ಅವಧಿಗೂ ಮುನ್ನ ಎಫ್ಡಿ ವಾಪಸ್ ಪಡೆದರೆ ದಂಡ; ಇಲ್ಲಿದೆ ವಿವರ
Premature withdrawal; ಅನಿವಾರ್ಯ ಸಂದರ್ಭಗಳು ಎದುರಾದರೆ ಎಫ್ಡಿಯನ್ನು ಅವಧಿಪೂರ್ವ ಹಿಂತೆಗೆಯಲು ಅವಕಾಶವಿದೆ. ಆದರೆ, ಇದಕ್ಕಾಗಿ ಬ್ಯಾಂಕ್ಗಳು ದಂಡ ಅಥವಾ ವಿವಿಧ ಶುಲ್ಕಗಳನ್ನು ವಿಧಿಸುವ ಸಾಧ್ಯತೆ ಇದೆ. ಈ ಕುರಿತ ವಿವರ ಇಲ್ಲಿ ನೀಡಲಾಗಿದೆ.
ಸ್ಥಿರ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (Fixed Deposit) ಅತ್ಯಂತ ಸುಭದ್ರ ಮತ್ತು ಅಪಾಯರಹಿತ ಹೂಡಿಕೆ ಯೋಜನೆ. ಈ ಮಾದರಿಯಯಲ್ಲಿ ನಿರ್ದಿಷ್ಟ ಮೊತ್ತವೊಂದನ್ನು ನಿಗದಿತ ಅವಧಿಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇಡಬೇಕಾಗುತ್ತದೆ. ಅಂದರೆ, ನಿರ್ದಿಷ್ಟ ಅವಧಿಗೂ ಮುನ್ನ ಠೇವಣಿಯನ್ನು ವಾಪಸ್ ಪಡೆಯುವಂತಿಲ್ಲ. ಒಂದು ವೇಳೆ ಅನಿವಾರ್ಯ ಸಂದರ್ಭಗಳು ಎದುರಾದರೆ ಎಫ್ಡಿಯನ್ನು ಅವಧಿಪೂರ್ವ ಹಿಂತೆಗೆಯಲು ಅವಕಾಶವಿದೆ. ಆದರೆ, ನಿಮಗೆ ಸಿಗಬೇಕಾದ ಬಡ್ಡಿ ಸಿಗದೇ ಹೋಗಬಹುದು. ಅವಧಿಪೂರ್ವ ಹಿಂಪಡೆತಕ್ಕಾಗಿ ಬ್ಯಾಂಕ್ಗಳು ದಂಡ ಅಥವಾ ವಿವಿಧ ಶುಲ್ಕಗಳನ್ನು ವಿಧಿಸುವ ಸಾಧ್ಯತೆ ಇದೆ.
ಅವಧಿಪೂರ್ವ ಠೇವಣಿ ಹಿಂಪಡೆಯುವಿಕೆ ಎಂದರೆ…
ಒಂದು ನಿರ್ದಿಷ್ಟ ಅವಧಿಗೆ ನಿಗದಿತ ಬಡ್ಡಿ ದರದಲ್ಲಿ ಹೂಡಿಕೆ ಮಾಡುವುದೇ ಸ್ಥಿರ ಠೇವಣಿ. ಉದಾಹರಣೆಗೆ; 3 ವರ್ಷ ಅವಧಿಗೆ ಶೇಕಡಾ 6ರ ಬಡ್ಡಿ ದರದಲ್ಲಿ 10,000 ರೂ. ಸ್ಥಿರ ಠೇವಣಿ ಇಡುತ್ತೇವೆ ಎಂದುಕೊಳ್ಳೋಣ. ಇಲ್ಲಿ 3 ವರ್ಷ ಎಂಬುದು ಠೇವಣಿಯ ಮೆಚ್ಯೂರಿಟಿ ಅವಧಿ. ಅದಕ್ಕೂ ಮುನ್ನ ಅದನ್ನು ಹಿಂಪಡೆಯಲಾಗದು. ಆದರೆ, ಹಣಕಾಸಿನ ತುರ್ತು ಅಥವಾ ಅತಿಯಾದ ಅನಿವಾರ್ಯತೆ ಎದುರಾಗಿ ಅದನ್ನು ಹಿಂಪಡೆಯಬೇಕಾಗಿ ಬಂದರೆ? ಇದಕ್ಕೆ ಅವಕಾಶ ಇದೆ. ಹೀಗೆ ಹಿಂಪಡೆಯುವುದನ್ನೇ ಅವಧಿಪೂರ್ವ ಠೇವಣಿ ಹಿಂಪಡೆಯುವಿಕೆ ಎನ್ನುತ್ತಾರೆ.
ಅವಧಿಗೂ ಮುನ್ನ ಎಫ್ಡಿ ವಾಪಸ್ ಪಡೆಯಲು ಏನುಮಾಡಬೇಕು?
- ಎಫ್ಡಿಯನ್ನು ಅವಧಿಪೂರ್ವ ಹಿಂಪಡೆಯಲು ಬ್ಯಾಂಕ್ ಶಾಖೆಗೆ ಭೇಟಿ ನೀಡಲು ಸಾಧ್ಯವಾಗದೇ ಇದ್ದಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ಮಾಡಿಕೊಳ್ಳಬಹುದು.
- ಎಫ್ಡಿ ತೆರೆಯುವ ಸಂದರ್ಭದಲ್ಲಿ ಪಡೆದ ರಶೀದಿಯನ್ನು ಬ್ಯಾಂಕ್ಗೆ ಸಲ್ಲಿಸಿ ಅವಧಿಪೂರ್ವ ಹಿಂಪಡೆಯುವಿಕೆಗೆ ಮನವಿ ಮಾಡಬಹುದು. ಒಂದು ವೇಳೆ ರಶೀದಿ ಕಳೆದುಹೋಗಿದ್ದಲ್ಲಿ ಎಫ್ಡಿ ಲಿಕ್ವಿಡೇಷನ್ ಅರ್ಜಿಯನ್ನು ಭರ್ತಿ ಮಾಡಿ ಬ್ಯಾಂಕ್ಗೆ ಸಲ್ಲಿಸಬೇಕಾಗುತ್ತದೆ. ಇದನ್ನು ಪರಿಶೀಲಿಸಿದ ಬಳಿಕ ಬ್ಯಾಂಕ್ಗಳು ಠೇವಣಿ ಮೊತ್ತವನ್ನು ವೈಯಕ್ತಿಕ ಖಾತೆಗೆ ವರ್ಗಾಯಿಸುತ್ತವೆ.
ಅವಧಿಪೂರ್ವ ಠೇವಣಿ ಹಿಂಪಡೆಯುವಿಕೆಗೆ ದಂಡಗಳೇನು?
- ಹೆಚ್ಚಿನ ಬ್ಯಾಂಕ್ಗಳು ಎಫ್ಡಿಯ ಅವಧಿಪೂರ್ವ ಹಿಂಪಡೆಯುವಿಕೆಗೆ ಬಡ್ಡಿಯ ಶೇಕಡಾ 0.5ರಿಂದ ಶೇಕಡಾ 1.00ರ ವರೆಗೆ ಶುಲ್ಕ ವಿಧಿಸುತ್ತವೆ.
- ಎಫ್ಡಿಯ ಮೊತ್ತವನ್ನು ನೀವು ಠೇವಣಿ ಇಟ್ಟಿರುವ ಅದೇ ಬ್ಯಾಂಕ್ನ ಬೇರೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದಿದ್ದರೆ ಕೆಲವು ಬ್ಯಾಂಕ್ಗಳು ಶುಲ್ಕದಿಂದ ವಿನಾಯಿತಿ ನೀಡುವ ಸಾಧ್ಯತೆಯೂ ಇರುತ್ತದೆ.
- ಎಫ್ಡಿಯನ್ನು ಅವಧಿಗೂ ಮುನ್ನ ಹಿಂಪಡೆಯುವಾಗ ಠೇವಣಿ ಇಡುವ ಸಂದರ್ಭದಲ್ಲಿ ಭರವಸೆ ನೀಡಿದ್ದ ಪ್ರಮಾಣದಲ್ಲಿ ಬಡ್ಡಿ ದೊರೆಯಲಾರದು. ಮೂರು ವರ್ಷಕ್ಕೆ ಶೇಕಡಾ 8ರ ಬಡ್ಡಿ ದರದಲ್ಲಿ ನೀವು ಠೇವಣಿ ಇಟ್ಟು, ಒಂದು ವರ್ಷದ ಬಳಿಕ ಹಿಂತೆಗೆದುಕೊಂಡರೆ ಬಡ್ಡಿ ದರ ಶೇಕಡಾ 6ಕ್ಕೆ ಕಡಿತವಾಗುವ ಸಾಧ್ಯತೆ ಇದೆ. ಜತೆಗೆ ಈ ಬಡ್ಡಿ ದರದ ಮೇಲೆ ಅವಧಿಪೂರ್ವ ಹಿಂಪಡೆಯುವಿಕೆ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.
- ಎಫ್ಡಿಯ ಅವಧಿಪೂರ್ವ ಹಿಂಪಡೆಯುವಿಕೆಗೆ ಬ್ಯಾಂಕ್ಗಳು ದಂಡವನ್ನೂ ವಿಧಿಸುತ್ತವೆ. ಸಾಮಾನ್ಯವಾಗಿ ಎಫ್ಡಿಯಿಂದ ದೊರೆಯುವ ಬಡ್ಡಿಯ ಶೇಕಡಾ 0.5ರಿಂದ ಶೇಕಡಾ 1.00ರ ವರೆಗೆ ದಂಡ ವಿಧಿಸಲಾಗುತ್ತದೆ.
ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ