
ನವದೆಹಲಿ, ಜುಲೈ 9: ನಿಷ್ಕ್ರಿಯಾಗಿರುವ ಪಿಎಂ ಜನ್ ಧನ್ ಖಾತೆಗಳನ್ನು (Inoperative PMJDY account) ಮುಚ್ಚುವಂತೆ ಬ್ಯಾಂಕುಗಳಿಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಹೋಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಅವು ನಿಷ್ಕ್ರಿಯವಾಗಿದ್ದರೆ ಮುಚ್ಚಲಾಗುವುದು ಎನ್ನುವಂತಹ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಸ್ಪಷ್ಟನೆ ಕೊಟ್ಟಿದೆ.
ಬ್ಯಾಂಕಿಂಗ್ ವ್ಯಾಪ್ತಿಗೆ ಬರದ ಜನರಿಗೆ ಬ್ಯಾಂಕಿಂಗ್ ಸೇವೆ ತಲುಪಬೇಕೆನ್ನುವುದು ಪಿಎಂ ಜನ್ ಧನ್ ಯೋಜನೆಯ ಮೂಲ ಉದ್ದೇಶ. ಯೋಜನೆಯ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.
ಇದನ್ನೂ ಓದಿ: ಚೀನಾದ ಗೊಡವೆ ಸಾಕು; ವಿರಳ ಭೂಖನಿಜಗಳಿಗಾಗಿ ಆಸ್ಟ್ರೇಲಿಯಾ ಜೊತೆ ಭಾರತ ಮಾತುಕತೆ
ಇದೇ ವೇಳೆ, ಹಣಕಾಸು ಸೇವೆಗಳ ಇಲಾಖೆಯು ಜುಲೈ 1ರಿಂದ ಪಿಎಂ ಜನ್ ಧನ್ ಯೋಜನೆ, ಜೀವನ್ ಜ್ಯೋತಿ ಬಿಮಾ ಯೋಜನೆ, ಅಟಲ್ ಪೆನ್ಷನ್ ಯೋಜನೆ ಮತ್ತಿತರ ವೆಲ್ಫೇರ್ ಸ್ಕೀಮ್ಗಳ ಬಗ್ಗೆ ದೇಶಾದ್ಯಂತ ಮೂರು ತಿಂಗಳ ಜಾಗೃತಿ ಅಭಿಯಾನ ನಡೆಸುತ್ತಿದೆ. ಈ ಅಭಿಯಾನದ ವೇಳೆ ಬ್ಯಾಂಕುಗಳು ಈ ಎಲ್ಲಾ ಖಾತೆಗಳಿಗೆ ಮತ್ತೊಮ್ಮೆ ಕೆವೈಸಿ ಪಡೆಯಲಿವೆ. ಈ ಸಂದರ್ಭದಲ್ಲಿ ಉಪಯೋಗಿಸದೇ ಉಳಿದಿರುವ, ಇನಾಪರೇಟಿವ್ ಆಗಿರುವ ಪಿಎಂಜೆಡಿವೈ ಅಕೌಂಟ್ಗಳನ್ನು ಇಲಾಖೆಯ ಗಮನಿಸಲಿದೆ. ಅಂಥ ಖಾತೆಗಳ ಮಾಲೀಕರನ್ನು ಸಂಪರ್ಕಿಸಿ, ಮತ್ತೆ ಸಕ್ರಿಯಗೊಳಿಸಲು ಯತ್ನಿಸಬೇಕೆಂದು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.
ಇದೇ ವೇಳೆ, ಇನಾಪರೇಟಿವ್ ಅಥವಾ ನಿಷ್ಕ್ರಿಯವಾಗಿರುವ ಪಿಎಂಜೆಡಿವೈ ಅಕೌಂಟ್ಗಳನ್ನು ಮುಚ್ಚಲಾಗುವುದು ಎನ್ನುವಂತಹ ವರದಿಗಳು ಕೆಲವೆಡೆ ಬಂದಿದ್ದುವು. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯವು ನಿನ್ನೆ ಮಂಗಳವಾರ ಸ್ಪಷ್ಟೀಕರಣ ಬಿಡುಗಡೆ ಮಾಡಿದೆ.
ಸರ್ಕಾರ ನಡೆಸುವ ಹಲವು ಕಲ್ಯಾಣ ಯೋಜನೆಗಳಿಗೆ ಬಿಡುಗಡೆ ಆಗುವ ಹಣ ಈ ಮೊದಲು ಸಾಕಷ್ಟು ಪೋಲಾಗುತ್ತಿತ್ತು. ಅನರ್ಹರು, ಮಧ್ಯವರ್ತಿಗಳಿಗೆ ಸಾಕಷ್ಟು ಹಣ ಹೋಗುತ್ತಿತ್ತು. ಅದನ್ನು ತಪ್ಪಿಸಲು ಸರ್ಕಾರವು ಪಿಎಂ ಜನ್ ಧನ್ ಯೋಜನೆಯನ್ನು ಜಾರಿಗೆ ತಂದಿತು. ಬ್ಯಾಂಕ್ ಖಾತೆಯೇ ಇಲ್ಲದ ಗ್ರಾಮೀಣ ಭಾಗದವರಿಗೆ ಸುಲಭವಾಗಿ ಅಕೌಂಟ್ ತೆರೆಯಲು ಅವಕಾಶ ಕೊಡಲಾಯಿತು. ಆಧಾರ್ ಮಾಡುವ ಮೂಲಕ ಸಬ್ಸಿಡಿ ಇತ್ಯಾದಿ ಸೌಲಭ್ಯಗಳು ನೇರವಾಗಿ ಬ್ಯಾಂಕ್ ಖಾತೆಗೆ ಹೋಗಲು ಸಾಧ್ಯವಾಗಿದೆ.
ಇದನ್ನೂ ಓದಿ: ತಡಬಡಾಯಿಸುತ್ತಿರುವ ಬಾಂಗ್ಲಾದೇಶ; ಟ್ರಂಪ್ ಟ್ಯಾರಿಫ್ನಿಂದ ಬಾಂಗ್ಲಾಗೆ ಭಾರೀ ಹೊಡೆತ; ಭಾರತಕ್ಕೆ ಎಷ್ಟು ಲಾಭ?
ಪಿಎಂ ಜನ್ ಧನ್ ಯೋಜನೆಯ ಖಾತೆಗಳು ಮಿನಿಮಮ್ ಬ್ಯಾಲನ್ಸ್ ನಿಯಮ ಹೊಂದಿರುವುದಿಲ್ಲ. ಝೀರೋ ಬ್ಯಾಲನ್ಸ್ ಖಾತೆಗಳಾಗಿವೆ. ಇದಕ್ಕೆ ಡೆಬಿಟ್ ಕಾರ್ಡ್ಗಳೂ ಸಿಗುತ್ತವೆ. ಅಲ್ಪ ಮೊತ್ತಕ್ಕೆ ಇನ್ಷೂರೆನ್ಸ್ ಕೂಡ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ