PVR and Adipurush: ಆದಿಪುರುಷ್ ಎಫೆಕ್ಟ್; ಷೇರುಪೇಟೆಯಲ್ಲಿ ಮಕಾಡೆ ಬಿದ್ದ ಪಿವಿಆರ್ ಐನಾಕ್ಸ್; ಕೆಟ್ಟ ವಿಮರ್ಶೆಯ ಮಧ್ಯೆಯೂ ಪ್ರಭಾಸ್ ನಟನೆಯ ಸಿನಿಮಾ ಭರ್ಜರಿ ಓಟ
PVR Share Price Down After Adipurush Release: ಆದಿಪುರುಷ್ ಸಿನಿಮಾ ಬಗ್ಗೆ ಮಾಧ್ಯಮಗಳಲ್ಲಿ ನಕಾರಾತ್ಮಕ ವಿಮರ್ಶೆ ಬಂದ ಬೆನ್ನಲ್ಲೇ ಷೇರುಪೇಟೆಯಲ್ಲಿ ಪಿವಿಆರ್ ಐನಾಕ್ಸ್ ಕಂಪನಿಯ ಷೇರುಬೆಲೆ ಕುಸಿತ ಕಂಡಿದೆ.
ನವದೆಹಲಿ: ನಷ್ಟದಲ್ಲಿರುವ ಪಿವಿಆರ್ ಐನಾಕ್ಸ್ನ ಷೇರುಬೆಲೆ ಶುಕ್ರವಾರ ಶೇ. 3ರಷ್ಟು ಕುಸಿತ ಕಂಡಿತ್ತು. ಭಾರೀ ಬಜೆಟ್ನ ಮತ್ತು ಭಾರೀ ನಿರೀಕ್ಷೆಯ ಪ್ರಭಾಸ್ ಅಭಿನಯದ ಆದಿಪುರುಷ್ (Adipurush) ಸಿನಿಮಾ ಬಗ್ಗೆ ನಕಾರಾತ್ಮಕ ವಿಮರ್ಶೆಗಳು ಬಂದಿದ್ದು ಪಿವಿಆರ್ ಷೇರುಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ವಾರದ ಕೊನೆ ಷೇರುವ್ಯವಹಾರ ದಿನವಾದ ಶುಕ್ರವಾರವೇ ಆದಿಪುರುಷ್ ಬಿಡುಗಡೆ ಆಗಿತ್ತು. ಆ ದಿನ ಪಿವಿಆರ್ ಐನಾಕ್ಸ್ ಸಂಸ್ಥೆಯ (PVR Inox) ಷೇರು ಬೆಲೆ ಶೇ. 3.31ರಷ್ಟು ಕಡಿಮೆಗೊಂಡು 1,450.45 ರೂ ತಲುಪಿತ್ತು. ಆದಿಪುರುಷ್ ಸಿನಿಮಾ ದೆಸೆಯಿಂದ ದೇಶಾದ್ಯಂತ ಪಿವಿಆರ್ ಚಿತ್ರಮಂದಿರಗಳಿಗೆ ಜನಸಂದಣಿ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಶುಕ್ರವಾರ ಮಧ್ಯಾಹ್ನದಷ್ಟರಲ್ಲಿ ಆದಿಪುರುಷ್ ಬಗ್ಗೆ ನೆಗಟಿವ್ ರಿವ್ಯೂಗಳು ಹೆಚ್ಚಾಗತೊಡಗುತ್ತಿದ್ದಂತೆಯೆ ಪಿವಿಆರ್ ಷೇರುಬೆಲೆಯೂ ಕಡಿಮೆ ಆಗತೊಡಗಿತ್ತು.
ರಾಮಾಯಣದ ಒಂದು ಎಳೆ ಇಟ್ಟುಕೊಂಡು ಮಾಡಲಾಗಿರುವ ಆದಿಪುರುಷ್ ಚಿತ್ರ ಬಿಡುಗಡೆಯ ದಿನದಂದು ನಕಾರಾತ್ಮಕ ವಿಮರ್ಶೆ ಮಧ್ಯೆಯೂ 140 ಕೋಟಿ ರೂ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಶನಿವಾರವೂ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದ್ದು ಮೊದಲ ಎರಡು ದಿನ ಒಟ್ಟು 240 ಕೋಟಿ ರೂ ಗಳಿಕೆ ಕಂಡಿರುವುದು ವರದಿಯಾಗಿದೆ.
ಇದನ್ನೂ ಓದಿ: Nikhil Kamath: ಶಾಲೆಯೆಂದರೆ ತಿರಸ್ಕಾರ, ಟೀಚರ್ಗಳೆಂದರೆ ಭಯ; ಓದನ್ನೇ ಬಿಡಲು ಕಾರಣಬಿಚ್ಚಿಟ್ಟ ಝೀರೋಧ ಸಂಸ್ಥಾಪಕ
ಆದಿಪುರುಷ್ ಯಶಸ್ಸಿನ ಜೊತೆಗೆ ಪಿವಿಆರ್ ಐನಾಕ್ಸ್ ಭವಿಷ್ಯವೂ ತಳುಕು ಹಾಕಿಕೊಂಡಿದೆ. ಆದಿಪುರುಷ್ ತನ್ನ ಭರ್ಜರಿ ಕಲೆಕ್ಷನ್ ಅನ್ನು ಮುಂದುವರಿಸಿದಲ್ಲಿ ಜೂನ್ ಅಂತ್ಯದ ಕ್ವಾರ್ಟರ್ನಲ್ಲಿ ಪಿವಿಆರ್ ಐನಾಕ್ಸ್ ನಷ್ಟದ ಹೊದಿಕೆ ಕಳಚಿ ಲಾಭ ಪಡೆಯಲು ಸಾಧ್ಯವಿದೆ. ಮೊದಲ ವೀಕೆಂಡ್ನಲ್ಲಿ ಆದಿಪುರುಷ್ ಸಿನಿಮಾದ 5.5 ಲಕ್ಷ ಟಿಕೆಟ್ಗಳ ಮಾರಾಟ ಕಂಡಿರುವ ಪಿವಿಆರ್ ಐನಾಕ್ಸ್ ಸಂಸ್ಥೆಗೆ ದಕ್ಷಿಣ ಭಾರತ ಆಸರೆಯಾಗುತ್ತಿದೆ. ಅದರಲ್ಲೂ ತೆಲಂಗಾಣದಲ್ಲಿ ಆದಿಪುರುಷ್ ಸಿನಿಮಾಗೆ ಒಳ್ಳೆಯ ಸ್ಪಂದನೆ ಸಿಕ್ಕಿದ್ದು, ಇಲ್ಲಿ ಪಿವಿಆರ್ಗೆ ಒಳ್ಳೆಯ ಕಲೆಕ್ಷನ್ ಸಿಗುತ್ತಿದೆ.
ಒಟ್ಟಾರೆಯಾಗಿ ಆದಿಪುರುಷ್ ಸಿನಿಮಾದ ಮೊದಲ ದಿನದ ಕಲೆಕ್ಷನ್ 140 ಕೋಟಿ ರೂ ಇದೆ. ಇದು ಹಿಂದಿ ಸಿನಿಮಾಗಳ ಪೈಕಿ ಅತಿಹೆಚ್ಚು ಫಸ್ಟ್ ಡೇ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆ ಆದಿಪುರುಷ್ದ್ದಾಗಿದೆ. ವಿಶ್ವಾದ್ಯಂತ 4,000 ಸ್ಕ್ರೀನ್ಗಳಲ್ಲಿ ತೆರೆಕಂಡಿರುವ ಆದಿಪುರುಷ್ ಸಿನಿಮಾ 1000 ಕೋಟಿ ರೂ ಕ್ಲಬ್ ಸೇರಬಲ್ಲುದಾ ಎಂಬ ಪ್ರಶ್ನೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ