Premature FD Withdrawal: ಅವಧಿಪೂರ್ವ ಎಫ್​ಡಿ ಹಿಂಪಡೆಯುವಿಕೆಗೆ ಯಾವ ಬ್ಯಾಂಕಲ್ಲಿ ಎಷ್ಟು ದಂಡ? ಇಲ್ಲಿದೆ ವಿವರ

| Updated By: Ganapathi Sharma

Updated on: Dec 16, 2022 | 11:27 AM

ಎಫ್​ಡಿಯ ಅವಧಿಪೂರ್ವ ಹಿಂಪಡೆಯುವಿಕೆಗೆ ಬ್ಯಾಂಕ್​ಗಳು, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ವಿಧಿಸುವ ದಂಡದ ವಿವರ ಇಲ್ಲಿದೆ.

Premature FD Withdrawal: ಅವಧಿಪೂರ್ವ ಎಫ್​ಡಿ ಹಿಂಪಡೆಯುವಿಕೆಗೆ ಯಾವ ಬ್ಯಾಂಕಲ್ಲಿ ಎಷ್ಟು ದಂಡ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಅನಿವಾರ್ಯ ಸಂದರ್ಭಗಳು ಎದುರಾದರೆ ಸ್ಥಿರ ಠೇವಣಿಯನ್ನು (FDs) ಅವಧಿಪೂರ್ವ ಹಿಂಪಡೆಯಲು (Premature Withdrawal) ಬ್ಯಾಂಕ್​ಗಳು ಅವಕಾಶ ನೀಡುತ್ತವೆ. ಆದರೆ, ಅವಧಿಪೂರ್ವ ಠೇವಣಿ ಹಿಂಪಡೆತಕ್ಕಾಗಿ ಬ್ಯಾಂಕ್​ಗಳು ದಂಡ ಅಥವಾ ವಿವಿಧ ಶುಲ್ಕಗಳನ್ನು ವಿಧಿಸುತ್ತವೆ. ಎಫ್​ಡಿಯ ಮೊತ್ತವನ್ನು ವಾಪಸ್ ಪಡೆದು ನೀವು ಠೇವಣಿ ಇಟ್ಟಿರುವ ಅದೇ ಬ್ಯಾಂಕ್​ನ ಬೇರೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದಿದ್ದರೆ ಕೆಲವು ಬ್ಯಾಂಕ್​ಗಳು ಶುಲ್ಕದಿಂದ ವಿನಾಯಿತಿ ನೀಡುವ ಸಾಧ್ಯತೆಯೂ ಇರುತ್ತದೆ. ಮೊಬೈಲ್ ಬ್ಯಾಂಕಿಂಗ್ ಆ್ಯಪ್​ಗಳ ಅಥವಾ ನೆಟ್​ ಬ್ಯಾಂಕಿಂಗ್ ಮೂಲಕವೂ ಎಫ್​ಡಿ ಖಾತೆಗಳನ್ನು ಕ್ಲೋಸ್ ಮಾಡಬಹುದು. ಬ್ಯಾಂಕ್​ ಶಾಖೆಗೆ ಭೇಟಿ ನೀಡಿಯೂ ಅವಧಿಪೂರ್ವ ಎಫ್​ಡಿ ಹಿಂಪಡೆಯುವಿಕೆಗೆ ಮನವಿ ಸಲ್ಲಿಸಬಹುದು. ಎಫ್​ಡಿಯ ಅವಧಿಪೂರ್ವ ಹಿಂಪಡೆಯುವಿಕೆಗೆ ಬ್ಯಾಂಕ್​ಗಳು, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ವಿಧಿಸುವ ದಂಡದ ವಿವರ ಇಲ್ಲಿದೆ.

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (SBI)

5 ಲಕ್ಷ ರೂ.ವರೆಗಿನ ಎಫ್​ಡಿಯನ್ನು ಅವಧಿಪೂರ್ವ ಹಿಂಪಡೆಯುವುದಿದ್ದರೆ ಎಸ್​​ಬಿಐ ಶೇಕಡಾ 0.50 ದಂಡ ವಿಧಿಸುತ್ತದೆ. 5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ ಶೇಕಡಾ 1ರ ದಂಡ ವಿಧಿಸುತ್ತದೆ. 7 ದಿನಕ್ಕಿಂತ ಕಡಿಮೆ ದಿನದಲ್ಲಿ ಹಿಂಪಡೆಯುವ ಠೇವಣಿಗೆ ಬಡ್ಡಿ ನೀಡುವುದಿಲ್ಲ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)

ಎಲ್ಲ ಅವಧಿಯ ಎಫ್​ಡಿ ಅವಧಿಪೂರ್ವ ಹಿಂಪಡೆಯುವಿಕೆಗೆ ಶೇಕಡಾ 1ರಷ್ಟು ದಂಡ ವಿಧಿಸಲಾಗುತ್ತದೆ. ಅಲ್ಲದೆ, ಒಪ್ಪಂದಕ್ಕಿಂತ ಶೇಕಡಾ -1ರಂತೆ ಬಡ್ಡಿ ನೀಡಲಾಗುತ್ತದೆ.

ಎಚ್​​ಡಿಎಫ್​ಸಿ ಬ್ಯಾಂಕ್ (HDFC Bank)

ಅವಧಿಪೂರ್ವ ಎಫ್​ಡಿ ಹಿಂಪಡೆಯುವಿಕೆಗೆ ಎಚ್​​ಡಿಎಫ್​ಸಿ ಬ್ಯಾಂಕ್ ಶೇಕಡಾ 1ರ ದಂಡ ವಿಧಿಸುತ್ತದೆ. ಬಡ್ಡಿ ದರವನ್ನೂ ಕಡಿತಗೊಳಿಸುತ್ತದೆ.

ಇದನ್ನೂ ಓದಿ: ಅವಧಿಗೂ ಮುನ್ನ ಎಫ್​ಡಿ ವಾಪಸ್ ಪಡೆದರೆ ದಂಡ; ಇಲ್ಲಿದೆ ವಿವರ

ಐಸಿಐಸಿಐ ಬ್ಯಾಂಕ್​ (ICICI Bank)

ಅವಧಿಪೂರ್ವ ಎಫ್​ಡಿ ಖಾತೆ ಕ್ಲೋಸ್ (1 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ) ಮಾಡಲು ಐಸಿಐಸಿಐ ಬ್ಯಾಂಕ್​ 5 ಕೋಟಿ ರೂ.ಗಿಂತ ಕಡಿಮೆ ಮೊತ್ತದ್ದಾದರೆ ಶೇಕಡಾ 0.5ರ ದಂಡ ವಿಧಿಸುತ್ತದೆ. ಒಂದು ವರ್ಷದ ನಂತರ ಹಿಂಪಡೆಯುವುದಾದರೆ ಶೇಕಡಾ 1ರ ದಂಡ ವಿಧಿಸುತ್ತದೆ. 5 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಎಫ್​ಡಿಯನ್ನು 5 ವರ್ಷಗಳ ಅವಧಿಗೆ ಮುನ್ನ ಹಿಂಪಡೆಯುವುದಾದರೆ ಶೇಕಡಾ 1 ಮತ್ತು 5 ವರ್ಷದ ನಂತರ ಅವಧಿಪೂರ್ವ ಹಿಂಪಡೆಯುವುದಾದರೆ ಶೇಕಡಾ 1.5 ದಂಡ ವಿಧಿಸುತ್ತದೆ.

ಬಜಾಜ್ ಫೈನಾನ್ಸ್ (Bajaj Finance)

ಮೊದಲ 3 ತಿಂಗಳು ಪೂರ್ಣಗೊಳ್ಳದೆ ಎಫ್​ಡಿ ರದ್ದತಿಗೆ ಬಜಾಜ್ ಫೈನಾನ್ಸ್ ಅವಕಾಶ ನೀಡುವುದಿಲ್ಲ. 3ರಿಂದ 6 ತಿಂಗಳ ಒಳಗೆ ಹಿಂಪಡೆದರೆ ಬಡ್ಡಿ ನೀಡುವುದಿಲ್ಲ. 6 ತಿಂಗಳ ನಂತರ ಎಫ್​ಡಿ ಖಾತೆ ಕ್ಲೋಸ್ ಮಾಡುವುದಾದರೆ ಷರತ್ತು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಶೇಕಡಾ 2ರಿಂದ 3ರ ವರೆಗೆ ದಂಡ ವಿಧಿಸುತ್ತದೆ.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:25 am, Fri, 16 December 22