ನವದೆಹಲಿ, ನವೆಂಬರ್ 29: ಭಾರತದ ಅತಿದೊಡ್ಡ ಸಂಸ್ಥೆಯಾದ ರಿಲಾಯನ್ಸ್ ಗ್ರೂಪ್ ಇದೀಗ ಅಮೆರಿಕದ ವೇವ್ಟೆಕ್ ಹೀಲಿಯಂ ಎನ್ನುವ ಸಂಸ್ಥೆಯ ಶೇ. 21ರಷ್ಟು ಪಾಲನ್ನು ಖರೀದಿಸಿದೆ. 12 ಮಿಲಿಯನ್ ಡಾಲರ್ (ಸುಮಾರು 101 ಕೋಟಿ ರೂ) ಮೊತ್ತಕ್ಕೆ ಈ ವ್ಯವಹಾರ ನಡೆದಿರುವುದು ತಿಳಿದುಬಂದಿದೆ. ರಿಲಾಯನ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆಯಾದ ರಿಲಾಯನ್ಸ್ ಫೈನಾನ್ಸ್ ಅಂಡ್ ಇನ್ವೆಸ್ಟ್ಮೆಂಟ್ಸ್ ಯುಎಸ್ಎ ನವೆಂಬರ್ 27ರಂದು ವೇವ್ಟೆಕ್ ಹೀಲಿಯಂ ಕಂಪನಿಯೊಂದಿಗೆ ಷೇರು ಖರೀದಿ ಒಪ್ಪಂದ ಮಾಡಿಕೊಂಡಿದೆ. ಈ ವಿಚಾರವನ್ನು ರಿಲಾಯನ್ಸ್ ಇಂಡಸ್ಟ್ರೀಸ್ ತನ್ನ ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.
‘ಇಂಗಾಲ ಮುಕ್ತ ಇಂಧನದ ಅನ್ವೇಷಣೆ ಮತ್ತು ಉತ್ಪಾದನಾ ಬಿಸಿನೆಸ್ ಅನ್ನು ವಿಸ್ತರಿಸುವ ಕಾರ್ಯತಂತ್ರದ ಭಾಗವಾಗಿ ಈ ಷೇರು ಪಾಲು ಖರೀದಿ ಮಾಡಲಾಗಿದೆ. ಈ ವಹಿವಾಟಿಗೆ ಸರ್ಕಾರದ ಅಥವಾ ನಿಯಂತ್ರಕರ ಅನುಮೋದನೆಯ ಅವಶ್ಯಕತೆ ಇರಲಿಲ್ಲ,’ ಎಂದೂ ತನ್ನ ಫೈಲಿಂಗ್ಲ್ಲಿ ಆರ್ಐಎಲ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ನಿರಾಸೆ ಮೂಡಿಸಿದ ಜಿಡಿಪಿ ದರ; ಎರಡನೇ ಕ್ವಾರ್ಟರ್ನಲ್ಲಿ ಶೇ. 5.4ರಷ್ಟು ಮಾತ್ರ ಬೆಳೆದ ಆರ್ಥಿಕತೆ
ಅಮೆರಿಕದ ಡೆನ್ವರ್ನಲ್ಲಿರುವ ವೇವ್ಟೆಕ್ ಹೀಲಿಯಂ ಸಂಸ್ಥೆ 2021ರ ಜುಲೈ 2ರಂದು ಆರಂಭವಾಗಿದ್ದು ಎನ್ನುವ ಮಾಹಿತಿ ಇದೆ. ಇದು ಹೀಲಿಯಂ ನಿಕ್ಷೇಪಗಳಿರುವ ಸ್ಥಳಗಳನ್ನು ಖರೀದಿಸಿ, ಅದರಿಂದ ಹೀಲಿಯಂ ಅನಿಲವನ್ನು ತೆಗೆಯುವ ಕಾರ್ಯದಲ್ಲಿ ಪರಿಣಿತಿ ಹೊಂದಿದೆ. ಈ ವರ್ಷವೇ ಇದರ ಕಾರ್ಯಾಚರಣೆ ಆರಂಭವಾಗಿದೆ.
ಬಹಳ ಮುಖ್ಯವಾಗಿರುವ ಅನಿಲಗಳಲ್ಲಿ ಹೀಲಿಯಂ ಒಂದು. ವೈದ್ಯಕೀಯ ಕ್ಷೇತ್ರದಲ್ಲಿ ಇದು ಬಹಳ ಅಗತ್ಯ ಇದೆ. ವೈಜ್ಞಾನಿಕ ಸಂಶೋಧನೆ, ಏರೋಸ್ಪೇಸ್, ಫೈಬರ್ ಆಪ್ಟಿಕ್ಸ್, ಎಲೆಕ್ಟ್ರಾನಿಕ್ಸ್ ಮೊದಲಾದ ಕ್ಷೇತ್ರಗಳಲ್ಲಿ ಇದರ ಬಳಕೆ ಹೆಚ್ಚಿದೆ. ಸೆಮಿಕಂಡಕ್ಟರ್ ಕ್ಷೇತ್ರಕ್ಕೂ ಇದರ ಅವಶ್ಯಕತೆ ಇದೆ. ಎಐ ಮತ್ತು ಡಾಟಾ ಸೆಂಟರ್ಗಳು ಹೆಚ್ಚುತ್ತಿರುವುದರಿಂದ ಹೀಲಿಯಂಗೆ ಮುಂದಿನ ದಿನಗಳಲ್ಲಿ ವಿಪರೀತ ಬೇಡಿಕೆ ಬರಬಹುದು.
ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಭಾರತದಲ್ಲಿ ಒಳ್ಳೆಯ ಕೆಲಸಗಳಾಗುತ್ತಿವೆ: ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್ ಅನಿಸಿಕೆ
ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್ಫ್ರಾಸ್ಟ್ರಕ್ಚರ್ ಅನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕಾಗಿ ವಿಶ್ವದ ನಂಬರ್ ಒನ್ ಚಿಪ್ ಸಂಸ್ಥೆಯಾದ ನವಿಡಿಯಾ ಜೊತೆ ರಿಲಾಯನ್ಸ್ ಒಪ್ಪಂದ ಮಾಡಿಕೊಂಡಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ನಿರ್ಮಿಸಿರುವ ಹೊಸ ಡಾಟಾ ಸೆಂಟರ್ನಲ್ಲಿ ನವಿಡಿಯಾದ ಬ್ಲ್ಯಾಕ್ವೆಲ್ ಎಐ ಚಿಪ್ಗಳನ್ನು ಬಳಸಲು ನಿರ್ಧರಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ