
ಕೋಟ್ಯಾಧಿಪತಿ ಆಗಬೇಕು ಎನ್ನುವುದು ಹಿಂದೆ ಹಲವರ ಕನಸಾಗಿತ್ತು. ಈಗ ಕೋಟಿ ರೂ ಹಣಕ್ಕೆ ಹಿಂದಿನಷ್ಟು ಮೌಲ್ಯ ಉಳಿದಿಲ್ಲ. ಹಣದುಬ್ಬರದ ಪರಿಣಾಮ ಅದು. ಅದೇನೇ ಇರಲಿ, ಇವತ್ತೂ ಕೂಡ ಕೋಟಿ ಹಣ ಹೊಂದುವುದು ಅಷ್ಟು ಸುಲಭದ ಮಾತಲ್ಲ. ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುತ್ತಿರುವವರ ಬಳಿಯೂ ಕೂಡ ನಿವ್ವಳ ಆಸ್ತಿ ಮೌಲ್ಯ ಕೋಟಿ ರೂ ಇರುವುದಿಲ್ಲ. ಅಷ್ಟಕ್ಕೂ ಕೋಟಿ ರೂ ಹಣ ಹೊಂದಲು 15x15x15 ಎನ್ನುವ ಸೂತ್ರ ಇದೆ.
ಈ 15x15x15 ಸೂತ್ರ ಬಹಳ ಸರಳ. ನೀವು ತಿಂಗಳಿಗೆ 15 ಸಾವಿರ ರೂ ಉಳಿಸಬೇಕು. ಈ ಹಣವನ್ನು ಪ್ರತೀ ತಿಂಗಳಂತೆ 15 ವರ್ಷದವರೆಗೆ ಹೂಡಿಕೆ ಮಾಡಬೇಕು. ಅಂದರೆ ಎಸ್ಐಪಿ ಮಾಡಬೇಕು. ಹೀಗೆ ನೀವು ಎಸ್ಐಪಿ ಮಾಡಿದ ಹಣವು ವರ್ಷಕ್ಕೆ ಶೇ. 15ರಂತೆ ಬೆಳೆಯಬೇಕು. ಈ ಮೂರೂ 15 ಸೇರಿದರೆ ನೀವು ಮುಂದಿನ 15 ವರ್ಷದಲ್ಲಿ ಒಂದು ಕೋಟಿ ರೂ ಹೊಂದಬಹುದು.
ಇದನ್ನೂ ಓದಿ: ಷೇರು, ಚಿನ್ನ, ಎಫ್ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?
ಒಂದು ವೇಳೆ, ನೀವು 2010ರಲ್ಲಿ ಈ ರೀತಿ 15,000 ರೂಗಳ ಎಸ್ಐಪಿ ಮಾಡಿದ್ದರೆ ಈ ವರ್ಷ ನೀವು ಕೋಟ್ಯಾಧಿಪತಿಯಾಗಬಹುದಿತ್ತು. 2010ರ ನಂತರ ಬಹಳಷ್ಟು ಮ್ಯೂಚುವಲ್ ಫಂಡ್ಗಳು ಶೇ. 12ರಿಂದ 18ರಷ್ಟು ರಿಟರ್ನ್ ಕೊಟ್ಟಿವೆ.
ಇಲ್ಲಿ ಅನಿಶ್ಚಿತತೆ ಇರುವುದು ಹೂಡಿಕೆಯಿಂದ ಎಷ್ಟು ರಿಟರ್ನ್ ಸಿಗುತ್ತೆ ಎನ್ನುವುದು. ಷೇರುಬಜಾರು ದೀರ್ಘಾವಧಿಯಲ್ಲಿ ದೊಡ್ಡ ಲಾಭವನ್ನೇ ಕೊಟ್ಟಿದೆ. ಆದರೆ, ಒಂದೆರಡು ವರ್ಷಕ್ಕೆ ಹೂಡಿಕೆ ಮಾಡಿ ರಿಟರ್ನ್ ಪಡೆಯುತ್ತೇನೆ ಎಂದುಕೊಂಡರೆ ಅದು ಗ್ಯಾರಂಟಿ ಇಲ್ಲ. ಕಳೆದ ಒಂದು ವರ್ಷದಲ್ಲಿ ಷೇರುಗಳಾಗಲೀ, ಮ್ಯೂಚುವಲ್ ಫಂಡ್ಗಳಾಗಲೀ ಪಾಸಿಟಿವ್ ಆಗಿದ್ದೇ ಹೆಚ್ಚು.
15 ವರ್ಷದ ಅವಧಿಯಲ್ಲಿ ಫಂಡ್ಗಳು ಶೇ. 15 ಸಿಎಜಿಆರ್ನಲ್ಲಿ ಲಾಭ ತರುತ್ತವೆ ಎಂದು ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಶೇ. 10ರಿಂದ 15ರಷ್ಟು ರಿಟರ್ನ್ ಅನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: ಶೇ. 80 ವಿತ್ಡ್ರಾಯಲ್; 15 ವರ್ಷ ಹೂಡಿಕೆ, 5 ವರ್ಷ ಲಾಕಿನ್; ಹೊಸ ಆಕರ್ಷಣೆ ಪಡೆದ ಎನ್ಪಿಎಸ್
ಒಂದು ವೇಳೆ, ನೀವು ಹೂಡಿಕೆ ಮಾಡಿದ ಫಂಡ್ ಶೇ. 15ರಷ್ಟು ರಿಟರ್ನ್ ಕೊಟ್ಟಲ್ಲಿ ನಿಮ್ಮ 15,000 ರು ಎಸ್ಐಪಿ 15 ವರ್ಷದಲ್ಲಿ 1.01 ಕೋಟಿ ರೂ ಆಗುತ್ತದೆ. ಅಕಸ್ಮಾತ್, ಫಂಡ್ ಶೇ. 12 ಸಿಎಜಿಆರ್ನಲ್ಲಿ ಬೆಳೆದಲ್ಲಿ ನಿಮಗೆ 15 ವರ್ಷದಲ್ಲಿ ಸಿಗುವುದು ಸುಮಾರು 75 ಲಕ್ಷ ರೂ. ಹೀಗಾಗಿ, ನೀವು ಹೂಡಿಕೆಗೆ ಗುರಿ ನಿಗದಿ ಮಾಡಿಕೊಳ್ಳುವಾಗ ಎರಡು ಮೂರು ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಬಹುದು. ನಿಮ್ಮ ಫಂಡ್ ಶೇ. 10, ಶೇ 12 ಮತ್ತು ಶೇ. 15 ಸಿಎಜಿಆರ್ನಲ್ಲಿ ಬೆಳೆದರೆ ಎಷ್ಟೆಷ್ಟು ಸಿಗಬಹುದು ಎನ್ನುವ ಅಂದಾಜು ಮೊದಲೇ ಮಾಡಿಕೊಳ್ಳಬೇಕು. ಆಗ ಕಡಿಮೆ ಮೊತ್ತವನ್ನೇ ಗುರಿಯಾಗಿಟ್ಟುಕೊಂಡಾಗ ಅಂತ್ಯದಲ್ಲಿ ನಿರಾಸೆಯಾಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ