ಬಂಡವಾಳ, ಲಾಭ ಇಲ್ಲದ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಬಂದ್ ಮಾಡಿಸಿದ ಆರ್​ಬಿಐ

|

Updated on: Jun 20, 2024 | 11:02 AM

Mumbai's city co-operative bank's licence canceled: ಮುಂಬೈ ಮೂಲದ ಸಿಟಿ ಕೋ ಆಪರೇಟಿವ್ ಬ್ಯಾಂಕ್​ನ ಪರವಾನಿಗೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 19ರಂದು ರದ್ದು ಮಾಡಿದೆ. ಬುಧವಾರ ದಿನಾಂತ್ಯದ ಬಳಿಕ ಬ್ಯಾಂಕ್ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ. ಐದು ಲಕ್ಷ ರೂ ಒಳಗೆ ಬ್ಯಾಂಕ್​ನಲ್ಲಿ ಠೇವಣಿ ಇರಿಸಿದವರ ಹಣ ಸುರಕ್ಷಿತವಾಗಿ ಅವರಿಗೆ ಮರಳಲಿದೆ. ಆರ್​ಬಿಐ ಮಾಹಿತಿ ಪ್ರಕಾರ ಶೇ. 87ರಷ್ಟು ಗ್ರಾಹಕರಿಗೆ ಅವರ ಪೂರ್ಣ ಹಣ ಮರಳಲಿದೆ.

ಬಂಡವಾಳ, ಲಾಭ ಇಲ್ಲದ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಬಂದ್ ಮಾಡಿಸಿದ ಆರ್​ಬಿಐ
ಸಿಟಿ ಕೋ ಆಪರೇಟಿವ್ ಬ್ಯಾಂಕ್​
Follow us on

ಮುಂಬೈ, ಜೂನ್ 20: ಬಂಡವಾಳ ಮತ್ತು ಆದಾಯದ ಕೊರತೆ ಎದುರಿಸುತ್ತಿರುವ ಮುಂಬೈ ಮೂಲದ ಸಿಟಿ ಕೋ ಆಪರೇಟಿವ್ ಬ್ಯಾಂಕ್​ನ ಲೈಸೆನ್ಸ್ ಅನ್ನು ಆರ್​ಬಿಐ ರದ್ದು ಮಾಡಿದೆ. ಆ ಬ್ಯಾಂಕ್ ಅನ್ನು ಮುಚ್ಚಲು ಮತ್ತು ಬರಖಾಸ್ತುದಾರರೊಬ್ಬರನ್ನು (Liquidator) ನೇಮಿಸಲು ಆದೇಶ ಹೊರಡಿಸುವಂತೆ ಮಹಾರಾಷ್ಟ್ರದ ಸಹಕಾರಿ ಸಂಸ್ಥೆಗಳ ರಿಜಿಸ್ಟ್ರಾರ್​ಗೆ (Commissioner for Cooperation and Registrar of Cooperative Societies) ಆರ್​ಬಿಐ ಸೂಚನೆ ನೀಡಿದೆ. ಆರ್​ಬಿಐ ಆದೇಶ ನಿನ್ನೆ ಬುಧವಾರ (ಜೂನ್ 19) ಹೊರಬಂದಿದೆ. ಇವತ್ತಿನಿಂದ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

ಬೆಂಗಳೂರಿನಲ್ಲಿರುವ ಸಿಟಿ ಕೋ ಆಪರೇಟಿವ್ ಬ್ಯಾಂಕ್​ಗೂ ಇದಕ್ಕೂ ಸಂಬಂಧ ಇಲ್ಲ…

ಬೆಂಗಳೂರಿನಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕ್​ವೊಂದು ಇದೆ. ಆದರೆ, ಬ್ಯಾಂಕಿಂಗ್ ಲೈಸೆನ್ಸ್ ರದ್ದು ಮಾಡಲಾಗಿರುವುದು ಮುಂಬೈನ ಸಿಟಿ ಕೋ ಆಪರೇಟಿವ್ ಬ್ಯಾಂಕ್. ಬೆಂಗಳೂರಿನಲ್ಲಿರುವುದು ಬೆಂಗಳೂರು ಸಿಟಿ ಕೋ ಆಪರೇಟವ್ ಬ್ಯಾಂಕ್. ಎರಡೂ ಬೇರೆ ಬ್ಯಾಂಕ್​ಗಳು.

ಮುಂಬೈನ ಸಿಟಿ ಕೋ ಆಪರೇಟಿವ್ ಬ್ಯಾಂಕ್​ನ ಶಾಖೆಗಳು ಮುಂಬೈ ಮತ್ತು ಥಾಣೆ ನಗರಗಳಲ್ಲಿ ಇವೆ.

ಇದನ್ನೂ ಓದಿ: ಬಜೆಟ್​ಗೆ ಮುಂಚೆ ಪ್ರಮುಖ ಆರ್ಥಿಕ ತಜ್ಞರ ಜೊತೆ ನಿರ್ಮಲಾ ಸೀತಾರಾಮನ್ ಸಭೆ

ಬ್ಯಾಂಕ್​ನಲ್ಲಿ ಠೇವಣಿ ಇಟ್ಟವರ ಕಥೆ ಏನು?

ಮುಂಬೈ ಮೂಲ ಸಿಟಿ ಕೋ ಆಪರೇಟಿವ್ ಬ್ಯಾಂಕ್​ನಲ್ಲಿ ಬಹಳ ಗ್ರಾಹಕರ ಠೇವಣಿಗಳಿವೆ. ಆರ್​ಬಿಐನಿದ ಮಾನ್ಯತೆ ಪಡೆದ ಯಾವುದೇ ಬ್ಯಾಂಕುಗಳಲ್ಲಿ ಠೇವಣಿದಾರರ ಐದು ಲಕ್ಷ ರೂವರೆಗಿನ ಹಣಕ್ಕೆ ಇನ್ಷೂರೆನ್ಸ್ ಗ್ಯಾರಂಟಿ ಇರುತ್ತದೆ. ವರದಿ ಪ್ರಕಾರ ಸಿಟಿ ಕೋ ಆಪರೇಟಿವ್ ಬ್ಯಾಂಕ್​ನ ಶೇ. 87ರಷ್ಟು ಗ್ರಾಹಕರ ಹಣವನ್ನು ಸಂಪೂರ್ಣವಾಗಿ ಮರಳಿಸಬಹುದು.

ಠೇವಣಿ ಹಣದ ಇನ್ಷೂರೆನ್ಸ್ ಕೊಟ್ಟಿರುವ ಡೆಪಾಸಿಟ್ ಇನ್ಷೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ) ಸಂಸ್ಥೆಯು ಗ್ರಾಹಕರಿಗೆ ಆ ಹಣವನ್ನು ಕೊಡಲಿದೆ. ವರದಿ ಪ್ರಕಾರ ಬ್ಯಾಂಕ್​ನ ಗ್ರಾಹಕರ ಮನವಿ ಮೇರೆಗೆ ವಿಮೆಗೆ ಅರ್ಹವಾಗಿರುವ 230.99 ಕೋಟಿ ರೂ ಹಣವನ್ನು ಡಿಐಜಿಸಿಸಿ ಈಗಾಗಲೇ ಕೊಟ್ಟಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಜಿಎಸ್​ಟಿ ನೀತಿಯಲ್ಲಿ ಬದಲಾವಣೆ ನಿರೀಕ್ಷೆಯಲ್ಲಿ ಆನ್ಲೈನ್ ಗೇಮಿಂಗ್ ಕ್ಷೇತ್ರ; ಜೂನ್ 22ರ ಸಭೆಯಲ್ಲಿ ಏನಾಗಬಹುದು?

ಬ್ಯಾಂಕಿಂಗ್ ಲೈಸೆನ್ಸ್ ರದ್ದುಗೊಳಿಸಲು ಏನು ಕಾರಣ?

ಆರ್​ಬಿಐ ನೀಡಿರುವ ಮಾಹಿತಿ ಪ್ರಕಾರ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಬಳಿ ಸಾಕಷ್ಟು ಬಂಡವಾಳ ಇಲ್ಲ. ಹಾಗೆಯೇ ಹಣ ಗಳಿಸುವ ದಾರಿಯನ್ನೂ ಕಳೆದುಕೊಂಡಿದೆ. ಈಗಿರುವ ಠೇವಣಿದಾರರಿಗೆ ಪೂರ್ತಿಯಾಗಿ ಹಣ ಮರಳಿಸುವ ಮಟ್ಟಿಗೂ ಅದರ ಹಣಕಾಸು ಪರಿಸ್ಥಿತಿ ಇಲ್ಲ. ಈ ಬ್ಯಾಂಕ್​ಗೆ ಮುಂದುವರಿಸಲು ಅವಕಾಶ ಕೊಟ್ಟರೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಅದನ್ನು ಬರಕಾಸ್ತುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ