
ನವದೆಹಲಿ, ಡಿಸೆಂಬರ್ 15: ಪಾಕಿಸ್ತಾನದ ಕ್ರೈಮ್ ಲೋಕವನ್ನು ಉಡಾಯಿಸಿದ ಭಾರತೀಯ ಗೂಢಚಾರಿಯ ರೋಚಕ ಕಥಾ ಹಂದರ ಇರುವ ಧುರಂಧರ್ ಸಿನಿಮಾ (Dhurandhar Movie) ಭರ್ಜರಿ ಯಶಸ್ಸಿನತ್ತ ಸಾಗುತ್ತಿದೆ. ಕಾಂತಾರ ಸೃಷ್ಟಿಸಿದುದಕ್ಕಿಂತಲೂ ಹೆಚ್ಚಿನ ಹವಾ ಮತ್ತು ಹಣವನ್ನು ಧುರಂಧರ್ ಪಡೆದಿದೆ. ಒಟಿಟಿಗೆ ಆದ್ಯತೆ ಕೊಡುತ್ತಿದ್ದ ಸಿನಿಮಾ ಪ್ರೇಮಿಗಳು ಥಿಯೇಟರ್ಗಳತ್ತ ದಾಪುಗಾಲಿಡುವಂತೆ ಮಾಡಿದೆ. ಇದರ ಪರಿಣಾಮವೋ ಎಂಬಂತೆ ಪಿವಿಆರ್ ಐನಾಕ್ಸ್ (PVR Inox) ಸಂಸ್ಥೆಯ ಷೇರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಕಳೆದ ವೀಕೆಂಡ್ನಲ್ಲಿ ಧುರಂಧರ್ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದೆ. ಇದರ ಪರಿಣಾಮ ಪಿವಿಆರ್ ಷೇರುಗಳ ಮೇಲೆ ಆದಂತಿದೆ. ಇವತ್ತು ಸೋಮವಾರ ಬೆಳಗ್ಗೆ ಒಂದು ಹಂತದಲ್ಲಿ ಪಿವಿಆರ್ ಐನಾಕ್ಸ್ ಷೇರುಬೆಲೆ 1,134 ರೂವರೆಗೂ ಹೋಗಿತ್ತು. ಶುಕ್ರವಾರ ಸಂಜೆ 1,051 ರೂನಲ್ಲಿ ಟ್ರೇಡಿಂಗ್ ಅಂತ್ಯಗೊಂಡಿದ್ದ ಪಿವಿಆರ್ ಷೇರುಬೆಲೆ ಸೋಮವಾರ ಶೇ 7ರಷ್ಟು ಏರಿತ್ತು. ಸೋಮವಾರ ಕೊನೆಯಲ್ಲಿ ಅದರ ಬೆಲೆ 1,100 ರೂ ಆಸುಪಾಸಿನಲ್ಲಿ ಅಂತ್ಯಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ಎಫ್ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ
ಥಿಯೇಟರ್ಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನೂಕುನುಗ್ಗಲು ಸೃಷ್ಟಿಸಿದ ಕೆಲವೇ ಸಿನಿಮಾಗಳಲ್ಲಿ ಧುರಂಧರ್ ಒಂದು. ರಣವೀರ್ ಸಿಂಗ್ ಅವರ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಇದೂ ಒಂದಾಗಿದೆ. ಕಳೆದ ಏಳು ವರ್ಷಗಳಲ್ಲಿ ರಣವೀರ್ ಸಿಂಗ್ ಅವರ ಯಾವುದೇ ಸಿನಿಮಾ ಕೂಡ ಧುರಂಧರ್ನ ಒಂದು ವಾರದಷ್ಟು ಕಲೆಕ್ಷನ್ ಮಾಡಿದ್ದಿಲ್ಲ. ಅವರ ಅತಿದೊಡ್ಡ ಹಿಟ್ ಆಗಿರುವ ಪದ್ಮಾವತ್ ಅನ್ನೂ ಧುರಂಧರ್ ಮೀರಿಸುವ ಸಾಧ್ಯತೆ ಇದೆ.
ಪದ್ಮಾವತ್ 400 ಕೋಟಿ ರೂ ಕಲೆಕ್ಷನ್ ಕಂಡರೆ, ಧುರಂಧರ್ ಭಾರತದ ಬಾಕ್ಸ್ ಆಫೀಸ್ನಲ್ಲಿ 10 ದಿನದಲ್ಲಿ ಮಾಡಿದ ಕಲೆಕ್ಷನ್ 350 ಕೋಟಿ ರೂ ಎಂದು ಹೇಳಲಾಗುತ್ತಿದೆ. ಜಾಗತಿಕ ಗಲ್ಲಾಪೆಟ್ಟಿಗೆಗಳನ್ನು ಎಣಿಸಿದರೆ 10 ದಿನದಲ್ಲೇ ಇದು ಗಳಿಸಿದ ಹಣ 530 ಕೋಟಿ ರೂಗೂ ಅಧಿಕ. ಈ ಲೆಕ್ಕದಲ್ಲಿ ರಣವೀರ್ ಸಿಂಗ್ ಅವರ ವೃತ್ತಿಜೀವನದಲ್ಲೇ ಧುರಂಧರ್ ಅತಿದೊಡ್ಡ ಹಿಟ್ ಸಿನಿಮಾ.
ಇದನ್ನೂ ಓದಿ: Mutual Fund Charges: ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿಯಬೇಕಾದ ವಿವಿಧ ಶುಲ್ಕಗಳಿವು…
ಧುರಂಧರ್ ಸಿನಿಮಾದಲ್ಲಿ ರಣವೀರ್ ಸಿಂಗ್ ಭಾರತೀಯ ಸ್ಪೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಖನ್ನ, ಸಂಜಯ್ ದತ್, ಅರ್ಜುನ್ ರಾಮಪಾಲ್, ಆರ್ ಮಾಧವನ್ ಮೊದಲಾದ ಸ್ಟಾರ್ ನಟರೂ ಅಭಿನಯಿಸಿದ್ದಾರೆ. ಪಾಕಿಸ್ತಾನದ ಕ್ರೈಮ್ ಲೋಕದ ಕುಖ್ಯಾತ ಪಾತಕಿಯ ಪಾತ್ರದಲ್ಲಿ ಅಕ್ಷಯ್ ಖನ್ನ ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ