
ಮುಂಬೈ, ಮಾರ್ಚ್ 3: ಮಾಜಿ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಹಾಗೂ ಇತರ ಕೆಲವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಂಬೈ ಕೋರ್ಟ್ವೊಂದು ನೀಡಿರುವ ಆದೇಶವನ್ನು ಪ್ರಶ್ನಿಸಲು ಸೆಬಿ (SEBI) ನಿರ್ಧರಿಸಿದೆ. ಕೋರ್ಟ್ನಲ್ಲಿ ಮಾಧವಿ ಪುರಿ ಮತ್ತಿತರರ ವಿರುದ್ಧ ಸಲ್ಲಿಕೆಯಾಗಿರುವ ದೂರು ಸಂದೇಹಾಸ್ಪದವಾಗಿದ್ದು, ಕೋರ್ಟ್ ಆದೇಶವನ್ನು ಕಾನೂನು ಮಾರ್ಗದಲ್ಲೇ ಎದುರಿಸಲು ಸೆಬಿ ಆಲೋಚಿಸಿದೆ.
ರೆಗ್ಯುಲೇಟರಿ ನಿಯಮಗಳ ಉಲ್ಲಂಘನೆ (regulatory violations) ಹಾಗೂ ಷೇರು ಮಾರುಕಟ್ಟೆ ಅಕ್ರಮ ಎಸಗಲಾಗಿದೆ ಎನ್ನುವ ಆರೋಪದ ಮೇಲೆ ಮಾಜಿ ಸೆಬಿ ಛೇರ್ಮನ್ ಮಾಧವಿ ಪುರಿ ಬುಚ್, ಇಬ್ಬರು ಬಿಎಸ್ಇ ಅಧಿಕಾರಿಗಳು ಹಾಗೂ ಇತರ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಮುಂಬೈನ ವಿಶೇಷ ಭ್ರಷ್ಟಾಚಾರ ನಿಗ್ರಹ ದಳ ವಿಭಾಗದ ಕೋರ್ಟ್ವೊಂದು ಮೊನ್ನೆ ಶನಿವಾರ (ಮಾ. 1) ಆದೇಶ ನೀಡಿತ್ತು.
ಇದನ್ನೂ ಓದಿ: ಬೈಜುಸ್ನಿಂದ ವಂಚನೆ ಎಂದ ಅಮೆರಿಕದ ಕೋರ್ಟ್; ಎಲ್ಲಾ ಸೇರಿ ಸಂಚು ರೂಪಿಸಿದ್ರು, ತನಿಖೆ ಆಗಲಿ ಎಂದ ಸಿಇಒ ಬೈಜು ರವೀಂದನ್
ಪತ್ರಕರ್ತರೊಬ್ಬರು ನೀಡಿದ ದೂರಿನ ಮೇರೆಗೆ ಈ ಆದೇಶ ಬಂದಿದೆ. ಅರ್ಹತಾ ಮಾನದಂಡಗಳು ಇಲ್ಲದಿದ್ದರೂ ಕಂಪನಿಯೊಂದನ್ನು ಷೇರು ವಿನಿಮಯ ಕೇಂದ್ರದಲ್ಲಿ ಲಿಸ್ಟ್ ಮಾಡಲು ಅಕ್ರಮ ಎಸಗಲಾಗಿದೆ. ದೊಡ್ಡ ಮಟ್ಟದ ಹಣಕಾಸು ವಂಚನೆ, ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಇವೆಲ್ಲವೂ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ದೂರಿನಲ್ಲಿರುವ ವಾದವನ್ನು ಒಪ್ಪಿದ ನ್ಯಾಯಾಲಯ, ಮೇಲ್ನೋಟಕ್ಕೆ ತಪ್ಪು ಎಸಗಿರುವಂತೆ ತೋರುತ್ತಿದೆ. ಈ ಬಗ್ಗೆ ಕೋರ್ಟ್ ಕಣ್ಗಾವಲಿನಲ್ಲಿ ಪೊಲೀಸರಿಂದ ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು. 30 ದಿನದೊಳಗೆ ವರದಿ ಸಲ್ಲಿಕೆಯಾಗಬೇಕು ಎಂದು ವಿಶೇಷ ನ್ಯಾಯಾಧೀಶ ಶಶಿಕಾಂತ್ ಏಕನಾಥರಾವ್ ಬಂಗಾರ್ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.
ಇದನ್ನೂ ಓದಿ: 300 ಕೋಟಿ ರೂಗೆ ಖರೀದಿಸಿ 3 ವರ್ಷದಲ್ಲಿ ಕಂಪನಿ ಮುಚ್ಚಿದ ಫ್ಲಿಪ್ಕಾರ್ಟ್
ದೂರು ದಾಖಲಾಗಿದ್ದು, ಅದರ ಮೇಲೆ ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಇದರ ರೀತಿ ನೀತಿ ಬಗ್ಗೆ ಸೆಬಿ ಮತ್ತು ಬಿಎಸ್ಇ ಅಸಮಾಧಾನಗೊಂಡಿವೆ. ‘ಈ ಅಧಿಕಾರಿಗಳು (ಮಾಧವಿ ಮತ್ತಿತರ ಆರೋಪಿಗಳು) ಆ ಸಂದರ್ಭದಲ್ಲಿ ನಿಯೋಜಿತ ಸ್ಥಾನಮಾನ ಹೊಂದಿರಲಿಲ್ಲ. ಆದಾಗ್ಯೂ ಕೂಡ ಅವರಿಗೆ ಯಾವುದೇ ನೋಟೀಸ್ ನೀಡದೇ ದೂರಿಗೆ ಕೋರ್ಟ್ ಅನುಮತಿಸಿದೆ. ಸೆಬಿಗೆ ತನ್ನ ವಿಚಾರಗಳನ್ನು ಪ್ರಸ್ತುತಪಡಿಸಲು ಕೂಡ ಅವಕಾಶ ನೀಡಲಿಲ್ಲ’ ಎಂದು ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ ಸಂಸ್ಥೆ ಆಕ್ಷೇಪಿಸಿದೆ.
ಈ ಪ್ರಕರಣದಲ್ಲಿ ಬಿಎಸ್ಇ ವಿರುದ್ಧವೂ ದೂರು ದಾಖಲಾಗಿದೆ. ಬಿಎಸ್ಇ ಕೂಡ ಸೆಬಿ ವಾದವನ್ನು ಪುನರುಚ್ಚರಿಸಿದೆ. ಈಗ ಸೆಬಿ ಮತ್ತು ಬಿಎಸ್ಇ ಎರಡೂ ಕೂಡ ಕಾನೂನು ಮಾರ್ಗದಲ್ಲಿ ಪ್ರತಿಹೋರಾಟ ನಡೆಸಲು ನಿಶ್ಚಯಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ