಲಿರುವ ಮಾಹಿತಿ ನೀಡಿದ್ದರೆ…
ಒಂದು ವೇಳೆ ನೀವು ಆರೋಗ್ಯ ವಿಮೆ ಮಾಡಿಸುವಾಗ ಪ್ರೀ ಎಕ್ಸಿಸ್ಟಿಂಗ್ ಡಿಸೀಸ್ ಬಗ್ಗೆ ಮಾಹಿತಿ ಕೇಳಲಾಗುತ್ತದೆ. ಬಿಪಿ, ಶುಗರ್, ಅಸ್ತಮಾ ಇತ್ಯಾದಿ ರೋಗ ಇದ್ದರೆ ಅದನ್ನು ತಿಳಿಸಬೇಕು. ಇಂಥ ರೋಗಗಳಿಗೆ ಆಗುವ ಚಿಕಿತ್ಸಾ ವೆಚ್ಚವನ್ನು ನಾಲ್ಕು ವರ್ಷಗಳವರೆಗೆ ವಿಮಾ ಕಂಪನಿಗಳು ಕವರ್ ಮಾಡುವುದಿಲ್ಲ. ಈ ಅವಧಿಯನ್ನು ಈಗ ಮೂರು ವರ್ಷಕ್ಕೆ ಇಳಿಸಲಾಗಿದೆ. ಅಂದರೆ ಮೂರು ವರ್ಷ ನೀವು ಪ್ರೀಮಿಯಮ್ ಕಟ್ಟಿದ ಬಳಿಕ ನಿಮ್ಮ ಪೂರ್ವಬಾವಿ ರೋಗಗಳಿಗೆ ವಿಮಾ ಕಂಪನಿಗಳು ಕವರೇಜ್ ನೀಡಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




