ಗ್ಯಾಸ್ ಬೆಲೆ ಇಳಿಕೆ ಎಲ್ಲರಿಗೂ ಅನ್ವಯ ಅಗುತ್ತಾ? ಉಜ್ವಲ ಯೋಜನೆ ಫಲಾನುಭವಿಗಳಿಗೆ ಮಾತ್ರವಾ? ಈ ಯೋಜನೆಗೆ ಯಾರು ಅರ್ಹರು? ಇಲ್ಲಿದೆ ಡೀಟೇಲ್ಸ್
LPG Gas Price Details: ಸರ್ಕಾರ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 200 ರೂನಷ್ಟು ಇಳಿಸುತ್ತಿದೆ. ಈ ಬೆಲೆ ಇಳಿಕೆ ಪಿಎಂ ಉಜ್ವಲ ಯೋಜನೆಗೆ ಮಾತ್ರವಲ್ಲ, ಎಲ್ಲಾ ಎಲ್ಪಿಜಿ ಕನೆಕ್ಷನ್ಗೂ ಅನ್ವಯ ಆಗುತ್ತದೆ. ಉಜ್ವಲ ಸ್ಕೀಮ್ನಲ್ಲಿ ಈಗಾಗಲೇ ಇರುವ 200 ರೂ ಸಬ್ಸಿಡಿ ಜೊತೆಗೆ ಇದೂ ಹೆಚ್ಚುವರಿ 200 ರೂ ಇಳಿಕೆ ಅನ್ವಯ ಆಗುತ್ತದೆ. ಈ ಸ್ಕೀಮ್ನ ಫಲಾನುಭವಿಗಳಿಗೆ ಒಟ್ಟು 400 ರೂನಷ್ಟು ಬೆಲೆ ಇಳಿಕೆ ಇರುತ್ತದೆ.
ನವದೆಹಲಿ, ಆಗಸ್ಟ್ 30: ಕೇಂದ್ರ ಸಂಪುಟ ನಿನ್ನೆ (ಆಗಸ್ಟ್ 29) ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಶೀಘ್ರದಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ದರಪರಿಷ್ಕರಣೆ ಪ್ರಕಟಿಸಲಿವೆ. ಸರ್ಕಾರ 14.2 ಕಿಲೋ ಅಡುಗೆ ಅನಿಲ ಸಿಲಿಂಡರ್ನ ಬೆಲೆ 200 ರೂನಷ್ಟು (LPG Gas Cylinder Price) ತಗ್ಗಿಸಲು ನಿರ್ಧರಿಸಿದೆ. ಇದರೊಂದಿಗೆ ಗ್ಯಾಸ್ ಬೆಲೆ ಸಾವಿರ ರೂ ಮಟ್ಟಕ್ಕಿಂತ ಕೆಳಗೆ ಇಳಿಯಲಿದೆ. ನಿನ್ನೆ ಸಚಿವ ಸಂಪಟ ಸಭೆ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಎಲ್ಪಿಜಿ ಬೆಲೆ ಇಳಿಕೆ ನಿರ್ಧಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಕೆಲ ವರದಿಗಳು ಪಿಎಂ ಉಜ್ವಲ ಯೋಜನೆ (PM Ujjwala Yojana) ಫಲಾನುಭವಿಗಳಿಗೆ ಸಿಗುವ ಸಬ್ಸಿಡಿ ಹಣ ಇದು ಎಂದು ತಿಳಿಸಿದ್ದವು. ಈ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿಗೆ ಗೊಂದಲವಾಗಿದೆ.
ಆದರೆ ಅಧಿಕೃತ ಮಾಹಿತಿ ಪ್ರಕಾರ, ಎಲ್ಲಾ ಎಲ್ಪಿಜಿ ಬಳಕೆದಾರರಿಗೂ 200 ರೂ ಬೆಲೆ ಇಳಿಕೆ ಅನ್ವಯ ಆಗುತ್ತದೆ. ಭಾರತದಲ್ಲಿ 33 ಕೋಟಿ ಮನೆಗಳಲ್ಲಿ ಎಲ್ಪಿಜಿ ಸಿಲಿಂಡರ್ಗಳ ಬಳಕೆ ಆಗುತ್ತದೆ. ಅವರೆಲ್ಲರಿಗೂ ಬೆಲೆ ಇಳಿಕೆ ಭಾಗ್ಯ ಸಿಗುತ್ತದೆ. ಈ 33 ಕೋಟಿ ಗ್ಯಾಸ್ ಕನೆಕ್ಷನ್ಗಳ ಪೈಕಿ ಪಿಎಮ್ ಉಜ್ವಲ ಯೋಜನೆಯ ಅಡಿಯಲ್ಲಿ ಎಲ್ಪಿಜಿ ಸೌಲಭ್ಯ ಪಡೆದಿರುವವರ ಸಂಖ್ಯೆ 10 ಕೋಟಿ ಸಮೀಪ ಇದೆ.
ಬೆಂಗಳೂರಿನಲ್ಲಿ ಸದ್ಯ 14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 1,105.50 ರೂ ಇದೆ. ಈಗ 200 ರೂ ಬೆಲೆ ಇಳಿಕೆಯಾದರೆ ಬೆಂಗಳೂರಿನಲ್ಲಿ ಸಿಲಿಂಡರ್ ಬೆಲೆ 905.50 ರೂ ಆಗುತ್ತದೆ. ಇದು ಸಾಮಾನ್ಯ ಎಲ್ಪಿಜಿ ಬಳಕೆದಾರರಿಗೆ ಅನ್ವಯ ಆಗುವ ಬೆಲೆ ಪರಿಷ್ಕರಣೆ.
ಇದನ್ನೂ ಓದಿ: LPG Prices: ಎಲ್ಪಿಜಿ ಸಿಲಿಂಡರ್ ದರ 200 ರೂ ಇಳಿಕೆ; ಕೇಂದ್ರ ಸಂಪುಟದಿಂದ ಅನುಮೋದನೆ
ಆದರೆ, ಪಿಎಂ ಉಜ್ವಲ ಸ್ಕೀಮ್ ಯೋಜನೆಯ ಫಲಾನುಭವಿಗಳಿಗೆ ಬೆಲೆ ಇನ್ನೂ ಕಡಿಮೆ ಇದೆ. ಈ ಯೋಜನೆಯಲ್ಲಿ ಈ ಹಿಂದೆ 200 ರೂ ಸಬ್ಸಿಡಿ ಕೊಡಲಾಗುತ್ತಿತ್ತು. ಈಗ 200 ರೂ ಬೆಲೆ ಇಳಿಕೆಯೂ ಹೆಚ್ಚುವರಿಯಾಗಿ ಇವರಿಗೆ ಅನ್ವಯ ಆಗುತ್ತದೆ. ಅಂದರೆ ಈ ಯೋಜನೆಯ ಫಲಾನುಭವಿಗಳಿಗೆ ಒಟ್ಟು 400 ರೂ ಬೆಲೆ ಇಳಿಕೆ ಇರುತ್ತದೆ. ಬೆಂಗಳೂರಿನಲ್ಲಿ 1,105.50 ರೂ ಬೆಲೆ ಇರುವ ಗ್ಯಾಸ್, ಉಜ್ವಲ ಯೋಜನೆಯ ಅಡಿಯಲ್ಲಿ 705.50 ರೂಗೆ ಸಿಗುತ್ತದೆ.
ಏನಿದು ಪಿಎಂ ಉಜ್ವಲ ಯೋಜನೆ?
ಕೇಂದ್ರ ಸರ್ಕಾರ ಬಡವರಿಗೆಂದು ರೂಪಿಸಿದ ಹಲವು ಸ್ಕೀಮ್ಗಳಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯೂ ಒಂದು. 2016ರಲ್ಲಿ ಇದನ್ನು ಆರಂಭಿಸಲಾಯಿತು. ಯೋಜನೆಯ ಫಲಾನುಭವಿಗಳಾಗಲು ಬಿಪಿಎಲ್ ಕಾರ್ಡ್ದಾರರಾಗಿರಬೇಕು, 18 ವರ್ಷ ಮೇಲ್ಪಟ್ಟ ಮಹಿಳೆಯರಾಗಿರಬೇಕು. ಮನೆಯಲ್ಲಿ ಬೇರೆ ಎಲ್ಪಿಜಿ ಸಂಪರ್ಕ ಇರಬಾರದು. ಇವೆಲ್ಲ ಷರತ್ತುಗಳು ಸಮ್ಮತವಾಗಿದ್ದವರು ಯೋಜನೆಗೆ ಅರ್ಹರಾಗಿರುತ್ತಾರೆ.
ಇದನ್ನೂ ಓದಿ: ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್ನಲ್ಲಿದೆ ಹೊಸ ಫೀಚರ್
ಭಾರತದಲ್ಲಿ ಈ ಪಿಎಂ ಉಜ್ವಲ ಯೋಜನೆಯಲ್ಲಿ ಇರುವ ಫಲಾನುಭವಿಗಳ ಸಂಖ್ಯೆಯ 9 ಕೋಟಿಗೂ ಹೆಚ್ಚಿದೆ. ಶೀಘ್ರದಲ್ಲೇ ಇದರ ಸಂಖ್ಯೆ 10 ಕೋಟಿ ದಾಟಲಿದೆ. ಮುಂದಿನ ಕೆಲ ವರ್ಷಗಳಲ್ಲಿ ಇನ್ನೂ 5 ಕೋಟಿಯಷ್ಟು ಮಂದಿಯನ್ನು ಈ ಯೋಜನೆ ಅಡಿ ತರಲು ಕೇಂದ್ರ ಸರ್ಕಾರ ಯೋಜಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Wed, 30 August 23