ಗ್ಲೋಬಲ್ ಮನಿ ಮ್ಯಾನೇಜರ್ ಸ್ಕ್ರೋಡರ್ಸ್ ಪಿಎಲ್‌ಸಿಯ ಭಾರತೀಯ ಪಾಲುದಾರರ ವಿರುದ್ಧ ಸೆಬಿ (SEBI) ತನಿಖೆ ನಡೆಸುತ್ತಿದೆ. ಅದರ ಇಬ್ಬರು ಮುಂಚೂಣಿ ಅಧಿಕಾರಿಗಳ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ಈ ತನಿಖೆ ನಡೆಸಲಾಗುತ್ತಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಜನರು ತಿಳಿಸಿದ್ದಾರೆ. ವೀರೇಶ್ ಜೋಶಿ ಮತ್ತು ದೀಪಕ್ ಅಗರ್ವಾಲ್ ಅವರು ಆಕ್ಸಿಸ್ ಅಸೆಟ್ ಮ್ಯಾನೇಜ್ಮೆಂಟ್ ಕಂಪೆನಿಯಲ್ಲಿ ನಿರ್ವಹಿಸುತ್ತಿದ್ದ ಹಣವನ್ನು ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾವು ಪರಿಶೀಲಿಸುತ್ತಿದೆ. ಆಕ್ಸಿಸ್ ಎಎಂಸಿ 2.5 ಲಕ್ಷ ಕೋಟಿ ರೂಪಾಯಿ (3200 ಕೋಟಿ ಯುಎಸ್ಡಿ) ಸ್ವತ್ತುಗಳೊಂದಿಗೆ ಭಾರತದ ಏಳನೇ ಅತಿದೊಡ್ಡ ಅಸೆಟ್ ಮ್ಯಾನೇಜರ್ ಆಗಿದೆ.
ಕಾಮೆಂಟ್ ಕೋರಿದ ಇಮೇಲ್‌ಗೆ ಸೆಬಿ ಪ್ರತಿಕ್ರಿಯಿಸಿಲ್ಲ. ಸ್ಕ್ರೋಡರ್ಸ್ (Schroders) ಸಿಂಗಾಪೂರ್ ಹೋಲ್ಡಿಂಗ್ಸ್ ಪ್ರೈವೇಟ್ ಮೂಲಕ ಆಕ್ಸಿಸ್ ಎಎಂಸಿ (Axis AMC)ನಲ್ಲಿ ಶೇ 25ರಷ್ಟು ಪಾಲನ್ನು ಹೊಂದಿರುವ ಸ್ಕ್ರೋಡರ್ಸ್ ಕಾಮೆಂಟ್ ಮಾಡಲು ನಿರಾಕರಿಸಿದೆ. ಕರೆಗಳು ಮತ್ತು ಸಂದೇಶಗಳಿಗೆ ಜೋಶಿ ಪ್ರತಿಕ್ರಿಯಿಸಿಲ್ಲ ಮತ್ತು ಅಗರ್ವಾಲ್ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಆಂತರಿಕ ತನಿಖೆಗಾಗಿ ಇಬ್ಬರು ಹೆಸರಿಸದ ಫಂಡ್ ಮ್ಯಾನೇಜರ್‌ಗಳನ್ನು ಅಮಾನತುಗೊಳಿಸಿರುವುದಾಗಿ ಆಕ್ಸಿಸ್ ಎಎಂಸಿ ಶುಕ್ರವಾರ ತಿಳಿಸಿದೆ. ಸೋಮವಾರ ಫೋನ್ ತಲುಪಿದಾಗ ಅದು ಪ್ರತಿಕ್ರಿಯಿಸಲು ನಿರಾಕರಿಸಿದೆ .
“ರಿಡೆಂಪ್ಷನ್ಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲ” ಎಂದು ಆಕ್ಸಿಸ್ ಮ್ಯೂಚುವಲ್ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕ ಚಂದ್ರೇಶ್ ನಿಗಮ್ ಭಾನುವಾರ ಹೂಡಿಕೆದಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅದರ ಪ್ರತಿಯನ್ನು ಬ್ಲೂಮ್‌ಬರ್ಗ್ ನ್ಯೂಸ್ ನೋಡಿದೆ. “ಯಾವುದೇ ಸಂದರ್ಭದಲ್ಲಿ, ನಮ್ಮ ಫಂಡ್ಗಳೊಂದಿಗೆ ಲಭ್ಯವಿರುವ ಲಿಕ್ವಿಡಿಟಿ ಮತ್ತು ನಮ್ಮ ಪೋರ್ಟ್‌ಫೋಲಿಯೊದ ಗುಣಮಟ್ಟವು ಹೂಡಿಕೆದಾರರಿಂದ ರಿಡೆಂಪ್ಷನ್ ವಿನಂತಿಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ ಎಂದು ನಾವು ನಂಬುತ್ತೇವೆ,” ಎಂದಿದ್ದಾರೆ.
ರೀಟೇಲ್ ಹೂಡಿಕೆ ಹೆಚ್ಚಳದ ಮಧ್ಯೆ ಭಾರತೀಯ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಕಳೆದೆರಡು ವರ್ಷಗಳಲ್ಲಿ ಶತಕೋಟಿ ಡಾಲರ್‌ಗಳ ಒಳಹರಿವಿನಲ್ಲಿ ಆಮಿಷ ಒಡ್ಡಿವೆ. ಬೆಂಚ್ಮಾರ್ಕ್ ಎಸ್ಅಂಡ್ಪಿ ಬಿಎಸ್ಇ ಸೆನ್ಸೆಕ್ಸ್ ಷೇರುಗಳ ಸೂಚ್ಯಂಕವು ಅಕ್ಟೋಬರ್ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ರೀಟೇಲ್ ಉಳಿತಾಯದ ಹೆಚ್ಚಿದ ಭಾಗವಹಿಸುವಿಕೆಯು ಅಕ್ರಮಗಳನ್ನು ಭೇದಿಸಲು ಹೊಸ ಸೆಬಿ ಅಧ್ಯಕ್ಷರಾದ ಮಾಧಬಿ ಪುರಿ ಬುಚ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ. ಅವರು ಹಿಂದೆ ಇದೇ ರೀತಿಯ ಘಟನೆಗಳನ್ನು ಬಹಳ ಕಠಿಣವಾಗಿ ವ್ಯವಹರಿಸಿದ್ದಾರೆ. 2021ರ ಜೂನ್ ಆದೇಶದಲ್ಲಿ ಸೆಬಿಯ ಪೂರ್ಣಾವಧಿ ನಿರ್ದೇಶಕರಾದ ಮಾಧಬಿ, ರಿಲಯನ್ಸ್ ಸೆಕ್ಯೂರಿಟೀಸ್ ಲಿಮಿಟೆಡ್‌ನ ವಿತರಕರು ಸೇರಿದಂತೆ 20 ಸಂಸ್ಥೆಗಳನ್ನು ಟಾಟಾ ಆಬ್ಸಲ್ಯೂಟ್ ರಿಟರ್ನ್ ಫಂಡ್‌ನಲ್ಲಿ ಮುಂಚೂಣಿಯಲ್ಲಿರುವ ವಹಿವಾಟುಗಳಿಗಾಗಿ ವ್ಯಾಪಾರ ಮಾಡುವುದನ್ನು ನಿಷೇಧಿಸಿದರು.
ಫಂಡ್ ವಿವರಗಳು
ಜೋಶಿ ಮತ್ತು ಅಗರ್ವಾಲ್ ನಿರ್ವಹಿಸಿದ ಯೋಜನೆಗಳಲ್ಲಿ ಆಕ್ಸಿಸ್ ಆರ್ಬಿಟ್ರೇಜ್ ಫಂಡ್, ಆಕ್ಸಿಸ್ ಬ್ಯಾಂಕಿಂಗ್ ಇಟಿಎಫ್, ಆಕ್ಸಿಸ್ ಕನ್ಸಂಪ್ಷನ್ ಇಟಿಎಫ್, ಆಕ್ಸಿಸ್ ನಿಫ್ಟಿ ಇಟಿಎಫ್, ಆಕ್ಸಿಸ್ ಕ್ವಾಂಟ್ ಫಂಡ್, ಆಕ್ಸಿಸ್ ಟೆಕ್ನಾಲಜಿ ಇಟಿಎಫ್ ಮತ್ತು ಆಕ್ಸಿಸ್ ವ್ಯಾಲ್ಯೂ ಫಂಡ್ ಸೇರಿವೆ. ಆಕ್ಸಿಸ್ ಆರ್ಬಿಟ್ರೇಜ್ ಫಂಡ್ ಸುಮಾರು 58 ಬಿಲಿಯನ್ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಈ ಇಬ್ಬರು ಮ್ಯಾನೇಜರ್‌ಗಳಿಂದ ನಿರ್ವಹಿಸುವಲ್ಲಿ ಅತಿ ದೊಡ್ಡದಾಗಿದೆ. ಇದರಲ್ಲಿ ನಗದು ಮತ್ತು ಲಿಕ್ವಿಡ್ ಸ್ವತ್ತುಗಳು ಅರ್ಧಕ್ಕಿಂತ ಹೆಚ್ಚಿವೆ. ಸಕ್ರಿಯವಾಗಿ ನಿರ್ವಹಿಸಲಾದ ಫಂಡ್ಗಳಲ್ಲಿ ಆಕ್ಸಿಸ್ ವ್ಯಾಲ್ಯೂ ಫಂಡ್ ಮತ್ತು ಆಕ್ಸಿಸ್ ಕ್ವಾಂಟ್ ಫಂಡ್ ತಮ್ಮ ಪೋರ್ಟ್‌ಫೋಲಿಯೊದ ಶೇ 3ಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಹೊಂದಿವೆ.
“ಈ ಹಂತದಲ್ಲಿ ನಾವು ಉತ್ತಮ ಸಮತೋಲನವನ್ನು ಹೊಂದಲು ಬಯಸುತ್ತೇವೆ. ನಾವು ವೈಟ್ ಲಿಸ್ಟಿಂಗ್ (ವೈಟ್ ಲಿಸ್ಟಿಂಗ್ ಅಂದರೆ ಎಲ್ಲ ಸಂಪನ್ಮೂಲಗಳಿಗೆ ಪ್ರವೇಶವನ್ನು ನಿರಾಕರಿಸುತ್ತದೆ ಮತ್ತು “ಮಾಲೀಕರು” ಮಾತ್ರ ಪ್ರವೇಶವನ್ನು ಅನುಮತಿಸಬಹುದು) ಮೇಲೆ ಹೆಚ್ಚು ಆಕ್ರಮಣಕಾರಿಯಾಗಿ ಹೋಗುವುದಿಲ್ಲ ಅಥವಾ ಯಾವುದನ್ನೂ ಡೌನ್‌ಗ್ರೇಡ್ ಮಾಡುತ್ತಿಲ್ಲ,” ಎಂದು ಹೂಡಿಕೆ ಸಲಹಾ ಸಂಸ್ಥೆಯಾದ ಫಿಸ್ಡಮ್‌ನ ಸಂಶೋಧನಾ ಮುಖ್ಯಸ್ಥ ನೀರವ್ ಕರ್ಕೇರಾ ಆಕ್ಸಿಸ್ ಎಂಎಫ್ ನಿರ್ವಹಿಸುವ ಫಂಡ್ ಉಲ್ಲೇಖಿಸಿ ಹೇಳಿದ್ದಾರೆ.
ಆಕ್ಸಿಸ್ ಮ್ಯೂಚುವಲ್ ಫಂಡ್ ಶೇ 4ಕ್ಕಿಂತ ಹೆಚ್ಚು ಹೊಂದಿರುವ ಕಂಪೆನಿಗಳ ಷೇರುಗಳಿಗೆ ನಿಯಂತ್ರಕ ಕ್ರಮದ ಮೇಲಿನ ಆತಂಕದಿಂದ ಹೊಡೆತ ಬಿದ್ದಿದೆ. ಇದರಲ್ಲಿ ಶುಕ್ರವಾರದಿಂದ ಶೇ 8.6ರಷ್ಟು ಕುಸಿದಿರುವ ಕೋಫೋರ್ಜ್ ಲಿಮಿಟೆಡ್, ಶೇ 8ರಷ್ಟು ಕಳೆದುಕೊಂಡಿರುವ ಟೊರೆಂಟ್ ಪವರ್ ಲಿಮಿಟೆಡ್ ಮತ್ತು ಶೇ 9ರಷ್ಟು ಕುಸಿದಿರುವ ಇನ್ಫೋ ಎಡ್ಜ್ ಇಂಡಿಯಾ ಲಿ. ಒಳಗೊಂಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳ ಮೂಲಕ ಅಡ್ಡ ದಾರಿಯ ಸ್ಟಾಕ್ ಸಲಹೆ ನೀಡುತ್ತಿದ್ದವರ ಮೇಲೆ ಮುರಕೊಂಡು ಬಿದ್ದ ಸೆಬಿ
Published On - 2:47 pm, Tue, 10 May 22