
ಕ್ರೆಡಿಟ್ ಕಾರ್ಡ್ ಎಂದರೆ ಬಹಳ ಜನರು ಹೌಹಾರಿ ದೂರ ಓಡುತ್ತಾರೆ. ಇನ್ನೂ ಹಲವರು ಸಾಲು ಸಾಲಾಗಿ ಕ್ರೆಡಿಟ್ ಕಾರ್ಡ್ಗಳನ್ನು ಪಡೆದು ಇಎಂಐಗಳ ಗಾಳಕ್ಕೆ ಬೀಳುತ್ತಾರೆ. ಇನ್ನೂ ಕೆಲವರು ಕ್ರೆಡಿಟ್ ಕಾರ್ಡ್ (Credit Card) ಪಡೆದು, ಅದನ್ನು ಬಳಸದೆ ಹಾಗೇ ಬಿಟ್ಟಿರುತ್ತಾರೆ. ಕಾರ್ಡ್ ಬಳಸದೆ ಬಹಳ ಕಾಲ ಬಿಟ್ಟರೆ ಏನಾಗುತ್ತೆ? ಕಾರ್ಡ್ ಬಳಸದೇ ಇರುವುದು ಹಣಕಾಸು ದೃಷ್ಟಿಯಿಂದ ಉತ್ತಮ ಕ್ರಮ ಅನಿಸಬಹುದು. ಆದರೆ, ಕ್ರೆಡಿಟ್ ಸ್ಕೋರ್ ದೃಷ್ಟಿಯಿಂದ ಇದು ತುಸು ಸಂಕೀರ್ಣವಾಗಿದೆ.
‘ಕ್ರೆಡಿಟ್ ಕಾರ್ಡ್ ಬಳಕೆ ನಿಲ್ಲಿಸಿದರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುವುದಿಲ್ಲ ಎನ್ನುವುದು ಹೌದು. ಆದರೆ, ಕಾರ್ಡ್ ಬಳಕೆ ದೀರ್ಘಾವಧಿಯವರೆಗೆ ಇಲ್ಲದಿದ್ದಾಗ ಕ್ರೆಡಿಟ್ ಹಿಸ್ಟರಿಯ ಅವಧಿ ಕಡಿಮೆ ಆಗುತ್ತದೆ. ಇದರಿಂದ ಕ್ರೆಡಿಟ್ ಕಾರ್ಡ್ ಕಂಪನಿ ನಿಮ್ಮ ಅಕೌಂಟ್ ಮುಚ್ಚಬಹುದು. ಇದು ಒಟ್ಟಾರೆ ಯುಟಿಲೈಸೇಶನ್ ರೇಶಿಯೋ ಹೆಚ್ಚಲು ಕಾರಣವಾಗಬಹುದು. ಆ ಮೂಲಕ ಕ್ರೆಡಿಟ್ ಸ್ಕೋರ್ಗೆ ಸ್ವಲ್ಪ ಹಿನ್ನಡೆಗೆ ಕಾರಣವಾಗಬಹುದು’ ಎಂದು ಝ್ಯಾಗಲ್ ಕಂಪನಿಯ ಎಕ್ಸಿಕ್ಯೂಟಿವ್ ಛೇರ್ಮನ್ ರಾಜ್ ಪಿ ನಾರಾಯಣಂ ಹೇಳಿದ್ದಾರೆ.
ಇದನ್ನೂ ಓದಿ: ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್
ಸಾಲ ಪಡೆಯಬೇಕೆನ್ನುವವರು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು. ಸ್ಕೋರ್ ಹೆಚ್ಚಿಸಬೇಕೆಂದರೆ ಉತ್ತಮ ಕ್ರೆಡಿಟ್ ಹಿಸ್ಟರಿ ಇರಬೇಕು. ಕ್ರೆಡಿಟ್ ಕಾರ್ಡ್ ಮೂಲಕ ವೆಚ್ಚ ಮಾಡುವುದು, ಸರಿಯಾದ ಸಮಯಕ್ಕೆ ಹಣ ಪಾವತಿಸುವುದು, ಇಎಂಐ ಕಟ್ಟುವುದು ಇವು ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸುತ್ತವೆ.
ಹಣಕಾಸು ಸಂಸ್ಥೆಗಳು ನಿಮ್ಮ ಸಾಲದ ನಿರ್ವಹಣೆ ಹೇಗಿದೆ, ನಿಮಗೆ ಸಾಲ ತೀರಿಸುವ ಜವಾಬ್ದಾರಿ ಮತ್ತು ಶಕ್ತಿ ಇದೆಯಾ ಎಂಬುದನ್ನು ಗಮನಿಸುತ್ತವೆ. ಇಲ್ಲಿ ಕ್ರೆಡಿಟ್ ಸ್ಕೋರ್ ಜೊತೆಗೆ ಕ್ರೆಡಿಟ್ ಹಿಸ್ಟರಿಯೂ ಗಣನೆಗೆ ಬರುತ್ತದೆ.
ಇದನ್ನೂ ಓದಿ: ಮಾಸಿಕ 20,500 ರೂ ಆದಾಯ ತರಬಲ್ಲ ಪೋಸ್ಟ್ ಆಫೀಸ್ನ ಎಸ್ಸಿಎಸ್ಎಸ್ ಸ್ಕೀಮ್
ನೀವು ಕ್ರೆಡಿಟ್ ಕಾರ್ಡ್ ಪಡೆದು ಅದನ್ನು ಬಹಳ ಕಾಲ ಉಪಯೋಗಿಸುವುದನ್ನು ನಿಲ್ಲಿಸಿದ್ದರೆ ಅಕೌಂಟ್ ಮುಚ್ಚಬಹುದು. ಇದರಿಂದ ಕ್ರೆಡಿಟ್ ಹಿಸ್ಟರಿ ಮೊಟಕುಗೊಳ್ಳಬಹುದು. ಇದರ ಬದಲು ಕ್ರೆಡಿಟ್ ಕಾರ್ಡ್ ಅನ್ನು ಯಾವಾಗಲಾದರೊಮ್ಮೆಯಾದರೂ ಉಪಯೋಗಿಸಿ, ಬಿಲ್ ಅನ್ನು ಸಕಾಲಕ್ಕೆ ಪಾವತಿಸುತ್ತಿದ್ದರೆ ಕ್ರೆಡಿಟ್ ಹಿಸ್ಟರಿ ಬೆಳೆಯುತ್ತಿರುತ್ತದೆ. ನಿಮಗೆ ಮುಂದೆ ಸಾಲಗಳು ಸಿಗುವುದು ಸುಲಭವಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ