ಜಿಯೋ ಐಪಿಒ: 2ಜಿ ಗ್ರಾಹಕರನ್ನು ಸೆಳೆಯುವುದರಿಂದ ಹಿಡಿದು ಎಐವರೆಗೆ ವ್ಯವಹಾರ ವೃದ್ಧಿಸಲು ಜಿಯೋಗೆ ವಿಫುಲ ಅವಕಾಶ
ರಿಲಯನ್ಸ್ನ ಜಿಯೋ ಐಪಿಒ (Jio IPO) ಹಿನ್ನೆಲೆಯಲ್ಲಿ ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ಸಕಾರಾತ್ಮಕ ವರದಿಗಳನ್ನು ನೀಡಿವೆ. 2ಜಿ ನೆಟ್ವರ್ಕ್ ಬಳಸುತ್ತಿರುವ ಗ್ರಾಹಕರ ಸಂಖ್ಯೆ ಬಹಳ ಅಧಿಕ ಇದ್ದು, ಅವರನ್ನು 4ಜಿ, 5ಜಿ ನೆಟ್ವರ್ಕ್ಗೆ ಸೆಳೆಯುವ ಅವಕಾಶ ಇದೆ. ಇದೂ ಸೇರಿ, ಜಿಯೋ ಪ್ಲಾಟ್ಫಾರ್ಮ್ಸ್ಗೆ ವ್ಯವಹಾರ ವೃದ್ಧಿಸುವ ವಿಫುಲ ಅವಕಾಶಗಳನ್ನು ಬ್ರೋಕರೇಜ್ ಸಂಸ್ಥೆಗಳು ಪಟ್ಟಿ ಮಾಡಿವೆ.

ಮುಂಬೈ, ಅಕ್ಟೋಬರ್ 18: ರಿಲಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ಜಿಯೋ ಪ್ಲಾಟ್‌ಫಾರ್ಮ್ಸ್‌ನ (Jio Platforms) ಐಪಿಒ ಆರಂಭವಾಗುತ್ತಿರುವ ಬೆನ್ನಲ್ಲೇ, ಜಿಇಪಿಎಲ್ ಕ್ಯಾಪಿಟಲ್, ವೆಂಚುರಾ ಸೆಕ್ಯುರಿಟೀಸ್ ಮತ್ತು ಎಸ್‌ಎಂಸಿ ಗ್ಲೋಬಲ್ ಮುಂತಾದ ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ಜಿಯೋದ ಮುಂದಿನ ಹಂತದ ಬೆಳವಣಿಗೆಯ ಸಾಮರ್ಥ್ಯದ ಕುರಿತು ವರದಿಗಳನ್ನು ಪ್ರಕಟಿಸಿವೆ. 2ಜಿ ನೆಟ್ವರ್ಕ್ನಿಂದ ಗ್ರಾಹಕರನ್ನು 4ಜಿ ಮತ್ತು 5ಜಿ ನೆಟ್ವರ್ಕ್ಗೆ ಅಪ್‌ಗ್ರೇಡ್ ಮಾಡಲು ಅವಕಾಶಗಳಿವೆ. ಹೋಮ್ ಬ್ರಾಡ್ಬ್ಯಾಂಡ್, ಎಂಟರ್‌ಪ್ರೈಸ್ ಕ್ಲೌಡ್ ಮತ್ತು ಎಐ ತಂತ್ರಜ್ಞಾನವು ಜಿಯೋಗೆ ಹೆಚ್ಚಿನ ಬ್ಯುಸಿನೆಸ್ ಅವಕಾಶಗಳನ್ನು ನೀಡಲು ಪ್ರಮುಖ ಪಾತ್ರ ವಹಿಸಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
2G ಬಳಕೆದಾರರನ್ನು 4G/5G ಗೆ ಅಪ್‌ಗ್ರೇಡ್ ಮಾಡುವುದು
ಜಿಯೋದ ಒಟ್ಟು ಗ್ರಾಹಕರ ಸಂಖ್ಯೆ ಬೃಹತ್ ಮಟ್ಟದಲ್ಲಿದ್ದರೂ, ಮಾರುಕಟ್ಟೆಯಲ್ಲಿ ಇನ್ನೂ ಲಕ್ಷಾಂತರ ಮಂದಿ 2G ನೆಟ್‌ವರ್ಕ್ ಬಳಸುತ್ತಿದ್ದಾರೆ. ಈ 2G ಬಳಕೆದಾರರನ್ನು 4G ಮತ್ತು 5G ಸೇವೆಗಳಿಗೆ ಸೆಳೆಯುವುದು ಜಿಯೋಗೆ ಇರುವ ದೊಡ್ಡ ಅವಕಾಶಗಳಲ್ಲಿ ಒಂದಾಗಿದೆ. 2026ರ ಜೂನ್ ವೇಳೆಗೆ ಜಿಯೋ ಪ್ಲಾಟ್ಫಾರ್ಮ್ಗಳ ಗ್ರಾಹಕರ ಸಂಖ್ಯೆ 533.3 ಮಿಲಿಯನ್ ಇದೆ. ಇದರ ಹೊರತಾಗಿ, 2ಜಿ ನೆಟ್ವರ್ಕ್ ಬಳಸುತ್ತಿರುವ ಜನರ ಸಂಖ್ಯೆ ಬಹಳ ದೊಡ್ಡದಿದೆ. GEPL Capital ವರದಿ ಪ್ರಕಾರ, 261 ಮಿಲಯನ್ ಬಳಕೆದಾರರು 2ಜಿ ನೆಟ್ವರ್ಕ್ನಲ್ಲಿ ಇದ್ದಾರೆ. ಇವರು 4ಜಿ ಅಥವಾ 5ಜಿ ಗೆ ವರ್ಗವಾದರೆ ಜಿಯೋಗೆ ದೊಡ್ಡ ಬ್ಯುಸಿನೆಸ್ ಅವಕಾಶ ಸಿಗುತ್ತದೆ. ಕಡಿಮೆ ಬೆಲೆಯ ಜಿಯೋಭಾರತ್ ಫೋನ್, ಡಿಜಿಟಲ್ ಸರ್ವಿಸ್ಗಳ ಸಂಯೋಜನೆ ಇವುಗಳು 2ಜಿ ಗ್ರಾಹಕರನ್ನು ಉನ್ನತ ನೆಟ್ವರ್ಕ್ಗೆ ಸೆಳೆಯಲು ಅನುಕೂಲ ಮಾಡಿಕೊಡುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹೋಮ್ ಬ್ರಾಂಡ್‌ಬ್ಯಾಂಡ್ ವಿಸ್ತರಣೆ
ಭಾರತದಲ್ಲಿ ಫಿಕ್ಸ್ಡ್ ಬ್ರಾಂಡ್‌ಬ್ಯಾಂಡ್ ಸೇವೆಗಳ ಬಳಕೆ ಇನ್ನೂ ಕಡಿಮೆ ಇರುವ ಕಾರಣ, JioFiber ಮತ್ತು JioAirFiber ಮೂಲಕ ಸಣ್ಣ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಗ್ರಾಹಕರನ್ನು ತಲುಪಲು ಅಪಾರ ಅವಕಾಶವಿದೆ ಎಂದು ಬ್ರೋಕರೇಜ್ ವರದಿಗಳು ತಿಳಿಸಿವೆ.
ಕೇವಲ ಟೆಲಿಕಾಂ ಅಲ್ಲ, ಟೆಕ್ನಾಲಜಿ ಪ್ಲಾಟ್‌ಫಾರ್ಮ್
ಜಿಯೋವನ್ನು ಕೇವಲ ಒಂದು ದೂರಸಂಚಾರ ಕಂಪನಿಯಾಗಿ ನೋಡದೆ, ಎಂಟರ್‌ಪ್ರೈಸ್ ಕ್ಲೌಡ್, ಒಟಿಟಿ ಮನರಂಜನೆ, ಗೇಮಿಂಗ್ ಮತ್ತು AI (ಕೃತಕ ಬುದ್ಧಿಮತ್ತೆ) ಆಧಾರಿತ ಸೇವೆಗಳನ್ನು ಒದಗಿಸುವ ಪ್ರಮುಖ ತಂತ್ರಜ್ಞಾನ ಕಂಪನಿಯಾಗಿಯೂ ಗುರುತಿಸಲಾಗಿದೆ.
ದೇಶೀಯ ತಂತ್ರಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು
ಜಿಯೋ ಅಭಿವೃದ್ಧಿಪಡಿಸಿರುವ ಸುಧಾರಿತ ತಂತ್ರಜ್ಞಾನಗಳನ್ನು ಮತ್ತು 5G ಪರಿಹಾರಗಳನ್ನು ಜಾಗತಿಕ ಮಟ್ಟದಲ್ಲಿ ಇತರ ದೇಶಗಳ ಟೆಲಿಕಾಂ ಕಂಪನಿಗಳಿಗೂ ಒದಗಿಸುವ ಮೂಲಕ ಆದಾಯದ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಸಜ್ಜಾಗಿದೆ.
ಇದನ್ನೂ ಓದಿ: ಅಂಬಾನಿ ಮತ್ತು ರಿಲಯನ್ಸ್ನ ಮೂರು ತಲೆಮಾರಿನ ಕಥೆ; ಗುರಿ, ಛಲ, ಕನಸುಗಳೊಂದಿಗೆ ಹೆಜ್ಜೆ
ಜಿಯೋಗೆ ಡಿಜಿಟಲ್ ಮಾರುಕಟ್ಟೆಯ ಬಲ
ಭಾರತದ ಟೆಲಿಕಾಂ ಮತ್ತು ಡಿಜಿಟಲ್ ಸರ್ವಿಸ್ ಉದ್ಯಮವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಮಾರುಟ್ಟೆಯಾಗಿದೆ ಎಂದು ಎಸ್‌ಎಂಸಿ ಗ್ಲೋಬಲ್ನ ವರದಿಯೊಂದು ಬಣ್ಣಿಸಿದೆ. ಅದರ ಪ್ರಕಾರ, ಡೇಟಾ ಬಳಕೆಯಲ್ಲಿ ಆಗುತ್ತಿರುವ ಹೆಚ್ಚಳ, 5ಜಿ ನೆಟ್ವರ್ಕ್ ವಿಸ್ತರಣೆ ಆಗುತ್ತಿರುವುದು, ಫೈಬರ್ ಬ್ರಾಡ್ಬ್ಯಾಂಡ್ ವ್ಯಾಪಿಸುತ್ತಿರುವುದು ಇವೆಲ್ಲವೂ ಮಾರುಕಟ್ಟೆಯನ್ನು ಗಣನೀಯವಾಗಿ ಹಿಗ್ಗಿಸುತ್ತಿದೆ.
ಬಂದೇ ಬಂತು ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ
- ಐಪಿಒ ದಿನಾಂಕ: 2026ರ ಅಕ್ಟೋಬರ್ 21-23ರವರೆಗೆ
- ಐಪಿಒ ಮೊತ್ತ: 30,213 ಕೋಟಿ ರೂ
- ಷೇರು ಬೆಲೆ: 1,065-1,119 ರೂ
- ಸಾಮಾನ್ಯರಿಗೆ ಹೂಡಿಕೆ ಅವಕಾಶ: 13,428 ರೂನಿಂದ 1,87,992 ರೂವರೆಗೆ
- ಲಿಸ್ಟಿಂಗ್ ದಿನಾಂಕ: ಅಕ್ಟೋಬರ್ 28
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




