ಆರ್ಬಿಐನ ರೀಟೇಲ್ ಡೈರೆಕ್ಟ್ ಸ್ಕೀಮ್ಗಾಗಿ ಮೊಬೈಲ್ ಆ್ಯಪ್ ಬಿಡುಗಡೆ; ಏನಿದು ಸ್ಕೀಮ್, ಇಲ್ಲಿದೆ ಡೀಟೇಲ್ಸ್
RBI Retail Direct Scheme: ಗವರ್ನ್ಮೆಂಟ್ ಸೆಕ್ಯೂರಿಟಿಗಳಲ್ಲಿ ರೀಟೇಲ್ ಹೂಡಿಕೆದಾರರು ವ್ಯವಹರಿಸಲು ಸುಲಭವಾಗಲು ಆರ್ಬಿಐ ವಿಶೇಷ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಈ ರೀಟೇಲ್ ಡೈರೆಕ್ಟ್ ಸ್ಕೀಮ್ಗಾಗಿ ಡೆಡಿಕೇಟೆಡ್ ಪೋರ್ಟಲ್ವೊಂದು ಈಗಾಗಲೇ ಇದೆ. ಇದರ ಜೊತೆಗೆ ಮೊಬೈಲ್ ಆ್ಯಪ್ ಈಗ ಹೊರತರಲಾಗಿದೆ. 2020ರಿಂದ ಇರುವ ರೀಟೇಲ್ ಡೈರೆಕ್ಟ್ ಸ್ಕೀಮ್ನಲ್ಲಿ ಹೂಡಿಕೆದಾರರು ಮಧ್ಯವರ್ತಿಗಳ ನೆರವಿಲ್ಲದೆ ನೆರವಾಗಿ ಗವರ್ನ್ಮೆಂಟ್ ಸೆಕ್ಯೂರಿಟಿಗಳನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.
ನವದೆಹಲಿ, ಏಪ್ರಿಲ್ 5: ಭಾರತೀಯ ರಿಸರ್ವ್ ಬ್ಯಾಂಕ್ನ ರೀಟೇಲ್ ಡೈರೆಕ್ಟ್ ಸ್ಕೀಮ್ಗೆ (RBI retail direct scheme) ವಿಶೇಷ ಮೊಬೈಲ್ ಆ್ಯಪ್ವೊಂದನ್ನು ಅನಾವರಣಗೊಳಿಸಲಾಗಿದೆ. ಈಗಾಗಲೇ ಈ ಸ್ಕೀಮ್ಗೆ ಪೋರ್ಟಲ್ ಅಸ್ತಿತ್ವದಲ್ಲಿದೆ. ಇದರ ಜೊತೆಗೆ ಮೊಬೈಲ್ ಅಪ್ಲಿಕೇಶನ್ ಅನ್ನೂ ಬಿಡುಗಡೆ ಮಾಡಲಾಗಿದೆ. ರೀಟೇಲ್ ಹೂಡಿಕೆದಾರರಿಗೆ (retail investors) ಇದು ಅನುಕೂಲ ತರಲಿದೆ. ಎಂಪಿಸಿ ಸಭೆ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ಆರ್ಡಿಎಸ್ನ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿರುವ ವಿಚಾರವನ್ನು ಪ್ರಕಟಿಸಿದ್ದಾರೆ.
ಏನಿದು ರೀಟೇಲ್ ಡೈರೆಕ್ಟ್ ಸ್ಕೀಮ್?
ಗವರ್ನ್ಮೆಂಟ್ ಸೆಕ್ಯೂರಿಟಿ ಅಥವಾ ಸರ್ಕಾರಿ ಸಾಲಪತ್ರಗಳನ್ನು ರೀಟೇಲ್ ಹೂಡಿಕೆದಾರರು ನೇರವಾಗಿ ಖರೀದಿಸಲು ಅಥವಾ ಮಾರಾಟ ಮಾಡಲು ರೀಟೇಲ್ ಡೈರೆಕ್ಟ್ ಸ್ಕೀಮ್ ಅವಕಾಶ ಕಲ್ಪಿಸುತ್ತದೆ. 2020ರಲ್ಲಿ ಆರ್ಬಿಐ ಈ ಸ್ಕೀಮ್ ಅನ್ನು ಆರಂಭಿಸಿತು. ಕೇಂದ್ರ ಸರ್ಕಾರದ ಸಾಲಪತ್ರಗಳು, ರಾಜ್ಯ ಸರ್ಕಾರಗಳ ಸಾಲಪತ್ರಗಳು, ಜಿಪಿಎನ್, ಬೇರರ್ ಬಾಂಡ್, ಬಿಎಲ್ಎ ಇತ್ಯಾದಿಗಳು ಗವರ್ನ್ಮೆಂಟ್ ಸೆಕ್ಯೂರಿಟಿಗಳ ಪಟ್ಟಿಗೆ ಬರುತ್ತದೆ. ಸಾವರೀನ್ ಗೋಲ್ಡ್ ಬಾಂಡ್ಗಳೂ ಕೂಡ ಇದರಡಿ ಬರುತ್ತವೆ.
ಇದನ್ನೂ ಓದಿ: ರೆಪೋ ದರದಲ್ಲಿ ಬದಲಾವಣೆ ಇಲ್ಲ; ಶೇ. 6.5ರ ಬಡ್ಡಿದರ ಮುಂದುವರಿಕೆ
ಸರ್ಕಾರಗಳು ಸಾರ್ವಜನಿಕರಿಂದ ಸಾಲ ಪಡೆಯಲು ಈ ಸೆಕ್ಯೂರಿಟಿಗಳನ್ನು ವಿತರಿಸುತ್ತವೆ. ಬ್ಯಾಂಕುಗಳು, ಸಹಕಾರಿ ಸಂಸ್ಥೆಗಳು, ಗ್ರಾಮೀಣ ಬ್ಯಾಂಕುಗಳು, ಪ್ರಾವಿಡೆಂಟ್ ಫಂಡ್ಗಳು, ಇನ್ಷೂರೆನ್ಸ್ ಕಂಪನಿಗಳು, ಮ್ಯೂಚುವಲ್ ಫಂಡ್ಗಳು, ಎನ್ಬಿಎಫ್ಸಿಗಳು, ಪೆನ್ಷನ್ ಫಂಡ್ಗಳು ಇತ್ಯಾದಿ ಸಾಂಸ್ಥಿಕ ಹೂಡಿಕೆದಾರರು ಮಾತ್ರವೇ ಗವರ್ನ್ಮೆಂಟ್ ಸೆಕ್ಯೂರಿಟಿಗಳನ್ನು ಖರೀದಿಸುತ್ತಿದ್ದರು. 2020ರಲ್ಲಿ ರೀಟೇಲ್ ಡೈರೆಕ್ಟ್ ಸ್ಕೀಮ್ ಅನ್ನು ಆರಂಭಿಸಲಾಗಿದ್ದು ಜನಸಾಮಾನ್ಯ ರೀಟೆಲ್ ಹೂಡಿಕೆದಾರರೂ ಕೂಡ ಈ ಸೆಕ್ಯೂರಿಟಿಗಳನ್ನು ಖರೀದಿಸಬಹುದು. ಈ ಸ್ಕೀಮ್ನಿಂದ ಸರ್ಕಾರಕ್ಕೆ ಅನುಕೂಲವೆಂದರೆ, ಕಡಿಮೆ ಬಡ್ಡಿದರಕ್ಕೆ ಅದಕ್ಕೆ ಸಾಲ ಸಿಗುತ್ತದೆ.
ರೀಟೇಲ್ ಡೈರೆಕ್ಟ್ ಸ್ಕೀಮ್ ಬಳಸುವುದು ಹೇಗೆ?
ಗವರ್ನ್ಮೆಂಟ್ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಬಯಸುವವರು ರೀಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಅನ್ನು ತೆರೆಯಬೇಕಾಗುತ್ತದೆ. ಅದರ ಪೋರ್ಟಲ್ ವಿಳಾಸ ಇಲ್ಲಿದೆ: rbiretaildirect.org.in
ಖಾತೆ ತೆರೆಯುವವರ ಬಳಿ ಈ ಕೆಳಕಾಣಿಸಿದವು ಇರಬೇಕು:
- ಭಾರತದಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರಬೇಕು
- ಪ್ಯಾನ್ ಕಾರ್ಡ್
- ಆಧಾರ್, ಪಾಸ್ಪೋರ್ಟ್, ಡಿಎಲ್ ಇತ್ಯಾದಿ ಅಧಿಕೃತ ಕೆವೈಸಿ ದಾಖಲೆ
- ಸಕ್ರಿಯ ಇಮೇಲ್ ಐಡಿ
- ನೊಂದಾಯಿತ ಮೊಬೈಲ್ ನಂಬರ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ