ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹಣ ಎಲ್ಲೆಲ್ಲಿ ಹೂಡಿಕೆ ಆಗಿದೆ? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ
Nirmala Sitharaman Assets: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಎರಡು ದಿನದ ಹಿಂದೆ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಅಷ್ಟು ಹಣವೂ ಇಲ್ಲ ಎಂದಿದ್ದರು. 2022ರಲ್ಲಿ ಅವರು ಘೋಷಣೆ ಮಾಡಿಕೊಂಡಿರುವ ಪ್ರಕಾರ ಚಿರಾಸ್ತಿ ಮತ್ತು ಚರಾಸ್ತಿ ಎರಡೂ ಸೇರಿ 2.53 ಕೋಟಿ ರೂ ಸಂಪತ್ತು ಹೊಂದಿದ್ದಾರೆ. ಪಿಪಿಎಫ್, ಮ್ಯೂಚುವಲ್ ಫಂಡ್ಗಳಲ್ಲಿ ಸ್ವಲ್ಪ ಹೂಡಿಕೆ ಹೊಂದಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (nirmala sitharaman) ಎರಡು ದಿನದಿಂದ ಟ್ರೆಂಡಿಂಗ್ನಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಷ್ಟು ಹಣ ತಮ್ಮಲ್ಲಿಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಒಬ್ಬ ಹಣಕಾಸು ಸಚಿವೆ ಬಳಿ ಇಷ್ಟೂ ಹಣ ಇಲ್ಲವಾ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 2022ರಲ್ಲಿ ಅವರು ಘೋಷಣೆ ಮಾಡಿಕೊಂಡ ಪ್ರಕಾರ ಚಿರಾಸ್ತಿ (immovable properties) ಮತ್ತು ಚರಾಸ್ತಿ (movable properties) ಎರಡೂ ಸೇರಿ ಎರಡೂವರೆ ಕೋಟಿ ರೂ ಸಂಪತ್ತಿನ ಒಡತಿ ಆಗಿದ್ದಾರೆ. ಇವರ ಬಳಿ ಕಾರಿಲ್ಲ. ಹಳೆಯ ಬಜಾಜ್ ಸ್ಕೂಟರ್ ಇಟ್ಟುಕೊಂಡಿದ್ದಾರೆ. ತೆಲಂಗಾಣದಲ್ಲಿ ಒಂದು ಮನೆ, ಸ್ವಲ್ಪ ಜಮೀನು ಹೊಂದಿದ್ದಾರೆ. ಸ್ವಲ್ಪ ಚಿನ್ನ, ಹೆಚ್ಚು ಬೆಳ್ಳಿ ಹೊಂದಿದ್ದಾರೆ. ಮ್ಯುಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದ್ದಾರೆ.
ನಿರ್ಮಲಾ ಸೀತಾರಾಮನ್ ಬಳಿ ಇರುವ ಒಟ್ಟು ಆಸ್ತಿ ಮೌಲ್ಯ: 2.53 ಕೋಟಿ ರೂ
- ಚಿರಾಸ್ತಿ ಮೌಲ್ಯ: 1.87 ಕೋಟಿ ರೂ
- ಚರಾಸ್ತಿ ಮೌಲ್ಯ: 65.55 ಲಕ್ಷ ರೂ
- ಸಾಲಗಳು: 26.91 ಲಕ್ಷ ರೂ
ನಿರ್ಮಲಾ ಸೀತಾರಾಮನ್ ಬಳಿ ಇರುವ ಆಸ್ತಿಗಳು
- ಹೈದರಾಬಾದ್ನ ಮಂಚಿರೇವುಲಾ ಬಳಿ ಒಂದು ಮನೆ ಇದ್ದು, ಪತಿ ಡಾ. ಪರಕಾಲ ಪ್ರಭಾಕರ್ ಮತ್ತು ಇವರ ಜಂಟಿ ಹೆಸರಿನಲ್ಲಿ ಇದೆ. ಇದರ ಮೌಲ್ಯ ಇವತ್ತಿಗೆ 1.7 ಕೋಟಿ ರೂ.
- ಕುಂತಲೂರ್ನಲ್ಲಿ ಕೃಷಿಯೇತರ ಭೂಮಿ ಇದ್ದು ಇದರ ಈಗಿನ ಮೌಲ್ಯ 17.08 ಲಕ್ಷ ರೂ ಇದೆ.
- ಬಜಾಜ್ ಚೇತಕ್ ಸ್ಕೂಟರ್: ಇದನ್ನು ಖರೀದಿಸಿದಾಗ ಮೌಲ್ಯ 28,200 ರೂ.
- 315 ಗ್ರಾಮ್ ಚಿನ್ನ: ಈಗಿನ ಮೌಲ್ಯ ಸುಮಾರು 20 ಲಕ್ಷ ರೂ
- 5.282 ಕಿಲೋ ಬೆಳ್ಳಿ: ಸುಮಾರು 3.98 ಲಕ್ಷ ರೂ
- ಬ್ಯಾಂಕ್ ಠೇವಣಿಗಳು: 35.52 ಲಕ್ಷ ರೂ
- ಪಿಪಿಎಫ್ ಅಕೌಂಟ್: 1.6 ಲಕ್ಷ ರೂ
- ಮ್ಯೂಚುವಲ್ ಫಂಡ್: 5.80 ಲಕ್ಷ ರೂ
- ನಗದು ಹಣ (2022ರಲ್ಲಿ): 7,350 ರೂ
ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟ ಸೀಟು ಹಂಚಿಕೆ; ಬಿಹಾರದಲ್ಲಿ ಆರ್ಜೆಡಿಗೆ 26, ಕಾಂಗ್ರೆಸ್ ಪಕ್ಷಕ್ಕೆ 9 ಸೀಟು
ನಿರ್ಮಲಾ ಸೀತಾರಾಮನ್ ಹೊಂದಿರುವ ಸಾಲ ಮತ್ತು ಬಾಧ್ಯತೆಗಳು
- ಕೆನರಾ ಬ್ಯಾಂಕ್ನಲ್ಲಿ 19 ವರ್ಷದ ಗೃಹಸಾಲ ಇದ್ದು, 2022ರಲ್ಲಿ ಸಾಲ ಬಾಕಿ ಇರುವುದು 5.44 ಲಕ್ಷ ರೂ ಇದೆ.
- ಹತ್ತು ವರ್ಷದ ಅಡಮಾನ ಸಾಲ 2022ರಲ್ಲಿ ಬಾಕಿ ಇರುವುದು 18.93 ಲಕ್ಷ ರೂ
ಇವೆರಡೂ ಸಾಲಗಳನ್ನು ಅವರು ಪತಿ ಜೊತೆ ಜಂಟಿಯಾಗಿ ತೆಗೆದುಕೊಂಡಿದ್ದಾರೆ. ಕುತೂಹಲವೆಂದರೆ, ನಿರ್ಮಲಾ ಸೀತಾರಾಮನ್ ಯಾವ ಇನ್ಷೂರೆನ್ಸ್ ಪಾಲಿಸಿ ಹೊಂದಿರುವುದು ತಿಳಿದುಬಂದಿಲ್ಲ. ಇವಿಷ್ಟೂ ಕೂಡ ಅವರು 2022ರಲ್ಲಿ ಘೋಷಣೆ ಮಾಡಿರುವಂಥವು. ಒಬ್ಬ ಹಣಕಾಸು ಸಚಿವೆ ಬಳಿ ಇಷ್ಟೇನಾ ಆಸ್ತಿ ಎಂದು ಯಾರಿಗಾದರೂ ಅಚ್ಚರಿ ಹುಟ್ಟಬಹುದು.
ಇದನ್ನೂ ಓದಿ: ಏಪ್ರಿಲ್ನಿಂದ ಜೂನ್ವರೆಗಿನ ಅವಧಿಗೆ ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಗಳಿಗೆ ಇರುವ ಬಡ್ಡಿದರ ಪಟ್ಟಿ
ಅವರು ಘೋಷಿಸಿದಂತಹ ಅಂಕಿ ಅಂಶಗಳು ನಿಜವೇ ಆಗಿದ್ದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ಅವರಲ್ಲಿಲ್ಲ ಎಂಬುದು ನಿಜವೇ ಅನಿಸುವುದು. ನಾಮಕಾವಸ್ತೆಗೆ ಚುನಾವಣೆಗೆ ಸ್ಪರ್ಧಿಸಿದರೆ ಖರ್ಚು ಮಾಡುವ ಪ್ರಮೇಯ ಇರುವುದಿಲ್ಲ. ಆದರೆ, ಪ್ರಮುಖ ಪಕ್ಷದ ಟಿಕೆಟ್ನಲ್ಲಿ ಸ್ಪರ್ಧಿಸಿದಾಗ ಕಾರ್ಯಕರ್ತರಿಗೆ ಖರ್ಚು, ಪ್ರಚಾರ ಕಾರ್ಯಕ್ರಮಗಳಿಗೆ ಖರ್ಚು ಇತ್ಯಾದಿ ವೆಚ್ಚ ಇರುತ್ತದೆ. ಪಕ್ಷದಿಂದ ಫಂಡಿಂಗ್ ಬಂದರೂ ವೈಯಕ್ತಿಕವಾಗಿಯೂ ವೆಚ್ಚ ಮಾಡಬೇಕಾಗುತ್ತದೆ. ಚುನಾವಣಾ ಆಯೋಗ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಗೆ 95 ಲಕ್ಷ ರೂ ವೆಚ್ಚ ಮಿತಿ ಹಾಕಿದೆ. ಈ 95 ಲಕ್ಷ ರೂ ಖರ್ಚು ಮಾಡಲು ಹಣ ಪಡೆಯಬೇಕೆಂದರೆ ನಿರ್ಮಲಾ ಸೀತಾರಾಮನ್ ತಮ್ಮಲ್ಲಿರುವ ಆಸ್ತಿಯನ್ನು ಮಾರಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ