National Youth Day: ರಾಷ್ಟ್ರೀಯ ಯುವ ದಿನ; ಹೂಡಿಕೆ, ಹಣಕಾಸು ವಿಚಾರಗಳ ಬಗ್ಗೆ ಯುವಕರಿಗೂ ಇರಲಿ ಅರಿವು
ಯುವಜನರು ಇವತ್ತಿನ ಉದ್ಯಮಗಳಿಗೆ ಅಗತ್ಯವಾಗಿರುವ ನೈಪುಣ್ಯತೆ, ಕೌಶಲ, ಹಣಕಾಸು ವಿದ್ಯೆಗಳನ್ನು ಕಲಿತುಕೊಳ್ಳುವುದು ಅತಿ ಅವಶ್ಯಕ. ದೇಶದ ಬೆಳವಣಿಗೆಗೆ ಬೇಕಾದ ಉತ್ಪನ್ನಶೀಲತೆ, ಉದ್ಯಮಶೀಲತೆಯ ಸ್ವಭಾವವನ್ನು ಯುವಜನರಲ್ಲಿ ಬಿತ್ತಬೇಕು. ಈ ಬಗ್ಗೆ ಒಂದಷ್ಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಇಂದು ರಾಷ್ಟ್ರೀಯ ಯುವ ದಿನ (National Youth Day). ಕಳೆದ 37 ವರ್ಷಗಳಿಂದಲೂ ಸ್ವಾಮಿ ವಿವೇಕಾನಂದರ (Swami Vivekananda Birthday) ಜನ್ಮದಿನವಾದ ಜನವರಿ 12 ದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ. ದೇಶದ ಆರ್ಥಿಕತೆ ಮತ್ತು ಅಸ್ಮಿತೆಯ ಗಾಲಿಗಳಿಗೆ ಅಗತ್ಯವಾದ ಹೂರಣವನ್ನು ತುಂಬುವವರು ಯುವಕರೇ. ಅಂತೆಯೇ ಯಾವುದೇ ದೇಶಕ್ಕೆ ಅದರ ಯುವಪೀಳಿಗೆಯೇ ಪರಮ ಮಾನವ ಸಂಪನ್ಮೂಲ ಆಸ್ತಿ. ಯುವ ಸಮುದಾಯದ ಆಶೋತ್ತರ ಮತ್ತು ಕನಸುಗಳಿಗೆ ಪ್ರತೀಕವಾಗಿ ಇದ್ದವರು ಸ್ವಾಮಿ ವಿವೇಕಾನಂದರು. ಯುವಜನರು ನಮ್ಮ ದೇಶಕ್ಕೆ ಬೆಲೆ ಕಟ್ಟಲಾಗದ ಅಮೂಲ್ಯ ಆಸ್ತಿ. ಮುಂದಿನ ಕೆಲ ದಶಕಗಳು ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಯುವಜನ ಸಂಪನ್ಮೂಲ ತುಳುಕುವುದರಿಂದ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಯುವಜನರ ಪಾತ್ರ ಮಹತ್ತರವಾಗಿರಲಿದೆ ಎಂಬುದು ತಜ್ಞರ ಅಭಿಮತ. ಆದರೆ, ಈ ಆಶೋತ್ತರ ಸಾಕಾರವಾಗಬೇಕಾದರೆ ಯುವಜನರು ಇವತ್ತಿನ ಉದ್ಯಮಗಳಿಗೆ ಅಗತ್ಯವಾಗಿರುವ ನೈಪುಣ್ಯತೆ, ಕೌಶಲ, ಹಣಕಾಸು ವಿದ್ಯೆಗಳನ್ನು ಕಲಿತುಕೊಳ್ಳುವುದು ಅತಿ ಅವಶ್ಯಕ. ದೇಶದ ಬೆಳವಣಿಗೆಗೆ ಬೇಕಾದ ಉತ್ಪನ್ನಶೀಲತೆ, ಉದ್ಯಮಶೀಲತೆಯ ಸ್ವಭಾವವನ್ನು ಯುವಜನರಲ್ಲಿ ಬಿತ್ತಬೇಕು. ಈ ನಿಟ್ಟಿನಲ್ಲಿ ಚಿಕ್ಕಂದಿನಿಂದಲೇ ಮಕ್ಕಳನ್ನು ಹಣಕಾಸು ಸಾಕ್ಷರರನ್ನಾಗಿ ಮಾಡುವ ಜವಾಬ್ದಾರಿ ದೊಡ್ಡವರಿಗೆ ಇರುತ್ತದೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂಬಂತೆ ಮಕ್ಕಳಲ್ಲಿ ಜೀವನೋಪಾಯಕ್ಕೆ ಬೇಕಾಗುವ ಕೌಶಲಗಳನ್ನು ತುಂಬಬೇಕು. ಈ ಬಗ್ಗೆ ಒಂದಷ್ಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಯುವಕರಿಗೆ ಹಣದ ಬೆಲೆ ತಿಳಿದಿರಲಿ
ಹಣದ ಬೆಲೆ ಎಂಥದ್ದು ಎಂಬುದನ್ನು ಚಿಕ್ಕಂದಿನಿಂದಲೇ ಮನದಟ್ಟು ಮಾಡಬೇಕು. ಬ್ಯಾಂಕ್ ವ್ಯವಹಾರ, ಕೌಟುಂಬಿಕ ವೆಚ್ಚ, ಶಿಕ್ಷಣ ವೆಚ್ಚ, ಆದಾಯದ ಮಿತಿಯೊಳಗೆ ಬಜೆಟ್ ಇತ್ಯಾದಿ ಜೀವನ ಶಿಕ್ಷಣವನ್ನು ಮಕ್ಕಳಿಗೆ ಹಿರಿಯರು ತಿಳಿಸಿಕೊಡಬೇಕು. ಅದಕ್ಕೆ ತಿಂಗಳಿಗೆ ಮಗುವಿಗೆ ಇಂತಿಷ್ಟು ಪ್ಯಾಕೆಟ್ ಮನಿ ಎಂದು ಕೊಡುವುದು ತಪ್ಪೇನಿಲ್ಲ. ಆ ಮಗುವಿನ ಅಗತ್ಯ ಖರ್ಚುಗಳು ಅದೇ ಹಣದಲ್ಲಿ ಆಗಬೇಕು ಎಂಬ ನಿಯಮ ಮಾಡಿದರೆ ಆಗ ಮಗು ಅಗತ್ಯ ಇರುವುದಕ್ಕಷ್ಟೇ ಖರ್ಚು ಮಾಡುತ್ತದೆ. ಈಗ ಹಣ ಉಳಿಸಿದರೆ ಮುಂದಿನ ತಿಂಗಳಿಗೆ ಹೆಚ್ಚು ಹಣ ಸಿಗುತ್ತದೆ ಎಂಬ ವಿಚಾರ ತಿಳಿಸಿ ಆ ಮಗುವಿನಲ್ಲಿ ಉಳಿತಾಯದ ಮನೋಭಾವ ರೂಪಿಸಬಹುದು. ಆರಂಭದಲ್ಲೇ ಈ ಉಳಿತಾಯ ಪ್ರವೃತ್ತಿ ಬೆಳೆದರೆ ಮುಂದಿನ ದಿನಗಳಲ್ಲಿ ಅದು ಮಗುವಿನ ಜೀವನಕ್ಕೆ ಬಹಳ ಪ್ರಯೋಜನಕ್ಕೆ ಬರುತ್ತದೆ.
ಬಯಕೆ ಮತ್ತು ಅವಶ್ಯಕತೆ ಮಧ್ಯೆ ವ್ಯತ್ಯಾಸ ಅರಿಯಿರಿ
ಮಗು ಕಾಲೇಜು ಮೆಟ್ಟಿಲು ಏರಿದ ಬಳಿಕ ಹೊಸ ಪ್ರಪಂಚ ತೆರೆದುಕೊಳ್ಳುತ್ತದೆ. ಕೆಲ ಸಹಪಾಠಿಗಳು ಐಷಾರಾಮಿ ಬೈಕು ಅಥವಾ ಕಾರಿನಲ್ಲಿ ಬರುವುದನ್ನು ಕಂಡು ತನಗೂ ಅಂಥದ್ದು ಬೇಕು ಎನಿಸಬಹುದು. ಆದರೆ, ಅಷ್ಟು ಐಷಾರಾಮಿ ವಾಹನ ಎಂಬುದು ಬಯಕೆ ಮಾತ್ರ, ಅವಶ್ಯಕತೆ ಅಲ್ಲ ಎಂಬ ಸಂಗತಿಯನ್ನು ಮಗುವಿಗೆ ಮನವರಿಕೆ ಮಾಡಬೇಕು. ಪಾಕೆಟ್ ಮನಿಯಲ್ಲಿ ಉಳಿಸಿದ ಹಣದಲ್ಲಿ ಏನು ಬೇಕಾದರೂ ಖರೀದಿಸು ಎಂಬ ನಿರ್ಧಾರವನ್ನು ಮಕ್ಕಳಿಗೇ ಬಿಡಬೇಕು. ಆಗ ಆ ಮಗುವಿಗೆ ಬಯಕೆ ಮತ್ತು ಅವಶ್ಯಕತೆ ನಡುವಿನ ಗೆರೆ ಕಾಣುತ್ತದೆ.
ಒಂದೇ ಕೆಲಸದ ಮೇಲೆ ಅವಲಂಬನೆ ಬೇಡ
ಐಟಿ ಉದ್ಯಮದಲ್ಲಿ ಲಕ್ಷ ಲಕ್ಷ ಸಂಬಳ ಸಿಗುತ್ತದೆಂದು ಹಲವು ಸಾಫ್ಟ್ವೇರ್ ಎಂಜಿನಿಯರಿಂಗ್ ಮಾಡಿದ್ದಾರೆ. ಇವತ್ತು ವಿಶ್ವಾದ್ಯಂತ ಐಟಿ ದಿಗ್ಗಜ ಕಂಪನಿಗಳು ಉದ್ಯೋಗಕಡಿತ ಮಾಡುತ್ತಿವೆ. ಸಾಫ್ಟ್ ವೇರ್ ಬಿಟ್ಟರೆ ಬೇರೆ ವಿದ್ಯೆ ಗೊತ್ತಿಲ್ಲ ಎಂದು ಹತಾಶೆಯಲ್ಲಿ ಕೆಲಸವಿಲ್ಲದೇ ಮನೆಯಲ್ಲಿ ಕೂತವರು ಹಲವರು. ಇದು ಐಟಿ ಉದ್ದಿಮೆ ಮಾತ್ರವಲ್ಲ ಇತರ ಉದ್ಯಮಗಳಲ್ಲಿನ ಸ್ಥಿತಿ ಕೂಡ ಹೌದು.
ಇದನ್ನೂ ಓದಿ: Multibagger Penny Stock: ಒಂದೇ ತಿಂಗಳಲ್ಲಿ ಶೇ 200ರ ರಿಟರ್ನ್ಸ್ ಒದಗಿಸಿಕೊಟ್ಟಿದೆ 2 ರೂ.ಗಿಂತ ಕಡಿಮೆ ಬೆಲೆಯ ಈ ಷೇರು
ಒಂದು ಕೆಲಸ ಹೋದರೆ ಬೇರೆ ಕೆಲಸ ಮಾಡಬಲ್ಲೆ ಎನ್ನುವಂತಹ ವೈವಿಧ್ಯಮಯ ಕೌಶಲ್ಯಗಳನ್ನು ಮಕ್ಕಳಲ್ಲಿ ಆರಂಭದಿಂದಲೇ ಕಲಿಸಿಕೊಡಬೇಕು. ಬಹುಮೂಲ ಆದಾಯಗಳನ್ನು ಸೃಷ್ಟಿಸಿಕೊಳ್ಳುವ ಮಹತ್ವ ಅರಿಯುವಂತೆ ಮಾಡಬೇಕು. ಈಗ ವಿವಿಧ ಆದಾಯಗಳನ್ನು ರೂಪಿಸಲು ವಿವಿಧ ಮಾರ್ಗೋಪಾಯಗಳಿವೆ. ಅವುಗಳನ್ನು ಅವಲೋಸುವ ಮನೋಭಾವ, ಧೈರ್ಯ, ಪ್ರಾಯೋಗಿಕ ಪ್ರವೃತ್ತಿ ಇವೆಲ್ಲವೂ ಮಕ್ಕಳ ಮನಸಿನಲ್ಲಿ ಬಿತ್ತನೆಯಾಗಬೇಕು.
ಹಣ ಬೆಳೆಸುವ ಕಲೆ ಮೈಗೂಡಿಸಿಕೊಳ್ಳಿ
ಹಣ ಗಳಿಸುವುದು ಒಂದು, ಗಳಿಸಿದ ಹಣದಲ್ಲಿ ಉಳಿತಾಯ ಮಾಡುವುದು ಇನ್ನೊಂದು. ಹಾಗೆಯೇ ಉಳಿಸಿದ ಹಣವನ್ನು ವಿವಿಧೆಡೆ ಹೂಡಿಕೆ ಮಾಡಿ ಬೆಳೆಸುವುದು ಮಗದೊಂದು. ನೈತಿಕ ಮಾರ್ಗದಲ್ಲಿ ಹೆಚ್ಚೆಚ್ಚು ಹಣ ಮಾಡುವ ಮನೋಭಾವ ಇರಬೇಕು.
ಇವತ್ತು ಹೂಡಿಕೆ ಮಾಡಲು ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಹಲವು ಮಾರ್ಗಗಳಿವೆ. ಇನ್ಷೂರೆನ್ಸ್ ಬಹಳ ಅಗತ್ಯವಾದುದು. ಮ್ಯೂಚುವಲ್ ಫಂಡ್, ಬಾಂಡ್, ಫಿಕ್ಸೆಡ್ ಡೆಪಾಸಿಟ್ ಜೊತೆಗೆ ಹಲವು ಸೇವಿಂಗ್ ಸ್ಕೀಮ್ ಗಳಿವೆ. ಇವುಗಳ ಬಗ್ಗೆ ಮಾಹಿತಿ ಹೊಂದಿರಬೇಕು.