Reserve Bank Of India: ಮೊಬಿಕ್ವಿಕ್, ಸ್ಪೈಸ್ ಮನಿಗೆ ತಲಾ 1 ಕೋಟಿ ರೂಪಾಯಿ ದಂಡ ವಿಧಿಸಿದ ಆರ್ಬಿಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀಡಲಾದ ನಿರ್ದೇಶನದ ಪಾಲನೆ ಮಾಡದ ಕಾರಣಕ್ಕೆ ಮೊಬಿಕ್ವಿಕ್, ಸ್ಪೈಸ್ ಮನಿ ಎಂಬೆರಡು ಪೇಮೆಂಟ್ ಸಿಸ್ಟಮ್ ಆಪರೇಟರ್ಸ್ ಮೇಲೆ ತಲಾ 1 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ಮೊಬಿಕ್ವಿಕ್ ಸಿಸ್ಟಮ್ಸ್ ಮತ್ತು ಸ್ಪೈಸ್ ಮನಿ ಎಂಬೆರಡು ಪೇಮೆಂಟ್ ಸಿಸ್ಟಮ್ ಆಪರೇಟರ್ಸ್ (PSOs) ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ದಂಡವನ್ನು ವಿಧಿಸಿದೆ. ನಿಯಮಾವಳಿ ಪಾಲನೆ ಮಾಡದ ಕಾರಣಕ್ಕೆ ಇಂಥದ್ದೊಂದು ಕ್ರಮ ಕೈಗೊಂಡಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೊಬಿಕ್ವಿಕ್ ಮತ್ತು ಸ್ಪೈಸ್ ಮನಿ ಎರಡಕ್ಕೂ ತಲಾ 1 ಕೋಟಿ ರೂಪಾಯಿ ಜುಲ್ಮಾನೆ ಹಾಕಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವ ಪ್ರಕಾರ, ನಿಯಮಾವಳಿಗಳ ಪಾಲನೆಯಲ್ಲಿನ ಕೊರತೆಯಿಂದಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಆದರೆ ಇದರಲ್ಲಿ ಯಾವುದೇ ವಹಿವಾಟಿನ ಸಿಂಧುತ್ವ ಅಥವಾ ಸಂಸ್ಥೆಯು ಗ್ರಾಹಕರ ಜತೆಗೆ ಮಾಡಿಕೊಂಡ ಒಪ್ಪಂದಕ್ಕೆ ಸಂಬಂಧಿಸಿದ ಸಂಗತಿಗಳು ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಭಾರತ್ ಬಿಲ್ ಪೇಮೆಂಟ್ ಆಪರೇಟಿಂಗ್ ಯೂನಿಟ್ಸ್ (BBPOUs) ನಿವ್ವಳ ಮೌಲ್ಯಕ್ಕೆ ಸಂಬಂಧಿಸಿದಂತೆ ನೀಡಿದ್ದ ನಿರ್ದೇಶನದ ಅನ್ವಯ ಸಂಸ್ಥೆಗಳು ಇಲ್ಲ ಎಂಬುದು ಆರ್ಬಿಐ ಗಮನಕ್ಕೆ ಬಂದಿದೆ. ಆ ನಂತರದಲ್ಲಿ ನೋಟಿಸ್ ನೀಡಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಆ ಸಂಸ್ಥೆಗಳ ಲಿಖಿತ ಪ್ರತಿಕ್ರಿಯೆ ಮತ್ತು ವೈಯಕ್ತಿಕವಾಗಿ ಅಹವಾಲು ಆಲಿಸುವಾಗ ಮೌಖಿಕ ಉತ್ತರವನ್ನು ಗಣನೆಗೆ ತೆಗೆದುಕೊಂಡಿದೆ ಮತ್ತು ಅಂತಿಮವಾಗಿ ಆರ್ಬಿಐ ನಿರ್ದೇಶನಕ್ಕೆ ತಕ್ಕಂತೆ ನಡೆದುಕೊಂಡಿಲ್ಲ ಎಂಬ ಆರೋಪವನ್ನು ನಿಗದಿಪಡಿಸಿದೆ. ಅದಾದ ಮೇಲೆ ಹಣಕಾಸು ದಂಡವನ್ನು ಹಾಕಲಾಗಿದೆ.
ಇದನ್ನೂ ಓದಿ: SBI: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 1 ಕೋಟಿ ರೂ. ದಂಡ ವಿಧಿಸಿದ ಆರ್ಬಿಐ