ATM charges: ಎಟಿಎಂ ನಗದು ವಿಥ್ ಡ್ರಾ ದರ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಶುಲ್ಕವು ಸದ್ಯದಲ್ಲೇ ಏರಿಕೆ
ಎಟಿಎಂ ನಗದು ವಿಥ್ ಡ್ರಾ ಮೇಲೆ ವಿಧಿಸುವ ದರ ಹಾಗೂ ಶುಲ್ಕವನ್ನು ಏರಿಕೆ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ನೀಡಿದೆ.
ಎಟಿಎಂ (ಆಟೋಮೆಟೆಡ್ ಟೆಲ್ಲರ್ ಮಶೀನ್)ಗಳ ಶುಲ್ಕವನ್ನು ಒಂದು ವಹಿವಾಟಿಗೆ ರೂ. 21ಕ್ಕೆ ಹೆಚ್ಚಳ ಮಾಡುವುದಕ್ಕೆ ಬ್ಯಾಂಕ್ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಅವಕಾಶ ನೀಡಿದೆ. ಎಟಿಎಂನಲ್ಲಿ ಉಚಿತ ವಹಿವಾಟುಗಳು ಮುಗಿದ ಮೇಲೆ ಆ ನಂತರ ಇಷ್ಟು ಮೊತ್ತದ ತನಕ ದರ ವಿಧಿಸಬಹುದು. ಈ ಪರಿಷ್ಕೃತ ದರವು ಜನವರಿ 1, 2022ರಿಂದ ಜಾರಿಗೆ ಬರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್ನ ಎಟಿಎಂಗಳಿಂದ ಪ್ರತಿ ತಿಂಗಳು 5 ಉಚಿತ ವಹಿವಾಟನ್ನು ಮಾಡಬಹುದು. ಇದರಲ್ಲಿ ಹಣಕಾಸು ಮತ್ತು ಹಣಕಾಸೇತರ ವ್ಯವಹಾರ ಎರಡೂ ಒಳಗೊಂಡಿರುತ್ತದೆ. ಅದರ ಆಚೆಗೆ ಪ್ರತಿ ಎಟಿಎಂ ವಹಿವಾಟಿಗೆ ಹೆಚ್ಚುವರಿಯಾಗಿ ರೂ. 20 ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂಗಳನ್ನು ಬಳಸುವಂಥ ಗ್ರಾಹಕರಿಗೆ ಮೆಟ್ರೋ ನಗರಗಳಲ್ಲಿ 3 ವಹಿವಾಟು ಮತ್ತು ಮೆಟ್ರೋಯೇತರ ಕೇಂದ್ರಗಳಲ್ಲಿ 5 ವಹಿವಾಟಿಗೆ ಅವಕಾಶ ಇದೆ.
ಏಳು ವರ್ಷಗಳ ನಂತರ ಎಟಿಎಂ ವಹಿವಾಟು ಶುಲ್ಕಗಳನ್ನು ರಿಸರ್ವ್ ಬ್ಯಾಂಕ್ ಇಂಡಿಯಾ ಏರಿಕೆ ಮಾಡಿದೆ. 2012ನೇ ಇಸವಿಯ ಆಗಸ್ಟ್ನಲ್ಲಿ ಕೊನೆಯ ಬಾರಿಗೆ ಎಟಿಎಂ ವಹಿವಾಟಿನ ಮೇಲೆ ಇಂಟರ್ಚೇಂಜ್ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿತ್ತು. ಗ್ರಾಹಕರು ಪಾವತಿಸುವ ಶುಲ್ಕವು 2014ರ ಆಗಸ್ಟ್ನಲ್ಲಿ ಕೊನೆಯದಾಗಿ ಪರಿಷ್ಕೃತವಾಗಿತ್ತು. ಈ ದರ ಪರಿಷ್ಕರಣೆ ಆಗಿ ಹತ್ತಿರಹತ್ತಿರ ಏಳು ವರ್ಷಗಳು ಪೂರ್ತಿ ಆಗಿದೆ ಎಂದು ಆರ್ಬಿಐ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಬ್ಯಾಂಕ್ಗಳ ಎಟಿಎಂ ನಿಯೋಜನೆ ಮತ್ತು ನಿರ್ವಹಣೆ ಶುಲ್ಕಗಳು ಅಥವಾ ವೈಟ್ಲೇಬಲ್ ಎಟಿಎಂ ಆಪರೇಟರ್ಸ್ ವೆಚ್ಚಗಳು ಹೆಚ್ಚುತ್ತಲೇ ಇದೆ. ಆ ಹಿನ್ನೆಲೆಯಲ್ಲಿ ಎಟಿಎಂ ವಹಿವಾಟು ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿದೆ.
ಎಟಿಎಂ ಶುಲ್ಕ ಮತ್ತು ದರದ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಆರ್ಬಿಐನಿಂದ 2019ರಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಅದರಲ್ಲೂ ಎಟಿಎಂ ವಹಿವಾಟುಗಳ ಇಂಟರ್ಚೇಂಜ್ ಸ್ಟ್ರಕ್ಚರ್ ಮೇಲೆ ಗಮನ ಹರಿಸಿತ್ತು. ಆರ್ಬಿಐನಿಂದ ಇಂಟರ್ಚೇಂಜ್ ಶುಲ್ಕವು (ಹಣಕಾಸು ವಹಿವಾಟಿಗೆ) ರೂ. 15ರಿಂದ 17ಕ್ಕೆ ಮತ್ತು ಹಣಕಾಸೇತರ ಶುಲ್ಕವು ರೂ. 5ರಿಂದ 6 ರೂಪಾಯಿಗೆ ಆಗಸ್ಟ್ 1, 2021ರಿಂದ ಅನ್ವಯಿಸುತ್ತದೆ. ಇಂಟರ್ಚೇಂಜ್ ಶುಲ್ಕ ಅಂದರೆ, ಬ್ಯಾಂಕ್ಗಳು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಾವತಿ ಮೇಲೆ ವರ್ತಕರಿಗೆ ಹಾಕುವ ಶುಲ್ಕ. ಹೆಚ್ಚುವರಿಯಾಗಿ ಅನ್ವಯ ಆಗುವ ತೆರಿಗೆ ಏನಾದರೂ ಇದ್ದಲ್ಲಿ ಅದನ್ನೂ ಹೆಚ್ಚುವರಿಯಾಗಿ ಪಾವತಿಸಲಾಗುತ್ತದೆ ಎಂದು ಆರ್ಬಿಐ ಹೇಳಿದೆ.
ಇದನ್ನೂ ಓದಿ: SBI Cash Withdrawal Rules ಎಸ್ಬಿಐ ಎಟಿಎಂನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆ !
ಇದನ್ನೂ ಓದಿ: RBI new rules: ಆನ್ಲೈನ್ ವಹಿವಾಟಿಗೆ ಆರ್ಬಿಐ ಹೊಸ ನಿಯಮ; ಇಲ್ಲಿದೆ ನೀವು ತಿಳಿಯಬೇಕಾದ ಸಂಗತಿಗಳು
(Reserve Bank Of India allowed banks to increase ATM and other charges from January 1, 2022)