
ನವದೆಹಲಿ, ಡಿಸೆಂಬರ್ 16: ಅಪ್ಪನ ಅಥವಾ ತಾತನ ಹಳೆಯ ಕಡತಗಳನ್ನು (Old documents) ನೋಡುವಾಗ ಜೋಪಾನವಾಗಿರಿ. ಅದರಲ್ಲಿ ನೀವು ನಿರೀಕ್ಷಿಸದ, ಹಾಗೂ ಅವರೇ ಮರೆತುಹೋಗಿರುವ ದಾಖಲೆಗಳಿದ್ದೀತು. ಅವು ಇವತ್ತಿನ ಕಾಲಕ್ಕೆ ಲಕ್ಷ, ಕೋಟಿ ರೂಗಳ ಬೆಲೆ ಬಾಳುತ್ತಿರಬಹುದು. ಇಂಥ ಹಲವು ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದು ಶೇರ್ ಆಗುತ್ತಿರುತ್ತವೆ. ದಿ ಚಾರ್ಟಿಯನ್ಸ್ ಹೆಸರಿನ ಎಕ್ಸ್ ಬಳಕೆದಾರರೊಬ್ಬರು ಇಂಥದ್ದೊಂದು ಘಟನೆಯನ್ನು ಹಂಚಿಕೊಂಡಿದ್ದಾರೆ.
ಮೂವತ್ತು ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ಒಂದು ಕಂಪನಿಯ 20 ಷೇರುಗಳನ್ನು 200 ರೂಗೆ ಖರೀದಿಸಿದ್ದಾರೆ. ಹಾಗೆ ಖರೀದಿಸಿದವರು ಮರೆತೇ ಬಿಟ್ಟಿದ್ದಾರೆ. ಈಗ ಆ 20 ಷೇರುಗಳ ಸರ್ಟಿಫಿಕೇಟ್ ದಾಖಲೆಯು ಅವರ ಸಂಬಂಧಿಗೆ ಸಿಕ್ಕಿದೆ. ಆ ಷೇರುಗಳ ಮೌಲ್ಯ 30 ವರ್ಷದಲ್ಲಿ ಶೇ. 89,900 ರಷ್ಟು ಹೆಚ್ಚಾಗಿದೆ. 200 ರೂಪಾಯಿಯ ಷೇರುಗಳ ಮೌಲ್ಯ ಇವತ್ತು ಎರಡೂವರೆ ಲಕ್ಷ ರೂ ಆಗಿ ಹೋಗಿದೆ.
ಇದನ್ನೂ ಓದಿ: ಎಫ್ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ
ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿರುವ ಮಾಹಿತಿ ಪ್ರಕಾರ 1993ರಲ್ಲಿ ಬರೋಸ್ ವೆಲ್ಕಮ್ ಇಂಡಿಯಾ (Burroughs Wellcome India Ltd) ಎನ್ನುವ ಕಂಪನಿಯ 20 ಷೇರುಗಳನ್ನು ಖರೀದಿಸಲಾಗಿದೆ. ಪ್ರತೀ ಷೇರಿಗೆ 10 ರೂನಂತೆ ಅವನ್ನು ಪಡೆಯಲಾಗಿದೆ. ಈ ಕಂಪನಿ ಈಗ ಅಸ್ತಿತ್ವದಲ್ಲಿ ಇಲ್ಲ. ಕಾಲಾನಂತರದಲ್ಲಿ ಅದು ಗ್ಲ್ಯಾಕ್ಸೋಸ್ಮಿತ್ಕ್ಲೈನ್ (GlaxoSmithKline India) ಎನ್ನುವ ಔಷಧ ತಯಾರಕ ಸಂಸ್ಥೆ ಜೊತೆ ವಿಲೀನಗೊಂಡಿದೆ.
ಚಾರ್ಟಿಯನ್ಸ್ ಅವರ ಎಕ್ಸ್ ಪೋಸ್ಟ್
POV: You find a piece of paper from 1993 worth ₹1,80,000. 😱
A relative just found this 20-share certificate for Burroughs Wellcome.
Turns out it merged into #GSK, issued bonuses…nd sat there silently compounding for 30 years.
Valuation then: ₹200 (Face Value)
Valuation… pic.twitter.com/MTdUEzcIQF— The Chartians (@chartians) December 14, 2025
ವಿಲೀನಗೊಂಡ ಬಳಿಕ ಬರೋಸ್ನ ಷೇರುಗಳು ಗ್ಲ್ಯಾಕ್ಸೋಗೆ ವರ್ಗಾವಣೆ ಆಗಿದೆ. ಆ ಬಳಿಕ ಬೋನಸ್ ಷೇರುಗಳೂ ಬಿಡುಗಡೆ ಆಗಿವೆ. ಷೇರುಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬಂದಿದೆ. ಇದರ ಷೇರು ಬೆಲೆ ಇವತ್ತು 2,592.50 ರೂ ಇದೆ. ಜೂನ್ 6ರಂದು ಇದರ ಷೇರುಬೆಲೆ 3,438 ರೂ ಕೂಡ ಮುಟ್ಟಿತ್ತು.
ಅಂದು 10 ರೂಗೆ ಖರೀದಿಸಲಾಗಿದ್ದ ಆ 20 ಷೇರುಗಳ ಬೆಲೆ ಇವತ್ತು 2,59,250 ರೂ ಆಗಿದೆ. ಅಂದರೆ 32 ವರ್ಷದಲ್ಲಿ ಷೇರುಬೆಲೆ ಯದ್ವಾತದ್ವಾ ಏರಿದೆ.
ಇದನ್ನೂ ಓದಿ: ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸಲು ಪಳಗಿರುವ ರಾಮದೇವ್ ಅಗರ್ವಾಲ್ ಅವರ ಟ್ರಿಕ್ಸ್ಗಳಿವು…
ಈ ಹಳೆಯ ಷೇರುಗಳು ಸಿಕ್ಕಿರುವುದು ಯಾವಾಗಲೂ ಸಂಭವಿಸುವಂಥದ್ದಲ್ಲ. ಆ ಷೇರುಗಳನ್ನು ವಾರಸುದಾರರು ತಮ್ಮ ಅಕೌಂಟ್ಗೆ ಟ್ರಾನ್ಸ್ಫರ್ ಮಾಡಿಕೊಳ್ಳಲು ಹರಸಾಹಸ ಮಾಡಬೇಕಾಗಬಹುದು. ಅದೇನೇ ಇದ್ದರೂ, ಈ ಘಟನೆಯಿಂದ ಒಂದು ಒಳ್ಳೆಯ ಹಣಕಾಸು ಪಾಠವನ್ನು ಕಲಿಯಲು ಸಾಧ್ಯ. ಅದು ದೀರ್ಘಾವಧಿ ಹೂಡಿಕೆಯ ಪಾಠ. ಒಂದು ಒಳ್ಳೆಯ ಕಂಪನಿಯಲ್ಲಿ ನೀವು ದೀರ್ಘಾವಧಿ ಹೂಡಿಕೆ ಮಾಡಿದರೆ ಅದ್ಭುತ ಎನಿಸುವ ರಿಟರ್ನ್ ಗಳಿಸುವ ಸಾಧ್ಯತೆ ಬಹಳ ಅಧಿಕ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ