PF Bonus Scheme: 20 ವರ್ಷಕ್ಕಿಂತ ಹೆಚ್ಚು ಕಾಲ ಭವಿಷ್ಯ ನಿಧಿ ಕಟ್ಟಿದ್ದರೆ ನೀವು ಬೋನಸ್ ಹಣ​ ಪಡೆಯಬಹುದು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಇಲ್ಲೊಂದು ವಾಸ್ತವದ ದರ್ಶನವಾಗಬೇಕಿದೆ. ಎನಂದ್ರೆ ಕಳೆದ 2-3 ದಶಕಗಳಲ್ಲಿ ಉದ್ಯೋಗಿಗಳು ಒಂದು ಕಡೆ ನಿಲ್ಲುತ್ತಿಲ್ಲ. ತಿಂಗಳೊಂದಕ್ಕೆ ಎಂಬಂತೆ ಕೆಲಸ ಬಿಡುತ್ತಾ, ಮತ್ತೊಂದು-ಮಗದೊಂದು ಕಂಪನಿಗೆ ಜಂಪ್ ಆಗುತ್ತಿರುತ್ತಾರೆ. ಹೀಗಿರುವಾಗ ಬೋನಸ್ ಪಡೆಯಲು ಸುದೀರ್ಘವಾಗಿ 20 ವರ್ಷ ಉದ್ಯೋಗವನ್ನು ಪೂರೈಸುವುದು ಹಾಗಿರಲಿ. ಕನಿಷ್ಟ 5 ವರ್ಷ ಪೂರೈಸಿ ಬೋನಸ್ ಪಡೆಯುವುದು ಕಷ್ಟದ ಮಾತೇ ಸರಿ ಅಲ್ಲವಾ? ಆದರೆ ಇಲ್ಲೊಂದು ಸರಳೋಪಾಯವಿದೆ.

PF Bonus Scheme: 20 ವರ್ಷಕ್ಕಿಂತ ಹೆಚ್ಚು ಕಾಲ ಭವಿಷ್ಯ ನಿಧಿ ಕಟ್ಟಿದ್ದರೆ ನೀವು ಬೋನಸ್ ಹಣ​ ಪಡೆಯಬಹುದು ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಭವಿಷ್ಯ ನಿಧಿಯಿಂದ ನೀವು ಬೋನಸ್ ಹಣ​ ಪಡೆಯಬಹುದು! ಹೇಗೆ?
Follow us
|

Updated on:May 14, 2024 | 11:46 AM

ನಿವೃತ್ತಿಯ ನಂತರ ನಮ್ಮ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ನಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಸ್ವಲ್ಪ ಮೊತ್ತ ಕಡಿತ ಆಗುತ್ತದೆ. ನೌಕರಿ ಮಾಡುವಾಗ ಕಡಿತವಾಗುವ ಮೊತ್ತವನ್ನು ನಾವು ನಿವೃತ್ತಿಯ ನಂತರ ಪಡೆಯಬಹುದು. ಆದರೆ ನೀವು ಇಲಾಖೆಯು ಸೂಚಿಸಿರುವ ಕೆಲವು ಷರತ್ತುಗಳನ್ನು ಪೂರೈಸಿದ್ದರೆ ನೀವು ಬರೋಬ್ಬರಿ 50,000 ರೂಪಾಯಿ ಬೋನಸ್ ಹಣವನ್ನು ಪಡೆಯುತ್ತೀರಿ. ಹಾಗಾದರೆ ಷರತ್ತುಗಳ ಬಗ್ಗೆ ತಿಳಿಯೋಣ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (Employees’ Provident Fund Organisation) ದೇಶದ ನಾನಾ ಮೂಲೆಗಳಲ್ಲಿ ನೌಕರಿಯಲ್ಲಿರುವವರಿಗೆ ನಿವೃತ್ತಿಯ ನಂತರ ಅವರಿಗೆ ಜೀವನೋಪಾಯವಾಗಲಿ ಎಂದು ನೌಕರರು ಉದ್ಯೋಗ ಮಾಡುವಾಗ ಅವರ ಸಂಬಳದಲ್ಲಿ ಪ್ರತಿ ತಿಂಗಳು ಒಂದಷ್ಟು ಮೊತ್ತವನ್ನು ಕಟ್ಟಿಸಿಕೊಂಡು ಕಾಲಾಂತರದಲ್ಲಿ ಅವರಿಗೆ ಅದನ್ನು ಬಡ್ಡಿ ಸಮೇತ ಭದ್ರವಾಗಿ ವಾಪಸು ನೀಡುತ್ತದೆ. ಒಂದು ವೇಳೆ ಅವರು ಮೃತಪಟ್ಟರೆ ಅವರ ನಾಮಿನಿಗೆ ಉಳಿದ ಮೊತ್ತವನ್ನು ಕೊಡಮಾಡುತ್ತದೆ. ಇದು ನೌಕರರ ಭವಿಷ್ಯದ ದೃಷ್ಟಿಯಿಂದ 1952 ರ ಉದ್ಯೋಗಿಗಳ ಭವಿಷ್ಯ ನಿಧಿ ಕಾಯ್ದೆಯಡಿ (Employees’ Provident Fund -EPF) ಕೇಂದ್ರ ಸರ್ಕಾರವು ಕಲ್ಪಿಸುವ ಭದ್ರತೆಯಾಗಿದೆ. ಈ ಲೆಕ್ಕಾಚಾರದಲ್ಲಿ ಯಾವುದೇ ಉದ್ಯೋಗಿ ಗರಿಷ್ಠ 35 ವರ್ಷ ಕೆಲಸ ಮಾಡುತ್ತಾ ಭವಿಷ್ಯ ನಿಧಿಯ ಚಂದಾದಾರರಾಗಬಹುದು. ಕನಿಷ್ಟವಾಗಿ, ಈ ಹಿಂದೆ 3 ತಿಂಗಳು ಕೆಲಸದಲ್ಲಿ ಇರಬೇಕು ಎಂಬ ಷರತ್ತು ಇತ್ತು. ಆದರೆ ಅದನ್ನು ಇತ್ತೀಚೆಗೆ ಉದ್ಯೋಗಿ ಒಂದೇ ಒಂದು ತಿಂಗಳ ಸಂಬಳ ಪಡೆದಿದ್ದರೂ ಭವಿಷ್ಯ ನಿಧಿ ಹಣ ಪಡೆಯಬಹುದು ಎಂದು ಕಾನೂನು ತಿದ್ದಪಡಿ ತರಲಾಗಿದೆ.

ಅಂದರೆ ಉದ್ಯೋಗಿಗಳ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ 2021ನೇ ಆರ್ಥಿಕ ಸಾಲಿನಲ್ಲಿ ಇಂತಹ ಸರಳ ಕಾನೂನು ನಿಯಮಗಳನ್ನು (PF Bonus Scheme 2021) ರಚಿಸಲಾಗಿದೆ. ಅಂದರೆ ಉದ್ಯೋಗಿಗಳು ತಮ್ಮ ಸಂಬಳದಲ್ಲಿ ಪ್ರತಿ ತಿಂಗಳೂ ಇಂತಿಷ್ಟು ಹಣ ಕಟ್ಟುವುದರ ಮೂಲಕ ಕಾಲಾಂತರದಲ್ಲಿ ಅದನ್ನು ಸಂಸ್ಥೆಯಿಂದ ವಾಪಸ್​ ಪಡೆಯಬಹುದಾಗಿದೆ. ಅದಕ್ಕೆ ಬಹುತೇಕ ಮಂದಿ ತಿಳಿದಿರುವಂತೆ ಬಡ್ಡಿಯನ್ನು ಸೇರಿಸಿ ವಾಪಸ್​ ಕೊಡಲಾಗುತ್ತದೆ. ಆದರೆ ಉದ್ಯೋಗಿಗಳ ಈ ಭವಿಷ್ಯ ನಿಧಿ ಮೊತ್ತಕ್ಕೆ ಸಂಸ್ಥೆಯೂ ಇನ್ನೂ ಒಂದು ಲೆಕ್ಕಾಚಾರ ಹಾಕಿ ಬಡ್ಡಿಯ ಜೊತೆಗೆ ಹೆಚ್ಚುವರಿಯಾಗಿ ಬೋನಸ್ ಹಣವನ್ನೂ ಕೊಡುತ್ತದೆ. ಅಂದರೆ ​ಭವಿಷ್ಯ ನಿಧಿ ಪ್ಲಸ್​ ಬಡ್ಡಿಯ ಜೊತೆಗೆ ಬೋನಸ್​ ಹಣವನ್ನೂ (bonus) ಕೊಡುತ್ತದೆ ಸಂಸ್ಥೆ. ಹಾಗಂತ ಈ ಬೋನಸ್​ ಹಣವನ್ನು ಎಲ್ಲರಿಗೂ ಕೊಡುವುದಿಲ್ಲ.

ಅದೇ ಭವಿಷ್ಯ ನಿಧಿ ಪ್ಲಸ್​ ಬಡ್ಡಿ ಹಣವನ್ನು ಸಂಸ್ಥೆಯು ಎಲ್ಲರಿಗೂ ಕೊಡಮಾಡುತ್ತದೆ. ಅದೇ ಬೋನಸ್​ ಬೇಕು ಅಂದರೆ ನೌಕರರ ಕಡೆಯಿಂದ ಒಂದಷ್ಟು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಅಂದರೆ ಭವಿಷ್ಯ ನಿಧಿ ಪ್ಲಸ್​ ಬಡ್ಡಿ ಹಣವನ್ನು ಯಾವುದೇ ನೌಕರರು ಯಾವಾಗ ಬೇಕಾದರೂ ಪಡೆಯಬಹುದು. ಅದನ್ನ ಪಡೆಯಬೇಕು ಅಂದರೆ ನಿರ್ದಿಷ್ಟವಾಗಿ ಮಿನಿಮಮ್​ 5 ವರ್ಷ ಸೇವೆಯನ್ನು ಪೂರೈಸಿರಬೇಕು. ಗರಿಷ್ಟವಾಗಿ 20 ವರ್ಷ ಕಾಲ EPFO ಸಂಸ್ಥೆಯಲ್ಲಿ ಚಂದಾದಾರರಾಗಿರಬೇಕು (EPFO subscribers). ಮೇಲೆ ಹೇಳಿದಂತೆ ಯಾವುದೇ ನೌಕರರು ಗರಿಷ್ಟವಾಗಿ 35 ವರ್ಷ ಕಾಲ ಸಂಸ್ಥೆಯ ಚಂದಾದಾರಿಕೆ ಪಡೆದಿರಬಹುದು. ಆದರೆ ಅಂತಹವರಿಗೆ ಬೋನಸ್​ ಹಣವನ್ನು ನೀಡುವಾಗ ಗರಿಷ್ಟ 20 ವರ್ಷಕ್ಕೆ ಮಾತ್ರವೇ ಲೆಕ್ಕ ಹಾಕಲಾಗುತ್ತದೆ. ಅಲ್ಲಿಗೆ ಉಳಿದ 15 ವರ್ಷಗಳ ಹೆಚ್ಚುವರಿ ಚಂದಾದಾರಿಕೆಯನ್ನು ಬೋನಸ್​​ಗೆ ಪರಿಗಣಿಸಲಾಗುವುದಿಲ್ಲ.

ಇಲ್ಲೊಂದು ವಾಸ್ತವದ ದರ್ಶನವಾಗಬೇಕಿದೆ. ಎನಂದ್ರೆ ಕಳೆದ 2-3 ದಶಕಗಳಲ್ಲಿ ಉದ್ಯೋಗಿಗಳು ಒಂದು ಕಡೆ ನಿಲ್ಲುತ್ತಿಲ್ಲ. ತಿಂಗಳೊಂದಕ್ಕೆ ಎಂಬಂತೆ ಕೆಲಸ ಬಿಡುತ್ತಾ, ಮತ್ತೊಂದು-ಮಗದೊಂದು ಕಂಪನಿಗೆ ಜಂಪ್ ಆಗುತ್ತಿರುತ್ತಾರೆ. ಹೀಗಿರುವಾಗ ಬೋನಸ್ ಪಡೆಯಲು ಸುದೀರ್ಘವಾಗಿ 20 ವರ್ಷ ಉದ್ಯೋಗವನ್ನು ಪೂರೈಸುವುದು ಹಾಗಿರಲಿ. ಕನಿಷ್ಟ 5 ವರ್ಷ ಪೂರೈಸಿ ಬೋನಸ್ ಪಡೆಯುವುದು ಕಷ್ಟದ ಮಾತೇ ಸರಿ ಅಲ್ಲವಾ? ಆದರೆ ಇಲ್ಲೊಂದು ಸರಳೋಪಾಯವಿದೆ. ಏನಂದ್ರೆ ತಾವು ಮೊದಲ ಬಾರಿಗೆ ಪಡೆದ UAN ಸಂಖ್ಯೆಯನ್ನು (EPF account) ಕೊನೆಯವರೆಗೂ ಉಳಿಸಿಕೊಳ್ಳಬೇಕು. ಅಂದರೆ ಅದೇ ಖಾತೆ ಸಂಖ್ಯೆಗೆ ಮಾಸಿಕ ಭವಿಷ್ಯ ನಿಧಿಯನ್ನು ತುಂಬುತ್ತಾ ಹೋಗಬೇಕು. ಅಂದರೆ ನಿರಂತರವಾಗಿ ಉದ್ಯೋಗದಲ್ಲಿರುವುದು ಕಡ್ಡಾಯ.

ಅಲ್ಲಿಗೆ ಕನಿಷ್ಠ 5 ವರ್ಷದಿಂದ 20 ವರ್ಷ ಕಾಲ ನೀವು ನಿಷ್ಠೆಯಿಂದ ನಿಮ್ಮ PF ಹಣವನ್ನು ಕಟ್ಟುತ್ತಾ ಇದ್ದರೆ EPFO ಸಂಸ್ಥೆ ಲಾಯಲ್ಟಿ ಬೋನಸ್​​ ನೀಡುತ್ತದೆ. ಈ 5 ರಿಂದ 20 ವರ್ಷ ನಡುವಣ ಸೇವಾ ಅವಧಿಯನ್ನು ಪರಿಗಣಿಸಿ ಸಂಸ್ಥೆಯು ನಿಮ್ಮ ಬೋನಸ್​ ಮೊತ್ತವನ್ನು ಲೆಕ್ಕಹಾಕುತ್ತದೆ.

ಇದರ ಹೊರತಾಗಿ EPFO ಸಂಸ್ಥೆಯು ತನ್ನ ಚಂದಾದಾರಿಗೆ ಅಂದರೆ ನೌಕರರಿಗೆ ಇನ್ನೂ ಒಂದು ಸವಲತ್ತು ಕಲ್ಪಿಸುತ್ತದೆ. ಏನಂದರೆ ಯಾವುದೇ ಉದ್ಯೋಗಿ ಕೆಲಸದಲ್ಲಿರುವಾಗ ಅಂಗವೈಕಲ್ಯ ಅನುಭವಿಸಿದರೆ ಅಂದರೆ ಫಿಸಿಕಲಿ ಹ್ಯಾಂಡಿಕ್ಯಾಪ್ಡ್​ ಆದಾಗ ಅಂತಹವರಿಗೆ ಬೇರೆಯದ್ದೇ ಲೆಕ್ಕಾಚಾರದಲ್ಲಿ ಲಾಯಲ್ಟಿ ಬೋನಸ್​​ ಕಲ್ಪಿಸುತ್ತದೆ.

ಈ ಈ ಸಾಮಾನ್ಯ ಬೋನಸ್ ಅನ್ನು ಪಿಂಚಣಿ ಯೋಜನೆಯಡಿ ನಿಗದಿಪಡಿಸಿದ ಆಯಾ ಸೇವಾ ವರ್ಷಗಳಿಗೆ ಅನುಗುಣವಾಗಿ ನೀಡಲಾಗುತ್ತದೆ. ಜೊತೆಗೆ, ಮೂಲ ವೇತನ ಆಧಾರದಲ್ಲಿಯೂ ಲೆಕ್ಕ ಹಾಕಲಾಗುತ್ತದೆ. ಈ ಬೋನಸ್ ಅನ್ನು ನಿಮ್ಮ ಸೇವಾ ಅವಧಿಗೆ ಸೇರಿಸಿದರೆ, ಇದು ನೀವು ಸ್ವೀಕರಿಸಲು ಅರ್ಹರಾಗಿರುವ ಪಿಂಚಣಿ ಮೊತ್ತವನ್ನು ಹೆಚ್ಚಿಸುತ್ತದೆ ಎಂಬ ಸರಳ ಲೆಕ್ಕಾಚಾರ ಅರಿತುಕೊಳ್ಳಿ. ಇನ್ನು ಈ ಬೋನಸ್​​ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಅಂದರೆ ನೀವು ಗಳಿಸುವ ಬೋನಸ್ ಹಣಕ್ಕೆ ತೆರಿಗೆ ಕಟ್ಟಬೇಕಿಲ್ಲ; ಬದಲಿಗೆ ನೀವು ಹೆಚ್ಚುವರಿ ತೆರಿಗೆ ವಿನಾಯಿತಿ ಪ್ರಯೋಜನ ಪಡೆಯಲು ಸಾಧ್ಯವಿದೆ.

PF Bonus Scheme 2021: ಈ ಯೋಜನೆಯ ಪ್ರಯೋಜನ/ ಉದ್ದೇಶ ಏನು?

ಹೂಡಿಕೆ ಮಾಡಲು ಪ್ರೋತ್ಸಾಹ – ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಪ್ರೋತ್ಸಾಹ ನೀಡುವುದು ಮೂಲ ಉದ್ದೇಶ ಆಗಿದೆ. ನಿರಂತರವಾಗಿ ಹೂಡಿಕೆ ಮಾಡಿದವರಿಗೆ ಹೆಚ್ಚಿನ ಮಾನ್ಯತೆ ಇರುವುದರಿಂದ ಎಲ್ಲರೂ ಪಿಎಫ್ ಖಾತೆಯಲ್ಲಿ ಹೆಚ್ಚು ಹೂಡಿಕೆ ಮಾಡಲು ಮುಂದಾಗುತ್ತಾರೆ.

ಇಪಿಎಸ್ ಅಡಿಯಲ್ಲಿ ಪಿಂಚಣಿ ಲೆಕ್ಕಾಚಾರದ ಉದ್ದೇಶಕ್ಕಾಗಿ, 6 ತಿಂಗಳಿಗಿಂತ ಕಡಿಮೆ ಸೇವಾ ಅವಧಿಯನ್ನು ನಿರ್ಲಕ್ಷಿಸಲಾಗುತ್ತದೆ. ಅದೇ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಸೇವೆಯಲ್ಲಿದ್ದರೆ ಆ ಅವಧಿಯನ್ನು ಪೂರ್ಣ ವರ್ಷವಾಗಿ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಗಮನಿಸಿ. ಒಬ್ಬ ವ್ಯಕ್ತಿಯು 19 ವರ್ಷ ಮತ್ತು 8 ತಿಂಗಳು ಕೆಲಸ ಮಾಡಿದ್ದಾನೆ ಎಂದು ಭಾವಿಸೋಣ, ಆಗ ಆ ನೌಕರ 20 ವರ್ಷಗಳ ಕಾಲ ಕೆಲಸ ಮಾಡಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಅದೇ ಕೆಲಸದ ಅವಧಿಯು 19 ವರ್ಷ ಮತ್ತು 4 ತಿಂಗಳುಗಳಾಗಿದ್ದರೆ, ಪಿಂಚಣಿ ಲೆಕ್ಕಾಚಾರಕ್ಕೆ 19 ವರ್ಷವನ್ನಷ್ಟೇ ತೆಗೆದುಕೊಳ್ಳಲಾಗುತ್ತದೆ – 20 ವರ್ಷವನ್ನಲ್ಲ. ಗಮನಿಸಿ ಉದ್ಯೋಗಿ ಬೋನಸ್‌ಗೆ ಅರ್ಹರಾಗಲು ಕನಿಷ್ಠ 20 ವರ್ಷಗಳ ಸೇವೆಯನ್ನು ಸಲ್ಲಿಸದಿರುವುದು ಇದಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ಆರಂಭದಲ್ಲಿ ಅನುಮಾನ! ಕಾಲಾಂತರದಲ್ಲಿ ಗಟ್ಟಿಯಾಗಿ ನೆಲೆಯೂರಿದ EVMಗಳ ಯಶಸ್ಸಿನ ಕತೆ: ಏನಿದರ ಬೆಳವಣಿಗೆಯ ರಹಸ್ಯ?

ಇಲ್ಲಿ ಇನ್ನೂ ಒಂದು ಲೆಕ್ಕಾಚಾರವಿದೆ. 20 ವರ್ಷಗಳ ಸೇವಾವಧಿಯಲ್ಲಿ ಉದ್ಯೋಗಿ ಮಧ್ಯೆ ನಾಲ್ಕಾರು ವರ್ಷ ಕಾಲ ಭವಿಷ್ಯ ನಿಧಿಗೆ ಹಣ ಕಟ್ಟಿಲ್ಲ ಎಂದರೆ ಆ ನಾಲ್ಕಾರು ವರ್ಷಗಳ ಅವಧಿಯನ್ನು ತೆಗೆದುಹಾಕಿ ಉಳಿದ ಅವಧಿಗೆ ಬೋನಸ್ ವರ್ಷಗಳನ್ನು ಪರಿಗಣಿಸಲಾಗುತ್ತದೆ. ​

ನೀವು ಉದ್ಯೋಗ ಸಲ್ಲಿಸಿದ ವರ್ಷಗಳು ನಿಮ್ಮ ಬೋನಸ್ ಎಣಿಕೆಗೆ ಹೇಗೆ ಸಹಾಯಕವಾಗುತ್ತದೆ ಎಂಬುದರ ಲೆಕ್ಕಾಚಾರ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಸಹ ನೋಡಬಹುದು.

ಬೋನಸ್‌ಗೆ ಅರ್ಹವಾಗುವ ಉದ್ಯೋಗಿ ತಮ್ಮ ಸೇವಾವಧಿಗೆ ತಕ್ಕಂತೆ ಬೋನಸ್ ಮೊತ್ತವನ್ನು ಪಡೆಯುತ್ತಾರೆ. ಅದು ಪಿಂಚಣಿ ಮೊತ್ತಕ್ಕೆ ಸೇರಿಕೊಂಡು ಒಟ್ಟು ಪಿಂಚಣಿ ಮೊತ್ತವನ್ನು ಮತ್ತಷ್ಟು ಹೆಚ್ಚಿಸುತ್ತದೆ.

EPFO ನ ಚಂದಾದಾರರು 20 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಯೋಜನೆಗೆ ಕೊಡುಗೆ ನೀಡಿದ್ದರೆ ನಿವೃತ್ತಿಯ ಸಮಯದಲ್ಲಿ 50,000 ರೂ ವರೆಗೆ ಗರಿಷ್ಠ ಲಾಯಲ್ಟಿ ಬೋನಸ್​​ ಅನ್ನು ಪಡೆಯುತ್ತಾರೆ. ಗಮನಿಸಿ ಸದಸ್ಯರು 20 ವರ್ಷಕ್ಕಿಂತ ಕಡಿಮೆ ಕಾಲ ದೇಣಿಗೆ ಕಟ್ಟಿದ್ದರೂ ಸಹ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ 50 ಸಾವಿರ ರೂಪಾಯಿಯ ಗರಿಷ್ಠ ಬೋನಸ್​​ ಪ್ರಯೋಜನವನ್ನು ಒದಗಿಸಲಾಗುವುದು ಎನ್ನುತ್ತದೆ ಇಪಿಎಫ್‌ಒ ಮಂಡಳಿ. ಆದಾಗ್ಯೂ, ಹೆಚ್ಚುವರಿ ಬೋನಸ್‌ಗಾಗಿ ಮೊತ್ತವನ್ನು ನಿರ್ಧರಿಸುವ ನಿಯಮಗಳು ಒಂದೇ ಆಗಿರುತ್ತವೆ. ಅಂದರೆ, ಅವರ ಬೋನಸ್ ಅನ್ನು ಮೂಲ ವೇತನಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.

ಸರಾಸರಿ ಮೂಲ ವೇತನ ರೂ 5,000 ವರೆಗೆ ಇರುವ ಸದಸ್ಯರು 30,000 ರೂಗಳ ಲಾಯಲ್ಟಿ ಬೋನಸ್​​ ಪ್ರಯೋಜನವನ್ನು ಪಡೆಯುತ್ತಾರೆ. ಅದೇ ರೀತಿ, ರೂ 5,001-10,000 ವೇತನ ಹೊಂದಿರುವ ಸದಸ್ಯರು ರೂ 40,000 ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ. ಅದೇ 10,000 ರೂಪಾಯಿಗಿಂತ ಹೆಚ್ಚು ಮಾಸಿಕ ವೇತನವನ್ನು ಪಡೆಯುವ ಎಲ್ಲಾ ಸದಸ್ಯರು ಈ ಯೋಜನೆಯಡಿ ಗರಿಷ್ಠ 50,000 ರೂ ಲಾಯಲ್ಟಿ ಬೋನಸ್​​ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ.

ಕೊನೆಯ ಲೆಕ್ಕಾಚಾರ: ಇಪಿಎಫ್‌ಒ ಸಂಸ್ಥೆಯು ಕೊಡಮಾಡುವ ಈ ಬೋನಸ್​ ಮೊತ್ತ ಅಂದ್ರೆ ಲಾಯಲ್ಟಿ ಕಮ್ ಲೈಫ್ ಬೆನಿಫಿಟ್, ಪಿಎಫ್ ಚಂದಾದಾರರಿಗೆ 50,000 ರೂ.ವರೆಗಿನ ನೇರ ಬೋನಸ್ ಗಳಿಸುವ ಮೂಲಕ ತಮ್ಮ ನಿವೃತ್ತಿಯ ಉಳಿತಾಯವನ್ನು ಹೆಚ್ಚಿಸಲು ಅಮೂಲ್ಯವಾದ ಅವಕಾಶವನ್ನು ಒದಗಿಸುತ್ತದೆ. ಎರಡು ದಶಕಗಳ ಕಾಲ ತಮ್ಮ EPF ಖಾತೆಗಳಿಗೆ ನಿರಂತರ ಕೊಡುಗೆಗಳನ್ನು ನಿರ್ವಹಿಸುವ ಮೂಲಕ, ಚಂದಾದಾರರು ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಾರೆ. ಮತ್ತು ಈ ನಿರಂತರ ಪಾವತಿಯಿಂದಾಗಿ ಬೋನಸ್​​​​ಗೆ ಅರ್ಹರಾಗುತ್ತಾರೆ. ಎಲ್ಲಾ ಪಿಎಫ್ ಖಾತೆದಾರರು ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಇಪಿಎಫ್‌ಒ ಲಾಯಲ್ಟಿ ಕಮ್ ಲೈಫ್ ಬೆನಿಫಿಟ್ ಸ್ಕೀಮ್ ಅಡಿ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಈಗಿಂದಲೇ ಪ್ಲಾನ್​ ಮಾಡುವುದು ಅತ್ಯಗತ್ಯ. ತನ್ಮೂಲಕ ನಿವೃತ್ತಿಯ ನಂತರದ ಆರ್ಥಿಕ ಭವಿಷ್ಯವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಬಹುದಾಗಿದೆ.

Published On - 11:44 am, Tue, 14 May 24

ತಾಜಾ ಸುದ್ದಿ