ಸೆಬಿ ಸೂಚನೆ ಬಳಿಕ ಟ್ರಾನ್ಸಾಕ್ಷನ್ ಶುಲ್ಕ ಪರಿಷ್ಕರಿಸಿದ ಬಿಎಸ್ಇ, ಎನ್ಎಸ್ಇ; ಹೊಸ ದರಗಳ ವಿವರ ಇಲ್ಲಿದೆ
BSE and NSE revises transaction fees: ಷೇರುವಿನಿಮಯ ಕೇಂದ್ರಗಳು, ಡೆಪಾಸಿಟರಿಗಳು, ಕ್ಲಿಯರಿಂಗ್ ಸಂಸ್ಥೆಗಳು ಇತ್ಯಾದಿ ಮಾರುಕಟ್ಟೆ ಇನ್ಫ್ರಾಸ್ಟ್ರಕ್ಚರ್ ಸದಸ್ಯರೆಲ್ಲರೂ ಏಕರೀತಿಯ ಶುಲ್ಕ ವಿಧಿಸಬೇಕು ಎಂದು ಸೆಬಿ ನಿಯಮ ಮಾಡಿದೆ. ಈ ಹಿನ್ನೆಲೆಯಲ್ಲಿ ಷೇರು ವಿನಿಮಯ ಕೇಂದ್ರಗಳು ಕ್ಯಾಷ್ ಮತ್ತು ಡಿರೈವೇಟಿವ್ ಸೆಗ್ಮೆಂಟ್ಗಳಲ್ಲಿ ಕೆಲ ವಹಿವಾಟು ಶುಲ್ಕಗಳನ್ನು ಪರಿಷ್ಕರಿಸಿವೆ. ಅಕ್ಟೋಬರ್ 1, ಮಂಗಳವಾರದಿಂದ ಹೊಸ ದರಗಳು ಅನುಷ್ಠಾನಕ್ಕೆ ಬರಲಿವೆ.
ನವದೆಹಲಿ, ಸೆಪ್ಟೆಂಬರ್ 29: ಷೇರು ಮಾರುಕಟ್ಟೆಯ ಎಲ್ಲಾ ಸಂಸ್ಥೆಗಳೂ ಏಕಸ್ವರೂಪದ ಶುಲ್ಕ ವ್ಯವಸ್ಥೆ ಹೊಂದಿರಬೇಕು ಎಂದು ಸೆಬಿ ಕಡ್ಡಾಯಪಡಿಸಿದ ಹಿನ್ನೆಲೆಯಲ್ಲಿ ಷೇರು ವಿನಿಮಯ ಕೇಂದ್ರಗಳಾದ ಬಿಎಸ್ಇ ಮತ್ತು ಎನ್ಎಸ್ಇ ತಮ್ಮಲ್ಲಿನ ವಿವಿಧ ಸೆಗ್ಮೆಂಟ್ಗಳ ಟ್ರಾನ್ಸಾಕ್ಷನ್ ಶುಲ್ಕಗಳನ್ನು ಪರಿಷ್ಕರಿಸಿವೆ. ಅಕ್ಟೋಬರ್ 1ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಕ್ಯಾಷ್ ಸೆಗ್ಮೆಂಟ್, ಈಕ್ವಿಟಿ ಡಿರೈವೇಟಿವ್ಸ್ಗಳ ವಿವಿಧ ಸೆಗ್ಮೆಂಟ್ಗಳಲ್ಲಿ ವಹಿವಾಟು ಶುಲ್ಕಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಈಕ್ವಿಟಿ ಡಿರೈವೇಟಿವ್ಗಳಲ್ಲಿ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ಗಳಿದ್ದು ಅದರ ವಹಿವಾಟು ಶುಲ್ಕಗಳಲ್ಲಿ ಬದಲಾವಣೆ ಇದೆ.
ಬಿಎಸ್ಇಯಿಂದ ಟ್ರಾನ್ಸಾಕ್ಷನ್ ಫೀ ಪರಿಷ್ಕರಣೆ ವಿವರ
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಅಥವಾ ಬಿಎಸ್ಇನಲ್ಲಿ ಈಕ್ವಿಟಿ ಡಿರೈವೇಟಿವ್ಸ್ ಸೆಗ್ಮೆಂಟ್ನಲ್ಲಿ ಸೆನ್ಸೆಕ್ಸ್ ಮತ್ತು ಬ್ಯಾಂಕೆಕ್ಸ್ ಕಾಂಟ್ರಾಕ್ಟ್ಗಳಲ್ಲಿ, ಒಂದು ಕೋಟಿ ರೂನಷ್ಟು ಪ್ರೀಮಿಯಮ್ ಟರ್ನೋವರ್ಗೆ 3,250 ರೂ ಟ್ರಾನ್ಸಾಕ್ಷನ್ ಫೀಯನ್ನು ಹೆಚ್ಚಿಸಲಾಗಿದೆ. ಆದರೆ, ಬಿಎಸ್ಇಯನ ಈಕ್ವಿಟಿ ಡಿರೈವೇಟಿವ್ಸ್ ಸೆಗ್ಮೆಂಟ್ನ ಇತರ ಕಾಂಟ್ರಾಕ್ಟ್ಗಳ ಟ್ರೇಡಿಂಗ್ನಲ್ಲಿ ಟ್ರಾನ್ಸಾಕ್ಷನ್ ಫೀ ಬದಲಾಗುತ್ತಿಲ್ಲ.
ಇದನ್ನೂ ಓದಿ: ಫಾರೆಕ್ಸ್ ರಿಸರ್ವ್ಸ್ ಸತತ ಆರನೇ ವಾರವೂ ಏರಿಕೆ; 700 ಬಿಲಿಯನ್ ಡಾಲರ್ ಮೈಲಿಗಲ್ಲಿಗೆ ಸಮೀಪ
ಬಿಎಸ್ಇನಲ್ಲಿ ಸೆನ್ಸೆಕ್ಸ್ 50 ಆಪ್ಷನ್ಸ್ ಮತ್ತು ಸ್ಟಾಕ್ ಆಪ್ಷನ್ಸ್ ಟ್ರೇಡಿಂಗ್ನಲ್ಲಿ ಒಂದು ಕೋಟಿ ರೂ ಪ್ರೀಮಿಯಮ್ ಟರ್ನೋವರ್ಗೆ 500 ರೂ ಟ್ರಾನ್ಸಾಕ್ಷನ್ ಫೀ ಇರಲಿದೆ. ಇನ್ನೊಂದೆಡೆ, ಇಂಡೆಕ್ಸ್ ಮತ್ತು ಸ್ಟಾಕ್ ಫ್ಯೂಚರ್ಸ್ನ ವಹಿವಾಟಿಗೆ ಇರುವ ಶುಲ್ಕದಲ್ಲಿ ಬದಲಾವಣೆ ಮಾಡಲಾಗುತ್ತಿಲ್ಲ.
ಎನ್ಎಸ್ಇ ಟ್ರಾನ್ಸಾಕ್ಷನ್ ಫೀನಲ್ಲಿ ಏನು ಬದಲಾವಣೆ?
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ತನ್ನ ಕ್ಯಾಷ್ ಮಾರ್ಕೆಟ್ನಲ್ಲಿ ಟ್ರಾನ್ಸಾಕ್ಷನ್ ಫೀ ಪರಿಷ್ಕರಿಸಿದೆ. ಒಂದು ಲಕ್ಷ ರೂ ಮೌಲ್ಯದ ವಹಿವಾಟಿಗೆ 2.97 ರೂ ಫೀ ವಿಧಿಸುತ್ತಿದೆ. ಈಕ್ವಿಟಿ ಫ್ಯೂಚರ್ಸ್ನಲ್ಲಿ ಒಂದು ಲಕ್ಷ ಮೌಲ್ಯದ ವಹಿವಾಟಿಗೆ 1.73 ರೂ ಶುಲ್ಕ ಇರುತ್ತದೆ. ಈಕ್ವಿಟಿ ಆಪ್ಷನ್ಸ್ನಲ್ಲಿ ಪ್ರತೀ ಒಂದು ಲಕ್ಷ ರೂ ಮೌಲ್ಯದ ಪ್ರೀಮಿಯಮ್ಗೆ 35.03 ರೂ ಟ್ರಾನ್ಸಾಕ್ಷನ್ ಫೀ ಇರಲಿದೆ.
ಇದನ್ನೂ ಓದಿ: Thinking Hats IPO: ಬಂಡವಾಳ ಕೇಳಿದ್ದು 15 ಕೋಟಿ ರೂ , ಬಿಡ್ ಸಲ್ಲಿಕೆಯಾಗಿದ್ದು ಎರಡೂವರೆ ಸಾವಿರ ಕೋಟಿಗೂ ಹೆಚ್ಚು
ಕರೆನ್ಸಿ ಡಿರೈವೇಟಿವ್ಸ್ ಸೆಗ್ಮೆಂಟ್ನಲ್ಲಿ ಫ್ಯೂಚರ್ಸ್ ಕಾಂಟ್ರಾಕ್ಟ್ನಲ್ಲಿ ಒಂದು ಲಕ್ಷ ರೂ ಮೌಲ್ಯದ ಟ್ರೇಡಿಂಗ್ಗೆ 35 ಪೈಸೆ ಫೀ ಇರುತ್ತದೆ. ಆಪ್ಷನ್ಸ್ ಕಾಂಟ್ರಾಕ್ಟ್ನಲ್ಲಿ ಒಂದು ಲಕ್ಷರೂ ಮೌಲ್ಯದ ಪ್ರೀಮಿಯಮ್ಗೆ 31.10 ರೂ ಫೀ ಇರುತ್ತದೆ.
ಈ ಮೇಲಿನ ಬದಲಾವಣೆಗಳು ಅಕ್ಟೋಬರ್ 1, ಮಂಗಳವಾರದಿಂದ ಜಾರಿಗೆ ಬರಲಿವೆ. ಮಾರ್ಕೆಟ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗಳು ಏಕ ರೀತಿಯ ಶುಲ್ಕ ವ್ಯವಸ್ಥೆ ಹೊಂದಿರಬೇಕು ಎಂದು ಸೆಬಿ ಜುಲೈ ತಿಂಗಳಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿತ್ತು. ಸದ್ಯ, ಟ್ರೇಡಿಂಗ್ ಪ್ರಮಾಣ ಆಧಾರಿತ ಸ್ಲ್ಯಾಬ್ ಸಿಸ್ಟಂ ಪ್ರಕಾರ ವಹಿವಾಟು ಶುಲ್ಕ ನಡೆಸಲಾಗುತ್ತಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ