ನವದೆಹಲಿ, ಆಗಸ್ಟ್ 2: ಒಂಬತ್ತು ವರ್ಷಗಳ ಹಿಂದೆ ಬಹಳ ಭರವಸೆಗಳೊಂದಿಗೆ ಆರಂಭವಾದ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಕೈಬಿಡಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿರುವುದು ತಿಳಿದುಬಂದಿದೆ. ಹೂಡಿಕೆದಾರರಿಗೆ ನಿಗದಿತ ರಿಟರ್ನ್ಸ್ ಕೊಡಲು ಸರ್ಕಾರಕ್ಕೆ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯನ್ನೇ ಕೈಬಿಡಬಹುದು ಎನ್ನಲಾಗುತ್ತಿದೆ. ಇದೇ ಸೆಪ್ಟಂಬರ್ ತಿಂಗಳಲ್ಲಿ ಆರ್ಬಿಐನಿಂದ ಒಂದು ಸಭೆ ಕರೆಯಲಾಗಿದ್ದು, ಅಲ್ಲಿ ಈ ಯೋಜನೆ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆಯಾಗಲಿದೆ. ಅಂದೇ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.
ಸಾರ್ವಜನಿಕರಿಂದ ಫಂಡ್ಗಳನ್ನು ಸಂಗ್ರಹಿಸಲು ಮತ್ತು ಭೌತಿಕ ಚಿನ್ನಕ್ಕೆ ಬೇಡಿಕೆ ಹೆಚ್ಚಾಗದಂತೆ ನೋಡಿಕೊಳ್ಳಲು ಸರ್ಕಾರ ಸಾವರೀನ್ ಗೋಲ್ಡ್ ಬಾಂಡ್ ಎಂಬ ಆಕರ್ಷಕ ಸ್ಕೀಮ್ ಅನ್ನು 2015ರಲ್ಲಿ ಆರಂಭಿಸಿತು. ಇದು ಆರ್ಬಿಐನಿಂದ ನಡೆಸಲಾಗುವ ಯೋಜನೆ. ಭೌತಿಕ ಚಿನ್ನದ ಬದಲು ಚಿನ್ನದ ಮೌಲ್ಯ ಅಥವಾ ಬೆಲೆಯ ಮೇಲೆ ನಡೆಯುವ ಹೂಡಿಕೆ. ಬಹಳ ಸರಳವಾದ ಈ ಯೋಜನೆಯಿಂದ ಹೂಡಿಕೆದಾರರಿಗೆ ಬಹುವಿಧದ ಲಾಭಗಳಿಗೆ ಅವಕಾಶ ಇದೆ.
ಇದನ್ನೂ ಓದಿ: ಸರ್ಕಾರಕ್ಕೆ ದುಬಾರಿಯಾಯ್ತಾ ಈ ಗೋಲ್ಡ್ ಸ್ಕೀಮ್? ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಅಂತ್ಯಗೊಳ್ಳುತ್ತಾ?
ಆರ್ಬಿಐ ವಿತರಿಸುವ ಸಾವರಿನ್ ಗೋಲ್ಡ್ ಬಾಂಡ್ನಲ್ಲಿ ಭೌತಿಕ ಚಿನ್ನದ ಬದಲು ಚಿನ್ನದ ಬೆಲೆಗೆ ಅನುಗುಣವಾಗಿ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ಒಂದು ಗ್ರಾಮ್ನಿಂದ ಹಿಡಿದು 4 ಕಿಲೋವರೆಗೆ ಚಿನ್ನದ ಮೌಲ್ಯದ ಹಣವನ್ನು ಹೂಡಿಕೆ ಮಾಡಬಹುದು. 24 ಕ್ಯಾರಟ್ ಚಿನ್ನದ ಬೆಲೆ ಇವತ್ತು ಒಂದು ಗ್ರಾಮ್ಗೆ 7,100 ರೂ ಇದೆ ಎಂದಿಟ್ಟುಕೊಳ್ಳಿ. ನಾಲ್ಕು ಕಿಲೋಗೆ 2.84 ಕೋಟಿ ರೂ ಆಗುತ್ತದೆ. ಅಂದರೆ ನೀವು 7,100 ರೂನಿಂದ ಆರಂಭವಾಗಿ 2.84 ಕೋಟಿ ರೂ ವರೆಗೆ ಹೂಡಿಕೆ ಮಾಡಬಹುದು.
ಎಂಟು ವರ್ಷಕ್ಕೆ ಈ ಬಾಂಡ್ ಮೆಚ್ಯೂರ್ ಆಗುತ್ತದೆ. ಆ ಸಂದರ್ಭದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 15,000 ರೂ ಆಗಿದ್ದರೆ, ಆಗ ನಿಮ್ಮ 1,00,000 ರೂ ಹೂಡಿಕೆಯು 2.11 ಲಕ್ಷ ರೂ ಆಗುತ್ತದೆ. ಚಿನ್ನದ ಮೌಲ್ಯ ಇನ್ನೂ ಕಡಿಮೆ ಇದ್ದರೆ ನಿಮಗೆ ಸಿಗುವ ರಿಟರ್ನ್ ಇನ್ನೂ ಕಡಿಮೆ ಇರುತ್ತದೆ. ಭೌತಿಕ ಚಿನ್ನಕ್ಕೆ ಸದಾ ಬೇಡಿಕೆ ಇದ್ದೇ ಇರುವುದರಿಂದ ವರ್ಷಕ್ಕೆ ಕನಿಷ್ಠ ಶೇ. 10ರಷ್ಟಾದರೂ ಬೆಲೆ ಹೆಚ್ಚಳ ಸಾಧ್ಯತೆ ಇರುತ್ತದೆ. ಹೀಗಾಗಿ, ಸಾವರಿನ್ ಗೋಲ್ಡ್ ಬಾಂಡ್ ಕೇವಲ ಸುರಕ್ಷಿತ ಹೂಡಿಕೆ ಮಾತ್ರವಲ್ಲ, ಲಾಭದಾಯಕ ಹೂಡಿಕೆಯೂ ಹೌದು.
ಸಾವರಿನ್ ಗೋಲ್ಡ್ ಬಾಂಡ್ನ ಇನ್ನೊಂದು ವಿಶೇಷತೆ ಎಂದರೆ ಅದರಿಂದ ಸಿಗುವ ಬಡ್ಡಿ ಆದಾಯ. ನೀವು ಮಾಡಿದ ಹೂಡಿಕೆಗೆ ವಾರ್ಷಿಕ ಶೇ. 2.5ರ ಬಡ್ಡಿದರದಲ್ಲಿ ಆರು ತಿಂಗಳಿಗೊಮ್ಮೆ ನಿಮ್ಮ ಖಾತೆಗೆ ಹಣ ಜಮೆ ಆಗುತ್ತಾ ಹೋಗುತ್ತದೆ. ಇದು ಬಾಂಡ್ ಮೆಚ್ಯೂರ್ ಆದಾಗ ಸಿಗುವ ರಿಟರ್ನ್ಗೆ ಪ್ರತ್ಯೇಕವಾಗಿ ಬರುವ ಆದಾಯ.
ಇದನ್ನೂ ಓದಿ: ಆಭರಣಕ್ಕೆ ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಚಾರ್ಜಸ್ ಲೆಕ್ಕಾಚಾರ ಹೇಗಿರುತ್ತೆ? ಒಡವೆ ಖರೀದಿಸುವ ಮುನ್ನ ಈ ಸಂಗತಿ ತಿಳಿದಿರಿ
ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಮಾಡುವ ಹೂಡಿಕೆಗೆ ಮತ್ತು ಅದರಿಂದ ಪಡೆಯುವ ಲಾಭಕ್ಕೆ ತೆರಿಗೆ ಇರುವುದಿಲ್ಲ ಎನ್ನುವುದು ಈ ಸ್ಕೀಮ್ನ ಇನ್ನೊಂದು ಪ್ಲಸ್ ಪಾಯಿಂಟ್. ಈ ಎಲ್ಲಾ ಕಾರಣಕ್ಕೆ ಎಸ್ಜಿಬಿ ಸ್ಕೀಮ್ ಜನಪ್ರಿಯತೆ ವರ್ಷಂಪ್ರತಿ ಹೆಚ್ಚುತ್ತಲೇ ಇದೆ. ಈ ಹಂತದಲ್ಲಿ ಸರ್ಕಾರ ಈ ಯೋಜನೆ ಕೈಬಿಟ್ಟರೆ ಹೂಡಿಕೆದಾರರಿಗೆ ನಿರಾಸೆಯಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ