FD Interest Rate: ಎಫ್ಡಿ ಬಡ್ಡಿ ದರ ಹೆಚ್ಚಿಸಿದ ಆ್ಯಕ್ಸಿಸ್ ಬ್ಯಾಂಕ್; ಇಲ್ಲಿದೆ ವಿವರ
ಆರ್ಬಿಐ ರೆಪೊ ದರ 25 ಮೂಲಾಂಶ ಹೆಚ್ಚಳ ಮಾಡಿದ ಎರಡೇ ದಿನಗಳಲ್ಲಿ ಆ್ಯಕ್ಸಿಸ್ ಬ್ಯಾಂಕ್ ಸ್ಥಿರ ಠೇವಣಿ ಬಡ್ಡಿ ದರ ಹೆಚ್ಚಳ ಮಾಡಿದೆ.
ನವದೆಹಲಿ: ಆರ್ಬಿಐ (RBI) ರೆಪೊ ದರ (Repo Rate) 25 ಮೂಲಾಂಶ ಹೆಚ್ಚಳ ಮಾಡಿದ ಎರಡೇ ದಿನಗಳಲ್ಲಿ ಆ್ಯಕ್ಸಿಸ್ ಬ್ಯಾಂಕ್ (Axis Bank) ಸ್ಥಿರ ಠೇವಣಿ (FD rates) ಬಡ್ಡಿ ದರ ಹೆಚ್ಚಳ ಮಾಡಿದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್ಡಿ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ. 7ರಿಂದ 45 ದಿನಗಳ ಅವಧಿಯ ಎಫ್ಡಿ ದರವೀಗ ಶೇ 3.50 ಆಗಿದೆ. 46ರಿಂದ 61 ದಿನಗಳ ಅವಧಿಯ ಎಫ್ಡಿ ಬಡ್ಡಿ ದರ ಶೇ 4 ಆಗಿದೆ. 61 ದಿನಗಳಿಂದ ಮೂರು ತಿಂಗಳವರೆಗಿನ ಎಫ್ಡಿ ಬಡ್ಡಿ ದರ ಶೇ 4.50 ಹಾಗೂ ಮೂರು ತಿಂಗಳುಗಳಿಂದ ಆರು ತಿಂಗಳ ಅವಧಿಯ ಎಫ್ಡಿ ದರ ಶೇ 4.75ಕ್ಕೆ ಹೆಚ್ಚಿಸಲಾಗಿದೆ.
6ರಿಂದ 9 ತಿಂಗಳ ಅವಧಿಯ ಎಫ್ಡಿಗೆ ಶೇ 5.75, 9ರಿಂದ 12 ತಿಂಗಳ ಅವಧಿಯ ಎಫ್ಡಿಗೆ ಶೇ 6ರ ಬಡ್ಡಿ ನಿಗದಿಪಡಿಸಲಾಗಿದೆ. ಒಂದು ವರ್ಷದಿಂದ ಒಂದೂವರೆ ವರ್ಷದ ಅವಧಿಯ ಎಫ್ಡಿಗೆ ಶೇ 6.75, ಒಂದೂವರೆ ವರ್ಷದಿಂದ ಮೇಲ್ಪಟ್ಟ ಎಫ್ಡಿಗೆ ಶೇ 7.10ರ ಬಡ್ಡಿ ನಿಗದಿಪಡಿಸಲಾಗಿದೆ. 13 ತಿಂಗಳುಗಳಿಂದ 2 ವರ್ಷಗಳ ವರೆಗಿನ ಎಫ್ಡಿಗೆ ಶೇ 6.75ರ ಬಡ್ಡಿ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: Repo Rate Hike; ಆರ್ಬಿಐ ರೆಪೊ ದರ ಮತ್ತೆ 25 ಮೂಲಾಂಶ ಹೆಚ್ಚಳ; ಹೆಚ್ಚಾಗಲಿದೆ ಇಎಂಐ ಮೊತ್ತ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಹಣಕಾಸು ನೀತಿ ಸಮಿತಿ ವರದಿ ಪ್ರಕಟಿಸಿದ್ದು, ರೆಪೊ ದರವನ್ನು ಮತ್ತೆ 25 ಮೂಲಾಂಶ ಹೆಚ್ಚಿಸಿ ಶೇ 6.50ಕ್ಕೆ ನಿಗದಿಪಡಿಸಿತ್ತು. ಇದರೊಂದಿಗೆ, 2022ರ ಮೇ ತಿಂಗಳ ನಂತರ ಸತತವಾಗಿ ಆರ್ಬಿಐ ರೆಪೊ ದರ ಹೆಚ್ಚಿಸುತ್ತಾ ಬಂದಂತಾಗಿದ್ದು, ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ ಆರ್ಬಿಐ 250 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದಂತಾಗಿತ್ತು. ಪರಿಣಾಮವಾಗಿ ಬ್ಯಾಂಕ್ಗಳು ಸಾಲ, ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸಲಿವೆ. ಇದೀಗ ಮೊದಲಾಗಿ ಆ್ಯಕ್ಸಿಸ್ ಬ್ಯಾಂಕ್ ಎಫ್ಡಿ ಬಡ್ಡಿ ದರ ಹೆಚ್ಚಳ ಮಾಡಿದೆ.
ಕಳೆದ ಬಾರಿ ಡಿಸೆಂಬರ್ 7ರಂದು ಆರ್ಬಿಐ ರೆಪೊ ದರವನ್ನು 35 ಮೂಲಾಂಶ ಹೆಚ್ಚಿಸಿ ಶೇಕಡಾ 6.25ಕ್ಕೆ ನಿಗದಿಪಡಿಸಿತ್ತು. ಪರಿಣಾಮವಾಗಿ ಸಾಲಗಳ ಮೇಲಿನ ಬಡ್ಡಿ ದರ, ಎಫ್ಡಿ ಸೇರಿದಂತೆ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರಗಳನ್ನೂ ಬ್ಯಾಂಕ್ಗಳು ಹೆಚ್ಚಿಸಿದ್ದವು. ಇದೀಗ ಮತ್ತೆ ರೆಪೊ ದರ ಹೆಚ್ಚಾಗಿರುವುದರಿಂದ ಬ್ಯಾಂಕ್ಗಳು ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ.