
ನವದೆಹಲಿ, ಜುಲೈ 30: ಭಾರತದಲ್ಲಿ ದುರ್ದೈವವಶಾತ್ ಹೆಚ್ಚಿನ ಜನರ ನಿವೃತ್ತಿ ಕಾಲದ ಬಗ್ಗೆ ಮುಂದಾಲೋಚನೆಯೇ ಮಾಡಿರುವುದಿಲ್ಲ. 50-55 ವರ್ಷ ಗಡಿ ದಾಟಿದ ಬಳಿಕ ರಿಟೈರ್ಮೆಂಟ್ ಲೈಫ್ (retirement life) ಬಗ್ಗೆ ಯೋಚಿಸುವುದುಂಟು. ವೃತ್ತಿ ಜೀವನದ ಆರಂಭದಿಂದಲೇ ಒಂದಷ್ಟು ಸೇವಿಂಗ್ಸ್ (savings) ಅನ್ನು ನಿವೃತ್ತಿಗೆಂದು ತೆಗೆದಿರಿಸಬಹುದಿತ್ತಲ್ಲಾ ಎಂದು ಕೊರಗಬಹುದು. ಅಷ್ಟಕ್ಕೂ ನಿವೃತ್ತಿಯಾದಾಗ ಎಷ್ಟು ಹಣ ಹೊಂದಿರಬೇಕು ಎನ್ನುವ ಸಹಜ ಜಿಜ್ಞಾಸೆ ಪ್ರತಿಯೊಬ್ಬರಿಗೂ ಬರುತ್ತದೆ. ಹಾಗಾದರೆ, ಆರಾಮವಾಗಿ ರಿಟೈರ್ಡ್ ಲೈಫ್ ಕಳೆಯಲು ಎಷ್ಟು ಹಣ ಬೇಕು? ಎಚ್ಎಸ್ಬಿಸಿ ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರಸಕ್ತ ಸುರಕ್ಷಿತ ನಿವೃತ್ತಿಗೆ 3.5 ಕೋಟಿ ರೂ ಬೇಕಂತೆ.
ಮೂರೂವರೆ ಕೋಟಿ ರೂ ಅಂದರೆ ಸುಮಾರು 4 ಲಕ್ಷ ಡಾಲರ್. ಇದು ಭಾರತೀಯರಿಗೆ ನಿವೃತ್ತಿ ನಂತರ ಬದುಕಲು ಬೇಕಾಗಬಹುದಾದ ಹಣ. ಹಣದುಬ್ಬರ, ಅಧಿಕ ಆಯಸ್ಸು ಇತ್ಯಾದಿ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ಅಂಕಿಯನ್ನು ನೀಡಲಾಗಿದೆ. ಇದು ಸರಾಸರಿ ಮೊತ್ತ. ವ್ಯಕ್ತಿಯ ಜೀವನಶೈಲಿ ಹಾಗೂ ನಿರ್ದಿಷ್ಟ ಪ್ರದೇಶದ ಜೀವನವೆಚ್ಚಕ್ಕೆ ಅನುಗುಣವಾಗಿ ತುಸು ಏರುಪೇರಾಗಬಹುದು.
ಇದನ್ನೂ ಓದಿ: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್ಗಳ ಮ್ಯಾಜಿಕ್
ಹಾಗಾದರೆ, ಬೇರೆ ದೇಶಗಳಲ್ಲಿ ರಿಟೈರ್ಮೆಂಟ್ ಲೈಫ್ಗೆ ಎಷ್ಟು ಬೇಕಾಗುತ್ತದೆ? ಎಚ್ಎಸ್ಬಿಸಿ ವರದಿ ಪ್ರಕಾರ ಸಿಂಗಾಪುರದಲ್ಲಿ ಜನರು ರಿಟೈರ್ ಆದ ಬಳಿಕ ಆರಾಮವಾಗಿ ಬದುಕಲು 1.39 ಮಿಲಿಯನ್ ಡಾಲರ್ ಬೇಕಾಗುತ್ತದೆ. ಹಾಂಕಾಂಗ್ನಲ್ಲಾದರೆ 1.1 ಮಿಲಿಯನ್ ಡಾಲರ್, ಅಮೆರಿಕದಲ್ಲಾದರೆ 1.57 ಮಿಲಿಯನ್ ಡಾಲರ್, ಚೀನಾದಲ್ಲಾದರೆ 1.09 ಮಿಲಿಯನ್ ಡಾಲರ್ ಬೇಕಾಗುತ್ತದೆ ಎಂದು ಹೇಳಲಾಗಿದೆ.
ಎಚ್ಎಸ್ಬಿಸಿ ವರದಿ ಕೆಲ ಕುತೂಹಲಕಾರಿ ಅಂಶಗಳನ್ನು ಎತ್ತಿತೋರಿಸಿದೆ. ಭಾರತೀಯರು ರಿಟೈರ್ಮೆಂಟ್ಗಾಗಿ ದೂರಾಲೋಚನೆ ಮಾಡುವುದು ಬಹಳ ಕಡಿಮೆ. ಪ್ರವಾಸ, ಶಿಕ್ಷಣ, ಮನೆ, ಜಮೀನು, ಮದುವೆ ಇತ್ಯಾದಿ ಕಾರ್ಯಗಳಿಗೆ ಎಲ್ಲಾ ಸೇವಿಂಗ್ಸ್ ಬಳಸುತ್ತಾರೆ. ರಿಟೈರ್ಮೆಂಟ್ ಬಗ್ಗೆ ಯೋಚಿಸುವುದಿಲ್ಲ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ SCSS ಸ್ಕೀಮ್; ತಿಂಗಳಿಗೆ 20,500 ರೂವರೆಗೆ ಆದಾಯ ಗಳಿಸಿ
ಮೂವತ್ತರ ವಯಸ್ಸಿನಿಂದಲೇ ರಿಟೈರ್ಮೆಂಟ್ ಪ್ಲಾನಿಂಗ್ ಮಾಡುತ್ತಿರುವವರು ಮತ್ತು ಆ ನಿಟ್ಟಿನಲ್ಲಿ ಹೂಡಿಕೆ ಮತ್ತು ಸೇವಿಂಗ್ಸ್ ಮಾಡುತ್ತಿರುವವರು ತಮ್ಮ ಗುರಿಯಲ್ಲಿ ಸಫಲರಾಗುವ ಸಾಧ್ಯತೆ ಇದೆ. ತಡವಾಗಿ ರಿಟೈರ್ಮೆಂಟ್ ಪ್ಲಾನ್ ಮಾಡುತ್ತಿರುವವರಿಗೆ ಗುರಿ ಮುಟ್ಟುವುದು ಕಷ್ಟವಾಗಬಹುದು. ಅದರ ಪರಿಣಾಮವಾಗಿ, ನಿವೃತ್ತಿ ನಂತರದ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ