ಅತೀ ಕಡಿಮೆ ರುಪಾಯಿ ಮೌಲ್ಯ; ಡಾಲರ್ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರುಪಾಯಿ
Dollar vs Rupee: ಡಾಲರ್ ಎದುರು ರುಪಾಯಿ ಮೌಲ್ಯ ತೀರಾ ಕೆಳಗೆ ಕುಸಿದಿದೆ. ಮೊದಲ ಬಾರಿಗೆ ರುಪಾಯಿ 89ರ ಗಡಿ ದಾಟಿ ಹೋಗಿದೆ. ನ. 21ರಂದು ಒಂದು ಹಂತದಲ್ಲಿ ಡಾಲರ್ ಎದುರು ರುಪಾಯಿ 89.65ರ ಮಟ್ಟಕ್ಕೆ ಕುಸಿದಿತ್ತು. ಇದು ಸಾರ್ವಕಾಲಿಕ ಕಳಪೆ ಸಾಧನೆ ಎನಿಸಿದೆ. ಕೆಲ ಭಾರತೀಯ ತೈಲ ಸಂಸ್ಥೆಗಳ ಮೇಲೆ ಅಮೆರಿಕದ ನಿಷೇಧ, ಟ್ಯಾರಿಫ್ ಕ್ರಮ, ಡಾಲರ್ ಬಲವೃದ್ಧಿ, ಎಫ್ಐಐಗಳ ಹಿಂತೆಗೆತ ಇತ್ಯಾದಿ ಅಂಶಗಳು ರುಪಾಯಿಯನ್ನು ದುರ್ಬಲಗೊಳಿಸಿವೆ.

ನವದೆಹಲಿ, ನವೆಂಬರ್ 21: ಡಾಲರ್ ಎದುರು ರುಪಾಯಿ (Dollar vs Rupee) ಕರೆನ್ಸಿ ಮೌಲ್ಯದ ಕುಸಿತ ಮುಂದುವರಿದಿದೆ. ಇಂದು ಶುಕ್ರವಾರ ರುಪಾಯಿ ಮೌಲ್ಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಡಾಲರ್ ಎದುರು ರುಪಾಯಿ ಅಪಮೌಲ್ಯ ಮೊದಲ ಬಾರಿಗೆ 89ರ ಮಟ್ಟ ದಾಟಿದೆ. ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ 89.55ಕ್ಕೆ ಇಳಿದಿದೆ. ಇಂದಿನ ಟ್ರೇಡಿಂಗ್ನ ಒಂದು ಹಂತದಲ್ಲಿ ರುಪಾಯಿ 89.65ಕ್ಕೆ ಏರಿತ್ತು. ಇದು ರುಪಾಯಿ ಇತಿಹಾಸದಲ್ಲೇ ಕನಿಷ್ಠ ಮೌಲ್ಯ ಎನಿಸಿದೆ.
ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಡಾಲರ್ ಎದುರು ರುಪಾಯಿ 88.80 ಇದ್ದದ್ದು ಹೊಸ ಕನಿಷ್ಠ ಮಟ್ಟ ಎನಿಸಿತ್ತು. ಈಗ ನವೆಂಬರ್ ಮೂರನೇ ವಾರದಲ್ಲಿ ಅ ದಾಖಲೆ ಮುರಿದಿದೆ. ಒಂದೆರಡು ದಿನಗಳಲ್ಲಿ ಒಂದು ಡಾಲರ್ಗೆ 90 ರುಪಾಯಿ ಮಟ್ಟ ದಾಟಿದರೆ ಅಚ್ಚರಿ ಇಲ್ಲ.
ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ
ರುಪಾಯಿ ಇಷ್ಟು ಕುಸಿಯಲು ಏನು ಕಾರಣ?
ಅಮೆರಿಕನ್ ಡಾಲರ್ ಎದುರು ರುಪಾಯಿ ಬಹುತೇಕ ನಿರಂತರವಾಗಿ ಕುಸಿಯುತ್ತಾ ಬಂದಿದೆ. ಹಲವು ದಶಕಗಳಿಂದಲೂ ಇರುವ ಟ್ರೆಂಡ್ ಇದು. ಇದೀಗ ಕೆಲ ದಿನಗಳಿಂದ ತೀಕ್ಷ್ಣವಾಗಿ ರುಪಾಯಿ ಕುಸಿಯುತ್ತಿರುವುದು ಗಮನಾರ್ಹ. ಇರಾನ್ ತೈಲ ವ್ಯಾಪಾರದಲ್ಲಿ ತೊಡಗಿರುವ ಭಾರತೀಯ ಸಂಸ್ಥೆಗಳ ಮೇಲೆ ಅಮೆರಿಕ ನಿಷೇಧ ಹಾಕಿದ್ದು ಸೇರಿದಂತೆ ವಿವಿಧ ಅಂಶಗಳು ರುಪಾಯಿ ಕರೆನ್ಸಿಗೆ ಹಿನ್ನಡೆ ತಂದಿವೆ ಎಂದು ತಜ್ಞರು ಹೇಳುತ್ತಿದ್ದಾರೆ.
ಭಾರತೀಯ ಸಂಸ್ಥೆಗಳ ಮೇಲೆ ಅಮೆರಿಕದ ನಿಷೇಧದ ಜೊತೆಗೆ ಟ್ಯಾರಿಫ್ ಕಾರಣದಿಂದ ಭಾರತದ ರಫ್ತು ಶೇ. 11.8ರಷ್ಟು ಕಡಿಮೆಗೊಂಡಿರುವುದು, ಹಾಗು ಚಿನ್ನದ ಆಮದು ಹೆಚ್ಚಿರುವುದು, ಇದರಿಂದ ಭಾರತದ ಟ್ರೇಡ್ ಡೆಫಿಸಿಟ್ ಹೆಚ್ಚಾಗಿದೆ. ಇದು ಡಾಲರ್ ಎದುರು ರುಪಾಯಿ ಹೆಚ್ಚು ದುರ್ಬಲಗೊಳ್ಳಲು ಕಾರಣವಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.
ಇದನ್ನೂ ಓದಿ: ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್ಪರ್ಟ್ ದಾಮೋದರನ್ ಆತಂಕ
ವಿದೇಶೀ ಹೂಡಿಕೆಗಳ ಹಿಂತೆಗೆತದ ಪರಿಣಾಮವೂ…
ಡಾಲರ್ ಎದುರು ಅತ್ಯಂತ ದುರ್ಬಲ ಸಾಧನೆ ತೋರಿದ ಏಷ್ಯನ್ ಕರೆನ್ಸಿಗಳ ಸಾಲಿನಲ್ಲಿ ರುಪಾಯಿಯೂ ಇದೆ. ಅಮೆರಿಕ ಟ್ಯಾರಿಫ್ ಕ್ರಮ ಜಾರಿಗೊಳಿಸಿದಾಗಿನಿಂದ ರುಪಾಯಿ ಮೇಲೆ ಒತ್ತಡ ಹೆಚ್ಚೇ ಇದೆ. ಇದರ ಜೊತೆಗೆ ಭಾರತೀಯ ಷೇರು ಮಾರುಕಟ್ಟೆಯಿಂದ ವಿದೇಶೀ ಹೂಡಿಕೆದಾರರು ಈ ವರ್ಷ 16.5 ಬಿಲಿಯನ್ ಡಾಲರ್ ಹೂಡಿಕೆ ಹಿಂಪಡೆದಿರುವುದು ರುಪಾಯಿ ಮೇಲೆ ನಿರಂತರ ಒತ್ತಡ ಇರಿಸಿವೆ. ಇದರ ಜೊತೆಗೆ ಟ್ಯಾರಿಫ್ ಒತ್ತಡ ಹಾಗೂ ಡಾಲರ್ ಬಲವೃದ್ಧಿ ಇತ್ಯಾದಿ ವಿವಿಧ ಅಂಶಗಳು ರುಪಾಯಿಗೆ ಹಿನ್ನಡೆ ತಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




