ನವದೆಹಲಿ: ಹಿರಿಯ ನಾಗರಿಕರಿಗೆ (Senior Citizens) ಸಿಹಿ ಸುದ್ದಿ ನೀಡಿರುವ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) 65 ವರ್ಷ ಮೇಲ್ಪಟ್ಟವರೂ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಹೂಡಿಕೆ ಮಾಡಲು ಅನುಮತಿಸಿದೆ. 70 ವರ್ಷ ವಯಸ್ಸಿನ ವರೆಗೆ ಹೂಡಿಕೆ ಮಾಡಬಹುದಾಗಿದ್ದು, ನಂತರ ಅದನ್ನು 75 ವರ್ಷ ವಯಸ್ಸಿನ ವರೆಗೆ ವಿಸ್ತರಿಸಲು ಅವಕಾಶ ನೀಡಿದೆ. ಸಾಗರೋತ್ತರ ಭಾರತೀಯ ಹಿರಿಯ ನಾಗರಿಕರಿಗೂ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.
18 ವರ್ಷ ವಯಸ್ಸಿನಿಂದ 70 ವರ್ಷದ ವರೆಗಿನ ಯಾರು ಬೇಕಾದರೂ ಈಗ ಎನ್ಪಿಎಸ್ ಖಾತೆ ತೆರೆಯಬಹುದಾಗಿದೆ. ವಯಸ್ಸಿನ ಅರ್ಹತೆಯ ಕಾರಣಕ್ಕಾಗಿ ಈಗಾಗಲೇ ಖಾತೆಯನ್ನು ಕ್ಲೋಸ್ ಮಾಡಿದವರು ಮತ್ತೊಮ್ಮೆ ಖಾತೆ ತೆರಯಲು ಅವಕಾಶವಿದೆ ಎಂದು ಪಿಎಫ್ಆರ್ಡಿಎ ತಿಳಿಸಿದೆ. ನಿವೃತ್ತಿಯ ನಂತರದ ಹೂಡಿಕೆ ಮತ್ತು ಪಿಂಚಣಿ ಉದ್ದೇಶಿಸಿರುವ ಹಿರಿಯ ನಾಗರಿಕರಿಗೆ ಈ ಕ್ರಮದಿಂದ ಅನುಕೂಲವಾಗಲಿದೆ.
ಇದನ್ನೂ ಓದಿ: Tax-Saving Investments: ಪಿಪಿಎಫ್ನಿಂದ ಎನ್ಪಿಎಸ್ ವರೆಗೆ; ತೆರಿಗೆ ಉಳಿತಾಯಕ್ಕೆ ಈ ಐದು ಹೂಡಿಕೆ ಯೋಜನೆಗಳನ್ನು ಗಮನಿಸಿ
ಎನ್ಪಿಎಸ್ ಖಾತೆ ತೆರೆದ ಕೂಡಲೇ ‘ಟೈರ್ 1’ ಖಾತೆ ಆರಂಭವಾಗುತ್ತದೆ. ಉಳಿತಾಯದ ಮೊತ್ತವನ್ನು ಮುಂದುವರಿಸುವುದಕ್ಕಾಗಿ ತೆರೆಯುವ ‘ಟೈರ್ 2’ ಖಾತೆಗೆ ಲಾಕ್ ಇನ್ ಅವಧಿ ಇರುವುದಿಲ್ಲ. ನಿವೃತ್ತಿಯ ನಂತರವೂ ಸಹ, ಹಣದುಬ್ಬರ ಮತ್ತು ಜೀವಿತಾವಧಿಯನ್ನು ಗಣನೆಗೆ ತೆಗೆದುಕೊಂಡು ಷೇರುಗಳಿಗೆ ಹಣವನ್ನು ನಿಯೋಜಿಸಬಹುದಾಗಿದೆ.
ಈಕ್ವಿಟಿ ಮತ್ತು ಸಾಲದ ಮೇಲಿನ ಹೂಡಿಕೆಗೆ ಅವಕಾಶ
ಹಣದುಬ್ಬರ ನಿಯಂತ್ರಣಕ್ಕಾಗಿ ಈಕ್ವಿಟಿ ಮತ್ತು ಸಾಲದ ಮೇಲಿನ ಹೂಡಿಕೆಗೆ ಎನ್ಪಿಎಸ್ ಅವಕಾಶ ನೀಡುತ್ತದೆ. 65 ವರ್ಷ ವಯಸ್ಸಿನ ನಂತರ ಎನ್ಪಿಎಸ್ಗೆ ಸೇರುವವರು ಪಿಎಫ್ ಅಥವಾ ಸ್ವತ್ತು ಹಂಚಿಕೆಯನ್ನು ಆಯ್ಕೆ ಮಾಡಬಹುದು. ಆಟೊ ಮತ್ತು ಆ್ಯಕ್ಟಿವ್ ಆಯ್ಕೆಗಳ ಅಡಿಯಲ್ಲಿ ಕ್ರಮವಾಗಿ ಶೇಕಡಾ 15ರಷ್ಟು ಹಾಗೂ 50ರಷ್ಟು ಹೂಡಿಕೆ ಮಾಡಬಹುದಾಗಿದೆ.
ಈ ಹಿಂದೆ ಹೇಗಿತ್ತು ನಿಯಮ?
ಎನ್ಪಿಎಸ್ನಲ್ಲಿ ಹೂಡಿಕೆ ಮಾಡಲು ಈವರೆಗೆ ಗರಿಷ್ಠ ವಯಸ್ಸು 65 ಆಗಿತ್ತು. 70 ವರ್ಷ ವಯಸ್ಸಿನ ವರೆಗೆ ಮುಂದುವರಿಸಲು ಅವಕಾಶ ಇತ್ತು. ತೆರಿಗೆ ಉಳಿತಾಯ ಮಾಡುವ ನಿಟ್ಟಿನಲ್ಲಿ ದೀರ್ಘಾವಧಿಯ ಹೂಡಿಕೆಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಈ ಹೂಡಿಕೆಯಿಂದ ದೊರೆಯುವ ಆದಾಯ ಷೇರುಪೇಟೆ ವಹಿವಾಟನ್ನೂ ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸಬೇಕು. ಖಾಸಗಿ ವಲಯದ ಉದ್ಯೋಗಿಗಳಿಗೆ ಪಿಂಚಣಿ ಪಡೆಯಲು ಇದೊಂದು ಉತ್ತಮ ಆಯ್ಕೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Wed, 14 December 22