ಬರೀ 5,000 ರೂ ಎಸ್ಐಪಿಗೆ ಸೀಮಿತವಾದರೆ ಸಂಪತ್ತು ಹೆಚ್ಚೋದಿಲ್ಲ; ಹೀಗೆ ಮಾಡಿ
Step-up SIP can make a big difference in investment and wealth gain: ನೀವು ನಿಯಮಿತವಾಗಿಯೇ ಆದರೂ ಕಡಿಮೆ ಮೊತ್ತದ ಹೂಡಿಕೆ ಮಾಡಿದಾಗ ಅದು ಕೊಡುವ ರಿಟರ್ನ್ ನಿರಾಶಾದಾಯಕವೆಂಬ ಭಾವನೆ ಕೊಡುತ್ತದೆ. ಸಣ್ಣ ಮೊತ್ತದಿಂದಲೇ ಹೂಡಿಕೆ ಆರಂಭಿಸಿದರೂ ಕ್ರಮೇಣವಾಗಿ ಹೂಡಿಕೆ ಮೊತ್ತ ಹೆಚ್ಚಿಸುತ್ತಾ ಹೋಗಬಹುದು. ಇದು ಸ್ಟೆಪಪ್ ತಂತ್ರ. ಇದರಿಂದ ನಿಮಗೆ ಸಿಗುವ ಲಾಭದ ವ್ಯತ್ಯಾಸ ಬಹಳ ಗಣನೀಯ.

ಹನಿ ಹನಿ ನೀರು ಸೇರಿಯೇ ಸಮುದ್ರ ಆಗೋದು ಅಂತಾರೆ. ಸಣ್ಣ ಸಣ್ಣ ಹೂಡಿಕೆಗಳೇ ದೊಡ್ಡ ಹಣಕಾಸು ಭದ್ರತೆ ತರುವುದುಂಟು. ಆದರೆ, ಸಣ್ಣ ಎಂದರೆ ಎಷ್ಟು ಸಣ್ಣ ಎಂಬುದು ಮುಖ್ಯ. ತೀರಾ ಸಣ್ಣ ಮೊತ್ತದ ಹೂಡಿಕೆಯನ್ನು (investment) ನಿಯಮಿತವಾಗಿ ಮಾಡಿದರೆ ಎರಡು ರೀತಿಯ ತೊಡಕು ಇರುತ್ತದೆ. ಒಂದು, ನಿಮಗೆ ರಿಟರ್ನ್ ಸಿಗುವ ಮೊತ್ತ ಕಡಿಮೆ ಇರುತ್ತದೆ. ಇನ್ನೊಂದು, ದೀರ್ಘಾವಧಿ ಹೂಡಿಕೆಯ ಉತ್ಸಾಹವೂ ಕುಂದುತ್ತದೆ.
ಉದಾಹರಣೆಗೆ, ನೀವು ತಿಂಗಳಿಗೆ 5,000 ರೂ ಎಸ್ಐಪಿ ಆರಂಭಿಸುತ್ತೀರಿ ಎಂದಿಟ್ಟುಕೊಳ್ಳಿ. ಒಂದು ವರ್ಷದಲ್ಲಿ ನಿಮ್ಮ ಹೂಡಿಕೆ 60,000 ರೂ ಆಗುತ್ತದೆ. ಆ ಫಂಡ್ ಶೇ. 12ರ ದರದಲ್ಲಿ ಲಾಭ ಕೊಟ್ಟರೆ ವರ್ಷದಲ್ಲಿ 7,200 ರೂ ಮಾತ್ರವೇ ಹೆಚ್ಚಬಹುದು. ನೀವು ಐದು ವರ್ಷ ಎಸ್ಐಪಿ ಮುಂದುವರಿಸಿದರೂ ಅದರಿಂದ ಸಿಗುವ ರಿಟರ್ನ್ ನಿಮಗೆ ದೊಡ್ಡ ಖುಷಿ ತರುವುದಿಲ್ಲ. ಶೇಕಡಾವಾರು ಲೆಕ್ಕದಲ್ಲಿ ಓಕೆ, ಆದರೆ, ಪ್ರಮಾಣದಲ್ಲಿ ನಿಮಗೆ ತೃಪ್ತಿಕರ ಮೊತ್ತ ಸಿಗುವುದಿಲ್ಲ. ಹೀಗಾಗಿ, ನೀವು ಎಸ್ಐಪಿಯನ್ನೇ ನಿಲ್ಲಿಸಿಬಿಡುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಗಮನಿಸಿ…! ಕೆಲಸ ಬಿಟ್ಟು 3 ವರ್ಷಕ್ಕೆ ಇಪಿಎಫ್ ಅಕೌಂಟ್ಗೆ ಬಡ್ಡಿ ಸಿಗಲ್ಲ ಅನ್ನೋದು ನಿಜ ಅಲ್ಲ; ಇಲ್ಲಿದೆ ಸತ್ಯಾಂಶ
ಹೂಡಿಕೆ ಮೊತ್ತ ದೊಡ್ಡದಾಗುತ್ತಾ ಹೋಗಬೇಕು..
ಹೂಡಿಕೆಯ ಮೂಲ ಗುಣಗಳಲ್ಲಿ ಹೂಡಿಕೆ ಮೊತ್ತ, ಅವಧಿ ಮತ್ತು ಲಾಭ ಈ ಮೂರೂ ಕೂಡ ಮುಖ್ಯ. ಈ ಮೂರೂ ಅಂಶಗಳು ಅಧಿಕವಾಗಿದ್ದರೆ ಶ್ರೀಮಂತಿಕೆ ಹೇಳದೇ ಕೇಳದೇ ಬಂದುಬಿಡುತ್ತದೆ.
ನೀವು 5,000 ಎಸ್ಐಪಿಯಿಂದಲೇ ಹೂಡಿಕೆ ಆರಂಭಿಸಬಹುದು. ಆದರೆ, ವರ್ಷಗಳು ಕಳೆದಂತೆ ಆ ಹೂಡಿಕೆ ಅಷ್ಟಕ್ಕೇ ಸೀಮಿತವಾಗಬಾರದು. ನಿಮ್ಮ ಆದಾಯ ಹೆಚ್ಚಿದಂತೆ ಹೂಡಿಕೆಯ ಮೊತ್ತವೂ ಹೆಚ್ಚುತ್ತಾ ಹೋಗಬೇಕು. 5,000 ರೂ ಎಸ್ಐಪಿಯಿಂದ ಹೂಡಿಕೆಯು 20 ವರ್ಷದಲ್ಲಿ 50,000 ರೂ ಎಸ್ಐಪಿಗಳಾಗಿ ಹೆಚ್ಚಬೇಕು. ಹೀಗೆ ಹೆಚ್ಚಿಸಲು ನೀವು ಸ್ಟೆಪಪ್ ತಂತ್ರ ಅನುಸರಿಸಬಹುದು. ನಿಮ್ಮ ಆದಾಯ ಪ್ರತೀ ವರ್ಷ ಹೆಚ್ಚಿದಂತೆ ಹೂಡಿಕೆಯ ಮೊತ್ತವನ್ನೂ ಹೆಚ್ಚಿಸುತ್ತಾ ಹೋಗುವುದೇ ಸ್ಟೆಪಪ್ ತಂತ್ರ.
5,000 ರೂ ಎಸ್ಐಪಿಯಿಂದ ಆರಂಭಿಸಿ ವರ್ಷಕ್ಕೆ ಶೇ. 10ರಷ್ಟು ಸ್ಟೆಪಪ್ ಮಾಡುತ್ತಾ, ಅಂದರೆ ಶೇ. 10ರಷ್ಟು ಹೂಡಿಕೆ ಹೆಚ್ಚಿಸುತ್ತಾ 20 ವರ್ಷ ಹೂಡಿಕೆ ಮುಂದುವರಿಸಿದಲ್ಲಿ ಗಮನಾರ್ಹವಾದ ರಿಟರ್ನ್ ನಿಮಗೆ ಸಿಗುತ್ತದೆ. ಸ್ಟೆಪಪ್ ಇಲ್ಲದೆ 5,000 ರೂ ಎಸ್ಐಪಿ 20 ವರ್ಷದಲ್ಲಿ ಎಷ್ಟು ರಿಟರ್ನ್ ಕೊಡುತ್ತೆ, ಮತ್ತು ಸ್ಟೆಪಪ್ ಇರುವ ಎಸ್ಐಪಿ ಎಷ್ಟು ರಿಟರ್ನ್ ಕೊಡುತ್ತದೆ ಎಂಬುದನ್ನು ಹೋಲಿಸಿ ನೋಡಬಹುದು.
ಇದನ್ನೂ ಓದಿ: ಈ ಎಸ್ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?
20 ವರ್ಷಗಳಿಗೆ ವಾರ್ಷಿಕ ಶೇ. 12 ಸಿಎಜಿಆರ್ನಲ್ಲಿ ಬೆಳೆಯುವ ಫಂಡ್ನಲ್ಲಿ 5,000 ರೂ ಎಸ್ಐಪಿ ಮಾಡಿದರೆ ಸುಮಾರು 50 ಲಕ್ಷ ರೂ ಸಂಪತ್ತು ಸೃಷ್ಟಿಯಾಗುತ್ತದೆ. ಅದೇ ನೀವು ವಾರ್ಷಿಕವಾಗಿ ಶೇ 10 ಸ್ಟೆಪಪ್ ಮಾಡಿದಾಗ ನಿಮ್ಮ ಸಂಪತ್ತು 1.15 ಕೋಟಿಯಾಗಿರುತ್ತದೆ. ಇದಕ್ಕೆ ಕಾರಣ ಎಂದರೆ ಹೂಡಿಕೆ ಮೊತ್ತದಲ್ಲಿರುವ ವ್ಯತ್ಯಾಸ.
5,000 ರೂ ಎಸ್ಐಪಿ ಮೂಲಕ 20 ವರ್ಷದಲ್ಲಿ ನೀವು 12 ಲಕ್ಷ ರೂ ಹೂಡಿಕೆ ಮಾಡಿರುತ್ತೀರಿ. ಅದೇ ಸ್ಟೆಪಪ್ ಮಾಡಿದಾಗ ನಿಮ್ಮ ಹೂಡಿಕೆಯು 34 ಲಕ್ಷ ರೂಗೂ ಅಧಿಕ ಆಗಿರುತ್ತದೆ. ಹೀಗಾಗಿ, ನಿಮ್ಮ ಹೂಡಿಕೆಗೆ ಬಹಳ ಒಳ್ಳೆಯ ರಿಟರ್ನ್ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




