
ನವದೆಹಲಿ, ಅಕ್ಟೋಬರ್ 19: ರಿಲಯನ್ಸ್ ಇಂಡಸ್ಟ್ರೀಸ್ನ ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒಗೆ ಸಾಂಸ್ಥಿಕ ಹೂಡಿಕೆದಾರರಿಂದ ನಿರೀಕ್ಷೆಮೀರಿದ ಸ್ಪಂದನೆ ಸಿಕ್ಕಿದೆ. 8,110 ಕೋಟಿ ರೂ ಆಂಕರ್ ಬುಕ್ಗೆ ದಾಖಲೆಯ ಎರಡೂವರೆ ಲಕ್ಷ ಕೋಟಿ ರೂ ಮೊತ್ತದಷ್ಟು ಬಿಡ್ಡಿಂಗ್ ಬಂದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆಯ ವರದಿ ತಿಳಿಸಿದೆ. ಅಂದರೆ, ಲಭ್ಯ ಇರುವ ಅವಕಾಶಕ್ಕೆ 30 ಪಟ್ಟು ಹೆಚ್ಚು ಬೇಡಿಕೆ ವ್ಯಕ್ತವಾಗಿದೆ.
ಐಪಿಒದಲ್ಲಿ ಆಂಕರ್ ಬುಕ್ ಎಂದರೆ ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಾಗಿರುವ ಷೇರುಗಳು. ಸಾಂಸ್ಥಿಕ ಹೂಡಿಕೆದಾರರೆಂದರೆ ಮ್ಯೂಚುವಲ್ ಫಂಡ್ಗಳು, ಇಪಿಎಫ್ ಫಂಡ್ಗಳು, ಇನ್ಷೂರೆನ್ಸ್ ಸಂಸ್ಥೆಗಳು, ಜಾಗತಿಕ ಹೂಡಿಕೆದಾರ ಸಂಸ್ಥೆಗಳು, ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು ಇತ್ಯಾದಿ ಹೂಡಿಕೆ ಸಂಸ್ಥೆಗಳು.
ಜಿಯೋ ಪ್ಲಾಟ್ಫಾರ್ಮ್ಸ್ನದ್ದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಆಗಿದೆ. ಇವತ್ತ, ಅಂದರೆ ಅಕ್ಟೋಬರ್ 19ರಂದು ಸಾಂಸ್ಥಿಕ ಹೂಡಿಕೆದಾರರಿಗೆ ಬಿಡ್ ಸಲ್ಲಿಸಲು ಇದ್ದ ದಿನಾಂಕ. ದೇಶ ವಿದೇಶಗಳಿಂದ ಹಲವಾರು ಸಾಂಸ್ಥಿಕ ಹೂಡಿಕೆದಾರರು ಬಿಡ್ ಸಲ್ಲಿಸಿವೆ. ಬಿಡ್ ಸಲ್ಲಿಸಿದ ಜಾಗತಿಕ ಹೂಡಿಕೆ ಸಂಸ್ಥೆಗಳಲ್ಲಿ ಬ್ಲ್ಯಾಕ್ರಾಕ್, ಕ್ಯಾಪಿಟಲ್ ಗ್ರೂಪ್, ಫಿಡೆಲಿಟಿ ಇನ್ವೆಸ್ಟ್ಮೆಂಟ್ಸ್, ಟಿ ರೋವ್ ಪ್ರೈಸ್, ಶ್ರೋಡರ್ಸ್, ಜೆಪಿ ಮಾರ್ಗನ್ ಅಸೆಟ್ ಮ್ಯಾನೇಜ್ಮೆಂಟ್, ಫ್ರಾಂಕ್ಲಿನ್ ಟೆಂಪಲ್ಟನ್, ಇನ್ವೆಸ್ಟೋ, ಜೇನಸ್ ಹೆಂಡರ್ಸನ್ ಸಂಸ್ಥೆಗಳು ಸೇರಿವೆ.
ಇದನ್ನೂ ಓದಿ: ಜಿಯೋ ಐಪಿಒ: 2ಜಿ ಗ್ರಾಹಕರನ್ನು ಸೆಳೆಯುವುದರಿಂದ ಹಿಡಿದು ಎಐವರೆಗೆ ವ್ಯವಹಾರ ವೃದ್ಧಿಸಲು ಜಿಯೋಗೆ ವಿಫುಲ ಅವಕಾಶ
ವಿದೇಶಗಳ ಸರ್ಕಾರಿ ಹೂಡಿಕೆ ಸಂಸ್ಥೆಗಳ ಪೈಕಿ ಸಿಂಗಾಪುರ್ ಜಿಐಸಿ, ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ, ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿ, ನಾರ್ವೆಯ ನಾರ್ಗೆಸ್ ಬ್ಯಾಂಕ್ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ಸೇರಿವೆ.
ಭಾರತದ ಸಾಂಸ್ಥಿಕ ಹೂಡಿಕೆದಾರರಲ್ಲಿ ಎಸ್ಬಿಐ ಮ್ಯೂಚುವಲ್ ಫಂಡ್, ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್, ಎಚ್ಡಿಎಫ್ಸಿ ಮ್ಯೂಚುವಲ್ ಫಂಡ್, ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್, ನಿಪ್ಪಾನ್ ಮ್ಯೂಚುವಲ್ ಫಂಡ್, ಕೋಟಕ್ ಮಹೀಂದ್ರ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಕಂಪನಿಗಳಿವೆ.
ಹಾಗೆಯೇ, ಎಲ್ಐಸಿ, ಎಚ್ಡಿಎಫ್ಸಿ ಲೈಫ್ ಇನ್ಷೂರೆನ್ಸ್, ಎಸ್ಬಿಐ ಲೈಫ್, ಎಸ್ಬಿಐ ಪೆನ್ಷನ್ ಫಂಡ್ಸ್, ಎಚ್ಡಿಎಫ್ಸಿ ಪೆನ್ಷನ್, ಐಸಿಐಸಿಐ ಪ್ರುಡೆನ್ಷಿಯಲ್ ಇತ್ಯಾದಿ ಇನ್ಷೂರೆನ್ಸ್ ಮತ್ತು ಪೆನ್ಷನ್ ಫಂಡ್ಗಳೂ ಕೂಡ ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒದಲ್ಲಿ ಬಿಡ್ ಸಲ್ಲಿಸಿವೆ.
ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒದಲ್ಲಿ ಸಾರ್ವಜನಿಕರು ಅಥವಾ ರೀಟೇಲ್ ಹೂಡಿಕೆದಾರರಿಗೆ ಅಕ್ಟೋಬರ್ 21ರಿಂದ 23ರವರೆಗೆ ಅವಕಾಶ ಕೊಡಲಾಗಿದೆ. ಪ್ರತಿ ಷೇರಿಗೆ 1,065-1,119 ರೂ ಬೆಲೆ ನಿಗದಿ ಮಾಡಲಾಗಿದೆ. ಜಿಯೋ ಪ್ಲಾಟ್ಫಾರ್ಮ್ಸ್ ಈ ಐಪಿಒದಿಂದ ಒಟ್ಟಾರೆ 30,123 ಕೋಟಿ ರೂ ಬಂಡವಾಳ ಸಂಗ್ರಹಿಸುವ ಗುರಿ ಹೊಂದಿದೆ. ಈ ಹಣವನ್ನು ಜಿಯೋದ ಸಾಲಗಳನ್ನು ತೀರಿಸಲು ಹೆಚ್ಚಾಗಿ ಬಳಕೆಯಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ