
ನೀವು ಐದು ಲಕ್ಷ ರೂ ಸಾಲ ಮಾಡಿ, ಅದನ್ನು ತೀರಿಸಲು ಏಳೆಂಟು ವರ್ಷ ಇಎಂಐ ಕಟ್ಟುತ್ತಲೇ ಇರುತ್ತಿರಬಹುದು. ಒಂದು ಕೋಟಿ ರೂ ಹೇಗಪ್ಪ ಸಂಪಾದಿಸುವುದು ಎಂದು ನಿಮಗೆ ಯಾವತ್ತಾದರೂ ಅನಿಸಿದ್ದೇ ಇರುತ್ತದೆ. ಹಣಕಾಸು ಶಿಸ್ತು ಇಲ್ಲದೇ ಹೋದರೆ ಒಂದು ಲಕ್ಷ ರೂ ಹಣ ಕೂಡಿಡುವುದೂ ಕೂಡ ಕಷ್ಟವಾಗುತ್ತದೆ. ನೀವು ಒಂದು ಕೋಟಿ ರೂ ಗಳಿಸುತ್ತೇನೆಂದು ಸಂಕಲ್ಪ ತೊಡುವುದು ಎಲ್ಲಕ್ಕಿಂತ ಮುಖ್ಯ. ಸಂಬಳ ಕಡಿಮೆ ಇದ್ದರೂ ಕೂಡ ಕೋಟಿಯ ಒಡೆಯನಾಗುವುದು ದೊಡ್ಡ ವಿಷಯವಲ್ಲ. ತಿಂಗಳಿಗೆ ಕೇವಲ 5,000 ರೂ ಹೂಡಿಕೆಯಿಂದ (investment) ನೀವು ಅಚ್ಚರಿಪಡುವಷ್ಟು ಹಣವಂತರಾಗಲು ಸಾಧ್ಯ. ಇದೆಲ್ಲವೂ ನಿಮ್ಮ ಬದ್ಧತೆ ಹಾಗೂ ನೀವು ಯಾವುದರ ಮೇಲೆ ಹೂಡಿಕೆ ಮಾಡುತ್ತೀರಿ ಎಂಬುದನ್ನು ಅವಲಂಬಿಸುತ್ತದೆ.
ನೀವು ಬ್ಯಾಂಕ್ನ ರಿಕರಿಂಗ್ ಡೆಪಾಸಿಟ್ ಪ್ಲಾನ್ನಲ್ಲಿ ತಿಂಗಳಿಗೆ 5,000 ರೂ ಹೂಡಿಕೆ ಮಾಡಬಹುದು. ಅದು ಶೇ. 7ರ ವಾರ್ಷಿಕ ರಿಟರ್ನ್ ಕೊಡುತ್ತದೆಂದು ಭಾವಿಸಿ. ಆಗ 10 ವರ್ಷ ನೀವು ಇದೇ ರೀತಿ ಹೂಡಿಕೆ ಮುಂದುವರಿಸಿದರೆ 8-9 ಲಕ್ಷ ರೂ ಸಿಗುತ್ತದೆ.
ನೀವು ಮ್ಯೂಚುವಲ್ ಫಂಡ್ನ ಎಸ್ಐಪಿ ಪ್ಲಾನ್ನಲ್ಲಿ ಹೂಡಿಕೆ ಮಾಡುವುದು ಇನ್ನೊಂದು ಪರ್ಯಾಯ ಉಳಿತಾಯ ಕಮ್ ಇನ್ವೆಸ್ಟ್ಮೆಂಟ್ ಆಯ್ಕೆಯಾಗಿದೆ. ನೀವು ಮ್ಯುಚುವಲ್ ಫಂಡ್ನ ಎಸ್ಐಪಿಯಲ್ಲಿ ತಿಂಗಳಿಗೆ 5,000 ರೂನಂತೆ 10 ವರ್ಷ ಹೂಡಿಕೆ ಮಾಡಿದರೆ 10-12 ಲಕ್ಷ ರೂ ಗಳಿಸಬಹುದು. ನಿಮ್ಮ ಹೂಡಿಕೆ ಶೇ. 10-12ರ ವಾರ್ಷಿಕ ದರದಲ್ಲಿ ಬೆಳೆಯಬಹುದು ಎಂಬ ಅಂದಾಜಿರುವ ಮೊತ್ತ ಇದು.
ಇದನ್ನೂ ಓದಿ: ನಿಮ್ಮ ಹಣಕಾಸು ಭವಿಷ್ಯ ಭದ್ರವಾ? ಖಾತ್ರಿಪಡಿಸಲು ಬಳಸಿ ಈ 4 ಪರ್ಸೆಂಟ್ ಸೂತ್ರ
ಸಾಮಾನ್ಯವಾಗಿ ಮ್ಯುಚುವಲ್ ಫಂಡ್ಗಳು ವರ್ಷಕ್ಕೆ ಶೇ. 10ರಿಂದ 12ರಷ್ಟು ರಿಟರ್ನ್ ಕೊಡಬಹುದು ಎಂದು ನಿರೀಕ್ಷಿಸಬಹುದು. ನೀವು ತಿಂಗಳಿಗೆ 5,000 ರೂನಂತೆ ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋಗುತ್ತೀರಿ. ಅದು ಸರಾಸರಿಯಾಗಿ ಶೇ. 12ರ ವಾರ್ಷಿಕ ರಿಟರ್ನ್ ಕೊಟ್ಟರೆ, ಹೂಡಿಕೆ ಮೊತ್ತ ಒಂದು ಕೋಟಿ ರೂ ಆಗಲು 24-25 ವರ್ಷ ಬೇಕಾಗುತ್ತದೆ.
ಒಂದು ವೇಳೆ, ಫಂಡ್ ಶೇ. 10ರಷ್ಟು ಮಾತ್ರವೇ ಬೆಳೆದಲ್ಲಿ ನಿಮಗೆ ಒಂದು ಕೋಟಿ ಶೇಖರಣೆಯಾಗಲು 27-28 ವರ್ಷ ಬೇಕಾಗುತ್ತದೆ.
ಸ್ಟೆಪ್ ಅಪ್ ಇನ್ವೆಸ್ಟಿಂಗ್ ಎಂದರೆ ನೀವು ವರ್ಷಕ್ಕೆ ಹೂಡಿಕೆ ಹೆಚ್ಚಿಸುವುದು. ಉದಾಹರಣೆಗೆ, ನೀವು 5,000 ರೂ ಹೂಡಿಕೆ ಮಾಡುತ್ತಿರುತ್ತೀರಿ. ಮುಂದಿನ ವರ್ಷ ಸಂಬಳ ಹೆಚ್ಚಾಗುವುದರಿಂದ ಹೆಚ್ಚಿನ ಹಣ ಸಿಗುತ್ತದೆ. ನೀವು ಶೇ. 10ರಷ್ಟು ಹೆಚ್ಚು ಹೂಡಿಕೆ ಮಾಡಲು ಅವಕಾಶ ಇರಬಹುದು. ಆಗ 5,000 ರೂ ಜೊತೆಗೆ ಇನ್ನೂ 500 ರೂ ಹೆಚ್ಚು ಹೂಡಿಕೆ ಮಾಡಬಹುದು. ಅದೇ ರೀತಿ ಪ್ರತೀ ವರ್ಷವೂ ಹೂಡಿಕೆ ಹೆಚ್ಚಿಸುತ್ತಾ ಹೋಗುವುದೇ ಸ್ಟೆಪ್ ಅಪ್ ಇನ್ವೆಸ್ಟಿಂಗ್ ಎನ್ನುವುದು.
ಇದನ್ನೂ ಓದಿ: ಮಾರುಕಟ್ಟೆಯನ್ನು ನಂಬಿ ಕೆಟ್ಟವರಿಲ್ಲವೋ…! ಇಲ್ಲಿವೆ ಹೂಡಿಕೆ ಮಾಡುವ ಸರಳ ತಂತ್ರಗಳು
ವಾರ್ಷಿಕ ಶೇ. 10ರಷ್ಟು ಬೆಳೆಯುವ ಫಂಡ್ನಲ್ಲಿ 5,000 ರೂ ಎಸ್ಐಪಿ ಮಾಡುತ್ತಾ, ಶೇ. 10ರ ಸ್ಟೆಪ್ ಅಪ್ ಕ್ರಮ ಅನುಸರಿಸಿದರೆ ನೀವು ಒಂದು ಕೋಟಿ ರೂ ಗಳಿಸಲು 19-20 ವರ್ಷ ಬೇಕಾಗುತ್ತದೆ.
ನಿಮ್ಮ ಹೂಡಿಕೆ ಅವಧಿ ಹೆಚ್ಚಿದಷ್ಟೂ ನಿಮ್ಮ ರಿಟರ್ನ್ ಹೆಚ್ಚುತ್ತಾ ಹೋಗುತ್ತದೆ. ಇದು ಕಾಂಪೌಂಡಿಂಗ್ ಎಫೆಕ್ಟ್. ಉದಾಹರಣೆಗೆ, ಶೇ. 12ರ ರಿಟರ್ನ್ ನೀಡುವ ಫಂಡ್ನಲ್ಲಿ 5,000 ರೂ ಎಸ್ಐಪಿ ಮಾಡಿದರೆ 10 ಲಕ್ಷ ರೂ ಆಗಲು 10 ವರ್ಷ ಬೇಕಾಗುತ್ತದೆ. ಅದೇ 20 ಲಕ್ಷ ರೂ ಆಗಲು 15 ವರ್ಷವೂ ಬೇಕಾಗುವುದಿಲ್ಲ.
ಇದು ಎಸ್ಐಪಿ ಮಾತ್ರವಲ್ಲ, ನಿಗದಿತ ಆದಾಯ ತರುವ ಯಾವುದೇ ಪ್ಲಾನ್ಗಳಲ್ಲೂ ಈ ಕಾಂಪೌಂಡಿಂಗ್ ಎಫೆಕ್ಟ್ ಇರುತ್ತದೆ. ಹಣ ಡಬಲ್ ಆಗುವ ವೇಗ ಹೆಚ್ಚುತ್ತಲೇ ಹೋಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ