ಬಿರುಬೇಸಿಗೆ, ಅಕಾಲಿಕ ಮಳೆಗೆ ಆಲೂ ಬೆಳೆ ತತ್ತರ; ಬೆಳೆ ಏರಿಕೆಯ ನಿರೀಕ್ಷೆಯಲ್ಲಿ ವರ್ತಕರು

|

Updated on: May 14, 2024 | 12:50 PM

Potato prices in India: ಬಿರು ಬೇಸಿಗೆ ಮತ್ತು ಈಗ ಅಕಾಲಿಕ ಮಳೆಯಿಂದಾಗಿ ದೇಶಾದ್ಯಂತ ಆಲೂಗಡ್ಡೆ ಬೆಳೆ ಇಳಿವರಿ ಕಡಿಮೆ ಆಗಿದೆ. ಮಾರುಕಟ್ಟೆ ಬರಲಿರುವ ಆಲೂ ಆವಕ ಕಡಿಮೆ ಆಗಲಿದ್ದು, ಆಲೂಗಡ್ಡೆ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಆಲೂ ವರ್ತಕರು ಶೇ. 10ರಷ್ಟು ಬೆಲೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ದೇಶದಲ್ಲಿ ಅತಿಹೆಚ್ಚು ಆಲೂ ಬೆಳೆಯುವ ರಾಜ್ಯವಾದ ಉತ್ತರಪ್ರದೇಶದ ಸರ್ಕಾರ ಅಕ್ರಮ ಆಲೂ ಸಂಗ್ರಹಣೆ ತಪ್ಪಿಸಲು ಕ್ರಮ ಕೈಗೊಳ್ಳುತ್ತಿದೆ.

ಬಿರುಬೇಸಿಗೆ, ಅಕಾಲಿಕ ಮಳೆಗೆ ಆಲೂ ಬೆಳೆ ತತ್ತರ; ಬೆಳೆ ಏರಿಕೆಯ ನಿರೀಕ್ಷೆಯಲ್ಲಿ ವರ್ತಕರು
ಆಲೂಗಡ್ಡೆ
Follow us on

ನವದೆಹಲಿ, ಮೇ 14: ಕಳೆದ ಒಂದು ವರ್ಷದಿಂದ ಟೊಮೆಟೋ, ಈರುಳ್ಳಿ ಇತ್ಯಾದಿ ಅಗತ್ಯ ಆಹಾರವಸ್ತುಗಳ ಬೆಲೆ ಏರಿಕೆ ಸಮಸ್ಯೆ ಒಂದರ ಬಳಿಕ ಮತ್ತೊಂದಂತೆ ಎದುರಾಗುತ್ತಲೇ ಇದೆ. ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ (Onion rates) ತಹಬದಿಗೆ ಬರುತ್ತಿದೆ. ಟೊಮೆಟೋ ಬೆಲೆ (Tomato price) ಕೂಡ ಗಣನೀಯವಾಗಿ ಇಳಿದಿದೆ. ಇಂತಹ ಹೊತ್ತಿನಲ್ಲೇ ಆಲೂಗಡ್ಡೆ ಬೆಲೆ ಏರಿಕೆಯ ಚಿಂತೆ ಶುರುವಾಗಿದೆ. ದೇಶಾದ್ಯಂತ ಬಿರುಬೇಸಿಗೆಯ ಮಧ್ಯೆ ನಡೆಯುತ್ತಿರುವ ಅಕಾಲಿಕ ಮಳೆಯ ಪರಿಣಾಮವಾಗಿ ಆಲೂ ಬೆಳೆ ಇಳುವರಿ ಮೇಲೆ ಪರಿಣಾಮ ಬೀರುವ ಭೀತಿ ಇದೆ. ಆಲೂಗಡ್ಡೆ ವರ್ತಕರ ಪ್ರಕಾರ ಶೇ. 10ರಷ್ಟು ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ.

ಉತ್ತರಪ್ರದೇಶ ದೇಶದಲ್ಲೇ ಅತಿಹೆಚ್ಚು ಆಲೂಗಡ್ಡೆ ಬೆಳೆಯುವ ರಾಜ್ಯ. ಆಗ್ರಾದಲ್ಲಿರುವ ಶೀತ ಸಂಗ್ರಹಾಗಾರಗಳಲ್ಲಿ ಹೆಚ್ಚಿನ ಮೊತ್ತದ ಆಲೂಗಡ್ಡೆಯ ಅಕ್ರಮ ಸಂಗ್ರಹ ಮಾಡಲಾಗಿದೆಯಾ ಎಂಬುದನ್ನು ಆ ರಾಜ್ಯ ಸರ್ಕಾರ ಪರಿಶೀಲಿಸುವ ಕೆಲಸ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಆಲೂಗಡ್ಡೆ ಸರಾಗವಾಗಿ ಹರಿದಾಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಈ ವಾರವೂ ತರಕಾರಿ, ಹಣ್ಣುಗಳ ಬೆಲೆ ಏರಿಕೆ, ಯಾವುದಕ್ಕೆ ಎಷ್ಟಿದೆ ದರ? ಇಲ್ಲಿದೆ ವಿವರ

ಕರ್ನಾಟಕದಲ್ಲೂ ಆಲೂಗಡ್ಡೆ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮೊದಲಾದ ಕೆಲ ಜಿಲ್ಲೆಗಳಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿದೆ. ಅತಿ ಬೇಸಿಗೆ ಮತ್ತು ಅಕಾಲಿಕ ಮಳೆ ಆಲೂ ಬೆಳೆಯ ಉತ್ಪಾದನಾ ಪ್ರಮಾಣವನ್ನು ಕಡಿಮೆಗೊಳಿಸುವ ನಿರೀಕ್ಷೆ ಇದೆ. ಅಲ್ಲದೇ ರಾಜ್ಯದಲ್ಲಿ ವರ್ಷದಲ್ಲಿ ಒಮ್ಮೆ ಮಾತ್ರವೇ ಆಲೂ ಬೆಳೆಯುವುದು. ಅದೂ ಏಪ್ರಿಲ್​ನಿಂದ ಸೆಪ್ಟಂಬರ್​​ವರೆಗಿನ ಮುಂಗಾರು ಸೀಸನ್​ನಲ್ಲಿ ಆಲೂ ಬೆಳೆಯಲಾಗುತ್ತದೆ. ಇದು ಇಲ್ಲಿಯ ಮಾರುಕಟ್ಟೆಯಲ್ಲಿ ಆಲೂ ಬೆಲೆ ಏರಿಕೆಗೆ ದಾರಿ ಮಾಡಿಕೊಡಬಹುದು.

ಆರ್ಥಿಕ ಓಟವನ್ನು ಜಗ್ಗುತ್ತಿರುವ ಆಹಾರ ವಸ್ತುಗಳು

ಭಾರತದಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲೆಂದು ಬಡ್ಡಿದರವನ್ನು ಅಧಿಕ ಮಟ್ಟದಲ್ಲಿ ಮುಂದುವರಿಸಲಾಗುತ್ತಿದೆ. ಹಣದುಬ್ಬರ ದರ ಇಳಿಕೆಯ ಟ್ರೆಂಡ್​ಗೆ ಬಂದಲ್ಲಿ ಬಡ್ಡಿದರ ಕಡಿತಗೊಳಿಸಿ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಕೊಡುವುದು ಆರ್​ಬಿಐ ಎಣಿಕೆ. ಇದಾಗಬೇಕೆಂದರೆ ಹಣದುಬ್ಬರ ಇಳಿಯಬೇಕು. ಇದು ಇನ್ನೂ ಮೇಲ್ಮಟ್ಟದಲ್ಲೇ ಇದೆ. ಅದಕ್ಕೆ ಪ್ರಮುಖ ಕಾರಣವಾಗಿರುವುದು ಆಹಾರವಸ್ತುಗಳ ಬೆಲೆ.

ಇದನ್ನೂ ಓದಿ: ಮಂಗಳೂರು, ಉಡುಪಿಯಲ್ಲಿ 60 ರೂ. ತಲುಪಿದ ಎಳನೀರು ದರ: ಪೂರೈಕೆ ಕೊರತೆಯಿಂದ ವ್ಯಾಪಾರಿಗಳು ಕಂಗಾಲು

ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಇತ್ಯಾದಿ ಆಹಾರವಸ್ತುಗಳ ಬೆಲೆ ಹೆಚ್ಚಿನ ಮಟ್ಟದಲ್ಲೇ ಇರುವುದು ಹಣದುಬ್ಬರ ಇಳಿಕೆಗೆ ಹಿನ್ನಡೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ