LIC Housing Finance: ಸಾರ್ವಜನಿಕ ಠೇವಣಿ ಬಡ್ಡಿ ದರ ಶೇ 7.50ರ ವರೆಗೆ ಹೆಚ್ಚಿಸಿದ ಎಲ್ಐಸಿ ಹೌಸಿಂಗ್ ಫೈನಾನ್ಸ್
ಬ್ಯಾಂಕೇತರ ಹಣಕಾಸು ಸಂಸ್ಥೆ ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಾರ್ವಜನಿಕ ಠೇವಣಿ ಬಡ್ಡಿ ದರವನ್ನು 10ರಿಂದ 65 ಮೂಲಾಂಶದ ವರೆಗೆ ಹೆಚ್ಚಿಸಿದ್ದು, ಡಿಸೆಂಬರ್ 26ರಿಂದ ಅನ್ವಯವಾಗಲಿದೆ. 18 ತಿಂಗಳುಗಳಿಂದ 5 ವರ್ಷಗಳ ವರೆಗಿನ ವಿವಿಧ ಅವಧಿಯ ಸಾರ್ವಜನಿಕ ಠೇವಣಿಗಳ ಬಡ್ಡಿ ದರ ಪರಿಷ್ಕರಣೆಯಾಗಿದೆ.
ನವದೆಹಲಿ: ಬ್ಯಾಂಕೇತರ ಹಣಕಾಸು ಸಂಸ್ಥೆ (NBFC) ಎಲ್ಐಸಿ ಹೌಸಿಂಗ್ ಫೈನಾನ್ಸ್ (LIC Housing Finance) ಸಾರ್ವಜನಿಕ ಠೇವಣಿ ಬಡ್ಡಿ ದರವನ್ನು 10ರಿಂದ 65 ಮೂಲಾಂಶದ ವರೆಗೆ ಹೆಚ್ಚಿಸಿದ್ದು, ಡಿಸೆಂಬರ್ 26ರಿಂದ ಅನ್ವಯವಾಗಲಿದೆ. 20 ಕೋಟಿ ರೂ.ವರೆಗಿನ ಹೂಡಿಕೆಗೆ ಶೇಕಡಾ 7.50 ವರೆಗೆ ಬಡ್ಡಿ ದೊರೆಯಲಿದೆ. 20 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಹೂಡಿಕೆಗೂ ಸುಮಾರು ಶೇಕಡಾ 7ಕ್ಕಿಂತ ಹೆಚ್ಚಿನ ಬಡ್ಡಿ ದೊರೆಯಲಿದೆ. 18 ತಿಂಗಳುಗಳಿಂದ 5 ವರ್ಷಗಳ ವರೆಗಿನ ವಿವಿಧ ಅವಧಿಯ ಸಾರ್ವಜನಿಕ ಠೇವಣಿಗಳ ಬಡ್ಡಿ ದರ ಪರಿಷ್ಕರಣೆಯಾಗಿದೆ. ಪರಿಷ್ಕೃತ ಬಡ್ಡಿ ದರದ ಪ್ರಕಾರ, 20 ಕೋಟಿ ರೂ.ವರೆಗಿನ ಹೂಡಿಕೆಗೆ ಒಂದು ವರ್ಷದ ಅವಧಿಗೆ ಶೇಕಡಾ 7.10ರ ಸಂಚಿತ ಬಡ್ಡಿ (ಪ್ರತಿ ವರ್ಷ ಬಡ್ಡಿ ಲೆಕ್ಕ ಹಾಕಿ ಮೆಚ್ಯೂರಿಟಿ ಸಂದರ್ಭದಲ್ಲಿ ಒಟ್ಟಿಗೆ ನೀಡುವ ವಿಧಾನ) ದೊರೆಯಲಿದೆ. 18 ತಿಂಗಳ ಅವಧಿಗೆ ಶೇಕಡಾ 6.75ರ ಬಡ್ಡಿ ದೊರೆಯಲಿದೆ.
20 ಕೋಟಿ ರೂ. ವರೆಗಿನ ಸಾರ್ವಜನಿಕ ಠೇವಣಿಗೆ 1 ವರ್ಷದ ಅವಧಿಗೆ ಶೇಕಡಾ 7 ಮತ್ತು 20 ಕೋಟಿ ರೂ.ಗಿಂತ ಹೆಚ್ಚಿನ ಠೇವಣಿಗೆ ಶೇಕಡಾ 6.75ರ ಸಂಚಿತ ಬಡ್ಡಿ ದೊರೆಯಲಿದೆ. 2 ವರ್ಷಗಳ ಅವಧಿಗೆ 20 ಕೋಟಿ ರೂ.ವರೆಗೆ ಹೂಡಿಕೆ ಮಾಡಿದರೆ ಶೇಕಡಾ 7.35 ಮತ್ತು 20 ಕೋಟಿ ರೂ. ಮೇಲ್ಪಟ್ಟ ಠೇವಣಿಗೆ ಶೇಕಡಾ 7ರ ಬಡ್ಡಿ ದೊರೆಯಲಿದೆ. 20 ಕೋಟಿ ರೂ.ವರೆಗಿನ 3ರಿಂದ 5 ವರ್ಷಗಳ ಅವಧಿಯ ಠೇವಣಿಗೆ ಶೇಕಡಾ 7.50 ಹಾಗೂ 20 ಕೋಟಿ ರೂ. ಮೇಲ್ಪಟ್ಟ ಠೇವಣಿಗೆ ಶೇಕಡಾ 7.25ರ ಬಡ್ಡಿ ದೊರೆಯಲಿದೆ.
ಸಂಚಿತವಲ್ಲದ ಬಡ್ಡಿ ದರ ವಿವರ ಹೀಗಿದೆ;
ಸಂಚಿತವಲ್ಲದ ಬಡ್ಡಿ ದರವೆಂದರೆ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಲಾಗುವ ಬಡ್ಡಿಯಾಗಿದೆ. 20 ಕೋಟಿ ರೂ.ವರೆಗಿನ 18 ತಿಂಗಳ ಅವಧಿಯ ಠೇವಣಿಗೆ ಶೇಕಡಾ 6.90 ಹಾಗೂ 20 ಕೋಟಿ ರೂ. ಮೇಲ್ಪಟ್ಟ ಠೇವಣಿಗೆ ಶೇಕಡಾ 6.55ರ ಬಡ್ಡಿ ದೊರೆಯಲಿದೆ. 20 ಕೋಟಿ ರೂ.ವರೆಗಿನ ಒಂದು ವರ್ಷದ ಅವಧಿಯ ಠೇವಣಿಗೆ ಶೇಕಡಾ 6.80 ಹಾಗೂ 20 ಕೋಟಿ ರೂ. ಮೇಲ್ಪಟ್ಟ ಠೇವಣಿಗೆ ಶೇಕಡಾ 6.55ರ ಬಡ್ಡಿ ನೀಡಲಾಗುತ್ತದೆ. 2 ವರ್ಷಗಳ ಠೇವಣಿಗೆ ಕ್ರಮವಾಗಿ ಶೇಕಡಾ 7.10 ಮತ್ತು ಶೇಕಡಾ 6.80ರ ಬಡ್ಡಿ ದೊರೆಯಲಿದೆ.
ಇದನ್ನೂ ಓದಿ: Post Office Deposit Scheme: ಅಂಚೆ ಇಲಾಖೆಯ ಟೈಮ್ ಡಿಪಾಸಿಟ್ ಯೋಜನೆಯಲ್ಲಿ ಎಫ್ಡಿಗಿಂತಲೂ ಹೆಚ್ಚು ಬಡ್ಡಿ; ಇಲ್ಲಿದೆ ವಿವರ
ಮೂರು ವರ್ಷಗಳ ಅವಧಿಗೆ 20 ಕೋಟಿ ರೂ.ವರೆಗಿನ ಠೇವಣಿಗೆ ಶೇಕಡಾ 7.25 ಹಾಗೂ 20 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಠೇವಣಿಗೆ ಶೇಕಡಾ 7.35ರ ಬಡ್ಡಿ ನಿಗದಿಪಡಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:13 pm, Tue, 27 December 22