SEBI: ಸೆಬಿಯಿಂದ ಸೆ.28 ಮಹತ್ವದ ಸಭೆ; ಹೊರಬೀಳಲಿರುವ ನಿರ್ಧಾರಗಳ ಕಡೆಗೆ ಹೂಡಿಕೆದಾರರ ಕಣ್ಣು
ಮಾರುಕಟ್ಟೆ ನಿಯಂತ್ರಕವಾದ ಸೆಬಿ ಮಂಡಳಿ ಸಭೆ ಇಂದು ನಡೆಯಲಿದೆ. ಹೂಡಿಕೆದಾರರು ಈ ಸಭೆಯಿಂದ ನಿರೀಕ್ಷೆ ಮಾಡುತ್ತಿರುವ ಸಂಗತಿಗಳ ಬಗ್ಗೆ ವಿವರ ಇಲ್ಲಿದೆ.
ಇಂದು (ಸೆ. 28, 2021) ನಿಗದಿ ಆಗಿರುವ ಸೆಬಿಯ ಮಂಡಳಿ ಸಭೆಯನ್ನು ಬಂಡವಾಳ ಮಾರುಕಟ್ಟೆಯಲ್ಲಿ ಭಾಗವಹಿಸುವವರು ಸೂಕ್ಷ್ಮವಾಗಿ ಎದುರು ನೋಡುತ್ತಿದ್ದಾರೆ. ಕೆಲವು ಪ್ರಮುಖ ವಿಷಯಗಳ ಬಗ್ಗೆ ಮಾರುಕಟ್ಟೆ ನಿಯಂತ್ರಕರ (ಸೆಬಿ) ನಿರ್ಧಾರಕ್ಕಾಗಿ ಸಭೆ ನಡೆಯಲಿದೆ. ಖಾಸಗಿ ಈಕ್ವಿಟಿ ಸಂಸ್ಥೆಗಳು ತಮ್ಮ ಸ್ವಂತ ಆಸ್ತಿ ನಿರ್ವಹಣಾ ಕಂಪೆನಿಗಳನ್ನು ಆರಂಭಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು ಅನುಮತಿಸಬಹುದು. ಇನ್ನು ಬಂಡವಾಳವನ್ನು ಹೆಚ್ಚಿಸಿಕೊಳ್ಳಲು ಸಾರ್ವಜನಿಕ ಷೇರು ವಿತರಣೆಗೆ ತೆರಳುವ ಮೊದಲಿಗೆ ಉನ್ನತ ಮತದಾನದ ಹಕ್ಕುಗಳ ನಿರ್ಧಾರವನ್ನು ಹೊಸ-ತಲೆಮಾರಿನ ಕಂಪೆನಿಗಳ ಸ್ಥಾಪಕರಿಗೆ ನೀಡುವುದರ ಬಗ್ಗೆಯೂ ತೀರ್ಮಾನ ಆಗಲಿದೆ. ಇದರಿಂದ ಒಂದಿಷ್ಟು ಅನುಕೂಲ ನಿರೀಕ್ಷಿಸಲಾಗಿದೆ. ವಿಶೇಷವಾಗಿ ವಿದೇಶಿ ಬಂಡವಾಳ ಹೂಡಿಕೆದಾರರ ಪ್ರಸ್ತಾವವನ್ನು ತೀವ್ರವಾಗಿ ವಿರೋಧಿಸಿದ ನಂತರ, ಈ ಹಿಂದೆ ಇದ್ದ ಟಿ+2ರಿಂದ ಟಿ+1 ಇತ್ಯರ್ಥದ ಬಗ್ಗೆ ಸೆಬಿಯಿಂದ ಪುನರ್ ವಿಮರ್ಶಿಸಬಹುದೇ ಎಂಬ ನಿರೀಕ್ಷೆ ಇದೆ. ಸದ್ಯಕ್ಕೆ ಪ್ರಸ್ತಾವನೆಯನ್ನು ಇನ್ನೂ ಕಾರ್ಯಗತಗೊಳಿಸಲಾಗಿಲ್ಲ. ಆದರೂ ಎಫ್‌ಪಿಐಗಳು ಹೊಸ ವ್ಯವಸ್ಥೆಗೆ ಬದಲಾಗುವುದರಿಂದ ಆಗುವ ಅನಿರೀಕ್ಷಿತ ಪರಿಣಾಮಗಳು ಮತ್ತು ಅದರಿಂದ ಲಾಭ ಉಲ್ಟಾ ಆಗುವ ಬಗ್ಗೆ ಎಚ್ಚರಿಸಿದ್ದಾರೆ. ಕಾರ್ಯಾಚರಣೆಯಲ್ಲಿನ ಸವಾಲುಗಳನ್ನು ಉಲ್ಲೇಖಿಸಿ, ಹೂಡಿಕೆದಾರರು ಈ ವಿರೋಧ ದಾಖಲಿಸಿದ್ದಾರೆ.
ಟೈಮ್ ಝೋನ್ ವ್ಯತ್ಯಾಸ, ಮಾಹಿತಿ ಹರಿವಿನ ಪ್ರಕ್ರಿಯೆಯಲ್ಲಿನ ತೊಡಕು ಮತ್ತು ಮೂಲಸೌಕರ್ಯಗಳ ಕೊರತೆಯಂತಹ ಹಲವಾರು ಸವಾಲುಗಳನ್ನು ತಿಳಿಸಲಾಗಿದೆ. ಜನವರಿ 2022ರಿಂದ ಟಿ+1 ವಹಿವಾಟು ಇತ್ಯರ್ಥವನ್ನು ಆರಂಭಿಸುವುದಕ್ಕೆ ಸೆಬಿ ಯೋಜನೆ ರೂಪಿಸಿದೆ. ಎಫ್‌ಪಿಐಗಳಿಂದ ಇದಕ್ಕೆ ವಿರೋಧ ವ್ಯಕ್ತ ಆಗುತ್ತಿರುವುದರಿಂದ ಸೆಬಿ ತನ್ನ ನಿರ್ಧಾರವನ್ನು ಮರು ಪರಿಶೀಲಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕು. ವಿಶ್ಲೇಷಕರೊಬ್ಬರು ಈ ಬಗ್ಗೆ ಮಾಧ್ಯಮ ಸಂಸ್ಥೆಯೊಂದರ ಜತೆ ಮಾತನಾಡಿ, “ನಿಯಂತ್ರಕರು ಹೆಚ್ಚು ವಿವರಗಳನ್ನು ಪಡೆಯದೆ ಟಿ+1 ಇತ್ಯರ್ಥದ ಬಗ್ಗೆ ನಿಲುವನ್ನು ಹೇಳಬಹುದು. ಏಕೆಂದರೆ ಹೊಸ ನಿಯಮವನ್ನು ತರುವ ಮುಂದೆ ಮೂಲಸೌಕರ್ಯ ವ್ಯವಸ್ಥೆ ಸಿದ್ಧಗೊಳಿಸಬೇಕಿದೆ,” ಎಂದಿದ್ದಾರೆ.
ಮುಂದೆ, ಭಾರತದಲ್ಲಿ ಮ್ಯೂಚುವಲ್ ಫಂಡ್ ಮಾಲೀಕತ್ವದ ನಿಯಮಗಳನ್ನು ಸರಾಗಗೊಳಿಸುವ ಪ್ರಸ್ತಾವವನ್ನು ಸೆಬಿ ಪರಿಗಣಿಸಬಹುದು. ಖಾಸಗಿ ಈಕ್ವಿಟಿ ಸಂಸ್ಥೆಗಳು ಶೀಘ್ರದಲ್ಲೇ ತಮ್ಮ ಸ್ವಂತ ಆಸ್ತಿ ನಿರ್ವಹಣಾ ಕಂಪೆನಿಗಳನ್ನು ಸ್ಥಾಪಿಸಲು ಅಥವಾ ಆರಂಭಿಸಲು ಹೆಚ್ಚಿನ ಅವಕಾಶವನ್ನು ಪಡೆಯಬಹುದು. ಸದ್ಯಕ್ಕೆ, PE (Private Equity – ಖಾಸಗಿ ಈಕ್ವಿಟಿ) ಸಂಸ್ಥೆಗಳು MF ಪ್ರಾಯೋಜಕರಾಗಿ ಕಾರ್ಯ ನಿರ್ವಹಿಸುವುದನ್ನು ನಿಷೇಧಿಸಲಾಗಿಲ್ಲ, ಆದರೆ ಪೂರ್ವ ಅಪೇಕ್ಷಿತ ಅಗತ್ಯಗಳು ಮ್ಯೂಚುವಲ್ ಫಂಡ್ಗಳ ಪ್ರಾಯೋಜಕತ್ವವನ್ನು ತೆಗೆದುಕೊಳ್ಳಲು ತಡೆಯಾಗಿ ಕಾರ್ಯ ನಿರ್ವಹಿಸುತ್ತವೆ. ಸೆಬಿಯು ಇದನ್ನು ಬದಲಾಯಿಸಲು ನೋಡಬಹುದು. ಪ್ರಾಯೋಜಕರು ಬದಲಾದಲ್ಲಿ ಹೂಡಿಕೆದಾರರಿಗೆ ನಿರ್ಗಮನದ (Exit) ಆಯ್ಕೆಯನ್ನು ಒದಗಿಸಬೇಕು ಎಂದು MF ನಿಯಮಗಳು ಹೇಳುತ್ತವೆ. ಪಿಇ ನಿಧಿಯು ಕೆಲವು ವರ್ಷಗಳ ನಂತರ ನಿರ್ಗಮಿಸಲು ಇಷ್ಟಪಡಬಹುದು. ಆದರೆ ಪ್ರತಿ ಬಾರಿಯೂ ಹೂಡಿಕೆದಾರರಿಗೆ ನಿರ್ಗಮನವನ್ನು ಒದಗಿಸುವುದು ಸಾಮಾನ್ಯವಾಗಿ ವ್ಯಾಪಾರಕ್ಕೆ ಸೂಕ್ತವಲ್ಲ. ಪಿಇ ಸಂಸ್ಥೆಗಳು 5ರಿಂದ 7 ವರ್ಷಗಳ ಮೊದಲು ವ್ಯಾಪಾರದಿಂದ ನಿರ್ಗಮಿಸದಿದ್ದಲ್ಲಿ ಸೆಬಿ ಈ ನಿಯಮವನ್ನು ಸಡಿಲಗೊಳಿಸುವುದನ್ನು ಪರಿಗಣಿಸಬಹುದು.
ಇಂದಿನ ಸಭೆಯಲ್ಲಿ, ಸೆಬಿಯಿಂದ M&A ನಿಯಮಗಳನ್ನು ಸುಲಭಗೊಳಿಸುವ ಬಗ್ಗೆಯೂ ಚರ್ಚಿಸಬಹುದು. ಸೆಬಿಯು ತನ್ನ ಮಂಡಳಿ ಸಭೆಯಲ್ಲಿ, ಕಂಪೆನಿಯು ಮುಕ್ತ ಆಫರ್ (Open Offer) ನಂತರ ಡಿಲಿಸ್ಟ್ ಮಾಡಲು ಸುಲಭವಾಗಿಸುವ ಬಗ್ಗೆ ಪ್ರಸ್ತಾವನೆಯನ್ನು ಚರ್ಚಿಸಬಹುದು. ಸೆಬಿಯ ಮಂಡಳಿ ಸಭೆಯನ್ನು ಹೊರತುಪಡಿಸಿ ಜಾಗತಿಕ ಸುಳಿವುಗಳು, ಸ್ಟಾಕ್-ನಿರ್ದಿಷ್ಟ ಸುದ್ದಿ ಹರಿವು, ತೈಲ ಬೆಲೆ ಏರಿಳಿತ ಮತ್ತು ಎಫ್‌ಐಐ ಟ್ರೆಂಡ್‌ಗಳನ್ನು ಹೂಡಿಕೆದಾರರು ಗಮನಿಸುತ್ತಿದ್ದಾರೆ. ಅಂದಹಾಗೆ ಸೋಮವಾರದಂದು ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಲಾಭ ಹಾಗೂ ನಷ್ಟಗಳ ನಡುವೆ ಹೊಯ್ದಾಡಿದವು. ದಿನಾಂತ್ಯಕ್ಕೆ ಸೆನ್ಸೆಕ್ಸ್ 29 ಅಂಕಗಳ ಏರಿಕೆಯೊಂದಿಗೆ 60,078 ಪಾಯಿಂಟ್ಸ್, ನಿಫ್ಟಿ 50 ಸೂಚ್ಯಂಕವು 17,855ಕ್ಕೆ ವಹಿವಾಟು ಚುಕ್ತಾಗೊಳಿಸಿತು.
ಇದನ್ನೂ ಓದಿ: SEBI: ವಂಚನೆ ವಹಿವಾಟು ನಡೆಸಿದ 85 ಸಂಸ್ಥೆಗಳನ್ನು ಕ್ಯಾಪಿಟಲ್ ಮಾರ್ಕೆಟ್ನಿಂದ ನಿಷೇಧಿಸಿದ ಸೆಬಿ
(SEBI Board Important Meeting Today Here Are The Key Outcomes Expected By Investors)