Reliance Industries: ರಿಲಯನ್ಸ್ ಇಂಡಸ್ಟ್ರೀಸ್ಗೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲೆಯ 15,479 ಕೋಟಿ ರೂ. ಲಾಭ
ಪ್ರಸಕ್ತ ಹಣಕಾಸು ವರ್ಷದ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆಯ ಕ್ರೋಡೀಕೃತ ಲಾಭವಾದ ರೂ. 15,479 ಕೋಟಿಗಳನ್ನು ದಾಖಲಿಸಿದೆ. ಆ ಬಗ್ಗೆ ವಿವರ ಇಲ್ಲಿದೆ.
2021ರ ಸೆಪ್ಟೆಂಬರ್ಗೆ (ಜುಲೈನಿಂದ ಸೆಪ್ಟೆಂಬರ್) ಕೊನೆಯಾದ ತ್ರೈಮಾಸಿಕಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ನಿಂದ ದಾಖಲೆಯ ಕ್ರೋಡೀಕೃತ ಲಾಭವಾದ 15,479 ಕೋಟಿ ರೂಪಾಯಿ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 46ರಷ್ಟು ಹೆಚ್ಚಳವಾಗಿದೆ. ರೀಟೇಲ್, ಡಿಜಿಟಲ್, ತೈಲದಿಂದ ರಾಸಾಯನಿಕದ ತನಕ (O2C) ಸೆಗ್ಮೆಂಟ್ಗಳು ತಮ್ಮ ಕೊಡುಗೆ ನೀಡಿವೆ. ಎಲ್ಲ ಉದ್ಯಮವು ಕೊವಿಡ್ ಮುಂಚಿನ ಹಂತಕ್ಕಿಂತ ಹೆಚ್ಚಿನ ಬೆಳವಣಿಗೆ ಕಂಡಿದೆ. ಎರಡನೇ ತ್ರೈಮಾಸಿಕದಲ್ಲಿ ಡಿಜಿಟಲ್ ಸರ್ವೀಸಸ್ ದಾಖಲೆಯ ವ್ಯಾಪಾರವನ್ನು ಮಾಡಿದೆ. ವರ್ಷದ ಹಿಂದೆ ಅವಧಿಯಲ್ಲಿ 10,602 ಕೋಟಿ ರೂಪಾಯಿ ಬಂದಿತ್ತು. 2021ರ ಏಪ್ರಿಲ್ನಿಂದ ಜೂನ್ ತ್ರೈಮಾಸಿಕದಲ್ಲಿ 13,806 ಕೋಟಿ ಲಾಭ ಆಗಿದ್ದು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 12.1ರಷ್ಟು ಲಾಭದಲ್ಲಿ ಬೆಳವಣಿಗೆ ಆಗಿದೆ.
2021ರ ಸೆಪ್ಟೆಂಬರ್ನಲ್ಲಿ ಕ್ರೋಡೀಕೃತ ಆದಾಯ 1.74 ಲಕ್ಷ ಕೋಟಿ ರೂಪಾಯಿ ಬಂದಿದೆ. ಒಂದು ವರ್ಷದ ಹಿಂದೆ ಬಂದಿದ್ದ 1.16 ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದರೆ ಶೇ 49.8ರಷ್ಟು ಹೆಚ್ಚಳವಾಗಿದೆ ಎಂದು ಬಿಎಸ್ಇ ಫೈಲಿಂಗ್ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 20.6ರಷ್ಟು ಬೆಳವಣಿಗೆ ದಾಖಲಿಸಿದೆ. “Q2FY22ರಲ್ಲಿ ರಿಲಯನ್ಸ್ ಪ್ರಬಲ ಪ್ರದರ್ಶನವನ್ನು ನೀಡಿದೆ. ಇದು ನಮ್ಮ ಉದ್ಯಮದ ಬಲವನ್ನು ತೋರಿಸುತ್ತದೆ ಹಾಗೂ ಭಾರತೀಯ ಮತ್ತು ಜಾಗತಿಕ ಚೇತರಿಕೆಗೆ ಉತ್ತೇಜನ ನೀಡಿದೆ. ನಮ್ಮ ಎಲ್ಲ ಉದ್ಯಮವು ಕೊವಿಡ್ ಮುಂಚಿನ ಮಟ್ಟಕ್ಕಿಂತ ಬೆಳವಣಿಗೆ ಕಂಡಿದೆ,” ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.
ಕಾರ್ಯನಿರ್ವಹಣೆ ಮತ್ತು ಹಣಕಾಸು ಪ್ರದರ್ಶನವು ರೀಟೇಲ್ ಸೆಗ್ಮೆಂಟ್ ಮತ್ತು ತೈಲದಿಂದ ರಾಸಾಯನಿಕದ ತನ (O2C) ಹಾಗೂ ಡಿಜಿಟಲ್ ಸೇವೆ ಉದ್ಯಮದಲ್ಲಿ ಸುಸ್ಥಿರವಾದ ಬೆಳವಣಿಗೆ ದಾಖಲಿಸಿದೆ ಎಂದು ಅವರು ತಿಳಿಸಿದ್ದಾರೆ. ಜಿಯೋ ಭಾರತದ ಬ್ರಾಡ್ಬ್ಯಾಂಡ್ ಮಾರುಕಟ್ಟೆಯಲ್ಲಿ ಬದಲಾವಣೆ ತರುತ್ತಿದೆ ಮತ್ತು ಈ ವಲಯದಲ್ಲಿ ಹೊಸ ಬೆಂಚ್ಮಾರ್ಕ್ ಸಿದ್ಧಪಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೀಕೃತ ಲಾಭ ಕಂಪೆನಿಯದು ಶೇ 44.1ರಷ್ಟು ಬೆಳವಣಿಗೆ ಆಗಿದ್ದು, 9228 ಕೋಟಿ ರೂಪಾಯಿ ಆಗಿದ್ದು, ಸಗಟು ಆದಾಯ ವರ್ಷದಿಂದ ವರ್ಷಕ್ಕೆ ಶೇ 68.8ರಷ್ಟು ಹೆಚ್ಚಾಗಿದ್ದು, 1.08 ಲಕ್ಷ ರೂಪಾಯಿ ಆಗಿದೆ.
ಅಕ್ಟೋಬರ್ 19ನೇ ತಾರೀಕಿನಂದು ರಿಲಯನ್ಸ್ ಇಂಡಸ್ಟ್ರೀಸ್ ಬೆಲೆ 2750 ರೂಪಾಯಿ ತಲಯಪಿದ ಮೇಲೆ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು 18 ಲಕ್ಷ ಕೋಟಿ ರೂಪಾಯಿ ಮುಟ್ಟಿತು. ಸೌರಶಕ್ತಿ ಉದ್ಯಮದಲ್ಲಿ ಹಲವು ವ್ಯವಹಾರಗಳು ಬಂದ ಹಿನ್ನೆಲೆಯಲ್ಲಿ ಈ ಸ್ಟಾಕ್ ಜುಲೈ ಆರಂಭದಿಂದ ಈಚೆಗೆ ಶೇ 24ರಷ್ಟು ಏರಿಕೆ ಕಂಡಿದ್ದು, ಮಾರುಕಟ್ಟೆ ಬಂಡವಾಳ ಮೌಲ್ಯ 18.3 ಲಕ್ಷ ಕೋಟಿ ರೂಪಾಯಿ ಮುಟ್ಟಿತು.
ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ಲಾಭ 3528 ಕೋಟಿ ಬಂದಿದೆ. 2021ರ ಜೂನ್ ತ್ರೈಮಾಸಿಕದಲ್ಲಿ 3501 ಕೋಟಿ ರೂ. ಲಾಭ ಬಂದಿತ್ತು. ಆದಾಯವು ಕಳೆದ ತ್ರೈಮಾಸಿಕಕ್ಕಿಂತ ಶೇ 4ರಷ್ಟು ಹೆಚ್ಚಾಗಿ 18735 ಕೋಟಿ ತಲುಪಿದೆ. ಜಿಯೀ ಆವರೇಜ್ ರೆವೆನ್ಯೂ ಪರ್ ಯೂಸರ್ (ARPU) ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಬ್ಬ ಸಬ್ಸ್ಕ್ರೈಬರ್ಗೆ ತಿಂಗಳಿಗೆ 143.60 ರೂಪಾಯಿ ಆಗಿದೆ. ಒಟ್ಟಾರೆ ಡೇಟಾ ಟ್ರಾಫಿಕ್ ಈ ತ್ರೈಮಾಸಿಕದಲ್ಲಿ ಶೇ 50.9ರಷ್ಟು ಹೆಚ್ಚಾಗಿ 23.0 ಬಿಲಿಯನ್ ಜಿಬಿ ಡೇಟಾ ಬಳಕೆ ಆಗಿದೆ. ಇನ್ನು ಈ ತ್ರೈಮಾಸಿಕದಲ್ಲಿ 2.38 ಕೋಟಿ ಗ್ರಾಹಕರು ಸೇರ್ಪಡೆ ಆಗಿ, ಒಟ್ಟು ಸಂಖ್ಯೆ 42.95 ಕೋಟಿ ತಲುಪಿದ್ದಾರೆ.
ರಿಲಯನ್ಸ್ ರೀಟೇಲ್ ಆದಾಯ ಶೇ 18ರಷ್ಟು ಹೆಚ್ಚಾಗಿ 45,450 ಕೋಟಿ ಆಗಿದೆ. ಹಿಂದಿನ ತ್ರೈಮಾಸಿಕದಲ್ಲಿ 38,563 ಕೋಟಿ ರೂ. ಆಗಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ 41,124 ಕೋಟಿ ರೂ ಆಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 74ರಷ್ಟು ನಿವ್ವಳ ಲಾಭ ಹೆಚ್ಚಾಗಿ 1695 ಕೋಟಿ ರೂಪಾಯಿ ಮುಟ್ಟಿದೆ.
ಇದನ್ನೂ ಓದಿ: Reliance Industries: ಫೋರ್ಬ್ಸ್ನಿಂದ ಭಾರತದ ಟಾಪ್ 1 ಉದ್ಯೋಗದಾತ ಸಂಸ್ಥೆಯಾಗಿ ರಿಲಯನ್ಸ್ ಇಂಡಸ್ಟ್ರೀಸ್ ಆಯ್ಕೆ