ಪಿಎಂ ಕಿಸಾನ್ ಸ್ಕೀಮ್, ಹಣದ ಮೊತ್ತ 10,000 ರೂಗೆ ಏರಿಕೆ; ಹರಿಯಾಣ, ಕಾಶ್ಮೀರಕ್ಕೆ ಮಾತ್ರವಾ?

|

Updated on: Sep 29, 2024 | 11:00 AM

PM Kisan scheme update: ಪಿಎಂ ಕಿಸಾನ್ ಯೋಜನೆಯಲ್ಲಿ ಒಂದು ವರ್ಷದಲ್ಲಿ ನೀಡಲಾಗುವ ಸಹಾಯಧನವನ್ನು 10,000 ರೂಗೆ ಹೆಚ್ಚಿಸಲಾಗುತ್ತಿದೆ. ಆದರೆ, ಜಮ್ಮು ಕಾಶ್ಮೀರ ಮತ್ತು ಹರ್ಯಾಣ ರಾಜ್ಯಗಳಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಈ ಭರವಸೆ ನೀಡಲಾಗಿದೆ. ಸದ್ಯ ಈ ಸ್ಕೀಮ್​ನಲ್ಲಿ 18ನೇ ಕಂತಿನ ಹಣ ಅಕ್ಟೋಬರ್ 5ರಂದು ಬಿಡುಗಡೆ ಆಗಲಿದೆ.

ಪಿಎಂ ಕಿಸಾನ್ ಸ್ಕೀಮ್, ಹಣದ ಮೊತ್ತ 10,000 ರೂಗೆ ಏರಿಕೆ; ಹರಿಯಾಣ, ಕಾಶ್ಮೀರಕ್ಕೆ ಮಾತ್ರವಾ?
ರೈತ
Follow us on

ನವದೆಹಲಿ, ಸೆಪ್ಟೆಂಬರ್ 29: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಹಣ ಈ ವಾರ ಮಹಾಲಯ ಅಮಾವಾಸ್ಯೆ ಬಳಿಕ ಬಿಡುಗಡೆ ಆಗಲಿದೆ. ಫಲಾನುಭವಿ ರೈತರ ಖಾತೆಗಳಿಗೆ ಅಕ್ಟೋಬರ್ 5ರಂದು ಎರಡು ಸಾವಿರ ರೂ ಹಣ ವರ್ಗಾವಣೆ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದೇ ವೇಳೆ ಮೊನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ ಹೆಚ್ಚುವರಿ 4,000 ರೂ ಸಹಾಯಧನ ಕೊಡಲಾಗುವುದು ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ತಿಳಿಸಲಾಗಿದೆ.

ಹರಿಯಾಣ ರಾಜ್ಯದಲ್ಲೂ ಬಿಜೆಪಿ ಪಿಎಂ ಕಿಸಾನ್ ಯೋಜನೆಯಲ್ಲಿ 4,000 ರೂ ಹೆಚ್ಚುವರಿ ಸಹಾಯಧನ ನೀಡುವುದಾಗಿ ಭರವಸೆ ನೀಡಿದೆ. ಸದ್ಯ ದೇಶಾದ್ಯಂತ ಈ ಯೋಜನೆಯ ಫಲಾನುಭವಿ ರೈತರಿಗೆ ವರ್ಷಕ್ಕೆ 6,000 ರೂ ಸಿಗುತ್ತದೆ. ಪ್ರತೀ ನಾಲ್ಕು ತಿಂಗಳಿಗೆ 2,000 ರೂಗಳಂತೆ ವರ್ಷಕ್ಕೆ ಒಟ್ಟು ಮೂರು ಕಂತುಗಳಲ್ಲಿ ಹಣ ವರ್ಗಾವಣೆ ಮಾಡಲಾಗುತ್ತಿದೆ. 2019ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಇದೂವರೆಗೆ 17 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 5ರಂದು 18ನೇ ಕಂತಿನ ಹಣ ಬಿಡುಗಡೆ ಆಗುತ್ತಿದೆ.

ಹೆಚ್ಚುವರಿ 4,000 ರೂ ಕೇಂದ್ರದಿಂದ ಸಿಗುತ್ತಾ?

ಜಮ್ಮು ಮತ್ತು ಕಾಶ್ಮೀರ ಹಾಗು ಹರ್ಯಾಣ ರಾಜ್ಯಗಳಲ್ಲಿ ಬಿಜೆಪಿ ಪಿಎಂ ಕಿಸಾನ್ ಯೋಜನೆಯಲ್ಲಿ 4,000 ರೂ ಹಣವನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಭರವಸೆ ನೀಡಿದೆ. ಈ ಎರಡು ರಾಜ್ಯಗಳಲ್ಲಿನ ರೈತರಿಗೆ ವರ್ಷಕ್ಕೆ 10,000 ರೂ ನೀಡಲಾಗುತ್ತದೆ. ಇದು ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರವಾ ಎಂಬುದು ಸ್ಪಷ್ಟವಾಗಿಲ್ಲ. ಪ್ರಣಾಳಿಕೆ ಪ್ರಕಾರ ಈ ರಾಜ್ಯಗಳಲ್ಲಿ ವರ್ಷಕ್ಕೆ ಮೂರು ಕಂತುಗಳಲ್ಲೇ ಹಣ ಬಿಡುಗಡೆ ಆಗುತ್ತದೆಯಾದರೂ ತಲಾ ಎರಡು ಸಾವಿರ ರೂ ಬದಲು ಮೂರು ಸಾವಿರ ರೂಗಳ ಎರಡು ಕಂತು, ಹಾಗು 4,000 ರೂಗಳ ಒಂದು ಕಂತು ಬಿಡುಗಡೆ ಆಗುತ್ತದೆ.

ಇದನ್ನೂ ಓದಿ: ಕನಿಷ್ಠ ವೇತನ ಹೆಚ್ಚಿಸಿದ ಸರ್ಕಾರ; ಕುಶಲಕರ್ಮಿಗಳಿಗೆ ಕನಿಷ್ಠ ದಿನಗೂಲಿ 1,035 ರೂಗೆ ಹೆಚ್ಚಳ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪಿಎಂ ಕಿಸಾನ್ ಯೋಜನೆಯಲ್ಲಿ ಹೆಚ್ಚುವರಿಯಾಗಿ 4,000 ರೂ ನೀಡಲಾಗುತ್ತಿತ್ತು. ಇಲ್ಲಿನ ರೈತರಿಗೆ ವರ್ಷಕ್ಕೆ ಒಟ್ಟು 10,000 ರೂ ನೀಡಲಾಗುತ್ತಿತ್ತು. ಸದ್ಯಕ್ಕೆ ಈ ಹೆಚ್ಚುವರಿ 4,000 ರೂ ಸಹಾಯಧನ ಕರ್ನಾಟಕದಲ್ಲಿ ನಿಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ