ಕಾರು ಇನ್ಷೂರೆನ್ಸ್: ಅಪಘಾತವಾದ ಬಳಿಕ ನೀವು ಮೊದಲು ಮಾಡಬೇಕಾದ ಕೆಲಸ ಇದು…
Car Insurance tips: ಭಾರತದಲ್ಲಿ ದಿನಂಪ್ರತಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ನೂರಾರು ಜನರು ಬಲಿಯಾಗುತ್ತಿರುತ್ತಾರೆ. ಕಾರು ಇನ್ಷೂರೆನ್ಸ್ ಮಾಡಿಸಿದ್ದರೂ, ಅಪಘಾತವಾದಾಗ ಕೆಲ ಅಂಶಗಳನ್ನು ಮರೆತುಬಿಟ್ಟರೆ ಇನ್ಷೂರೆನ್ಸ್ ಕ್ಲೇಮ್ ಮಾಡುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಪಘಾತವಾದಾಗ ಮೊದಲು ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ...

ವಾಹನಗಳ ಸಂಚಾರ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತೆಯೇ, ಅಪಘಾತಗಳ ಪ್ರಮಾಣವೂ ಹೆಚ್ಚುತ್ತಿದೆ. ಅತಿಹೆಚ್ಚು ರಸ್ತೆ ಅಪಘಾತಗಳಾಗುತ್ತಿರುವ ದೇಶಗಳಲ್ಲಿ ಭಾರತವೂ ಇದೆ. ಇಲ್ಲಿ ಪ್ರತೀ ದಿನ 400-500 ಜನರು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಲೇ ಇರುತ್ತಾರೆ. ಹೆಚ್ಚಿನ ಅಪಘಾತಗಳಲ್ಲಿ ಕಾರುಗಳು ಭಾಗಿಯಾಗಿರುತ್ತವೆ. ಐಷಾರಾಮಿ ಕಾರು ಖರೀದಿಸುವ ಜನರು, ಸರಿಯಾದ ಇನ್ಷೂರೆನ್ಸ್ ಪಡೆಯಲು ಮೀನಮೇಷ ಎಣಿಸುತ್ತಾರೆ. ನಾಮಕಾವಸ್ತೆಗೆಂದು ಕನಿಷ್ಠ ಪ್ರೀಮಿಯಮ್ ಇರುವ ಯಾವುದೋ ಒಂದು ವಿಮೆ (car insurance) ಪಡೆದು ಸುಮ್ಮನಾಗುವುದುಂಟು. ಹೆಲ್ತ್ ಇನ್ಷೂರೆನ್ಸ್ ಮಹತ್ವ ನಾವು ಆಸ್ಪತ್ರೆಗೆ ದಾಖಲಾದಾಗ ಹೇಗೆ ಗೊತ್ತಾಗುತ್ತದೋ, ವಾಹನ ಇನ್ಷೂರೆನ್ಸ್ ಎಷ್ಟು ಮಹತ್ವದ್ದೆಂಬುದು ಅಪಘಾತದ ಬಳಿಕ ಮನವರಿಕೆ ಆಗುತ್ತದೆ.
ಕಾರು ಅಪಘಾತವಾದಾಗ ಮೊದಲು ಏನು ಮಾಡಬೇಕು?
ಕಾರು ಅಪಘಾತವಾದಾಗ, ಕಾರಿನಲ್ಲಿದ್ದವರ ಸುರಕ್ಷತೆ ಕಡೆಗೆ ಮೊದಲು ಗಮನಹರಿಸಬೇಕು. ಗಾಯಗೊಂಡಿದ್ದರೆ ಮೊದಲು ಚಿಕಿತ್ಸೆ ಪಡೆಯುವಂತಾಗಬೇಕು.
ಇದಾದ ಬಳಿಕ ಮಾಡಬೇಕಾದ ಕೆಲಸ ಎಂದರೆ ಇನ್ಷೂರೆನ್ಸ್ ಕಂಪನಿಗೆ ಅಪಘಾತದ ಮಾಹಿತಿ ತಿಳಿಸಬೇಕು. ಅಪಘಾತವಾಗಿ 24 ಗಂಟೆಯೊಳಗೆ ಈ ಕೆಲಸ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಿ. ಇದರಿಂದ ಹಣ ಕ್ಲೇಮ್ ಮಾಡುವ ದಾರಿ ಸುಗಮಗೊಳ್ಳುತ್ತದೆ. ನೀವು ತಡವಾಗಿ ಮಾಹಿತಿ ನೀಡಿದರೆ ಕ್ಲೇಮ್ ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಇದನ್ನೂ ಓದಿ: ಗೃಹಸಾಲ, ಬಹಳ ಕಡಿಮೆ ಆಗಿದೆ ಬಡ್ಡಿದರ; ಶೇ. 7.35ರಿಂದ ಇಂಟರೆಸ್ಟ್ ರೇಟ್ ಶುರು
ಅಪಘಾತವಾದಾಗ ಎಫ್ಐಆರ್ ದಾಖಲಿಸುವುದು ಮುಖ್ಯ
ಅಪಘಾತವಾದಾಗ, ಅದರಲ್ಲೂ ಥರ್ಡ್ ಪಾರ್ಟಿ ಡ್ಯಾಮೇಜ್ ಆದಾಗ, ಅಂದರೆ ಕಾರ್ ಅಪಘಾತದಲ್ಲಿ ಬೇರೆಯ ವ್ಯಕ್ತಿಗಳಿಗೆ ಗಾಯವಾದರೆ ಅಥವಾ ಸಾವಾದರೆ, ಸಮೀಪದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಮೂಲಕ ಪ್ರಕರಣ ದಾಖಲಿಸಬೇಕು.
ಹಲವು ಅಪಘಾತ ಪ್ರಕರಣಗಳಲ್ಲಿ ವಿಮಾ ಕಂಪನಿಗಳು ಪೊಲೀಸ್ ಎಫ್ಐಆರ್ ಪ್ರತಿಯನ್ನು ಕೇಳುತ್ತವೆ. ನೀವು ಕ್ಲೇಮ್ಗೆ ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳಾದ ಎಫ್ಐಆರ್, ಡ್ರೈವಿಂಗ್ ಲೈಸೆನ್ಸ್, ಪಾಲಿಸಿಯ ಕಾಪಿ, ಆರ್ಸಿ (ವಾಹನ ದಾಖಲೆ) ಇತ್ಯಾದಿಯನ್ನು ಸಲ್ಲಿಸಬೇಕು. ಆಗ ಸುಗಮವಾಗಿ ನಿಮ್ಮ ಕ್ಲೇಮ್ಗೆ ಅನುಮೋದನೆ ಸಿಕ್ಕುತ್ತದೆ.
ಸರಿಯಾದ ಪಾಲಿಸಿ ಹೊಂದಿರಬೇಕು…
ವಾಹನ ಇನ್ಷೂರೆನ್ಸ್ ವಿಷಯಕ್ಕೆ ಬಂದಾಗ ಜನರು ನಾಮಕಾವಸ್ತೆಗೆಂದು ಪಾಲಿಸಿ ಖರೀದಿಸುವುದುಂಟು. ಸಮಗ್ರ ಪಾಲಿಸಿ ಪಡೆಯುವುದರ ಬದಲು ಕನಿಷ್ಠ ಥರ್ಡ್ ಪಾರ್ಟಿ ಪ್ಲಾನ್ಗಳನ್ನು ಪಡೆಯುವವರು ಹೆಚ್ಚು ಜನರಿದ್ದಾರೆ. ಇದು ತಪ್ಪು. ಥರ್ಡ್ ಪಾರ್ಟಿ ಇನ್ಷೂರೆನ್ಸ್ ಪ್ಲಾನ್ಗಳಲ್ಲಿ ನಿಮ್ಮ ವಾಹನದ ಅಪಘಾತದಲ್ಲಿ ಬೇರೆಯವರಿಗೆ ಹಾನಿಯಾದರೆ, ಅವರಿಗೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: 20-35 ವರ್ಷ ವಯಸ್ಸಿನಲ್ಲಿ ಜನರು ಮಾಡುವ ಪ್ರಮುಖ ಹಣಕಾಸು ತಪ್ಪುಗಳಿವು…
ಕಾಂಪ್ರಹೆನ್ಸಿವ್ ಪಾಲಿಸಿಯಲ್ಲಿ ನಿಮಗೂ ಹಾಗೂ ಥರ್ಡ್ ಪಾರ್ಟಿ ಇಬ್ಬರಿಗೂ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ನಿಮ್ಮ ವಾಹನಕ್ಕೆ ಹಾನಿಯಾದರೆ ನಿರ್ದಿಷ್ಟ ಮೊತ್ತದ ಪರಿಹಾರ ಸಿಗುತ್ತದೆ. ನೀವು ಪಾಲಸಿ ಪಡೆಯುವಾಗ ಅದರಲ್ಲಿ ಯಾವೆಲ್ಲಾ ಅಂಶಗಳನ್ನು ಪರಿಗಣಿಸಲಾಗಿದೆ ಎಂಬುದನ್ನು ವಿವರಿಸಲಾಗಿರುತ್ತದೆ. ನೀವು ಎಷ್ಟು ಹಣಕ್ಕೆ ಕ್ಲೇಮ್ ಮಾಡಬಹುದು ಎಂಬುದು ನಿಮಗೆ ತಿಳಿಯುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








