PF Money: ಯುಎಎನ್ ಇಲ್ಲದೆಯೇ ಪಿಎಫ್ ಹಣ ಹಿಂಪಡೆಯುವ ಮಾರ್ಗ ಇಲ್ಲಿದೆ
ಪಿಎಫ್ ಹಣ ಹಿಂಪಡೆಯಲು ಯುಎಎನ್ ನಂಬರ್ ಬಹಳ ಅಗತ್ಯ. ಯುಎಎನ್ ಮತ್ತು ಆಧಾರ್ ನಂಬರ್ ಜೋಡಿತವೂ ಆಗಿರಬೇಕು. ಒಂದು ವೇಳೆ ಯುಎಎನ್ ಇಲ್ಲದಿದ್ದರೆ ಆಗಲೂ ಹಣ ಹಿಂಪಡೆಯುವ ಅವಕಾಶ ಇರುತ್ತದೆ. ಅದರ ವಿವರ ಇಲ್ಲಿದೆ.
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (EPFO) ಇಂದು ಬಹಳಷ್ಟು ಉದ್ಯೋಗಿಗಳಿಗೆ ಹಣಕಾಸು ಭದ್ರತೆಗೆ ಆಧಾರವಾಗಿದೆ. ಪಿಎಫ್ ಹಣ ಬಹಳ ಮಂದಿಗೆ ಆಪತ್ಕಾಲ ನಿಧಿಯಂತಾಗಿದೆ. ಈಗ ಪಿಎಫ್ಒ ಸೌಲಭ್ಯಗಳನ್ನು ಬಹಳ ಸರಳಗೊಳಿಸಲಾಗಿದೆ. ನೌಕರಿಗಳನ್ನು ಬದಲಾಯಿಸಿದರೂ, ಬೇರೆ ಬೇರೆ ಪಿಎಫ್ ಖಾತೆಗಳಿದ್ದರೂ ಯುಎಎನ್ ಅಡಿಯಲ್ಲಿ ಎಲ್ಲವೂ ಜೋಡಿತವಾಗುತ್ತದೆ. ಪಿಎಫ್ ಖಾತೆಯಲ್ಲಿ ಎಷ್ಟು ಹಣ ಜಮೆಯಾಗಿದೆ, ಒಟ್ಟು ಎಷ್ಟು ಮೊತ್ತ ಇದೆ ಇತ್ಯಾದಿ ಎಲ್ಲ ವಿವರ ಈಗ ಬಹಳ ಸುಲಭವಾಗಿ ಸಿಗುತ್ತದೆ. ಆದರೆ, ಇವೆಲ್ಲಾ ಪ್ರಕ್ರಿಯೆ ಸುಗಮವಾಗಿ ಸಾಗಬೇಕಾದರೆ ಯುಎಎನ್ ಅಥವಾ ಯೂನಿವರ್ಸಲ್ ಅಕೌಂಟ್ ನಂಬರ್ (UAN- Universal Account Number) ಅಗತ್ಯ.
ದಶಕಗಳ ಹಿಂದೆ ಯುಎಎನ್ ಜಾರಿಯಲ್ಲಿರಲಿಲ್ಲ. ಆಗಿನ ಪಿಎಫ್ ಖಾತೆಗಳು ಯುಎಎನ್ಗೆ ಜೋಡಿತವಾಗಿರಲಿಲ್ಲ. ಅಂಥ ಖಾತೆಗಳು ಯುಎಎನ್ ವ್ಯಾಪ್ತಿಯಿಂದ ಹೊರಗಿರುತ್ತವೆ. ಆದರೆ, ಆ ಪಿಎಫ್ ಖಾತೆಯ ಹಣ ಸುರಕ್ಷಿತವಾಗಂತೂ ಇರುತ್ತದೆ. ಯುಎಎನ್ ಇಲ್ಲದೆಯೂ ಆ ಪಿಎಫ್ ಹಣವನ್ನು ಹಿಂಪಡೆಯಲು ಸಾಧ್ಯ. ಆ ಮಾರ್ಗ ಇಲ್ಲಿದೆ:
ಯುಎಎನ್ ಇಲ್ಲದೆಯೇ ಪಿಎಫ್ ಹಣ ಹಿಂಪಡೆಯುವುದು ಹೇಗೆ?
ನಿಮ್ಮ ಪಿಎಫ್ ಖಾತೆಗೆ ಯುಎಎನ್ ಲಭ್ಯ ಇಲ್ಲದಿದ್ದರೆ ಸ್ಥಳೀಯ ಪಿಎಫ್ ಕಚೇರಿಗೆ ಹೋಗಿ ಅಲ್ಲಿ ನೀಡಲಾಗುವ ಪಿಎಫ್ ವಿತ್ಡ್ರಾಯಲ್ ಫಾರ್ಮ್ (PF withdrawal form) ಭರ್ತಿ ಮಾಡಬೇಕು. ಇಪಿಎಫ್ಒ ವೆಬ್ ಸೈಟಿಗೆ ಹೋದರೆ ಆಧಾರ್ ಕಾಂಪೋಸಿಟ್ ಕ್ಲೈಮ್ ಫಾರ್ಮ್ ಅಥವಾ ನಾನ್-ಆಧಾರ್ ಕಾಂಪೋಸಿಟ್ ಕ್ಲೈಮ್ ಫಾರ್ಮ್ ದೊರೆಯುತ್ತದೆ. ಅಗತ್ಯವಾದುದನ್ನು ಡೌನ್ಲೋಡ್ ಮಾಡಿಕೊಳ್ಳಿ.
ಇದನ್ನು ಓದಿ;PF money withdraw: ಕೋವಿಡ್ ಚಿಕಿತ್ಸೆಗೆ ಪಿಎಫ್ ಹಣ ವಿಥ್ಡ್ರಾ ಮಾಡುವುದು ಹೇಗೆ?
ಆಧಾರ್ ಕಾಂಪೋಸಿಟ್ ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಿ ನೇರವಾಗಿ ಪಿಎಫ್ ಕಚೇರಿಗೆ ಸಲ್ಲಿಸಬಹುದು. ನಾನ್-ಆಧಾರ್ ಆಧಾರಿತ ಅರ್ಜಿಯಾದರೆ ಅದನ್ನು ನೀವು ಕೆಲಸ ಮಾಡಿದ ಕಂಪನಿಯಿಂದ ಅಟೆಸ್ಟ್ ಮಾಡಿಸಿ, ನಂತರ ಸಲ್ಲಿಸಬೇಕಾಗುತ್ತದೆ.
ಏನಿದು ಯುಎಎನ್?
ಇದು ಯೂನಿವರ್ಸಲ್ ಅಕೌಂಟ್ ನಂಬರ್. ನಾವು ಕೆಲಸ ಮಾಡುವ ಸಂಸ್ಥೆಯೇ ಯುಎಎನ್ ಜನರೇಟ್ ಮಾಡುತ್ತದೆ. ನೀವು ಸಂಸ್ಥೆ ಬದಲಾಯಿಸಿದಾಗಲೂ ಇದೇ ಯುಎಎನ್ ನಂಬರ್ ಅನ್ನು ಮುಂದುವರಿಸಿಕೊಂಡು ಹೋಗಬಹುದು. ಬಹು ಪಿಎಫ್ ಖಾತೆಗಳನ್ನು ಒಂದೇ ಯುಎಎನ್ ಅಡಿಯಲ್ಲಿ ಪಾಲಿಸಿಕೊಂಡು ಹೋಗಬಹುದು.
ಈಗ ಯುಎಎನ್ ನಂಬರ್ ಅನ್ನು ಆಧಾರ್ ನಂಬರ್ ಜೊತೆ ಜೋಡಿಸುವುದು ಕಡ್ಡಾಯ ಮಾಡಲಾಗಿದೆ. ಇದರಿಂದ ಆನ್ಲೈನ್ ನಲ್ಲಿ ಪಿಎಫ್ ಖಾತೆಯ ವಿವರಗಳನ್ನು ನೋಡುವುದು, ಹಣ ಹಿಂಪಡೆಯುವುದು ಬಹಳ ಸರಳವಾಗಿದೆ.
ಬ್ಯಾಲೆನ್ಸ್ ಪರಿಶೀಲಿಸುವುದು ಹೀಗೆ?
ಇಪಿಎಫ್ಒ ವೆಬ್ ಸೈಟಿಗೆ ಹೋಗಿ ಅಲ್ಲಿ ನಿಮ್ಮ ಯುಎಎನ್ ನಂಬರ್ ಬಳಸಿ ಲಾಗಿನ್ ಆಗಬಹುದು. ಅಲ್ಲಿ ನಿಮ್ಮ ಪಿಎಫ್ ಖಾತೆಗಳ ಎಲ್ಲಾ ವಿವರ ಲಭ್ಯ ಇರುತ್ತದೆ. ಹಾಗೆಯೇ, ಮಿಸ್ಡ್ ಕಾಲ್ ಮತ್ತು ಎಸ್ಸೆಮ್ಮೆಸ್ ಮೂಲಕವೂ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಅದಕ್ಕೆ ಪಿಎಫ್ ಖಾತೆಗೆ ನೊಂದಾಯಿತವಾದ ನಿಮ್ಮ ಮೊಬೈಲ್ ನಂಬರ್ ಅಗತ್ಯ. ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಇರುವ ಫೋನ್ ನಿಂದ 9966044425 ಈ ನಂಬರ್ಗೆ ಮಿಸ್ಡ್ ಕಾಲ್ ಕೊಟ್ಟರೆ ಪಿಎಫ್ ಖಾತೆಯ ಬ್ಯಾಲೆನ್ಸ್ ಬಗ್ಗೆ ವಿವರವಿರುವ ಸಂದೇಶ ಬರುತ್ತದೆ.
ಹಾಗೆಯೇ, 7738299899 ನಂಬರ್ಗೆ ನಿಮ್ಮ ಯುಎಎನ್ ನಂಬರ್ ಅನ್ನು ಎಸ್ಸೆಮ್ಮೆಸ್ ಆಗಿ ಕಳುಹಿಸಿದರೆ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Thu, 5 January 23