
ಮುಂಬೈ, ಮೇ 30: ಬಾಲಿವುಡ್ ನಟ ಅರ್ಷದ್ ವಾರ್ಸಿ (Arshad Warsi) ಹಾಗೂ ಅವರ ಪತ್ನಿ ಮಾರಿಯಾ ಗೊರೆಟ್ಟಿ (Maria Goretti) ಅವರನ್ನು ಷೇರು ಮಾರುಕಟ್ಟೆಯಲ್ಲಿ (stock market) ವ್ಯವಹರಿಸದಂತೆ ಒಂದು ವರ್ಷ ನಿರ್ಬಂಧಿಸಿ ಸೆಬಿ ಕ್ರಮ ತೆಗೆದುಕೊಂಡಿದೆ. ಅಮಾಯಕ ಹೂಡಿಕೆದಾರರನ್ನು ದಾರಿತಪ್ಪಿಸುವಂತಹ ವಿಡಿಯೋ ಪ್ರಸಾರದ ಆರೋಪದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅರ್ಷದ್ ವಾರ್ಸಿ ದಂಪತಿ ಮಾತ್ರವಲ್ಲ, ಇನ್ನೂ 57 ಸಂಸ್ಥೆಗಳನ್ನು ಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ನಿರ್ಬಂಧಿಸಲಾಗಿದೆ. ಈ ಸಂಸ್ಥೆಗಳಿಗೆ ಹಾಕಲಾಗಿರುವ ನಿಷೇಧವು 1ರಿಂದ 5 ವರ್ಷದ್ದಾಗಿದೆ.
ಮುನ್ನಾಭಾಯ್ ಎಂಬಿಬಿಎಸ್ ಚಿತ್ರದಲ್ಲಿ ಸಂಜಯ್ ದತ್ ಸಹಚರನಾಗಿ ಬಹಳ ಖ್ಯಾತರಾಗಿದ್ದ ಅರ್ಷದ್ ವಾರ್ಸಿ ಬಾಲಿವುಡ್ನಲ್ಲಿ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಇವರು ಸಾಧನಾ ಬ್ರಾಡ್ಕ್ಯಾಸ್ಟ್ (Sadhana Broadcast) ಎನ್ನುವ ಕಂಪನಿಯ ಷೇರುಮಾರುಕಟ್ಟೆ ಸ್ಕ್ಯಾಮ್ನಲ್ಲಿ ತಳುಕುಹಾಕಿಕೊಂಡಿದ್ದರು. ಇವರು ಹಾಗೂ ಪತ್ನಿ ಮಾರಿಯಾ ಅವರಿಗೆ ತಲಾ 5 ಲಕ್ಷ ರೂ ದಂಡವನ್ನು ಸೆಬಿ ವಿಧಿಸಿದೆ.
ಸಾಧನಾ ಬ್ರಾಡ್ಕ್ಯಾಸ್ಟ್ ಕರ್ಮಕಾಂಡದಲ್ಲಿ ಅರ್ಷದ್ 41.70 ಲಕ್ಷ ರೂ ಹಾಗೂ ಪತ್ನಿ 50.35 ಲಕ್ಷ ರೂ ಲಾಭ ಮಾಡಿದ್ದಾರೆ ಎನ್ನುವುದು ಸೆಬಿ ಆರೋಪ. ಇವರಿಬ್ಬರನ್ನೂ 1 ವರ್ಷ ಕಾಲ ಷೇರು ವ್ಯವಹಾರದಿಂದ ನಿರ್ಬಂಧಿಸಲಾಗಿದೆ. ಇತರ 57 ಮಂದಿ ಹಾಗು ಸಂಸ್ಥೆಗಳಿಗೆ 5 ಲಕ್ಷ ರೂನಿಂದ 5 ಕೋಟಿ ರೂವರೆಗೆ ದಂಡ ವಿಧಿಸಲಾಗಿದೆ.
ಇದನ್ನೂ ಓದಿ: 703 ಕೋಟಿ ಕೊಟ್ಟು ಡಬಲ್ ಫ್ಲ್ಯಾಟ್ ಖರೀದಿಸಿದ ಮಹಿಳೆ; ಈಕೆ ನೀತಾ ಅಂಬಾನಿ ಅಲ್ಲ… ಲೀನಾ ತಿವಾರಿ; ಯಾರೀಕೆ?
ಇದೀಗ ಕ್ರಿಸ್ಟಲ್ ಬ್ಯುಸಿನೆಸ್ ಸಿಸ್ಟಂ (Crystal Business System) ಎಂದು ಹೆಸರು ಬದಲಿಸಿಕೊಂಡಿರುವ ಸಾಧನಾ ಬ್ರಾಡ್ಕ್ಯಾಸ್ಟ್ ಸಂಸ್ಥೆ ಮೂರು ವರ್ಷಗಳ ಹಿಂದೆ ತನ್ನ ಷೇರುಬೆಲೆಯನ್ನು ಕೃತಕವಾಗಿ ಏರುವಂತೆ ಮಾಡಿ ಲಾಭ ಮಾಡಿದ ಪ್ರಕರಣ ಇದು. ತೊಂಬತ್ತರ ದಶಕದ ಹರ್ಷದ್ ಮೆಹ್ತಾ ಸ್ಕ್ಯಾಮ್ನ ಸಣ್ಣ ಅವತರಣಿಕೆಯಂತಿದೆ ಈ ಹಗರಣ.
2022ರಲ್ಲಿ ‘ದಿ ಅಡ್ವೈಸರ್’ ಮತ್ತು ‘ಮನಿವೈಸ್’ ಎನ್ನುವ ಎರಡು ಯೂಟ್ಯೂಬ್ ವಾಹಿನಿಗಳು ಸಾಧನಾ ಬ್ರಾಡ್ಕ್ಯಾಸ್ಟ್ ಸಂಸ್ಥೆಯನ್ನು ಪ್ರೊಮೋಟ್ ಮಾಡುವ ಹಲವು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದುವು. ಈ ಕಂಪನಿ ಸಾಕಷ್ಟು ಬೆಳವಣಿಗೆ ಹೊಂದುತ್ತಿದ್ದು, ಅದರ ಷೇರುಗಳಲ್ಲಿ ಹೂಡಿಕೆ ಮಾಡಿ ಎಂದು ವೀಕ್ಷಕರ ಮೇಲೆ ಪ್ರಭಾವ ಬೀರಲು ಯತ್ನಿಸಲಾಗುತ್ತಿತ್ತು. ಷೇರುಬೆಲೆ ಏರಿಸಿ ಲಾಭ ಮಾಡುವ ಉದ್ದೇಶದಿಂದ ಈ ಕೆಲಸ ಮಾಡಿಸಲಾಗುತ್ತಿತ್ತು.
2022ರ ಏಪ್ರಿಲ್ನಿಂದ ಜುಲೈವರೆಗಿನ ಅವಧಿಯಲ್ಲಿ ಈ ಕಂಪನಿಯ ಷೇರುಬೆಲೆ ಶೇ. 360ರಷ್ಟು ಹೆಚ್ಚಾಗಿತ್ತು. ಈ ಹಂತದಲ್ಲಿ ಹಲವರು ವ್ಯಕ್ತಿಗಳು ಮತ್ತು ಸಂಸ್ಥೆಗಳು ಷೇರುಗಳನ್ನು ಮಾರಿ ಸಾಕಷ್ಟು ಲಾಭ ಮಾಡಿಕೊಂಡರೆನ್ನಲಾಗಿದೆ.
ಇದನ್ನೂ ಓದಿ: ಅಚ್ಚರಿ ಹುಟ್ಟಿಸಿದ ಬಿಎಸ್ಸೆನ್ನೆಲ್; ಸತತ 2ನೇ ಬಾರಿ ಲಾಭ; 18 ವರ್ಷದಲ್ಲಿ ಇಂಥದ್ದು ಇದೇ ಮೊದಲು
ಈ ಪ್ರಕರಣದಲ್ಲಿ ಭಾಗಿಯಾದವರನ್ನು ಸೆಬಿ ಮೂರು ರೀತಿಯಲ್ಲಿ ವರ್ಗೀಕರಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಮಾಡಿ ಹಾಕುವವರದ್ದು ಒಂದು ವರ್ಗ. ಅರ್ಷದ್ ವಾರ್ಸಿ, ಮಾರಿಯಾ ಗೊರೆಟ್ಟಿ ಅವರನ್ನು ವಾಲ್ಯೂಮ್ ಕ್ರಿಯೇಟರ್ಸ್ ಎಂದು ವರ್ಗೀಕರಿಸಲಾಗಿದೆ. ಅಂದರೆ, ಇವರು ಕಂಪನಿ ಷೇರು ಸಾಕಷ್ಟು ವಹಿವಾಟಾಗುತ್ತಿದೆ ಎಂದನಿಸುವ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಟ್ರೇಡಿಂಗ್ ಮಾಡುವ ಕೆಲಸದಲ್ಲಿ ನಿರತರಾಗಿದ್ದರು.
ಕೊನೆಯ ವರ್ಗ ಪ್ರಾಫಿಟ್ ಮೇಕರ್ಸ್ದ್ದು. ಷೇರುಬೆಲೆ ಗರಿಷ್ಠಮಟ್ಟಕ್ಕೆ ಹೋದಾಗ ಇವರು ಷೇರುಗಳನ್ನು ಮಾರಿ ಭಾರೀ ಲಾಭ ಮಾಡಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ