SBI ATM Charges: ಎಟಿಎಂ ಶುಲ್ಕದ ನಂತರ ಐಎಂಪಿಎಸ್ ಶುಲ್ಕವನ್ನೂ ಹೆಚ್ಚಿಸಿದ ಎಸ್ಬಿಐ; ಇಲ್ಲಿದೆ ವಿವರ
SBI revises charges on IMPS and ATM transactions: ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿರುವ ಎಸ್ಬಿಐ ತನ್ನ ಕೆಲ ಸೇವೆಗಳಿಗೆ ಶುಲ್ಕವನ್ನು ಪರಿಷ್ಕರಿಸಿದೆ. ಐಎಂಪಿಎಸ್ ಮೂಲಕ ಮಾಡಲಾಗುವ 25,000 ರೂಗಿಂತ ಹೆಚ್ಚಿನ ಮೊತ್ತದ ಟ್ರಾನ್ಸಾಕ್ಷನ್ಗೆ ಶುಲ್ಕಗಳನ್ನು ಏರಿಸಲಾಗುತ್ತಿದೆ. ಕಳೆದ ತಿಂಗಳು ಎಟಿಎಂ ಟ್ರಾನ್ಸಾಕ್ಷನ್ ಶುಲ್ಕವನ್ನೂ ಪರಿಷ್ಕರಿಸಲಾಗಿತ್ತು.

ನವದೆಹಲಿ, ಜನವರಿ 14: ಕಳೆದ ತಿಂಗಳು ಎಟಿಎಂ ಟ್ರಾನ್ಸಾಕ್ಷನ್ ಶುಲ್ಕ ಪರಿಷ್ಕರಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮುಂದಿನ ತಿಂಗಳು ಐಎಂಪಿಎಸ್ ಟ್ರಾನ್ಸಾಕ್ಷನ್ನಲ್ಲೂ (IMPS charges) ಏರಿಕೆ ಮಾಡುತ್ತಿದೆ. ದೊಡ್ಡ ಮೊತ್ತದ ಹಣವನ್ನು ಐಎಂಪಿಎಸ್ ಮೂಲಕ ಕಳುಹಿಸುತ್ತಿದ್ದರೆ ಹೆಚ್ಚಿನ ಶುಲ್ಕ ತೆರಬೇಕಾಗಬಹುದು. ಎಟಿಎಂ ಟ್ರಾನ್ಸಾಕ್ಷನ್ನ (ATM transaction charges) ಹೊಸ ಶುಲ್ಕಗಳು 2025ರ ಡಿಸೆಂಬರ್ 1ರಿಂದ ಜಾರಿಗೆ ಬಂದಿವೆ. ಆದರೆ, ಐಎಂಪಿಎಸ್ ಶುಲ್ಕ ಏರಿಕೆಯು 2026ರ ಫೆಬ್ರುವರಿ 15ರಿಂದ ಜಾರಿಗೆ ಬರಬಹುದು.
ಐಎಂಪಿಎಸ್ ಶುಲ್ಕದಲ್ಲಿ ಎಷ್ಟು ಏರಿಕೆ?
ಎಸ್ಬಿಐನ ಹೊಸ ನಿಯಮಗಳ ಪ್ರಕಾರ 25,000 ರೂಗಿಂತ ಹೆಚ್ಚಿನ ಮೊತ್ತವನ್ನು ಐಎಂಪಿಎಸ್ ಮೂಲಕ ಕಳುಹಿಸಿದಾಗ ತುಸು ಹೆಚ್ಚಿನ ಶುಲ್ಕ ತೆರಬೇಕಾಗುತ್ತದೆ. 25,000 ರೂವರೆಗಿನ ಟ್ರಾನ್ಸಾಕ್ಷನ್ಗೆ ಈ ಹಿಂದಿನಂತೆ ಯಾವುದೇ ಶುಲ್ಕ ಇರುವುದಿಲ್ಲ.
ಐಎಂಪಿಎಸ್ ಮೂಲಕ ಕಳುಹಿಸಲಾಗುವ 25,000 ರೂನಿಂದ 1 ಲಕ್ಷ ರೂವರೆಗಿನ ಮೊತ್ತಕ್ಕೆ 2 ರೂ ಶುಲ್ಕ, ಜೊತೆಗೆ ಆ ಶುಲ್ಕದ ಮೇಲೆ ಜಿಎಸ್ಟಿ ಅನ್ವಯ ಆಗುತ್ತದೆ.
ಇದನ್ನೂ ಓದಿ: ಕೆಲಸ ಬಿಟ್ಟು 3 ವರ್ಷಕ್ಕೆ ಇಪಿಎಫ್ ಅಕೌಂಟ್ಗೆ ಬಡ್ಡಿ ಸಿಗಲ್ಲ ಅನ್ನೋದು ನಿಜ ಅಲ್ಲ; ಇಲ್ಲಿದೆ ಸತ್ಯಾಂಶ
1 ಲಕ್ಷ ರೂನಿಂದ 2 ಲಕ್ಷ ರೂವರೆಗಿನ ಐಎಂಪಿಎಸ್ ವಹಿವಾಟಿಗೆ ಶುಲ್ಕವು 6 ರೂ ಹಾಗೂ ಜಿಎಸ್ಟಿ ಇರುತ್ತದೆ.
2 ಲಕ್ಷ ರೂನಿಂದ 5 ಲಕ್ಷ ರೂವರೆಗಿನ ಟ್ರಾನ್ಸಾಕ್ಷನ್ ಆದರೆ 10 ರೂ ಶುಲ್ಕ, ಜೊತೆಗೆ ಜಿಎಸ್ಟಿ ಇರುತ್ತದೆ.
ಎಸ್ಬಿಐನ ಮೊಬೈಲ್ ಆ್ಯಪ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ನಲ್ಲಿ ಐಎಂಪಿಎಸ್ ಅನ್ನು ಬಳಸಲಾಗುತ್ತದೆ. ಗ್ರಾಹಕರು ಅಗತ್ಯ ಬಿದ್ದರೆ ನೆಫ್ಟ್ ಅಥವಾ ಆರ್ಟಿಜಿಎಸ್ ಅನ್ನು ಬಳಸಬಹುದು. ಐಎಂಪಿಎಸ್ನಲ್ಲಿ ಹಣವು ತತ್ಕ್ಷಣವೇ ವರ್ಗಾವಣೆ ಆಗುತ್ತದೆ.
ಎಟಿಎಂ ಟ್ರಾನ್ಸಾಕ್ಷನ್ ಶುಲ್ಕದಲ್ಲಿ ಹೆಚ್ಚಳ
ಎಸ್ಬಿಐ ಗ್ರಾಹಕರು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಒಂದು ತಿಂಗಳಲ್ಲಿ 5 ಟ್ರಾನ್ಸಾಕ್ಷನ್ಗಳನ್ನು ಉಚಿತವಾಗಿ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಟ್ರಾನ್ಸಾಕ್ಷನ್ ಮಾಡಿದರೆ ಪ್ರತೀ ಟ್ರಾನ್ಸಾಕ್ಷನ್ನಲ್ಲೂ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು ಎಸ್ಬಿಐ ಪರಿಷ್ಕರಿಸಿದೆ.
ಇದನ್ನೂ ಓದಿ: ಬರೀ 5,000 ರೂ ಎಸ್ಐಪಿಗೆ ಸೀಮಿತವಾದರೆ ಸಂಪತ್ತು ಹೆಚ್ಚೋದಿಲ್ಲ; ಹೀಗೆ ಮಾಡಿ
ಡಿಸೆಂಬರ್ 1ರಿಂದ ಜಾರಿಗೆ ಬಂದಿರುವ ಪರಿಷ್ಕೃತ ದರಗಳ ಪ್ರಕಾರ, ಪ್ರತೀ ಕ್ಯಾಷ್ ವಿತ್ಡ್ರಾಯಲ್ಗೆ ಶುಲ್ಕವನ್ನು 21 ರೂನಿಂದ 23 ರೂಗೆ ಏರಿಸಲಾಗಿದೆ. ಜೊತೆಗೆ ಜಿಎಸ್ಟಿಯೂ ಇರುತ್ತದೆ. ಬ್ಯಾಲನ್ಸ್ ಪರಿಶೀಲನೆ ಇತ್ಯಾದಿ ಹಣಕಾಸು ಅಲ್ಲದ ವಹಿವಾಟು ಆದರೆ 11 ರೂ ಹಾಗೂ ಜಿಎಸ್ಟಿಯನ್ನು ಶುಲ್ಕವಾಗಿ ವಿಧಿಸಲಾಗುತ್ತದೆ.
ಗಮನಿಸಿ, ಎಸ್ಬಿಐ ಗ್ರಾಹಕರು ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ಒಂದು ತಿಂಗಳಲ್ಲಿ ಐದು ಟ್ರಾನ್ಸಾಕ್ಷನ್ಗಳನ್ನು ಉಚಿತವಾಗಿ ಮಾಡಬಹುದು. ಅದಾದ ಬಳಿಕ ಆ ತಿಂಗಳು ಮಾಡಲಾಗುವ ಪ್ರತೀ ವಹಿವಾಟಿಗೂ ಶುಲ್ಕ ಅನ್ವಯ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




