- Kannada News Photo gallery Sovereign Gold Bond SGB, Govt may discontinue as it become expensive, details in Kannada
ಸರ್ಕಾರಕ್ಕೆ ದುಬಾರಿಯಾಯ್ತಾ ಈ ಗೋಲ್ಡ್ ಸ್ಕೀಮ್? ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಅಂತ್ಯಗೊಳ್ಳುತ್ತಾ?
ನವದೆಹಲಿ, ಜುಲೈ 29: ಕಳೆದ ಎಂಟತ್ತು ವರ್ಷದಿಂದ ಚಾಲನೆಯಲ್ಲಿರುವ ಸಾವರೀನ್ ಗೋಲ್ಡ್ ಬಾಂಡ್ ಯೋಜನೆ ಬಹಳ ಜನಪ್ರಿಯತೆ ಪಡೆದಿದೆ. ಚಿನ್ನದಂಥ ಬೆಲೆ, ಹೆಚ್ಚುವರಿ ಬಡ್ಡಿ ಆದಾಯ, ತೆರಿಗೆ ಉಳಿತಾಯ, ಒತ್ತೆ ಸಾಲ ಹೀಗೆ ಸಾಕಷ್ಟು ಅನುಕೂಲತೆ ಮತ್ತು ಲಾಭ ಹೊಂದಿರುವ ಈ ಯೋಜನೆ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆಯಾ? ಈ ಸ್ಕೀಮ್ ಅನ್ನು ಸರ್ಕಾರ ಕೈ ಬಿಡುತ್ತಾ? ಇಲ್ಲಿದೆ ವರದಿ.
Updated on: Jul 29, 2024 | 1:54 PM

ಸಾವರೀನ್ ಗೋಲ್ಡ್ ಬಾಂಡ್ ಯೋಜನೆ 2015ರಲ್ಲಿ ಆರಂಭವಾಗಿದ್ದು ಬಹಳ ಜನಪ್ರಿಯತೆ ಪಡೆದಿದೆ. ಚಿನ್ನದ ಮೌಲ್ಯದ ಮೇಲೆ ಮಾಡುವ ಹೂಡಿಕೆ ಇದಾಗಿದ್ದು ಸರ್ಕಾರಕ್ಕೆ ನಷ್ಟ ತರುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಬಾಂಡ್ ಬಿಡುಗಡೆ ಸಂಖ್ಯೆ ಕಡಿಮೆಗೊಳಿಸಲು ಅಥವಾ ಸ್ಕೀಮ್ ಅನ್ನೇ ಕೈಬಿಡಲು ಸರ್ಕಾರ ಆಲೋಚಿಸುತ್ತಿದೆ ಎನ್ನಲಾಗುತ್ತಿದೆ.

ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ವ್ಯಕ್ತಿಗಳು ಕನಿಷ್ಠ ಒಂದು ಗ್ರಾಮ್ನಿಂದ ಹಿಡಿದು ಗರಿಷ್ಠ 4 ಕಿಲೋ ಚಿನ್ನದ ಪ್ರಸಕ್ತ ಮೌಲ್ಯದವರೆಗೆ ಹೂಡಿಕೆ ಮಾಡಬಹುದು. ಆರ್ಬಿಐ ಒಂದು ವರ್ಷದಲ್ಲಿ ವಿವಿಧ ಸರಣಿಗಳಲ್ಲಿ ಬಾಂಡ್ ಬಿಡುಗಡೆ ಮಾಡಬಹುದು. ಒಂದು ವರ್ಷದಲ್ಲಿ ಎಷ್ಟು ಬೇಕಾದರೂ ಬಾಂಡ್ ಪಡೆಯಬಹುದು. ಆದರೆ, ವರ್ಷದಲ್ಲಿ ಗರಿಷ್ಠ ಹೂಡಿಕೆ 4 ಕಿಲೋ ಚಿನ್ನ ಮೀರಬಾರದು.

ಎಸ್ಜಿಬಿ ಬಾಂಡ್ಗಳು ಎಂಟು ವರ್ಷಕ್ಕೆ ಮೆಚ್ಯೂರ್ ಆಗುತ್ತವೆ. ಐದು ವರ್ಷದ ಬಳಿಕ ರಿಡಂಪ್ಷನ್ ಪಡೆಯಬಹುದು. ಬಾಂಡ್ ಮೆಚ್ಯೂರ್ ಆದಾಗ ಅಂದಿನ ಚಿನ್ನದ ಬೆಲೆಗೆ ಅನುಗುಣವಾಗಿ ನಿಮಗೆ ರಿಟರ್ನ್ಸ್ ಸಿಗುತ್ತದೆ. ನೀವು ಹೂಡಿಕೆ ಮಾಡುವಾಗ ಚಿನ್ನದ ಬೆಲೆ ಗ್ರಾಮ್ಗೆ 6,400 ರೂ ಇದ್ದು, ಮೆಚ್ಯೂರ್ ಆದಾಗ 10,000 ರೂ ಆಗಿಬಿಟ್ಟರೆ, ಆಗ ನಿಮಗೆ ಗ್ರಾಮ್ಗೆ 3,600 ರೂನಂತೆ ಲಾಭ ಸಿಗುತ್ತದೆ.

ಈ ಸ್ಕೀಮ್ನಲ್ಲಿ ಚಿನ್ನದ ಮೌಲ್ಯ ಹೆಚ್ಚಳದಿಂದ ಲಾಭ ಸಿಗುವುದು ಮಾತ್ರವಲ್ಲ, ನಿಮ್ಮ ಹೂಡಿಕೆಗೆ ವರ್ಷಕ್ಕೆ ಶೇ. 2.5ರಂತೆ ಬಡ್ಡಿ ಆದಾಯವೂ ಬರುತ್ತಿರುತ್ತದೆ. ಆರು ತಿಂಗಳಿಗೊಮ್ಮೆ ಬಡ್ಡಿಯನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ.

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಸಿಗುವ ಲಾಭಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಆಗಲೀ ಬೇರೆ ಯಾವುದೇ ತೆರಿಗೆಯಾಗಲೀ ಅನ್ವಯ ಆಗಲ್ಲ. ಪೂರ್ಣ ಲಾಭ ನಿಮಗೆ ಸಿಗುತ್ತದೆ. ಜೊತೆಗೆ, ಎಸ್ಜಿಬಿಯಲ್ಲಿರುವ ನಿಮ್ಮ ಹೂಡಿಕೆ ಹಣದ ಮೇಲೆ ಸಾಲ ಕೂಡ ಪಡೆಯಬಹುದು. ಅಷ್ಟೇ ಅಲ್ಲ, ಷೇರು ಮಾರುಕಟ್ಟೆಯಲ್ಲಿ ನಿಮ್ಮ ಎಸ್ಜಿಬಿಯನ್ನು ಮಾರಲೂ ಬಹುದು.

ಈ ಎಸ್ಜಿಬಿ ಯೋಜನೆ ಸರ್ಕಾರದ ಪಾಲಿಗೆ ದುಬಾರಿ ಆಗಿರಬಹುದು. ಆದ್ದರಿಂದ ಅದನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಮನಿಕಂಟ್ರೋಲ್ ಜಾಲತಾಣ ವರದಿ ಮಾಡಿದೆ. ಚಿನ್ನದ ಬೆಲೆ ಬಹಳ ತೀಕ್ಷ್ಣವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಎಸ್ಜಿಬಿ ಹೂಡಿಕೆದಾರರಿಗೆ ಸರ್ಕಾರ ದೊಡ್ಡ ಮಟ್ಟದಲ್ಲಿ ರಿಟರ್ನ್ಸ್ ನೀಡಬೇಕಾಗಬಹುದು.
























