ಚ್ಯಾಟ್ಜಿಪಿಟಿ ಇಷ್ಟವಾಯ್ತಾ? ಓಪನ್ಎಐನಿಂದ ಬರಲಿದೆ ಎಕ್ಸ್, ಫೇಸ್ಬಕ್ ರೀತಿ ಹೊಸ ಸೋಷಿಯಲ್ ಮೀಡಿಯಾ ಆ್ಯಪ್
OpenAI's new social media app: ಸ್ಯಾಮ್ ಆಲ್ಟ್ಮ್ಯಾನ್ ಸಿಇಒ ಆಗಿರುವ ಓಪನ್ ಎಐ ಸಂಸ್ಥೆ ಹೊಸ ಸೋಷಿಯಲ್ ಮೀಡಿಯಾ ಆ್ಯಪ್ವೊಂದನ್ನು ನಿರ್ಮಿಸುತ್ತಿದೆ. ಅದರ ಪ್ರೋಟೋಟೈಪ್ ಸಿದ್ಧವಾಗಿದ್ದು, ವಿವಿಧ ಪ್ರಯೋಗ ಮತ್ತು ಬಳಕೆ ಬಳಿಕ ಈ ಆ್ಯಪ್ ಬಿಡುಗಡೆ ಆಗಬಹುದು. ವರದಿಗಳ ಪ್ರಕಾರ, ಚ್ಯಾಟ್ಜಿಪಿಟಿಯ ಫೋಟೋ ಸೃಷ್ಟಿಯ ಫೀಚರ್ ಅನ್ನು ಹೊಸ ಆ್ಯಪ್ನಲ್ಲಿ ಬಳಸಿಕೊಳ್ಳಬಹುದು.

ಕ್ಯಾಲಿಫೋರ್ನಿಯಾ, ಏಪ್ರಿಲ್ 16: ಚ್ಯಾಟ್ಜಿಪಿಟಿ ಎನ್ನುವ ಇಂಟೆಲಿಜೆಂಟ್ ಮಾಡಲ್ ಅನ್ನು ಸೃಷ್ಟಿಸಿರುವ ಓಪನ್ಎಐ ಸಂಸ್ಥೆ ಈಗ ಎಕ್ಸ್ ಮಾದರಿಯಲ್ಲಿ ಹೊಸ ಸೋಷಿಯಲ್ ಮೀಡಿಯಾ ನೆಟ್ವರ್ಕ್ ರೂಪಿಸುತ್ತಿದೆ ಎನ್ನುವಂತಹ ವರದಿಗಳು ಬರುತ್ತಿವೆ. ‘ದಿ ವರ್ಜ್’ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿ ಪ್ರಕಾರ, ಓಪನ್ಎಐನ ಹೊಸ ಆ್ಯಪ್ನ ತಯಾರಿಕೆ ಇನ್ನೂ ಆರಂಭಿಕ ಹಂತದಲ್ಲಿದೆ. ಆಂತರಿಕವಾಗಿ ಈ ಆ್ಯಪ್ನ ಪ್ರೋಟೋಟೈಪ್ ಸಿದ್ಧವಾಗಿದ್ದು, ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ಅವರು ಇತರ ಮೂಲಗಳಿಂದ ಸಲಹೆ, ವಿಮರ್ಶೆಗಳನ್ನು ಪಡೆಯುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇಲಾನ್ ಮಸ್ಕ್ಗೆ ಸ್ಯಾಮ್ ಕೊಟ್ಟ ಟಾಂಟಾ ಇದು?
ಇಲಾನ್ ಮಸ್ಕ್ ಮತ್ತು ಸ್ಯಾಮ್ ಆಲ್ಟ್ಮ್ಯಾನ್ ನಡುವಿನ ವೈಯಕ್ತಿಕ ಜಿದ್ದಾಜಿದ್ದಿ ಗೊತ್ತಿರಬಹುದು. ಓಪನ್ಎಐ ಮೂಲ ಸಂಸ್ಥಾಪಕರಲ್ಲಿ ಇಲಾನ್ ಮಸ್ಕ್ ಅವರೂ ಒಬ್ಬರು. ಆದರೆ, 2018-19ರಲ್ಲೇ ಅವರು ಆ ಸಂಸ್ಥೆಯಿಂದ ಹೊರಬಂದರು. ಓಪನ್ಎಐ ಚ್ಯಾಟ್ಜಿಪಿಟಿ ಹೊರತಂದಾಗ ಇಲಾನ್ ಮಸ್ಕ್ ಅವರು ಓಪನ್ಎಐನ ಕಟು ಟೀಕಾಕಾರರಾಗಿಯೇ ಹೆಚ್ಚು ತೋರ್ಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಮೆರಿಕದ ಬೋಯಿಂಗ್ ವಿಮಾನಕ್ಕೆ ಚೀನಾ ಕತ್ತರಿ ಹಾಕಿದ್ದು ಭಾರತಕ್ಕೆ ಅನುಕೂಲವಾಯ್ತಾ?
ಎಕ್ಸ್ ಅನ್ನು ಖರೀದಿಸಿದ ರೀತಿಯಲ್ಲಿ ಓಪನ್ಎಐ ಅನ್ನೂ ಖರೀದಿಸಲು ಇಲಾನ್ ಮಸ್ಕ್ ಪ್ರಯತ್ನಿಸಿದ್ದುಂಟು. ಇದಕ್ಕೆ ಸ್ಯಾಮ್ ಆಲ್ಟ್ಮ್ಯಾನ್ ತಿರುಗೇಟು ನೀಡಿ, ತಾನೇ ಎಕ್ಸ್ ಅನ್ನು ಖರೀದಿಸುವುದಾಗಿ ಹೇಳಿದ್ದರು. ಈಗ ಸ್ಯಾಮ್ ಅವರು ಎಕ್ಸ್ ರೀತಿಯಲ್ಲಿ ತಮ್ಮದೇ ಹೊಸ ಸೋಷಿಯಲ್ ಮೀಡಿಯಾ ನೆಟ್ವರ್ಕ್ ರಚಿಸಲಿದ್ದಾರೆ.
ಚ್ಯಾಟ್ಜಿಪಿಟಿ ಈಗ ಇಮೇಜ್ ಸೃಷ್ಟಿಸುವ ಫೀಚರ್ ಹೊಂದಿದೆ. ಓಪನ್ಎಐನ ಹೊಸ ಸೋಷಿಯಲ್ ಮೀಡಿಯಾ ಪ್ರೋಟೋಟೈಪ್ನಲ್ಲಿ ಇರುವ ವಿವಿಧ ಫೀಚರ್ಗಳಲ್ಲಿ ಇದೂ ಒಂದು.
ಇದನ್ನೂ ಓದಿ: ಕೆಲವೇ ವರ್ಷಗಳಲ್ಲಿ ಅಮೆರಿಕದ ಆರ್ಥಿಕತೆಯನ್ನು ಭಾರತ ಹಿಂದಿಕ್ಕಲಿದೆ: ಜೆಫ್ರೀ ಸ್ಯಾಕ್ಸ್ ಶಾಕಿಂಗ್ ಹೇಳಿಕೆ
ಈಗ ಎಲ್ಲಾ ಪ್ರಮುಖ ಸೋಷಿಯಲ್ ಮೀಡಿಯಾ ಆ್ಯಪ್ಗಳು ತಮ್ಮವೇ ಎಐ ಮಾಡಲ್ ಹೊಂದಿವೆ. ಎಕ್ಸ್ನಲ್ಲಿ ಗ್ರೋಕ್ ಇದೆ. ವಾಟ್ಸಾಪ್, ಫೇಸ್ಬುಕ್ನಲ್ಲಿ ಮೆಟಾ ಎಐ ಇದೆ. ಗೂಗಲ್ನಿಂದ ಜೆಮಿನಿ ಎಐ ತಯಾರಾಗಿದೆ. ಈಗ ಎಐ ಮಾಡಲ್ಗಳು, ಚಾಟ್ಬೋಟ್ಗಳು ಆನ್ಲೈನ್ನಲ್ಲಿ ಅವಿಭಾಜ್ಯ ಅಂಗಗಳಾಗಿವೆ. ಓಪನ್ಎಐ ಸಂಸ್ಥೆ ಚ್ಯಾಟ್ಜಿಪಿಟಿ ರೀತಿಯ ಎಐ ಮಾಡಲ್ ಅನ್ನು ಸೋಷಿಯಲ್ ಮೀಡಿಯಾದ ಯುಐನಲ್ಲಿ ಹೇಗೆ ಇಂಟಿಗ್ರೇಟ್ ಮಾಡುತ್ತದೆ ಎಂಬುದು ಕುತೂಹಲದ ಸಂಗತಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ