ನಾಲ್ಕೈದು ದಿನದಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ಜಂಟಿ ಹೇಳಿಕೆ: ಪೀಯೂಶ್ ಗೋಯಲ್

India and US may sign more comprehensive trade deal in mid-March, says Piyush Goyal: ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಸಂಬಂಧ ಎರಡೂ ದೇಶಗಳಿಂದ ಜಂಟಿ ಹೇಳಿಕೆ ಕೆಲವೇ ದಿನಗಳಲ್ಲಿ ಬರಲಿದೆ ಎಂದು ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಹೇಳಿದ್ದಾರೆ. ಮಾರ್ಚ್ ತಿಂಗಳಲ್ಲಿ ಎರಡು ದೇಶಗಳ ಮಧ್ಯೆ ಹೆಚ್ಚು ಸಮಗ್ರವಾದ ಒಪ್ಪಂದಕ್ಕೆ ಸಹಿ ಬೀಳಬಹುದು ಎಂದೂ ಅವರು ತಿಳಿಸಿದ್ದಾರೆ.

ನಾಲ್ಕೈದು ದಿನದಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ಜಂಟಿ ಹೇಳಿಕೆ: ಪೀಯೂಶ್ ಗೋಯಲ್
ಪೀಯೂಶ್ ಗೋಯಲ್

Updated on: Feb 05, 2026 | 3:16 PM

ನವದೆಹಲಿ, ಫೆಬ್ರುವರಿ 5: ಭಾರತ ಹಾಗೂ ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಭಾಗ ಸದ್ಯದಲ್ಲೇ ಹೊರಬರಲಿದೆ. ಕೆಲವೇ ದಿನಗಳಲ್ಲಿ ಅಮೆರಿಕದ ಮಾರುಕಟ್ಟೆಯಲ್ಲಿ ಭಾರತಕ್ಕೆ ಟ್ಯಾರಿಫ್ ರಿಯಾಯಿತಿಯ ಪ್ರವೇಶ ಸಿಗುತ್ತದೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಶ್ ಗೋಯಲ್ (Piyush Goyal) ಸ್ಪಷ್ಟಪಡಿಸಿದ್ದಾರೆ. ವ್ಯಾಪಾರ ಒಪ್ಪಂದ ಸಂಬಂಧ ಮುಂದಿನ ನಾಲ್ಕೈದು ದಿನಗಳಲ್ಲಿ ಎರಡೂ ದೇಶಗಳ ಮಧ್ಯೆ ಜಂಟಿ ಹೇಳಿಕೆ ಬರಬಹುದು ಎಂದೂ ಗೋಯಲ್ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ನಡುವೆ ಜಂಟಿ ಹೇಳಿಕೆ ಬಂದು ಕಾರ್ಯಕಾರಿ ಆದೇಶ (Executive Order) ಹೊರಟಾಗ ಶೇ. 18ರ ಟ್ಯಾರಿಫ್ ಕ್ರಮ ಚಾಲನೆಗೆ ಬರುತ್ತದೆ ಎಂದು ಹೇಳಿದ ಪೀಯೂಶ್ ಗೋಯಲ್, ಮುಂದಿನ 2-2.5 ತಿಂಗಳಲ್ಲಿ (ಮಾರ್ಚ್ ಮಧ್ಯೆ) ಹೆಚ್ಚು ಸಮಗ್ರವಾದ ಮತ್ತು ಅಧಿಕೃತವಾದ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಲಿವೆ ಎಂದಿದ್ದಾರೆ.

ಇದನ್ನೂ ಓದಿ: ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ

ಭಾರತ ಇತ್ತೀಚೆಗೆ ಸಾಲು ಸಾಲಾಗಿ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ದಾಖಲೆಯ ಎಂಟು ವ್ಯಾಪಾರ ಒಪ್ಪಂದಗಳಿಗೆ ಭಾರತ ಸಹಿ ಹಾಕಿದೆ. ಅಮೆರಿಕದೊಂದಿಗೆ ಒಪ್ಪಂದವಾದರೆ ಒಂಬತ್ತನೆಯದ್ದಾಗುತ್ತದೆ. ಈ ಬೆಳವಣಿಗೆಯನ್ನು ಗೋಯಲ್ ಅವರು ಮೈಲಿಗಲ್ಲೆಂದು ಬಣ್ಣಿಸಿದ್ದಾರೆ.

ಗಲ್ಫ್ ಕೋಆಪರೇಶನ್ ಕೌನ್ಸಿಲ್ ಜೊತೆಗೂ ಒಪ್ಪಂದ

ಯುಎಇ, ಸೌದಿ ಅರೇಬಿಯಾ, ಓಮನ್, ಕತಾರ್, ಕುವೇತ್ ಮತ್ತು ಬಹ್ರೇನ್ ದೇಶಗಳ ಗುಂಪಾದ ಗಲ್ಫ್ ಕೋಆಪರೇಶನ್ ಕೌನ್ಸಿಲ್ ಜೊತೆಗೂ ಭಾರತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಈ ಸಂಬಂಧ ಮಾತುಕತೆಗೆ ತೊಡಗಲು ಮಾರ್ಗಸೂಚಿಗೆ (ಟರ್ಮ್ಸ್ ಆಫ್ ರೆಫರೆನ್ಸ್) ಭಾರತ ಸಹಿ ಹಾಕುತ್ತಿದೆ. ಈ ಗುಂಪಿನ ದೇಶಗಳ ಜೊತೆ ಭಾರತದ 179 ಬಿಲಿಯನ್ ಡಾಲರ್ ಮೊತ್ತದಷ್ಟು ವ್ಯಾಪಾರ ವಹಿವಾಟು ಹೊಂದಿದೆ. ಒಪ್ಪಂದದ ಬಳಿಕ ಇದು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಭಾರತ-ಅಮೆರಿಕ ಟ್ರೇಡ್ ಡೀಲ್ ಸಲೀಸಾಗಿ ಕುದುರಿದ್ದು ಹೇಗೆ? ಅಜಿತ್ ದೋವಲ್ ಅಮೆರಿಕ ಭೇಟಿಯಲ್ಲಿ ಆಗಿದ್ದೇನು?

ಯೂರೋಪಿಯನ್ ಯೂನಿಯನ್ ಮತ್ತು ಅಮೆರಿಕದೊಂದಿಗೆ ಭಾರತ ಮಾಡಿಕೊಂಡಿರುವ ಡೀಲ್​ಗಳು ಬಹಳ ದೊಡ್ಡವೆಂದು ಪರಿಗಣಿತವಾಗಿವೆ. ಬ್ರಿಟನ್, ಇಎಫ್​ಟಿಎ, ನ್ಯೂಜಿಲ್ಯಾಂಡ್ ಮೊದಲಾದ ದೇಶಗಳೊಂದಿಗೂ ಭಾರತ ಟ್ರೇಡ್ ಡೀಲ್ ಕುದುರಿಸಿದೆ. ಗಲ್ಫ್ ರಾಷ್ಟ್ರಗಳೊಂದಿಗೆ ಡೀಲ್ ಏರ್ಪಟ್ಟರೆ ಅದೂ ಒಂದು ಮೈಲಿಗಲ್ಲು ಎಂದೆನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us