2023-24ರಲ್ಲಿ ಸರ್ಕಾರಿ ಉದ್ದಿಮೆಗಳ ಒಟ್ಟು ಲಾಭ 5 ಲಕ್ಷ ಕೋಟಿ ರೂ; ಹೊಸ ಮೈಲಿಗಲ್ಲು

|

Updated on: Jun 13, 2024 | 12:52 PM

PSU sector shining with great profit: ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ನಷ್ಟದ ಹೊರೆಯನ್ನು ಇಳಿಸಿಕೊಂಡು ಭರ್ಜರಿ ಲಾಭ ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ 92 ಪಿಎಸ್​ಯು ಕಂಪನಿಗಳು 2023-24ರಲ್ಲಿ ಗಳಿಸಿದ ನಿವ್ವಳ ಲಾಭ 5.3 ಲಕ್ಷ ಕೋಟಿ ರೂ ಆಗಿದೆ. ಪಿಎಸ್​ಯು ಸಂಸ್ಥೆಗಳು ಈ ಮೈಲಿಗಲ್ಲು ಮುಟ್ಟಿದ್ದು ಇದೇ ಮೊದಲೆನ್ನಲಾಗಿದೆ. ಮೂರು ವರ್ಷಗಳ ಹಿಂದೆ ನಷ್ಟದ ಪಿಎಸ್​ಯು ಕಂಪನಿಗಳು 16 ಇದ್ದವು. ಈಗ ಅದು 9ಕ್ಕೆ ಇಳಿದಿದೆ.

2023-24ರಲ್ಲಿ ಸರ್ಕಾರಿ ಉದ್ದಿಮೆಗಳ ಒಟ್ಟು ಲಾಭ 5 ಲಕ್ಷ ಕೋಟಿ ರೂ; ಹೊಸ ಮೈಲಿಗಲ್ಲು
ಕಲ್ಲಿದ್ದಲು ಗಣಿಗಾರಿಕೆ
Follow us on

ನವದೆಹಲಿ, ಜೂನ್ 13: ಹಿಂದೆಲ್ಲಾ ಸರ್ಕಾರಿ ಉದ್ದಿಮೆಗಳೆಂದರೆ ನಷ್ಟದ ಕೂಪಗಳೆಂದು ಪರಿಗಣಿಸಲಾಗಿತ್ತು. ಈಗ ಬದಲಾಗಿದೆ. ಬಹಳಷ್ಟು ಪಬ್ಲಿಕ್ ಸೆಕ್ಟರ್ ಕಂಪನಿಗಳು ಒಳ್ಳೆಯ ಲಾಭ ಮಾಡುತ್ತಿವೆ. 2023-24ರ ಹಣಕಾಸು ವರ್ಷದಲ್ಲಿ ಪಿಎಸ್​ಯು ಕಂಪನಿಗಳ ಒಟ್ಟೂ ನಿವ್ವಳ ಲಾಭ 5 ಲಕ್ಷ ಕೋಟಿ ರೂ ಗಡಿ ದಾಟಿದೆ. ಯಾವುದೇ ವರ್ಷದಲ್ಲಿ ಇಷ್ಟು ಪ್ರಮಾಣದಲ್ಲಿ ಸರ್ಕಾರಿ ಸಂಸ್ಥೆಗಳು ಲಾಭ ಮಾಡಿದ್ದು ಇದೇ ಮೊದಲು. ಐದು ಲಕ್ಷ ಕೋಟಿ ರೂ ಲಾಭದ ಮೈಲಿಗಲ್ಲನ್ನು ಇದೇ ಮೊದಲ ಬಾರಿಗೆ ಮುಟ್ಟಲಾಗಿದೆ.

ಬಹಳ ಯೋಜಿತ ರೀತಿಯಲ್ಲಿ ಪಿಎಸ್​ಯು ಕಂಪನಿಗಳನ್ನು ನಿರ್ವಹಿಸುತ್ತಿರುವುದು ಈ ಲಾಭಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ನಷ್ಟ ಕಾಣುವ ಘಟಕಗಳನ್ನು ಕೈಬಿಡಲಾಗುತ್ತಿರುವುದರಿಂದ ನಷ್ಟದ ಹೊರೆ ತಗ್ಗಿದೆ.

ಇದನ್ನೂ ಓದಿ: ಭಾರತದ ಹಣದುಬ್ಬರ ಶೇ. 4.75ಕ್ಕೆ ಇಳಿಕೆ; ಬಡ್ಡಿದರ ಕಡಿತಕ್ಕೆ ಮನಸು ಮಾಡುತ್ತಾ ಆರ್​ಬಿಐ?

ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ 92 ಪಬ್ಲಿಕ್ ಸೆಕ್ಟರ್ ಸಂಸ್ಥೆಗಳು 2023-24ರ ಹಣಕಾಸು ವರ್ಷದಲ್ಲಿ ಒಟ್ಟು ಗಳಿಸಿದ ನಿವ್ವಳ ಲಾಭ 5.3 ಲಕ್ಷ ಕೋಟಿ ರೂ ಆಗಿದೆ. ಹಿಂದಿನ ವರ್ಷಕ್ಕೆ ಹೋಳಿಸಿದರೆ ಲಾಭದಲ್ಲಿ ಶೇ. 44ರಷ್ಟು ಹೆಚ್ಚಳವಾಗಿದೆ. ಅಚ್ಚರಿ ಎಂದರೆ, ಆದಾಯದಲ್ಲಿ ತುಸು ಇಳಿಮುಖವಾದರೂ ಲಾಭ ಮಾತ್ರ ಗಣನೀಯವಾಗಿ ಹೆಚ್ಚಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ವಾರ್ಷಿಕ ಶೇ. 34.5ರ ದರದಲ್ಲಿ ಲಾಭ ಹೆಚ್ಚಳ ಆಗುತ್ತಿರುವುದು ಗಮನಾರ್ಹ ಸಂಗತಿ.

ಪಿಎಸ್​ಯು ಸೆಕ್ಟರ್​ನಲ್ಲಿ ಪ್ರಮುಖವಾಗಿ ಒಎನ್​ಜಿಸಿ, ಕೋಲ್ ಇಂಡಿಯಾ, ಐಒಸಿಎಲ್, ಎಸ್​ಬಿಐ ಮೊದಲಾದ ಸಂಸ್ಥೆಗಳು ಕಳೆದ ಹಣಕಾಸು ವರ್ಷದಲ್ಲಿ ದಾಖಲೆಯ ಲಾಭ ತೋರಿವೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2023-24ರಲ್ಲಿ ಬರೋಬ್ಬರಿ 61,077 ಕೋಟಿ ರೂ ನಿವ್ವಳ ಲಾಭ ತೋರಿದೆ. ಒಎನ್​ಜಿಸಿ 49,221 ಕೋಟಿ ರೂ ಲಾಭ ಕಂಡಿದೆ. ಎಚ್​ಪಿಸಿಎಲ್, ಎಂಆರ್​ಪಿಎಲ್ ಸಂಸ್ಥೆಗಳ ಲಾಭವೂ ಉತ್ತಮವಾಗಿದೆ. ಒಟ್ಟಾರೆ ಹೆಚ್ಚಿನ ಪಿಎಸ್​ಯು ಕಂಪನಿಗಳು ಕಳೆದ ಹಣಕಾಸು ವರ್ಷದಲ್ಲಿ ದಾಖಲೆಯ ಲಾಭ ಕಂಡಿರುವುದು ಮಾತ್ರವಲ್ಲ, ಮುಂದಿನ ಕೆಲ ವರ್ಷಗಳಿಗೆ ಇದೇ ಟ್ರೆಂಡ್ ಮುಂದುವರಿಯುವ ನಿರೀಕ್ಷೆಯಲ್ಲಿವೆ.

ಇದನ್ನೂ ಓದಿ: ಆರ್ಥಿಕ ಬೆಳವಣಿಗೆಯಲ್ಲಿ ಮುಂದಿನ ಮೂರು ವರ್ಷ ಭಾರತದ್ದೇ ಅತೀ ಸ್ಪೀಡ್: ವಿಶ್ವಬ್ಯಾಂಕ್ ಅಭಿಪ್ರಾಯ

ನಷ್ಟ ಕಾಣುವ ಸಂಸ್ಥೆಗಳ ಸಂಖ್ಯೆ ಇಳಿಮುಖ

ಕುತೂಹಲ ಎಂದರೆ 2020-21ರ ಹಣಕಾಸು ವರ್ಷದಲ್ಲಿ ನಷ್ಟ ಕಾಣುವ ಪಬ್ಲಿಕ್ ಸೆಕ್ಟರ್ ಕಂಪನಿಗಳ ಸಂಖ್ಯೆ 16 ಇತ್ತು. 2023-24ರಲ್ಲಿ ಆ ಸಂಖ್ಯೆ ಕೇವಲ 9ಕ್ಕೆ ಇಳಿದಿದೆ. ಈ ವಲಯದ ಅದ್ವಿತೀಯ ಸಾಧನೆ ಷೇರು ಹೂಡಿಕೆದಾರರನ್ನು ಆಕರ್ಷಿಸಿದೆ. ಪಿಎಸ್​ಯು ಸ್ಟಾಕ್​​ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿನ ಒಟ್ಟು ಮಾರುಕಟ್ಟೆ ಬಂಡವಾಳದಲ್ಲಿ ಪಿಎಸ್​ಯು ಸ್ಟಾಕ್​ಗಳ ಪ್ರಮಾಣ ಶೇ. 17ರಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ