RBI MPC Updates: ರಿಪೋದರ ಶೇ. 6.25ಕ್ಕೆ ಇಳಿಸಿದ ಆರ್​ಬಿಐ; ಕಡಿಮೆ ಆಗಲಿವೆ ಬ್ಯಾಂಕ್ ಸಾಲಗಳ ಬಡ್ಡಿ

Repo rate cut: ಆರ್​ಬಿಐನ ರಿಪೋ ದರವನ್ನು ಶೇ. 6.50ರಿಂದ ಶೇ. 6.25ಕ್ಕೆ ಇಳಿಸಲು ಎಂಪಿಸಿ ನಿರ್ಧಾರ ಕೈಗೊಂಡಿದೆ. ಫೆ. 5ರಿಂದ ನಡೆದ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 20 ತಿಂಗಳ ಬಳಿಕ ಆರ್​ಬಿಐ ಮೊದಲ ಬಾರಿಗೆ ರಿಪೋ ದರ ಇಳಿಸಿರುವುದು. ಕಳೆದ ಎರಡು ವರ್ಷದಿಂದ ಬಡ್ಡಿದರ ಶೇ. 6.50ರಲ್ಲೇ ಇತ್ತು.

RBI MPC Updates: ರಿಪೋದರ ಶೇ. 6.25ಕ್ಕೆ ಇಳಿಸಿದ ಆರ್​ಬಿಐ; ಕಡಿಮೆ ಆಗಲಿವೆ ಬ್ಯಾಂಕ್ ಸಾಲಗಳ ಬಡ್ಡಿ
ಸಂಜಯ್ ಮಲ್ಹೋತ್ರಾ

Updated on: Feb 07, 2025 | 10:10 AM

ನವದೆಹಲಿ, ಫೆಬ್ರುವರಿ 7: ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿ ರಿಪೋದರವನ್ನು 0.25 ಪ್ರತಿಶತದಷ್ಟು ಇಳಿಕೆ ಮಾಡುವ ನಿರ್ಧಾರ ಕೈಗೊಂಡಿದೆ. ಮೊನ್ನೆಯಿಂದ ನಡೆದಿದ್ದ ಎಂಪಿಸಿ ಸಭೆಯ ಬಳಿಕ ಇಂದು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಶೇ. 6.50ರಷ್ಟಿದ್ದ ಬಡ್ಡಿದರವನ್ನು ಶೇ. 6.25ಕ್ಕೆ ಇಳಿಸಲಾಗಿದೆ. ಹತ್ತಿರ ಹತ್ತಿರ ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಆರ್​ಬಿಐನ ರಿಪೋ ದರ ಇಳಿಕೆ ಆಗಿದೆ.

ಈ ಬಾರಿ 25 ಮೂಲಾಂಕಗಳಷ್ಟು ಇಳಿಕೆ ಆಗುತ್ತದೆ ಎಂದು ಬಹುತೇಕ ಆರ್ಥಿಕ ತಜ್ಞರು ನಿರೀಕ್ಷಿಸಿದ್ದರು. ಎಂಪಿಸಿಯಲ್ಲಿರುವ ಎಲ್ಲಾ ಆರು ಸದಸ್ಯರು ಸರ್ವಾನುಮತದಿಂದ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಸಲು ನಿರ್ಧರಿಸಿದ್ದಾರೆ. ಹಣದುಬ್ಬರ ನಿಯಂತ್ರಣಕ್ಕೆ ಬರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಣಕಾಸು ನೀತಿ ಸಮಿತಿಯು ರಿಪೋ ದರ ಇಳಿಸುವ ರಿಸ್ಕ್ ತೆಗೆದುಕೊಂಡಿದೆ. ಈ ರಿಪೋ ದರ ಇಳಿಕೆಯಿಂದ ಬ್ಯಾಂಕುಗಳ ಸಾಲದರಗಳು ಕಡಿಮೆಗೊಳ್ಳುವ ಸಾಧ್ಯತೆ ಇದೆ. ಅದಾದಲ್ಲಿ ಸಾಲದ ಇಎಂಐ ಮೊತ್ತ ತುಸು ಕಡಿಮೆ ಆಗಬಹುದು.

ಇದನ್ನೂ ಓದಿ: ಎಟರ್ನಲ್ ಎಂದು ಹೆಸರು ಬದಲಿಸಿಕೊಂಡ ಜೊಮಾಟೊ; ಅದರ ಆ್ಯಪ್ ಹೆಸರಲ್ಲಿ ಇರೋದಿಲ್ಲ ಬದಲಾವಣೆ

ಏನಿದು ರಿಪೋ ದರ?

ರಿಪೋ ಎಂದರೆ ರೀ ಪರ್ಚೇಸಿಂಗ್​ನ ಸಂಕ್ಷಿಪ್ತ ರೂಪ. ಇದು ಆರ್​ಬಿಐನ ಬಡ್ಡಿದರವಾಗಿದೆ. ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐನಿಂದ ಪಡೆಯುವ ಸಾಲಕ್ಕೆ ವಿಧಿಸಲಾಗುವ ಬಡ್ಡಿದರ ಇದಾಗಿದೆ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಬಡ್ಡಿದರ ನಿಗದಿ ಮಾಡಲು ಈ ರಿಪೋ ದರ ಆಧಾರವಾಗಿರಬಹುದು.

ಇನ್ನು, ರಿವರ್ಸ್ ರಿಪೋ ಎಂದರೆ, ಕಮರ್ಷಿಯಲ್ ಬ್ಯಾಂಕುಗಳು ತಮ್ಮಲ್ಲಿರುವ ಫಂಡ್ ಅನ್ನು ಆರ್​ಬಿಐನಲ್ಲಿ ಇರಿಸಿದರೆ ಸಿಗುವ ಬಡ್ಡಿ. ಇದೂ ಕೂಡ ಬ್ಯಾಂಕುಗಳ ಠೇವಣಿ ದರಗಳಿಗೆ ಆಧಾರವಾಗಬಹುದು.

2023ರ ಫೆಬ್ರುವರಿಯಿಂದ, ಅಂದರೆ ಎರಡು ವರ್ಷದಿಂದ ರಿಪೋ ದರ ಶೇ. 6.50ರಲ್ಲೇ ಇತ್ತು. 2020ರ ಮೇ ಬಳಿಕ ಆರ್​ಬಿಐ ತನ್ನ ದರಗಳನ್ನು ಇಳಿಸಿದ್ದೇ ಇಲ್ಲ. ನಾಲ್ಕರಿಂದ ಐದು ವರ್ಷದ ಬಳಿಕ ಆರ್​ಬಿಐ ಮೊದಲ ಬಾರಿಗೆ ರಿಪೋ ದರ ಇಳಿಸಿದಂತಾಗಿದೆ.

ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರಿಗೆ ಇದು ಮೊದಲ ಎಂಪಿಸಿ ಸಭೆ. ಕಳೆದ ತಿಂಗಳಷ್ಟೇ ಅವರು ಆರ್​ಬಿಐನ 26ನೇ ಗರ್ನರ್ ಆಗಿ ನೇಮಕಗೊಂಡಿದ್ದರು. ಶಕ್ತಿಕಾಂತ ದಾಸ್ ಅವರ ಸ್ಥಾನವನ್ನು ತುಂಬಿದ್ದಾರೆ. ಆರ್​ಬಿಐನ ಎಂಪಿಸಿಯಲ್ಲಿ ಆರು ಸದಸ್ಯರಿದ್ದಾರೆ. ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ಸಮಿತಿಯ ಮುಖ್ಯಸ್ಥರು. ಈ ಸಮಿತಿಯಲ್ಲಿ ಗವರ್ನರ್ ಅವರನ್ನೂ ಸೇರಿ ಮೂವರು ಸದಸ್ಯರು ಆರ್​ಬಿಐನ ಅಧಿಕಾರಿಗಳೇ ಆಗಿದ್ದಾರೆ. ಇನ್ನುಳಿದ ಮೂವರು ಸ್ವತಂತ್ರ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ಹೆಸರಿಗೆ ಮೇಡ್ ಇನ್ ಇಂಡಿಯಾ; ಒಳಗಿರೋವೆಲ್ಲವೂ ಚೀನೀ ಬಿಡಿಭಾಗಗಳೇ… ಪಕ್ಕಾ ದೇಶೀ ಡ್ರೋನ್​ಗಳಿಗೆ ಪರದಾಡುತ್ತಿರುವ ಭಾರತೀಯ ಸೇನೆ

ಆರ್​ಬಿಐ ಎಂಪಿಸಿಯಲ್ಲಿರುವ ಸದಸ್ಯರು

  1. ಸಂಜಯ್ ಮಲ್ಹೋತ್ರಾ, ಆರ್​ಬಿಐ ಗವರ್ನರ್ ಮತ್ತು ಎಂಪಿಸಿ ಛೇರ್ಮನ್
  2. ಎಂ ರಾಜೇಶ್ವರ್ ರಾವ್, ಆರ್​ಬಿಐ ಡೆಪ್ಯುಟಿ ಗವರ್ನರ್, ಮಾನಿಟರಿ ಪಾಲಿಸಿ ಉಸ್ತುವಾರಿ
  3. ರಾಜೀವ್ ರಂಜನ್, ಮಾನಿಟರಿ ಪಾಲಿಸಿ ಎಕ್ಸಿಕ್ಯೂಟಿವ್ ಡೈರೆಕ್ಟರ್
  4. ರಾಮ್ ಸಿಂಗ್, ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್​ನ ನಿರ್ದೇಶಕರು
  5. ಸೌಗತ ಭಟ್ಟಾಚಾರ್ಯ, ಆರ್ಥಿಕ ತಜ್ಞರು
  6. ನಾಗೇಶ್ ಕುಮಾರ್, ಕೈಗಾರಿಕಾ ಅಭಿವೃದ್ಧಿ ಅಧ್ಯಯನ ಶಿಕ್ಷಣ ಸಂಸ್ಥೆಯ ನಿರ್ದೇಶಕರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ