ಆಸ್ತಿ ಇದ್ದೂ ಪರದಾಡುತ್ತಿದ್ದೀರಾ? ಮನೆ ಮಾರದೆಯೇ ಮಾಸಿಕ ಆದಾಯ ಸೃಷ್ಟಿಸಿ… ಇದು ರಿವರ್ಸ್ ಮಾರ್ಟ್ಗೇಜ್ ಸ್ಕೀಮ್
Earning monthly income using your home, reverse mortgage scheme for retirees: ಸ್ವಂತ ಮನೆ ಇದ್ದು, ನಿವೃತ್ತರಾಗಿದ್ದರೆ ತಿಂಗಳ ಆದಾಯ ಸೃಷ್ಟಿಸಿಕೊಳ್ಳಲು ಒಳ್ಳೆಯ ಅವಕಾಶ ನೀಡುತ್ತದೆ ರಿವರ್ಸ್ ಮಾರ್ಟ್ಗೇಜ್ ಸ್ಕೀಮ್. ಬ್ಯಾಂಕುಗಳು ಮನೆಯ ಪತ್ರವನ್ನು ಪಡೆದು ಮಾಸಿಕವಾಗಿ ಕಂತುಗಳ ರೀತಿಯಲ್ಲಿ ಹಣವನ್ನು ನೀಡುತ್ತವೆ. ವ್ಯಕ್ತಿ ಸಾಯುವವರೆಗೂ ಈ ನೀಡುವಿಕೆ ಮುಂದುವರಿಯುತ್ತಿರುತ್ತದೆ. ಸತ್ತ ಬಳಿಕ ಆಸ್ತಿಯನ್ನು ಬ್ಯಾಂಕು ಮಾರಿ, ತಮ್ಮ ಪಾಲಿನ ಹಣ ಪಡೆಯುತ್ತದೆ.

ಇವತ್ತಿನ ಸಂಪಾದನೆಯಲ್ಲಿ ಒಂದು ನಿವೇಶನ ಖರೀದಿಸಿ ಮನೆ ಕಟ್ಟುವಷ್ಟರಲ್ಲಿ ನಿವೃತ್ತಿಯ ಘಟ್ಟ ಬಂದಿರುತ್ತದೆ. ಆವರೆಗೂ ದುಡಿದು ಉಳಿಸಿದ ಹಣವೆಲ್ಲಾ ಮನೆ ನಿರ್ಮಾಣಕ್ಕೆ ವೆಚ್ಚವಾಗಿರುತ್ತದೆ. ಸ್ವಂತ ಮನೆ ಹೊಂದುವಷ್ಟರಲ್ಲಿ ರಿಟೈರ್ಮೆಂಟ್ ಆಗಿರುತ್ತದೆ. ಮುಂದೆ ಬದುಕು ನಿರ್ವಹಿಸಲು? ವೃದ್ಧಾಪ್ಯದಲ್ಲಿ ನೋಡಿಕೊಳ್ಳಲು ಮಕ್ಕಳು ಹತ್ತಿರದಲ್ಲಿ ಇಲ್ಲದಿದ್ದರಂತೂ ಅನಿಶ್ಚಿತತೆ ಇನ್ನಷ್ಟು ಹೆಚ್ಚು. ಮಧ್ಯಮ ವರ್ಗದವರ ಹೆಚ್ಚಿನ ಜನರದ್ದು ಇದೇ ಪರಿಸ್ಥಿತಿ. ನಿಮ್ಮ ಮನೆಯೇ ನಿಮಗೆ ಮಾಸಿಕ ಆದಾಯ ತರುವಂತಾದರೆ? ಇದುವೇ ರಿವರ್ಸ್ ಮಾರ್ಟ್ಗೇಜ್ ಸ್ಕೀಮ್ನ (Reverse Mortgage Scheme) ಉದ್ದೇಶ.
ಏನಿದು ರಿವರ್ಸ್ ಮಾರ್ಟ್ಗೇಜ್ ಸ್ಕೀಮ್?
ಹೋಮ್ ಲೋನ್ ರೀತಿ ಅಡಮಾನ ಸಾಲದ ಹಿಮ್ಮುಖ ಕ್ರಮವೇ ರಿವರ್ಸ್ ಮಾರ್ಟ್ಗೇಜ್. ಎರಡಕ್ಕೂ ಇರುವ ಒಂದೇ ವ್ಯತ್ಯಾಸ ಎಂದರೆ ಗೃಹಸಾಲದಲ್ಲಿ ನೀವು ಇಎಂಐ ಕಟ್ಟುತ್ತೀರಿ. ರಿವರ್ಸ್ ಮಾರ್ಟ್ಗೇಜ್ನಲ್ಲಿ ಬ್ಯಾಂಕ್ ನಿಮಗೆ ಇಎಂಐ ಕಟ್ಟುತ್ತದೆ. ನಿಮ್ಮ ಮನೆಯ ಆಸ್ತಿಪತ್ರವನ್ನು ಬ್ಯಾಂಕಿಗೆ ಒಪ್ಪಿಸಿ ನೀವು ಸಾಯುವವರೆಗೂ ನಿಶ್ಚಿಂತೆಯಿಂದ ಇರಬಹುದು. ನಿವೃತ್ತರಾಗಿದ್ದು, ಬದುಕಿಗೆ ಆದಾಯ ಮೂಲ ಇಲ್ಲದವರಿಗೆ ಹೇಳಿ ಮಾಡಿಸಿದ ಸ್ಕೀಮ್ ಇದು.
ಇದನ್ನೂ ಓದಿ: ಪೋಸ್ಟ್ ಆಫೀಸ್ POSCS ಸ್ಕೀಮ್: ವರ್ಷಕ್ಕೆ ಎರಡೂವರೆ ಲಕ್ಷ ರೂವರೆಗೆ ಬಡ್ಡಿ ಆದಾಯ
ಎಷ್ಟು ಮಾಸಿಕ ಆದಾಯ ಸೃಷ್ಟಿಸಬಹುದು?
ಹೆಚ್ಚಿನ ಬ್ಯಾಂಕ್ಗಳಲ್ಲಿ ರಿವರ್ಸ್ ಮಾರ್ಟ್ಗೇಜಿಂಗ್ ಸೌಲಭ್ಯ ಇರುತ್ತದೆ. 60 ವರ್ಷ ವಯಸ್ಸು ದಾಟಿದವರು ಮತ್ತು ಆಸ್ತಿ ಮಾಲಕತ್ವ ಹೊಂದಿರುವವರು ಇದಕ್ಕೆ ಅರ್ಹರಾಗಿರುತ್ತಾರೆ. ಬ್ಯಾಂಕು ಮೊದಲಿಗೆ ಅರ್ಜಿದಾರರ ವಯಸ್ಸು ಮತ್ತು ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ಅವಲೋಕಿಸುತ್ತದೆ. ಮನೆಯ ಮೌಲ್ಯ 50 ಲಕ್ಷ ರೂ ಇದ್ದು, ಅರ್ಜಿದಾರರ ವಯಸ್ಸು 60 ವರ್ಷ ಆಗಿದ್ದಲ್ಲಿ ತಿಂಗಳಿಗೆ 20,000 ರೂನಿಂದ 30,000 ರೂ ಅನ್ನು ನೀಡಲು ಬ್ಯಾಂಕ್ ಒಪ್ಪಬಹುದು. ಅರ್ಜಿದಾರರ ವಯಸ್ಸು ಹೆಚ್ಚಿದ್ದರೆ ಹೆಚ್ಚಿನ ಹಣ ನೀಡಬಹುದು.
ಎಲ್ಲಿಯವರೆಗೆ ಸಿಗುತ್ತೆ ಮಾಸಿಕ ಆದಾಯ?
ಈ ಸ್ಕೀಮ್ನ ಉದ್ದೇಶವು ಅಜೀವ ಪರ್ಯಂತ ಮಾಸಿಕವಾಗಿ ಹಣ ನೀಡುವುದಾಗಿದೆ. ಸಾಯುವವರೆಗೂ ಪಿಂಚಣಿ ರೀತಿಯಲ್ಲಿ ಮಾಸಿಕ ಆದಾಯ ಬರುತ್ತಿರುತ್ತದೆ. ಆ ವ್ಯಕ್ತಿ ಸಾಯುವವರೆಗೂ ತನ್ನ ಮನೆಯಲ್ಲೇ ವಾಸಿಸಲು ಅವಕಾಶ ಇರುತ್ತದೆ. ಆರ್ಬಿಐನಿಂದ ಈ ಸ್ಕೀಮ್ಗೆ ಮಾನ್ಯತೆ ಇದೆ. ಬಹುತೇಕ ಸರ್ಕಾರಿ ಬ್ಯಾಂಕುಗಳು ಈ ಸರ್ವಿಸ್ ನೀಡುತ್ತವೆ. ಕೆಲ ಆಯ್ದ ಖಾಸಗಿ ಬ್ಯಾಂಕುಗಳೂ ಕೂಡ ರಿವರ್ಸ್ ಮಾರ್ಟ್ಗೇಜ್ ಸ್ಕೀಮ್ ಆಫರ್ ಮಾಡಬಹುದು.
ಇದನ್ನೂ ಓದಿ: ಪಿಎಫ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಇನ್ಷೂರೆನ್ಸ್ ಕವರೇಜ್ ಇರುತ್ತಾ? ಇವು ತಿಳಿದಿರಿ
ರಿವರ್ಸ್ ಮಾರ್ಟ್ಗೇಜ್ನಿಂದ ಬ್ಯಾಂಕಿಗೆ ಏನು ಲಾಭ?
ಆಸ್ತಿ ಪತ್ರ ಬ್ಯಾಂಕ್ ಬಳಿಯೇ ಇರುತ್ತದೆ. ವ್ಯಕ್ತಿಯು ಸಾವನ್ನಪ್ಪಿದ ಬಳಿಕ ಬ್ಯಾಂಕು ಆ ಆಸ್ತಿಯನ್ನು ಸಾರ್ವಜನಿಕವಾಗಿ ಹರಾಜಿಗೆ ಹಾಕಿ ಮಾರುತ್ತದೆ. ಅಲ್ಲಿಯವರೆಗೆ ನೀಡಲಾಗಿದ್ದ ಹಣ ಹಾಗೂ ಅದಕ್ಕೆ ಆಗುವ ಬಡ್ಡಿ ಇವೆಲ್ಲವನ್ನೂ ಬ್ಯಾಂಕ್ ಚುಕ್ತಾ ಮಾಡಿಕೊಳ್ಳುತ್ತದೆ. ಆಸ್ತಿ ಮಾರಿ ಈ ವೆಚ್ಚವನ್ನು ಕಳೆದು ಹಣ ಉಳಿದಿದ್ದರೆ ಅದನ್ನು ಆ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದರೆ ಅವರಿಗೆ ಕೊಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




