ನವದೆಹಲಿ, ಆಗಸ್ಟ್ 30: ಭಾರತದ ನಂಬರ್ ಒನ್ ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ ಎನಿಸಿದ ಫೋನ್ಪೆ (PhonePe) ಇದೀಗ ಸ್ಟಾಕ್ ಬ್ರೋಕಿಂಗ್ ಬಿಸಿನೆಸ್ಗೆ ಇಳಿದಿದೆ. ಅದಕ್ಕಾಗಿ ಷೇರ್ ಡಾಟ್ ಮಾರ್ಕೆಟ್ (Share.Market) ಎನ್ನುವ ಹೊಸ ವೆಬ್ ಪ್ಲಾಟ್ಫಾರ್ಮ್ ಅನ್ನು ಇಂದು (ಆಗಸ್ಟ್ 30) ಬಿಡುಗಡೆ ಮಾಡಿದೆ. ಫೋನ್ ಪೆ ವೆಲ್ತ್ ಬ್ರೋಕಿಂಗ್ ಪ್ರೈ ಲಿ (PhonePe Wealth Broking Pvt Ltd) ಎನ್ನುವ ಅದರ ಅಂಗಸಂಸ್ಥೆಯ ಅಡಿಯಲ್ಲಿ ಬ್ರೋಕಿಂಗ್ ವ್ಯವಹಾರ ನಡೆಯಲಿದೆ. ಷೇರ್ ಡಾಟ್ ಮಾರ್ಕೆಟ್ ಮೊಬೈಲ್ ಆ್ಯಪ್ ಹಾಗೂ ವೆಬ್ ಪ್ಲಾಟ್ಫಾರ್ಮ್ ಎರಡೂ ಮಾದರಿಯಲ್ಲಿ ಲಭ್ಯ ಇರುತ್ತದೆ.
ರೀಟೇಲ್ ಹೂಡಿಕೆದಾರರು ಈ ಪ್ಲಾಟ್ಫಾರ್ಮ್ನಲ್ಲಿ ತಾವೇ ಸ್ವಂತವಾಗಿ ಷೇರು ಖರೀದಿಸಬಹುದು, ಇಂಟ್ರಾ ಡೇ ಟ್ರೇಡಿಂಗ್ ಮಾಡಬಹುದು. ಕಂಪನಿಯೇ ಪಟ್ಟಿ ಮಾಡಿದ ಷೇರುಗಳು ಮತ್ತು ಮ್ಯೂಚುವಲ್ ಫಂಡ್ಗಳನ್ನಾದರೂ ಖರೀದಿಸುವ ಮೂಲಕ ಹೂಡಿಕೆ ಮಾಡಬಹುದು ಎಂದು ಫೋನ್ ಪೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತದಲ್ಲಿ ಷೇರುಮಾರುಕಟ್ಟೆ ಗಣನೀಯವಾಗಿ ವಿಸ್ತಾರಗೊಳ್ಳುತ್ತಿದೆ. ಬಹಳಷ್ಟು ಹೊಸ ಹೂಡಿಕೆದಾರರು ಷೇರುಮಾರುಕಟ್ಟೆಯತ್ತ ಆಕರ್ಷಿತರಾಗುತ್ತಿದ್ದಾರೆ. ಡೀಮ್ಯಾಟ್ ಖಾತೆಗಳ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಮ್ಯೂಚುವಲ್ ಫಂಡ್ ಎಸ್ಐಪಿಗಳಲ್ಲಿ ಹೂಡಿಕೆಗಳು ಹೆಚ್ಚುತ್ತಿರುವುದು ಇದಕ್ಕೆ ಕನ್ನಡಿ ಹಿಡಿದಂತಿದೆ. ಈ ಮಾರುಕಟ್ಟೆ ಬೆಳವಣಿಗೆಯ ಲಾಭ ಪಡೆಯಲು ಫೋನ್ ಪೇ ಬ್ರೋಕಿಂಗ್ ವ್ಯವಹಾರಕ್ಕೆ ಇಳಿದಿದೆ.
ಇದನ್ನೂ ಓದಿ: ರೈಲ್ವೆ ನಿಲ್ದಾಣಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಲಭ್ಯ; ಉಚಿತ ಬಳಕೆಗೆ ಎಷ್ಟು ವೈಫೈ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್
ಷೇರ್ ಡಾಟ್ ಮಾರ್ಕೆಟ್ ಬಹಳ ವಿಸ್ತೃತವಾದ ಸಂಶೋಧನೆ ಮೂಲಕ ಷೇರು ಬ್ರೋಕಿಂಗ್ಗೆ ಹೊಸ ಆಯಾಮ ತರುತ್ತದೆ. ಸ್ಪರ್ಧಾತ್ಮಕ ಡಿಸ್ಕೌಂಟ್ ರೇಟ್ ಒದಗಿಸುತ್ತದೆ ಎಂದು ಫೋನ್ಪೆ ಹೇಳಿದೆ.
ಷೇರ್ ಡಾಟ್ ಮಾರ್ಕೆಟ್ ಪ್ಲಾಟ್ಫಾರ್ಮ್ನಲ್ಲಿ ಷೇರುಗಳು, ಮ್ಯೂಚುವಲ್ ಫಂಡ್ಗಳು, ಇಟಿಎಫ್ಗಳು, ವೆಲ್ತ್ ಬ್ಯಾಸ್ಕೆಟ್ಗಳು ಇರುತ್ತವೆ. ನಿರ್ದಿಷ್ಟ ಥೀಮ್, ಸೆಕ್ಟರ್, ಮಾರ್ಕೆಟ್ ಟ್ರೆಂಡ್ಗಳಿಗೆ ಅನುಸಾರವಾಗಿ ವರ್ಗೀಕರಿಸಲಾದ ಷೇರುಗಳನ್ನು ಖರೀದಿಸುವ ಅವಕಾಶ ಇರುತ್ತದೆ. ಬ್ರೋಕಿಂಗ್ ದರವೂ ಹೆಚ್ಚಿರುವುದಿಲ್ಲ.
ಷೇರ್ ಡಾಟ್ ಮಾರ್ಕೆಟ್ ಎಂಬುದು ಮೊಬೈಲ್ ಆ್ಯಪ್ ಮತ್ತು ವೆಬ್ ಎರಡೂ ಪ್ಲಾಟ್ಫಾರ್ಮ್ನಲ್ಲಿ ಲಭ್ಯ ಇರುತ್ತದೆ. ಫೋನ್ಪೆ ಲಾಗಿನ್ ಇದ್ದರೆ ಅದರ ಮೂಲಕವೇ ಮೊಬೈಲ್ ಆ್ಯಪ್ ಮತ್ತು ವೆಬ್ಸೈಟ್ ತೆರೆಯಬಹುದು. ಫೋನ್ಪೇ ಆ್ಯಪ್ ಇಲ್ಲದಿದ್ದರೆ ಮೊಬೈಲ್ ನಂಬರ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು. ಕೆವೈಸಿ ಪ್ರಕ್ರಿಯೆ ಮೂಲಕ ಬ್ರೋಕಿಂಗ್ ಮತ್ತು ಡಿಮ್ಯಾಟ್ ಅಕೌಂಟ್ಗಳನ್ನು ಸಕ್ರಿಯಗೊಳಿಸಬಹುದು.
ಬ್ರೋಕರೇಜ್ ಶುಲ್ಕ:
ಈಕ್ವಿಟಿ ಡೆಲಿವರಿಗೆ 20 ರೂ ಅಥವಾ ಶೇ. 0.05, ಇದರಲ್ಲಿ ಕಡಿಮೆ ಇರುವ ಮೊತ್ತ. ಈಕ್ವಿಟಿ ಇಂಟ್ರಾಡೇಗೂ ಇದೇ ಶುಲ್ಕ ಅನ್ವಯ ಆಗುತ್ತದೆ.
ಷೇರ್ ಡಾಟ್ ಮಾರ್ಕೆಟ್ ಪ್ಲಾಟ್ಫಾರ್ಮ್ ಶುಲ್ಕ
ಈಗ ನೀವು ಈ ಪ್ಲಾಟ್ಫಾರ್ಮ್ ಬಳಸುವುದಾದರೆ 199 ರೂ ಶುಲ್ಕ ಪಾವತಿಸಬೇಕು. 2024ರ ಮಾರ್ಚ್ 31ರವರೆಗೂ ಹಲವು ಲಾಭಗಳು ನಿಮಗೆ ಸಿಗುತ್ತವೆ. ಈ ಪ್ಲಾಟ್ಫಾರ್ಮ್ನಲ್ಲಿ ಆರಂಭದ 400 ರೂವರೆಗಿನ ವಹಿವಾಟಿಗೆ ಯಾವ ಬ್ರೋಕರೇಜ್ ಶುಲ್ಕಗಳಿರುವುದಿಲ್ಲ.
ಈ ಪ್ಲಾಟ್ಫಾರ್ಮ್ನಲ್ಲಿರುವ ವೆಲ್ತ್ ಬ್ಯಾಸ್ಕೆಟ್ಗಳನ್ನು ಖರೀದಿಸಲು ಯಾವ ಪ್ಲಾಟ್ಫಾರ್ಮ್ ಶುಲ್ಕವೂ ಇರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ